ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಶಾಂತಗೌಡ ಪಾಟೀಲ ಅವರನ್ನೇ ಮುಂದುವರಿಸಿದರೆ, ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ ಕಾರಜೋಳ ಅವರನ್ನು ನೇಮಿಸಲಾಗಿದ್ದು, ಯುವ ಮುಖಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈಶ್ವರ ಶೆಟ್ಟರ್
ಬಾಗಲಕೋಟೆ : ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಶಾಂತಗೌಡ ಪಾಟೀಲ ಅವರನ್ನೇ ಮುಂದುವರಿಸಿದರೆ, ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ ಕಾರಜೋಳ ಅವರನ್ನು ನೇಮಿಸಲಾಗಿದ್ದು, ಯುವ ಮುಖಕ್ಕೆ ಅವಕಾಶ ಕಲ್ಪಿಸಲಾಗಿದೆ.
undefined
ಬಾಗಲಕೋಟೆ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಶಾಂತಗೌಡ ಪಾಟೀಲ 2ನೇ ಅವಧಿಗೆ ಆಯ್ಕೆಯಾಗಿರುವುದು ಅವರ ಮುಂದೆಯೂ ಹಲವಾರು ಸವಾಲುಗಳಿವೆ. ಜತೆಗೆ ಈಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಂಡದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಅವರಿಗೆ ಬಾಗಲಕೋಟೆ ಜಿಲ್ಲೆಯಿಂದ ಸ್ಥಾನ ಲಭಿಸಿದೆ. ಉಭಯ ನಾಯಕರ ಮೇಲೆ ಈಗ ವರಿಷ್ಠರು ಹೆಚ್ಚು ಜವಾಬ್ದಾರಿಯನ್ನು ನೀಡಿದ್ದು, ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವ ಗುರಿ ನೀಡಿದ್ದಾರೆ. ಅಲ್ಲದೆ, ಅಹಿಂದ ಮತಗಳ ಕ್ರೂಢೀಕರಣಕ್ಕಾಗಿ ಉಮೇಶ ಕಾರಜೋಳ ಅವರಿಗೆ ಈ ಹುದ್ದೆ ಕರುಣಿಸಿದೆ ಎನ್ನಲಾಗಿದೆ.
ರಾಜ್ಯಕ್ಕಾದ ವಂಚನೆ ಬಗ್ಗೆ ಪ್ರಧಾನಿ ಮೋದಿ ಚರ್ಚೆಗೆ ಬರಲಿ: ಸಿಎಂ ಸಿದ್ದರಾಮಯ್ಯ
ಮುಂದಿವೆ ಹಲವಾರು ಸವಾಲುಗಳು:
ಬಾಗಲಕೋಟೆ ಜಿಲ್ಲೆಯ ಒಟ್ಟು 7 ಕ್ಷೇತ್ರಗಳಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಉಳಿದ ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಸಾಧಿಸಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಠಿಣ ಹಾದಿ ಆಗುವುದರಲ್ಲಿ ಅನುಮಾನವೇ ಇಲ್ಲ. ಬಾಗಲಕೋಟೆ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಕೋಟೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಲು ಹವಣಿಸುತ್ತಿದೆ. ಆದರೆ, ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂಬ ವರಿಷ್ಠರ ಹಂಬಲಕ್ಕೆ ಶಾಂತಗೌಡ ಪಾಟೀಲ ಮತ್ತು ಉಮೇಶ ಕಾರಜೋಳರ ವರ್ಚಸ್ಸು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದು ಕೂಡ ಈಗ ಮುಂದಿರುವ ಪ್ರಶ್ನೆ.
ಅಯೋಧ್ಯೆಯಂತೆ ರಾಮನಗರದಲ್ಲೂ ಬಿಜೆಪಿ ಸರ್ಕಾರದಿಂದಲೇ ರಾಮಮಂದಿರ ನಿರ್ಮಾಣ: ಸಿಪಿವೈ
ಹೀಗಾಗಿ ಉಭಯ ನಾಯಕರ ಮುಂದೆ ಲೋಕಸಭಾ ಚುನಾವಣೆಯೊಂದೇ ಸವಾಲು ಇಲ್ಲ. ಹಲವಾರು ಸವಾಲುಗಳನ್ನು ಅವರು ಎದುರಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಉಳಿದ ಐದು ಕ್ಷೇತ್ರಗಳಲ್ಲಿ ಕೈ ಶಾಸಕರಿದ್ದಾರೆ. ಹೀಗಾಗಿ ಈ ಐದು ಕ್ಷೇತ್ರಗಳಲ್ಲಿ ಮತಬೇಟೆಗೆ ತಂತ್ರ ಕೂಡ ನಡೆಸಬೇಕಿದೆ. ಜತೆಗೆ ಈಗಾಗಲೇ ಕಾಂಗ್ರೆಸ್‌ನ ಗ್ಯಾರಂಟಿಗಳು ಕೂಡ ಹೆಚ್ಚು ಪ್ರಚಲಿತವಾಗಿವೆ. ಅವುಗಳನ್ನು ಭೇದಿಸಿಕೊಂಡು ಮತದಾರರನ್ನು ಹೇಗೆ ಬಿಜೆಪಿಯತ್ತ ಸೆಳೆಯುತ್ತಾರೆ ಎನ್ನುವ ಸವಾಲು ಕೂಡ ಅವರ ಮುಂದಿದೆ.
ಜಿಲ್ಲೆಯಲ್ಲಿ ಹಲವಾರು ನಾಯಕರು ಹಿರಿಯರು ಇದ್ದಾರೆ. ಅಲ್ಲದೆ, ಜೆಡಿಎಸ್ ಕೂಡ ಈಗ ಬಿಜೆಪಿಗೆ ಕೈಜೋಡಿಸಿದೆ. ಇದರಿಂದಾಗಿ ಬಿಜೆಪಿಯ ಹಿರಿಯ ಮತ್ತು ಕಿರಿಯ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಪಕ್ಷ ಸಂಘಟಿಸುವ ಹೊಣೆಗಾರಿಕೆ ಇವರ ಮೇಲಿದೆ. ಅಲ್ಲದೆ, ಲೋಕಸಭೆ ಹೆಚ್ಚು ಆಕಾಂಕ್ಷಿಗಳು ಇರದಿರುವುದು ಪೈಪೋಟಿಯನ್ನು ತಗ್ಗಿಸಿದೆ. ಆದರೂ ತೆರೆಮರೆಯ ಕಸರತ್ತುಗಳು ಇಲ್ಲವೆಂದೇನಿಲ್ಲ.
ನಮಗೂ ಟಿಕೆಟ್ ನೀಡಿ ಎಂದು ಕೊನೆ ಗಳಿಗೆಯಲ್ಲಿ ಹಕ್ಕು ಮಂಡಿಸುವವರು ಇರಬಹುದು. ಇಂತಹ ಸೂಕ್ಷ್ಮ ಒಳನೋಟವನ್ನು ಈಗಲೇ ಅರಿತುಕೊಂಡ ಅಂತಹ ನಾಯಕರ ಬಂಡಾಯವನ್ನು ಮೂಲದಲ್ಲೇ ಶಮನ ಮಾಡಬೇಕಿದೆ. ಜತೆಗೆ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಮತಗಳು ಉಂಟಾಗದಂತೆ ಆರಂಭದಲ್ಲಿಯೇ ಅವರನ್ನು ಪರಿಗಣನೆಗೆ ತೆಗೆದುಕೊಂಡು ಮುಂಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ತಂತ್ರಗಾರಿಕೆಯನ್ನು ಈಗಲೇ ಅವರು ರೂಪಿಸಬೇಕಿದೆ.
ಈಗಾಗಲೇ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಕೂಡ ಕೈಜೋಡಿಸಿರುವುದರಿಂದ ಆ ಪಕ್ಷದ ನಾಯಕರನ್ನು ಕೂಡ ಒಗ್ಗೂಡಿಸಿಕೊಂಡು ಹೋಗಬೇಕಿದೆ. ಭಿನ್ನಮತ ಬರದಂತೆ ಎಚ್ಚರಿಕೆ ನಡೆಯನ್ನು ಅವರು ಅನುಸರಿಸಬೇಕಾದ ಅನಿವಾರ್ಯ ಬಂದೊದಗಿದೆ. ಇವೆಲ್ಲದರ ನಡುವೆ ಕೆಳಹಂತದಲ್ಲಿರುವ ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರನ್ನು ಒಟ್ಟಿಗೆ ಕರೆದುಕೊಂಡು ಪಕ್ಷ ಸಂಘಟನೆಯತ್ತ ಮುಖ ಮಾಡುವುದು ಅವರ ಮುಂದೆ ದೊಡ್ಡ ಸವಾಲೇ ಇದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಳೆದುಕೊಳ್ಳದಂತೆ ಸಂಘಟನೆಯತ್ತ ಮುಖ ಮಾಡುವಂತೆ ನೋಡಿಕೊಳ್ಳಬೇಕಿದೆ.
ಶಾಂತಗೌಡ ಪಾಟೀಲರಿಗೆ ಎರಡನೇ ಅವಧಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದರಿಂದ ಕೆಲವರಲ್ಲಿ ಅಸಮಾಧಾನ ಮೂಡಿರುವುದು ಕೂಡ ಸಹಜ. ಅಂತಹ ಅಸಮಾಧಾನಿತರನ್ನು ಕೂಡ ಒಟ್ಟಿಗೆ ಕರೆದುಕೊಂಡುವ ಹೋಗುವ ಸವಾಲು ಕೂಡ ಇವರ ಮುಂದಿರುವುದು ಸುಳ್ಳಲ್ಲ.
ಬಾಗಲಕೋಟೆ ಜಿಲ್ಲೆಯ ಬಿಜೆಪಿ ಜಿಲ್ಲಾ ಅಧ್ಯಕ್ಷ ರನ್ನಾಗಿ ಶಾಂತಗೌಡ ಪಾಟೀಲ್ ಅವರನ್ನು ಮತ್ತೆ ನೇಮಕ ಮಾಡಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಪ್ರಯೋಜನ ಆಗಲಿದೆ. ಜೊತೆಗೆ ದಲಿತ ವರ್ಗದ ಉಮೇಶ್ ಕಾರಜೋಳ ಅವರನ್ನು ದಲಿತ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ಜಿಲ್ಲೆಯಲ್ಲಿ ದಲಿತ ಹಿಂದುಳಿದ ಮತಗಳನ್ನು ಸೆಳೆಯಲು ಸಾಧ್ಯವಾಗಲಿದೆ. ಒಟ್ಟಾರೆ ಇಬ್ಬರನ್ನು ಪಕ್ಷದ ವರಿಷ್ಠರು ನೇಮಕ ಮಾಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಬಹಳಷ್ಟು ನೆರವಾಗಲಿದೆ.
- ಜಯಂತ್ ಕುರಂದವಾಡ., ಬಿಜೆಪಿ ಜಿಲ್ಲಾ ಮಾಜಿ ವಕ್ತಾರರು, ಬಾಗಲಕೋಟೆ