
ಮಂಗಳೂರು (ಅ.2): ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ರಂಗಸ್ಥಳದಲ್ಲಿ ಧಾರ್ಮಿಕ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸುಂದರ ಅಧ್ಯಾಯವೊಂದು ಅನಾವರಣಗೊಂಡಿದೆ. ಯಕ್ಷಗಾನ ರಂಗ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ 'ಆರ್ಷಿಯಾ ಖಾನ್', ಇದೀಗ ಪ್ರಸಿದ್ಧ 'ದೇವಿ ಮಹಾತ್ಮೆ' ಪ್ರಸಂಗದಲ್ಲಿ ಸಾಕ್ಷಾತ್ 'ಶ್ರೀದೇವಿ'ಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಅಕ್ಟೋಬರ್ 20ರಂದು ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಅವರು ಈ ಮಹತ್ವದ ಪಾತ್ರಧಾರಿಯಾಗಿ ಕಲಾಭಿಮಾನಿಗಳ ಮುಂದೆ ಬರಲಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬರು ಕಾಲಿಡುವುದೇ ಅಪೂರ್ವ ಸಂಗತಿಯಾಗಿದ್ದು, ಇದೀಗ ದೇವಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಕಲಾಪ್ರೇಮಿಗಳಲ್ಲಿ ಭಾರಿ ಹರ್ಷ ಹಾಗೂ ಮೆಚ್ಚುಗೆ ಮೂಡಿಸಿದೆ.
ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ 'ಕದಳಿ ಕಲಾ ಕೇಂದ್ರ'ವು ದಸರಾ ಉತ್ಸವದ ಅಂಗವಾಗಿ 'ಕದಳಿ ದಶಾಹ' ಹೆಸರಿನ 14ನೇ ವರ್ಷದ 10 ದಿನಗಳ ಯಕ್ಷಗಾನ ಸಂಭ್ರಮವನ್ನು ಅಕ್ಟೋಬರ್ 11ರಿಂದ 20ರವರೆಗೆ ಆಯೋಜಿಸಿದೆ. ಈ ಸಾಂಸ್ಕೃತಿಕ ಹಬ್ಬದ ಕೊನೆಯ ದಿನವಾದ ಅಕ್ಟೋಬರ್ 20 ರಂದು 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಪ್ರಸಂಗ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಕಟೀಲು, ಪಾವಂಜೆ ಮೇಳ ಸೇರಿದಂತೆ ತೆಂಕುತಿಟ್ಟು ಯಕ್ಷಗಾನದ ಅತ್ಯಂತ ಪ್ರಸಿದ್ಧ ಮೇಳಗಳ ಖ್ಯಾತ ಕಲಾವಿದರು ಭಾಗವಹಿಸಲಿದ್ದು, ಅವರೊಡನೆ ಆರ್ಷಿಯಾ ಖಾನ್ ಕೂಡ ರಂಗಸ್ಥಳದಲ್ಲಿ ಸಾಕ್ಷಾತ್ ಶ್ರೀದೇವಿಯಾಗಿ ಪ್ರತ್ಯಕ್ಷರಾಗಲಿದ್ದಾರೆ.
'ತನು ವಿಟ್ಲ' ಎಂದೇ ಕಲಾ ಲೋಕದಲ್ಲಿ ಜನಪ್ರಿಯರಾಗಿರುವ ವಿಟ್ಲ ಸಮೀಪದ ಮಾಡ ಮೂಲದ ಆರ್ಷಿಯಾ ಖಾನ್ ಕಳೆದ 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸಿದ್ಧ ಗುರು ಕದ್ರಿ ರಮೇಶ್ ಭಟ್ ಅವರ ಬಳಿ ಯಕ್ಷಗಾನದ ತೆಂಕುತಿಟ್ಟು ಶೈಲಿಯಲ್ಲಿ ಕಟ್ಟುನಿಟ್ಟಿನ ತರಬೇತಿ ಪಡೆದಿರುವ ಆರ್ಷಿಯಾ, ಈ ಹಿಂದೆ 'ದೇವಿ ಮಹಾತ್ಮೆ'ಯ ಮಹಿಷಾಸುರ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದಾರೆ.
ಪ್ರಸ್ತುತ ಪ್ರಥಮ ಬಾರಿಗೆ ಶ್ರೀದೇವಿಯ ಪರಮ ಪವಿತ್ರ ಪಾತ್ರ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ನಿಯಮಿತ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಸಾತ್ವಿಕ ಆಹಾರ ಪದ್ಧತಿಯೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಕಾಯ್ದುಕೊಂಡು ಪಾತ್ರಕ್ಕೆ ಶ್ರದ್ಧೆಯಿಂದ ಸಿದ್ಧರಾಗುತ್ತಿದ್ದಾರೆ.
ಆರ್ಷಿಯಾ ಖಾನ್ ಅವರಿಗೆ ಯಕ್ಷಗಾನ ರಂಗವೇನೂ ಹೊಸತಲ್ಲ. ನಿವೃತ್ತ ಉಪ ತಹಸೀಲ್ದಾರ್ ಅಬ್ದುಲ್ ಖಾದರ್ ಮತ್ತು ಮುಮ್ತಾಜ್ ದಂಪತಿಯ ಮಗಳಾದ ಇವರು, ಬಾಲ್ಯದಲ್ಲಿ ತಮ್ಮ ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಹಾಗೂ ಚಂಡೆಯ ನಾದಕ್ಕೆ ಆಕರ್ಷಿತರಾಗಿದ್ದರು. ತಮ್ಮ 9ನೇ ವಯಸ್ಸಿನಲ್ಲಿ, ಅಂದರೆ 4ನೇ ತರಗತಿಯಲ್ಲಿದ್ದಾಗ ಯಕ್ಷಗಾನ ಕಲಿಯಲು ಆರಂಭಿಸಿದ ಇವರ ಕಲಾ ಆಸಕ್ತಿಗೆ ತಂದೆ-ತಾಯಿ ಪೂರ್ಣ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಂತರು. ಪೋಷಕರ ಈ ಬೆಂಬಲದಿಂದಾಗಿ ಇಂದು ಅವರು ರಂಗಸ್ಥಳದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಾಧ್ಯವಾಗಿದೆ.
ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನವು ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದವರನ್ನು ಒಂದೇ ಸೂರಿನಡಿ ತರುವ ಅದ್ಭುತ ಕಲಾಮಾಧ್ಯಮವಾಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಸಿದ್ಧ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗವೇ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅತ್ಯುತ್ತಮ ಸಾಕ್ಷಿಯಾಗಿದೆ. ತೆಂಕು ಮತ್ತು ಬಡಗು ಉಭಯ ತಿಟ್ಟುಗಳಲ್ಲೂ ಈಗಾಗಲೇ ಮುಸ್ಲಿಂ ಸಮುದಾಯದ ಹಲವು ಪುರುಷ ಕಲಾವಿದರು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಯಕ್ಷಗಾನ ಕಲೆಯನ್ನು ಅಳವಡಿಸಿಕೊಂಡ ಮೊದಲ ಮುಸ್ಲಿಂ ಮಹಿಳೆಯಾಗಿ ಆರ್ಷಿಯಾ ಖಾನ್ ಗುರುತಿಸಿಕೊಂಡಿದ್ದು, ಧಾರ್ಮಿಕ ಸಾಮರಸ್ಯಕ್ಕೆ ಹೊಸ ಮೆರುಗು ತಂದಿದ್ದಾರೆ.