
ವಿಜಯನಗರ(ಡಿ.28): ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮತ್ತೊರ್ವ ಬಾಣಂತಿ ಸಾವನ್ನಪ್ಪಿದ್ದಾಳೆ. ಹೌದು. ಸಂಡೂರು ಮೂಲದ ಮಹಿಳೆ ಹೊಸಪೇಟೆಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಐಶ್ವರ್ಯ ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಫುಡ್ ಪಾಯ್ಸನ್‌ನಿಂದ ಐಶ್ವರ್ಯ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಡಿಸೆಂಬರ್ 20ರಂದು ಐಶ್ವರ್ಯ ಅವರಿಗೆ ಹೊಸಪೇಟೆಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಹೆರಿಗೆಯಾದ ಎರಡು ದಿನಗಳ ಬಳಿಕ ಇಡ್ಲಿ ತಿಂದಿದ್ದಾರಂತೆ ಅದು ಪುಡ್ ಪಾಯ್ಸನ್ ಆಗಿದೆ. ನಿರಂತರವಾಗಿ ವಾಂತಿ ಬೇದಿಯಿಂದ ಬಳಲಿದ ಐಶ್ವರ್ಯ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಐಶ್ವರ್ಯ ಮೃತಪಟ್ಟಿದ್ದರು.
ಐಶ್ವರ್ಯಾ ಸಾವಿಗೆ ಹೊರಗಿನಿಂದ ತಂದು ತಿಂದ ಇಡ್ಲಿಯೇ ಕಾರಣವಾಗಿರಬಹುದು ವೈದ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಯಾರಿಗೂ ಈ ಸಮಸ್ಯೆ ಕಾಣಿಸಿಲ್ಲ. ಹೀಗಾಗಿ ಎಲ್ಲಿಂದ ಇಡ್ಲಿ ತರಿಸಿದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಣಂತಿ ಸಾವಿಗೆ ಫುಡ್ ಪಾಯ್ಸನ್ ಕಾರಣ ಎನ್ನುವುದು ವಿಜಯನಗರ ವೈದ್ಯಾಧಿಕಾರಿ ಶಂಕರ್ ನಾಯಕ್ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು
ಬೆಳಗಾವಿ: ಕಳೆದ ನಾಲ್ಕು ದಿನಗಳ ಹಿಂದೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಬಾಣಂತಿ ಮೃತಪಟ್ಟಿದ್ದಾರೆ. ಒಂದು ವಾರದ ಅವಧಿಯಲ್ಲಿ ಬಾಣಂತಿಯರ ಸಾವಿನ 2ನೇ ಪ್ರಕರಣ ಇದಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಕಡಕಬಾವಿ (25) ಮೃತ ಬಾಣಂತಿ. ಪೂಜಾ ಅವರನ್ನು 2 ದಿನಗಳಿಂದೆ ಹೆರಿಗೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಪೂಜಾ ಗಂಡು ಮಗುವಿನ ಜನ್ಮ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಒಂದು ವಾರದಲ್ಲಿ ಬಿಮ್ಸ್ ಆಸ್ಪತ್ರೆಯಲ್ಲಿ ಇದು ಎರಡನೆಯ ಬಾಣಂತಿ ಸಾವಿನ ಪ್ರಕರಣವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇದ್ದಕ್ಕೂ ಮುನ್ನ ಡಿ.22ರಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೋಡ ಗ್ರಾಮದ ವೈಶಾಲಿ ಕೊಟಬಾವಿ ಎಂಬ ಬಾಣಂತಿ ಮೃತಪಟ್ಟಿದ್ದರು. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು.
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ರಾಜ್ಯಾದಾದ್ಯಂತ ಸದ್ದು ಮಾಡಿದ್ದು,15 ದಿನಗಳ ಅವಧಿಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಕಳೆದ 6 ತಿಂಗಳಲ್ಲಿ 29 ಬಾಣಂತಿಯರು 322 ಶಿಶುಗಳು ಮೃತಪಟ್ಟಿರುವ ಸಂಖ್ಯೆ ಬಯಲಾಗಿದೆ.