ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಶಾಲಾ ಪಠ್ಯದಲ್ಲಿ ಟಿಪ್ಪು ವಿಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಠ್ಯದಲ್ಲಿ ಟಿಪ್ಪುವಿನ ವಿಚಾರ ಉಳಿಸುವುದಾದರೆ ಆತನ ಕ್ರೌರ್ಯವನ್ನೂ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಡಿಕೇರಿ [ಡಿ.11]: ಟಿಪ್ಪು ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯುವ ವಿಚಾರದ ಬಗ್ಗೆ ತಜ್ಞರ ಸಮಿತಿ ನೀಡಿರುವ ವರದಿಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಠ್ಯದಲ್ಲಿ ಟಿಪ್ಪುವಿನ ವಿಚಾರ ಉಳಿಸುವುದಾದರೆ ಆತನ ಕ್ರೌರ್ಯವನ್ನೂ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಕ್ರೌರ್ಯದ ಬಗ್ಗೆ ಹಲವು ದಾಖಲೆ ನೀಡಿದ್ದರೂ ತಜ್ಞರು ಹೀಗೆ ವರದಿ ನೀಡಿರುವುದು ಸರಿಯಲ್ಲ. ಈ ಬಗ್ಗೆ ನಾನು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ. ಅಲ್ಲದೆ ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಟಿಪ್ಪು ಇತಿಹಾಸ ಹಾಕುವುದಾದರೆ ಆತನ ಕ್ರೌರ್ಯವನ್ನು, ಮತಾಂತರ, ದೇವಸ್ಥಾನ ಲೂಟಿಯ ವಿಚಾರವೂ ಪಠ್ಯ ಪುಸ್ತಕದಲ್ಲಿ ಇರಬೇಕು ಎಂದು ಆಗ್ರಹಿಸಿದರು.
ಟಿಪ್ಪು ಒಳ್ಳೆಯದನ್ನು ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ಈಗಾಗಲೇ ಸರ್ಕಾರ ರದ್ದು ಮಾಡಿದೆ. ಟಿಪ್ಪುವನ್ನು ಪಠ್ಯದಿಂದ ಕೈಬಿಟ್ಟರೆ ಮೈಸೂರಿನ ಇತಿಹಾಸದ ಕೊಂಡಿಯೇ ಕಳಚಿ ಹೋಗುತ್ತದೆ ಎನ್ನಲಾಗುತ್ತಿದೆ. ಆದ್ದರಿಂದ ಕೊಂಡಿಯನ್ನು ಕಳಚುವುದು ಬೇಡ. ಆತನ ಕ್ರೌರ್ಯ, ಮತಾಂತರವನ್ನೂ ಪಠ್ಯ ಪುಸ್ತಕದಲ್ಲಿ ದಾಖಲಿಸಬೇಕೆಂದು ಒತ್ತಾಯಿಸಿದರು.
ಟಿಪ್ಪು ಪಠ್ಯ ರದ್ದು ವಿವಾದಕ್ಕೆ ಹೊಸ ಟ್ವಿಸ್ಟ್!: ಪಠ್ಯ ಮುಂದುವರೆಸಿ, ಸರ್ಕಾರಕ್ಕೆ ಸಲಹೆ!.
ನಾನು ಲಂಡನ್‌ನಿಂದ ಪುಸ್ತಕವೊಂದನ್ನು ತರಿಸಿಕೊಂಡಿದ್ದೇನೆ. ಆ ಪುಸ್ತಕದಲ್ಲಿ ಟಿಪ್ಪು ಬರೆದ ಪತ್ರವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದು, ಅದರ ಪ್ರತಿಯನ್ನು ನೀಡಿದ್ದೇನೆ. ಪುಸ್ತಕ ಬೇಕಾದಲ್ಲಿ ಅದನ್ನೂ ನೀಡಲಾಗುವುದು. ಟಿಪ್ಪು ಬರೆದ ಪತ್ರದಲ್ಲಿ ತಾನು ಕನ್ನಡ ಅಭಿಮಾನಿಯಲ್ಲ ಎಂದಿದ್ದಾನೆ. ಪರ್ಷಿಯನ್ ಭಾಷೆಯಲ್ಲಿ ವ್ಯವಹಾರ ನಡೆಸಿದರ ಬಗ್ಗೆಯೂ ದಾಖಲೆಯಿದೆ. ಆದ್ದರಿಂದ ಪಠ್ಯಪುಸ್ತಕದಲ್ಲಿ ಸತ್ಯವನ್ನು ಹೇಳಬೇಕು. ಚರಿತ್ರೆಯಲ್ಲಿ ತಪ್ಪು ಮಾಹಿತಿ ತುಂಬಿಸಿ ಆತನನ್ನು ವೈಭವೀಕರಣ ಮಾಡುವುದು ಸರಿಯಲ್ಲ ಎಂದರು.
ಕೊಡಗಿನಲ್ಲಿ ಕೊಡವರನ್ನು ಮತಾಂತರ ಮಾಡಿದ್ದು, ಅವರು ಕೊಡವ ಮಾಪಿಳ್ಳೆಗಳಾಗಿದ್ದು, ಇಂದಿಗೂ ಉದಾಹರಣೆಯಿದೆ. ಈ ಬಗ್ಗೆಯೂ ದಾಖಲೆ ನೀಡುತ್ತೇನೆ ಎಂದು ತಿಳಿಸಿದರು.