ಶಾಹಪುರ-ವಾಡಿ ರೈಲು ಮಾರ್ಗ 2028ರೊಳಗೆ ಪೂರ್ಣ: ಬಾದಾಮಿಯಲ್ಲಿ ವಿ. ಸೋಮಣ್ಣ ಮಹತ್ವದ ಘೋಷಣೆ

Published : Jul 17, 2026, 05:57 PM IST
V Somanna

ಸಾರಾಂಶ

ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.

ಬಾಗಲಕೋಟೆ (ಜು.17): ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.

ಭಾಷಣದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಸುಮಾರು 75 ರೈಲು ನಿಲ್ದಾಣಗಳನ್ನು ₹75 ಸಾವಿರ ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಾದಾಮಿ ರೈಲು ನಿಲ್ದಾಣವನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗಿದೆ ಎಂದರು.

ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಸುಮಾರು ₹3 ಲಕ್ಷ ಕೋಟಿ ಬಜೆಟ್ ಮೀಸಲಿಟ್ಟಿದ್ದು, ಕರ್ನಾಟಕದಲ್ಲಿಯೂ ಹಲವು ಮಹತ್ವದ ಯೋಜನೆಗಳು ವೇಗವಾಗಿ ಸಾಗುತ್ತಿವೆ ಎಂದು ಸೋಮಣ್ಣ ಹೇಳಿದರು. ಕುಡುಚಿ ರೈಲು ಮಾರ್ಗದ 37 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ಎಂಟು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಯೋಜನೆಗಾಗಿ ಸುಮಾರು ₹1,900 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಶಾಹಪುರ-ವಾಡಿ ರೈಲು ಮಾರ್ಗದ ಕಾಮಗಾರಿಯನ್ನು 2028ರ ಏಪ್ರಿಲ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ ಸಚಿವರು, ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸೇವೆಯನ್ನು ಪುನರಾರಂಭಿಸಿ, ಹೆಚ್ಚುವರಿಯಾಗಿ 30 ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿದೆ ಎಂದರು.

ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆ

ಅಮೃತ್ ಭಾರತ ಯೋಜನೆಯಡಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ರೈಲು ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 23 ಹೊಸ ರೈಲು ನಿಲ್ದಾಣಗಳು ಹಾಗೂ ಏಳು ಹೊಸ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ವಿವರಿಸಿದರು.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈಡ್ರೋಜನ್ ರೈಲಿಗೆ ಚಾಲನೆ ನೀಡಿರುವುದು ಭಾರತೀಯ ರೈಲ್ವೆಯ ಆಧುನೀಕರಣದ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ ಸೋಮಣ್ಣ, ರಾಜ್ಯ-ಕೇಂದ್ರ ಎಂಬ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದರು.

ಜಲಶಕ್ತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹5 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು, 2047ರೊಳಗೆ ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು. ಭಾಷಣದ ಕೊನೆಯಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸಿದ ಸಚಿವರು, "ಚುನಾವಣೆಗೆ 30 ದಿನ ಇರುವಾಗ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡೋಣ" ಎಂದು ಕರೆ ನೀಡಿದರು.

PREV
Read more Articles on
click me!

Recommended Stories

ಬರ ಪರಿಸ್ಥಿತಿ, ಜಾನುವಾರು ಸಾಕಲಾಗದೆ ಕನಿಷ್ಠ ಬೆಲೆಗೆ ಎತ್ತುಗಳ ಮಾರಾಟಕ್ಕೆ ಮುಂದಾದ ಚಿತ್ರದುರ್ಗದ ರೈತರು!
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ವಿಜಯಲಕ್ಷ್ಮಿ ದರ್ಶನ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ