
ಬಳ್ಳಾರಿ: ಜಿಲ್ಲೆಯಲ್ಲಿನ ಅಕ್ರಮ ಪಡಿತರ ಅಕ್ಕಿ ಸಾಗಣೆ ವಿರುದ್ಧ ಪೊಲೀಸರು ನಿರಂತರವಾಗಿ ಕಠಿಣ ಕ್ರಮ ಕೈಗೊಳ್ಳುತ್ತಿರುವ ಮಧ್ಯೆಯೇ ಪೊಲೀಸರೇ ಹಣ ವಸೂಲಿ ಮಾಡಿದ ಘಟನೆ ಈಗ ಬಯಲಾಗಿದೆ. ಈ ಸಂಬಂಧ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ಆಗಿದ್ದ ದೇವರಾಜ್ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖುದ್ದು ಸುಮನ್ ಪನ್ನೇಕರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿದುಬಂದಿದೆ.
ಶರಭಯ್ಯ ಎಂಬ ವ್ಯಕ್ತಿ ಅಕ್ರಮ ಪಡಿತರ ಅಕ್ಕಿ ಸಾಗಣೆದಾರನಾಗಿದ್ದು, ಆಂಧ್ರಪ್ರದೇಶದತ್ತ ಅಕ್ಕಿ ತುಂಬಿದ ಎರಡು ಲಾರಿಗಳೊಂದಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಎಸ್‌ಪಿ ಗನ್‌ಮ್ಯಾನ್ ದೇವರಾಜ್ ಮತ್ತು ಆತನ ತಂಡ ಲಾರಿಗಳನ್ನು ಅಡ್ಡಗಟ್ಟಿ ತಾವು ‘ಎಸ್ಪಿ ಸ್ಕ್ವಾಡ್’ ಸದಸ್ಯರು ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟರೆ ಪ್ರಕರಣ ದಾಖಲಿಸದೇ ಬಿಡುವುದಾಗಿ ಹೇಳಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಷ್ಟು ಕೊಡಲು ನನ್ನಲ್ಲಿ ಇಲ್ಲ ಎಂದು ಶರಭಯ್ಯ ಹೇಳಿದ್ದು ಬಳಿಕ ಮಾತುಕತೆಯ ಮೂಲಕ 3 ಲಕ್ಷ ರೂ.ಗಳಿಗೆ ಒಪ್ಪಂದ ಮಾಡಿಕೊಂಡು. ಆ ಹಣವನ್ನು ಆರೋಪಿಗಳು ಶರಭಯ್ಯನಿಂದ ವಸೂಲಿ ಮಾಡಿದ್ದಾರೆ.
3 ಲಕ್ಷ ಕೊಟ್ಟು ಕಂಗೆಟ್ಟ ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದರು. ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದಯ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರಾಜ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನವಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಸುಮನ್ ಪನ್ನೇಕರ್ ಸ್ವತಃ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಾಕಿಂಗ್ ಸಂಗತಿಯೆಂದರೆ, ಜಿಲ್ಲೆಯಲ್ಲಿನ ಅಕ್ರಮ ಪಡಿತರ ಅಕ್ಕಿ ದಂಧೆ ವಿರುದ್ಧ ಈಗಾಗಲೇ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಪ್ರಕರಣಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ, ಪೊಲೀಸ್ ಸಿಬ್ಬಂದಿಯೇ ದಂಧೆಕೋರರಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿರುವುದು ಇಲಾಖೆಗೆ ಮುಜುಗರ ತಂದಿಟ್ಟ ಪ್ರಕರಣವಾಗಿದೆ.
ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಪೊಲೀಸರ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.