ಆಟೋ ಕನಿಷ್ಠ ದರ 36 ರು. ಹೆಚ್ಚಳಕ್ಕೆ ಪ್ರಸ್ತಾವ: ಸಾರಿಗೆ ಸಚಿವರ ಒಪ್ಪಿಗೆ

Kannadaprabha News   | Kannada Prabha
Published : Jul 02, 2025, 08:59 AM ISTUpdated : Jul 02, 2025, 09:08 AM IST
Auto Fare

ಸಾರಾಂಶ

ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು (ಜು.02): ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಐವರು ಸದಸ್ಯರ ಸಮಿತಿಯ ಶಿಫಾರಸು ಆಧರಿಸಿ ಜಿಲ್ಲಾ ಸಾರಿಗೆ ಪ್ರಾಧಿಕಾರವಾಗಿರುವ (ಡಿಟಿಎ) ಜಿಲ್ಲಾಧಿಕಾರಿ ಜಿ. ಜಗದೀಶ ಸಲ್ಲಿಸಿರುವ ಪ್ರಸ್ತಾವನೆಗೆ ಸಾರಿಗೆ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ದರ ಪರಿಷ್ಕರಣೆಯ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಲಾಗಿದೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ ತಿಂಗಳಲ್ಲಿ ಆಟೋ ಚಾಲಕರ ಸಂಘಟನೆಗಳು, ಪ್ರಯಾಣಿಕರು ಸೇರಿದಂತೆ ಸಂಬಂಧಿಸಿದ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕನಿಷ್ಠ ದರವನ್ನು 40 ರು. ನಿಗದಿಪಡಿಸಬೇಕು. ನಂತರದ ಪ್ರತಿ ಕಿ.ಮೀಗೆ 20 ರು. ನಿಗದಿಪಡಿಸಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ, ಡಿಟಿಎ ಶೇ.20ರಷ್ಟು ದರ ಹೆಚ್ಚಳಕ್ಕೆ ಸಹಮತಿ ನೀಡಿದೆ. ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ನಿರ್ಧಾರ: ಆಟೋ ಬಾಡಿಗೆ ಹೆಚ್ಚಳ ಮಾಡಿದರೆ ಕಡಿಮೆ ದರದಲ್ಲಿ ಸೇವೆ ಒದಗಿಸುವ ಬೈಕ್ ಟ್ಯಾಕ್ಸಿ ಕಡೆ ಮತ್ತಷ್ಟು ಜನ ಮುಖ ಮಾಡುತ್ತಾರೆ ಎನ್ನುವ ಕಾರಣಕ್ಕೆ ದರ ಹೆಚ್ಚಳದ ಕುರಿತು ಆಟೋ ಚಾಲಕರು ಹಿಂಜರಿಕೆ ಹೊಂದಿದ್ದರು. ಆದರೆ, ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳನ್ನು ನಗರದಲ್ಲಿ ನಿಷೇಧಿಸಿರುವುದರಿಂದ ದರ ಹೆಚ್ಚಳ ಬೇಡಿಕೆಗೆ ಬಲ ಬಂದಿದೆ.

ದುಬಾರಿ ಆಟಾಟೋಪಕ್ಕೆ ಬ್ರೇಕ್‌: ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತದ ನಂತರ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆ್ಯಪ್‌ ಆಧಾರಿತ ಸೇವೆ ನೀಡುವ ಆಟೋ ಮತ್ತು ಇತರ ಆಟೋಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, ಸೋಮವಾರ ನಗರದಲ್ಲಿ ತಪಾಸಣೆ ನಡೆಸಿ 98 ಆಟೋಗಳನ್ನು ಜಪ್ತಿ ಮಾಡಿದೆ.

ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ನಗರದ 11 ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ 2ರಂತೆ ಒಟ್ಟು 22 ವಿಶೇಷ ತನಿಖಾ ತಂಡಗಳ ಮೂಲಕ ತಪಾಸಣೆ ನಡೆಸಲಾಗಿದೆ. ಈ ವೇಳೆ ದುಬಾರಿ ದರ ವಸೂಲಿ ಮಾಡುತ್ತಿದ್ದ ಮತ್ತು ಕಾನೂನು ಬಾಹಿರವಾಗಿ ಆಟೋ ಸೇವೆ ನೀಡುತ್ತಿದ್ದ 98 ಆಟೋಗಳನ್ನು ಜಪ್ತಿ ಮಾಡಲಾಗಿದೆ. ಅದರೊಂದಿಗೆ 260 ಆಟೋಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ