ಸುರತ್ಕಲ್ ಟೋಲ್ ಸುಂಕ ಸಂಗ್ರಹಿಸುವ ಆದ್ಯಾದೇಶವನ್ನು ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬನ್ನಂಜೆ ತಾಲೂಕು ಕಚೇರಿ ಮುಂಭಾಗದಲ್ಲಿ ಸಾಮೂಹಿಕ ಜನಾಗ್ರಹ ಧರಣಿ ನಡೆಸಿತು.
ಉಡುಪಿ (ಡಿ.31): ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಿಸುವ ಆದ್ಯಾದೇಶವನ್ನು ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಗುರುವಾರ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬನ್ನಂಜೆ ತಾಲೂಕು ಕಚೇರಿ ಮುಂಭಾಗದಲ್ಲಿ ಸಾಮೂಹಿಕ ಜನಾಗ್ರಹ ಧರಣಿ ನಡೆಯಿತು.
ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಬಿಜೆಪಿ ಹೊರತುಪಡಿಸಿ ಇತರ ಸಂಘ-ಸಂಸ್ಥೆ ಹಾಗೂ ಪಕ್ಷಗಳು ಹೋರಾಟ ನಡೆಸಿದ ಪರಿಣಾಮ ಸುರತ್ಕಲ್ ಟೋಲ್‌ಗೇಟ್ ತೆರವು ಮಾಡಲಾಗಿದೆ. ಚುನಾವಣೆ ಮುಗಿದ ಬಳಿಕ ಸುರತ್ಕಲ್ ಟೋಲ್ ಗೇಟ್ ದರವನ್ನು ಹೆಜಮಾಡಿಯಲ್ಲಿ ವಸೂಲು ಮಾಡುವ ಬಗ್ಗೆ ಸರಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಈ ಬಗ್ಗೆ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಕೂಡ ಹೊರಡಿಸಿದೆ. ಈ ನೋಟಿಫಿಕೇಶನ್ ರದ್ದುಗೊಳ್ಳುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
undefined
ಟೋಲ್‌ಗೇಟ್ ಅನ್ನು ಹೆಜಮಾಡಿಯಲ್ಲಿ ವಿಲೀನ ಮಾಡುವ ಕಲ್ಪನೆ ದ.ಕ. ಹಾಗೂ ಉಡುಪಿಯ ಸಂಸದರದ್ದು. ಸದ್ಯದಲ್ಲಿಯೇ ಚುನಾವಣೆ ಇರುವ ಕಾರಣ ಬಿಜೆಪಿಯ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ದರ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ನಗರಸಭೆ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಸುರತ್ಕಲ್ ಟೋಲ್ ಗೇಟ್ ತೆರವು ಸಂಬಂಧಿಸಿ ಮಂಗಳೂರು, ಬೆಂಗಳೂರಿನಲ್ಲಿ ಸರಕಾರ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ತಮ್ಮದೇ ಸರಕಾರಗಳು ನಡೆಸಿದ ಸಭೆಗಳಲ್ಲಿ ಉಡುಪಿ, ದ.ಕ., ಜಿಲ್ಲೆಯ ಸಂಸದರು ಹಾಗೂ ಶಾಸಕರು ಒಂದು ಬಾರಿಯೂ ಬಾಗಿಯಾಗದ ಬೇಜವಾಬ್ದಾರಿತನದಿಂದಲೇ ಸುರತ್ಕಲ್ ಅಕ್ರಮ ಟೋಲ್ ಸುಂಕ ರದ್ದಾಗುವ ಬದಲಿಗೆ ಹೆಜಮಾಡಿಯಲ್ಲಿ ವಿಲೀನಗೊಂಡಿದೆ. ತಮ್ಮ ಕರ್ತವ್ಯ ಲೋಪವನ್ನು ಮರೆಮಾಚಲು ಕೆಲವೇ ತಿಂಗಳುಗಳಲ್ಲಿ ಬರಲಿರುವ ಚುನಾವಣೆಯ ಭಯದಿಂದ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲು ಯತ್ನಿಸುತ್ತಿದ್ದಾರೆ.
Mangaluru News: ರದ್ದಾದ Suratkal Tollgate; ಹೆಜಮಾಡಿಯಲ್ಲಿ ವಸೂಲಿ!
ಇದಕ್ಕಿರುವ ಏಕೈಕ ಪರಿಹಾರ ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಿಸುವ ಆದ್ಯಾದೇಶವನ್ನು ಹೆದ್ದಾರಿ ಪ್ರಾಧಿಕಾರ ಹಿಂಪಡೆಯಬೇಕು. ಬಾಕಿ ಚಿಲ್ಲರೆ ಮೊತ್ತಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರ್ಯಾಯ ದಾರಿಯನ್ನು ಆಯ್ಕೆ ಮಾಡಿ ಸುರತ್ಕಲ್, ನಂತೂರು ರಸ್ತೆಯನ್ನೂ ಟೋಲ್ ಮುಕ್ತ ರಸ್ತೆ ಎಂದು ಘೋಷಿಸಬೇಕು. ಹಾಗಾಗದಿದ್ದರೆ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ಸಂಗ್ರಹ ಆರಂಭಿಸಲು ನಿಯಮಗಳ ಪ್ರಕಾರ ಜಿಲ್ಲಾಡಳಿತ ಒಪ್ಪಿಗೆ ನೀಡಲೇಬೇಕಾಗುತ್ತದೆ. ಅದಕ್ಕಾಗಿ ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಿಸುವ ಆದ್ಯಾದೇಶದ ವಾಪಸಾತಿಗೆ ಎರಡೂ ಜಿಲ್ಲೆಯ ಜನರು ಒಂದಾಗಿ ಧ್ವನಿ ಎತ್ತಬೇಕಾಗಿದೆ ಎಂದರು.
ಸುರತ್ಕಲ್ ಟೋಲ್ ಸಮಸ್ಯೆ ಪರಿಹಾರಕ್ಕೆ ಗಡ್ಕರಿ ಭೇಟಿಯಾದ ಶಾಸಕ ರಘುಪತಿ ಭಟ್
ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಿ.ಶೇಖರ್, ಎಂ.ಜಿ.ಹೆಗ್ಡೆ, ರಘು ಎಕ್ಕಾರು, ಪ್ರಖ್ಯಾತ್ ಶೆಟ್ಟಿ, ಶೇಖರ ಹೆಜಮಾಡಿ, ಅಶ್ರಫ್ ಕೆ., ಸುಂದರ್ ಮಾಸ್ತರ್, ಮಂಜುನಾಥ ಗಿಳಿಯಾರು, ಆನಂದ ಬ್ರಹ್ಮಾವರ, ಯಾಸಿನ್ ಮಲ್ಪೆ, ಪ್ರೊ ಪಣಿರಾಜ್, ಸುರೇಶ್ ಕಲ್ಲಾಗರ, ಆನಂದಿ, ಕುಶಲ್ ಶೆಟ್ಟಿ, ಶ್ಯಾಮಲಾ ಭಂಡಾರಿ, ಸಂಧ್ಯಾ ತಿಲಕ್‌ರಾಜ್, ರೋಶನಿ ಒಲಿವೆರಾ, ಡಾ ಸುನಿತಾ ಶೆಟ್ಟಿ, ಐರಿನ್ ಅಂದ್ರಾದೆ, ಸುಲೋಚನಾ ದಾಮೋದರ, ಗಣೇಶ್ ದೇವಾಡಿಗ, ಯತೀಶ್ ಕರ್ಕೇರ ಮತ್ತಿತರರಿದ್ದರು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.