ಕೇಂದ್ರದಿಂದ ರೈತ ವಿರೋಧಿ ನೀತಿ ಅನುಸರಣೆ: ಸಿ.ಯತಿರಾಜು ಆರೋಪ

By Kannadaprabha News  |  First Published Oct 3, 2023, 6:13 AM IST

ರೈತರ ನಿರಂತರ ಹೋರಾಟಕ್ಕೆ ಮಣಿದು ಅಪಾಯಕಾರಿ ಮಸೂದೆಗಳನ್ನು ಒಕ್ಕೂಟ ಸರಕಾರ ವಾಪಸ್ ಪಡೆದರೂ, ಅಷ್ಟೇ ಅಪಾಯಕಾರಿ ಕಾರ್ಪೋರೇಟ್ ಪರ ಕೃಷಿ ಕಾರ್ಯಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಯುಕ್ತ ಹೋರಾಟ ತುಮಕೂರ ಸಂಚಾಲಕ ಸಿ.ಯತಿರಾಜು ಆರೋಪಿಸಿದ್ದಾರೆ.


 ತುಮಕೂರು :  ರೈತರ ನಿರಂತರ ಹೋರಾಟಕ್ಕೆ ಮಣಿದು ಅಪಾಯಕಾರಿ ಮಸೂದೆಗಳನ್ನು ಒಕ್ಕೂಟ ಸರಕಾರ ವಾಪಸ್ ಪಡೆದರೂ, ಅಷ್ಟೇ ಅಪಾಯಕಾರಿ ಕಾರ್ಪೋರೇಟ್ ಪರ ಕೃಷಿ ಕಾರ್ಯಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಯುಕ್ತ ಹೋರಾಟ ತುಮಕೂರ ಸಂಚಾಲಕ ಸಿ.ಯತಿರಾಜು ಆರೋಪಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸಹಜ ಬೇಸಾಯ ಶಾಲೆ ದೊಡ್ಡ ಹೊಸೂರು ವತಿಯಿಂದ ಬೇಯರ್ಸ್ ಮತ್ತು ಮಾನ್ಸೆಂಟೋ ಕಂಪನಿಗಳ ಜೊತೆಗೆ ಒಕ್ಕೂಟ ಸರಕಾರ ಮಾಡಿಕೊಂಡಿರುವ ಒಪ್ಪಂದವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Latest Videos

undefined

ಕೃಷಿ ಸಂರಕ್ಷಿಸುವ, ವಾಯುಗುಣ ವೈಪರಿತ್ಯಗಳ ಪರಿಣಾಮಗಳನ್ನು ಮೆಟ್ಟಿ ನಿಲ್ಲಬಲ್ಲ, ಸುಸ್ಥಿರ ಕೃಷಿ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಲು ಒಕ್ಕೂಟ ಸರಕಾರ ವಿಫಲವಾಗಿವೆ. ಹೀಗಾಗಿ ಕೃಷಿ ಅಸ್ತಿತ್ವ ಗಂಡಾಂತರದಲ್ಲಿದೆ ಎಂದರು.

ಸಂಪನ್ನಗೊಂಡ ಜಿ-20 ಅಂತರಾಷ್ಟ್ರೀಯ ಸಮಾವೇಶದ ಅಂಗವಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್, ರಾಸಾಯನಿಕ ಮತ್ತು ಕೀಟನಾಶಕ ತಯಾರಿಕಾ ಕಂಪನಿಗಳಾದ ಬೇಯರ್, ಅಮೆಜಾನ್ ಬಹು ರಾಷ್ಟ್ರೀಯ ಕಂಪನಿಗಳೊಂದಿಗೆ ಕೃಷಿ ಅಸ್ತಿತ್ವಕ್ಕೆ ಗಂಡಾಂತರಕಾರಿಯಾದ ಒಪ್ಪಂದಗಳನ್ನು ಮಾಡಿಕೊಂಡಿದೆ. ಕೇಂದ್ರೀಕೃತ ಕೈಗಾರಿಕಾ ಕೃಷಿ ನೀತಿಯಿಂದ ಭಾರತೀಯ ರೈತ ಸಮುದಾಯದ ಮೇಲೆ ಮಾರಾಣಾಂತಿಕ ಹೊಡೆತ ಬೀಳಲಿದೆ. ಬೇಯರ್, ಮನ್ಸೋಂಟೋ ಬಹು ರಾಷ್ಟ್ರೀಯ ಕಂಪನಿಗಳು, ಬೀಜಗಳು ಮತ್ತು ಕೃಷಿ ಸಂಬಂಧಿ ರಸಾಯನಿಕಗಳನ್ನು ವಿಶ್ವಾದ್ಯಂತ ಮಾರಾಟ ಮಾಡಿ ವಿಶ್ವದ ಕೃಷಿಯನ್ನು ಹಾಳುಗೆಡವಿವೆ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರವೀಶ್ ಮಾತನಾಡಿ, ಭಾರತೀಯ ಕೃಷಿಯನ್ನುದ್ಧರಿಸಲು ಭಾರತ ಸರಕಾರದ ಐ.ಸಿ.ಎ.ಆರ್ ಒಡಂಬಡಿಕೆ ಮಾಡಿಕೊಂಡಿವೆ. ಇಂತಹ ಕುಖ್ಯಾತ ಕಂಪನಿಗಳು ಬರಿ ರಾಸಾಯನಿಕಗಳನಷ್ಟೇ ಅಲ್ಲದೆ ಜೈವಿಕ ತಂತ್ರಜ್ಞಾನ ರೂಪಾಂತರಿತ ಕೃಷಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿ ವಿವಾದ ಸೃಷ್ಟಿಸಿವೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಐ.ಸಿ.ಎ.ಆರ್. ನೊಂದಿಗೆ ಬಿಟಿ ಹತ್ತಿ ಬೀಜಗಳನ್ನು ರೈತರಿಗೆ ಮಾರಿ ಈ ಕಂಪನಿಗಳು ಅಪಾರ ಲಾಭಗಳಿಸಿವೆ. ಬಿಟಿ ಹತ್ತಿ ಬೆಳೆದ ರೈತರು ಮಾತ್ರ ಅಪಾರ ನಷ್ಟಕೀಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ದೇಶಗಳಲ್ಲಿ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿರುವ ಈ ಕಂಪನಿಯು ಭಾರತೀಯ ಕೃಷಿಯನ್ನು ಆಧುನಿಕರಣಗೊಳಿಸಲು ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮಾಡಲು ಭಾರತ ಸರಕಾರ ಅವಕಾಶ ಕಲ್ಪಿಸುವ ಮೂಲಕ ತೋಳವನ್ನು ಕುರಿ ಕಾಯಲು ಬಿಟ್ಟಂತಾಗಿದೆ. ಹಾಗಾಗಿ ಈ ಒಪ್ಪಂದವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನಾ ಪಾದಯಾತ್ರೆಯಲ್ಲಿ ಗಾಂಧಿ ಸಹಜ ಬೇಸಾಯ ಶಾಲೆ ಹಾಗೂ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಶಂಕರಪ್ಪ,ಎಐಟಿಯುಸಿಯ ಕಂಬೇಗೌಡ, ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

click me!