ವಿಜಯಪುರ: ಶಕ್ತಿ ಯೋಜನೆಯಿಂದ ಆಟೋ, ಟ್ಯಾಕ್ಸಿ ಚಾಲಕರ ಆದಾಯ ಇಳಿಕೆ!

By Kannadaprabha News  |  First Published Jun 25, 2023, 7:01 AM IST

ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಅನುಷ್ಠಾನಗೊಂಡ ನಂತರ ನಗರ ಪ್ರದೇಶಗಳ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿ ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ.


ರುದ್ರಪ್ಪ ಆಸಂಗಿ

ವಿಜಯಪುರ (ಜೂ.25) ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಅನುಷ್ಠಾನಗೊಂಡ ನಂತರ ನಗರ ಪ್ರದೇಶಗಳ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿ ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ.

Tap to resize

Latest Videos

ಇದುವರೆಗೆ ನಗರ ಪ್ರದೇಶಗಳಲ್ಲಿ ಬಹುತೇಕ ಆಟೊ ಪ್ರಯಾಣವನ್ನೇ ಅವಲಂಬಿಸಿದ್ದ ಮಹಿಳೆಯರು ಸರ್ಕಾರ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿದ್ದರಿಂದಾಗಿ ಆಟೊ, ಟ್ಯಾಕ್ಸಿ ಪ್ರಯಾಣದತ್ತ ಒಲವು ತೋರದೇ ನಗರ ಸಾರಿಗೆ ಬಸ್‌ ಪ್ರಯಾಣಕ್ಕೆ ಮುಗಿಬಿದ್ದಿದ್ದಾರೆ. ಪರಸ್ಥಳಗಳಿಗೆ ತೆರಳುವ ಟ್ಯಾಕ್ಸಿಗಳತ್ತ ಕೂಡ ಮಹಿಳೆಯರು ಹೊರಳಿ ನೋಡುತ್ತಿಲ್ಲ. ಇದರಿಂದಾಗಿ ಆಟೊ, ಟ್ಯಾಕ್ಸಿ ಚಾಲಕರ ದಿನದ ಗಳಿಕೆ ಗಣನೀಯ ಪ್ರಮಾಣದಲ್ಲಿ ಕುಸಿದು ಅವರು ಹೊಟ್ಟೆಗೆ ತನ್ನೀರು ಬಟ್ಟೆಕಟ್ಟಿಕೊಳ್ಳುವ ಸ್ಥಿತಿ ಎದುರಾಗಿದೆ.

 

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಆಟೋ ಚಾಲಕರ ಜೀವನ ಅತಂತ್ರ

ವಿಜಯಪುರ ನಗರದಲ್ಲಿ ಸುಮಾರು 20 ಸಾವಿರ ಆಟೊಗಳು ಓಡಾಡುತ್ತಿವೆ. ಈ ಆಟೊಗಳಿಗೆ ಬಹುತೇಕ ಮಹಿಳಾ ಪ್ರಯಾಣಿಕರೇ ಜೀವನಾಧಾರ ಆಗಿದ್ದರು. ಅದರಲ್ಲೂ ಧಾರ್ಮಿಕ ಕಾರ್ಯಕ್ರಮ, ಮದುವೆ, ಮುಂಜಿವೆ, ಮಾರುಕಟ್ಟೆಇವೇ ಮುಂತಾದೆಡೆ ಆಟೊಗಳಲ್ಲಿ ಮಹಿಳೆಯರ ಓಡಾಟದ ಭರಾಟೆ ಹೆಚ್ಚಾಗಿರುತ್ತಿತ್ತು. ಆದರೆ, ಈಗ ಬಸ್ಸಿನಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆತಿರುವುದರಿಂದ ಮಹಿಳೆಯರು ಆಟೊಗಳತ್ತ ಮುಖ ಮಾಡುತ್ತಿಲ್ಲ.

ಗಂಟೆಗೊಮ್ಮೆ ಯಾರಾದರೂ ಪುರುಷ ಪ್ರಯಾಣಿಕರು ಆಟೊ ಏರುತ್ತಿದ್ದು, ಆಟೊ ಚಾಲಕರ ಗಳಿಕೆಗೆ ಕತ್ತರಿಬಿದ್ದಿದೆ. ಶಕ್ತಿ ಯೋಜನೆ ಜಾರಿಗೆ ಮುಂಚೆ ಪ್ರತಿ ದಿನ ಆಟೊ ಚಾಲಕರು ಕನಿಷ್ಠ .1000ದಿಂದ .1500ರವರೆಗೆ ಗಳಿಸುತ್ತಿದ್ದರು. ಪೆಟ್ರೋಲ್‌, ಡಿಸೇಲ್‌, ಚಾಲಕನ ಪಗಾರ ತಗೆದು ಕನಿಷ್ಠ .500ರಿಂದ .600 ಉಳಿತಾಯವಾಗುತ್ತಿತ್ತು. ಆದರೆ, ಈಗ ದಿನದ ಗಳಿಕೆಯೇ .500ರಿಂದ .600ಕ್ಕೆ ಕುಸಿದಿದೆ. ಹೀಗಾಗಿ, ಆಟೊ ಚಾಲಕರು ಖಾಲಿ ಕೈಯಿಂದ ಮನೆಗೆ ತೆರಳಬೇಕಾಕಿದೆ. ಕೆಲ ಚಾಲಕರು ಬೇರೆಯವರ ಆಟೊಗಳನ್ನು ಬಾಡಿಗೆ ಪಡೆದು ಓಡಿಸುತ್ತಾರೆ. ಅವರು ಮಾಲೀಕನಿಗೆ ಪ್ರತಿ ದಿನ .250 ಬಾಡಿಗೆ ಕೊಡಬೇಕಾಗುತ್ತದೆ. ಹೀಗಾಗಿ, ಬಾಡಿಗೆ ಆಟೊ ಚಾಲಕರು ಕುಟುಂಬದ ನಿರ್ವಹಣೆಗೆಗೂ ದುಡ್ಡಿಲ್ಲದೇ ಪರದಾಡುವಂತಾಗಿದೆ.

ವಿಜಯಪುರ ನಗರದಲ್ಲಿ ಯಾವುದೇ ಪ್ರದೇಶಕ್ಕೆ ತೆರಳಿದರೂ .20 ಕನಿಷ್ಠ ದರ ಕಡ್ಡಾಯವಾಗಿತ್ತು. ಆದರೆ, ಈಗ ಈ ಕನಿಷ್ಠ ದರವನ್ನು .10ಕ್ಕೆ ಕಡಿತಗೊಳಿಸಿದ್ದರೂ ಮಹಿಳೆಯರು ಆಟೊದತ್ತ ಮುಖ ಮಾಡುತ್ತಿಲ್ಲ.

ಟ್ಯಾಕ್ಸಿ ಚಾಲಕರ ಸ್ಥಿತಿಯೂ ಕಳವಳಕಾರಿ

ಜೂನ್‌ 11ರಿಂದ ಹೊಸದಾಗಿ ಆರಂಭಗೊಂಡ ಶಕ್ತಿ ಯೋಜನೆ ಅನುಷ್ಠಾನದಿಂದ ಟ್ಯಾಕ್ಸಿ ಚಾಲಕರ ಸ್ಥಿತಿಯೂ ಕಳವಳಕಾರಿಯಾಗಿದೆ. ಬ್ಯಾಂಕ್‌, ಫೈನಾನ್ಸ್‌ ಹಾಗೂ ಖಾಸಗಿಯವರ ಬಳಿ ಬಡ್ಡಿ ಸಾಲ ಪಡೆದು ಟ್ಯಾಕ್ಸಿ ಖರೀದಿಸಿದವರಿಗೆ ಈಗ ದಾರಿ ಕಾಣದಂತಾಗಿದೆ. ಮಹಿಳೆಯರು ಟ್ಯಾಕ್ಸಿಗಳ ಬಾಡಿಗೆ ಕೇಳಿಕೊಂಡು ಬರುತ್ತಿಲ್ಲ. ಬಹುತೇಕ ಮಹಿಳೆಯರು ದೇವಸ್ಥಾನ, ತೀರ್ಥಕ್ಷೇತ್ರ ಮತ್ತಿತರ ತಾಣಗಳಿಗೆ ತೆರಳಲು ಈ ಮುಂಚೆ ಟ್ಯಾಕ್ಸಿ ಅವಲಂಬಿಸಿರುತ್ತಿದ್ದರು. ಈಗ ಮಹಿಳೆಯರು ಸಾರಿಗೆ ಬಸ್‌ನ ಉಚಿತ ಪ್ರಯಾಣದತ್ತ ಮುಖ ಮಾಡಿರುವುದರಿಂದ ಟ್ಯಾಕ್ಸಿ ಚಾಲಕರು ಒಪ್ಪತ್ತಿನ ಊಟಕ್ಕೂ ತತ್ವಾರ ಪಡುವಂತಾಗಿದೆ.

ಶಕ್ತಿ ಯೋಜನೆ ಜಾರಿಗೆ ಬರುವುದಕ್ಕಿಂತ ಮುಂಚೆ ಟ್ಯಾಕ್ಸಿ ಮಾಲೀಕರು, ಚಾಲಕರಿಗೆ ಪ್ರತಿದಿನ .1500ರಿಂದ .2500ರವರೆಗೆ ಗಳಿಕೆಯಾಗುತ್ತಿತ್ತು. ಎಲ್ಲ ವೆಚ್ಚ ತಗೆದು .600ರವರೆಗೆ ಉಳಿತಾಯವಾಗುತ್ತಿತ್ತು. ಆದರೆ, ಶಕ್ತಿ ಯೋಜನೆ ಅನುಷ್ಠಾನದಿಂದಾಗಿ ಈಗ ದಿನಕ್ಕೆ ಕೇವಲ 800ರಿಂದ .1000ವರೆಗೆ ಮಾತ್ರ ಗಳಿಕೆಯಾಗುತ್ತಿದೆ. ಈ ಅಲ್ಪ ಹಣದಲ್ಲಿ ಮನೆ ವೆಚ್ಚ, ಡಿಸೇಲ್‌, ಪೆಟ್ರೋಲ್‌, ಇನ್ಸುರೆನ್ಸ್‌, ತೆರಿಗೆ, ಮನೆ ಬಾಡಿಗೆ ಭರಿಸುವುದು ಕಷ್ಟವಾಗಿದೆ ಎಂಬುದು. ಟ್ಯಾಕ್ಸಿ ಚಾಲಕರ ಅಳಲಾಗಿದೆ.

ಆಟೋ ಡ್ರೈವರ್‌ಗೆ ಸೆಲ್ಫಿ ಕೊಡಲು ನಿರಾಕರಿಸಿದ ಮಲೈಕಾ; ವಿಡಿಯೋ ನೋಡಿ ಫ್ಯಾನ್ಸ್ ಹೇಳಿದ್ದೇನು?

ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಟ್ಯಾಕ್ಸಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದು ಇಡೀ ದಿನ ಕಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ನಾಲ್ಕೈದು ಮಂದಿ ಪ್ರಯಾಣಿಕರು ಮಾತ್ರ ಬರುತ್ತಿದ್ದಾರೆ. ಇದರಿಂದಾಗಿ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ಹೀಗಾಗಿ, ಒಪ್ಪತ್ತಿನ ಊಟಕ್ಕೂ ನಮಗೆ ಗತಿ ಇಲ್ಲದಂತಾಗಿದೆ. ಆದ್ದರಿಂದ ಜೂನ್‌ 28ರಂದು ಟ್ಯಾಕ್ಸಿ ಹಾಗೂ ಆಟೊ ಚಾಲಕರ ಸಂಘಗಳಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

- ಅಶೋಕ ಖಿಲಾರಿ, ಅಧ್ಯಕ್ಷರು, ಕರ್ನಾಟಕ ಚಾಲಕರ ಒಕ್ಕೂಟ, ವಿಜಯಪುರ ಜಿಲ್ಲೆ

click me!