ಕಳೆದ ವರ್ಷ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿ ವಿವಾದಕ್ಕೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಈ ಬಾರಿ ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ.
ಬೆಂಗಳೂರು [ಮಾ.17]: ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತೆ ವಿವಾದದಲ್ಲಿ ಸಿಲುಕಿದ್ದು, ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಲಪಾಡ್ ಮತ್ತು ಅವರ ಅಂಗರಕ್ಷಕರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಗೋವಿಂದರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ ಎಂಬಾತನ ಮೇಲೆ ಹಲ್ಲೆ ಆರೋಪ ಬಂದಿದ್ದು, ಈ ಸಂಬಂಧ ಮೊಹಮ್ಮದ್ ನಲಪಾಡ್, ಆತನ ಅಂಗರಕ್ಷಕ ಮತ್ತು ಕಾರ್ಯಕ್ರಮದ ಸಂಘಟಕರಾದ ಶಿವಕುಮಾರ್ ಹಾಗೂ ಮಂಜು ಸೇರಿದಂತೆ ಇತರರ ಮೇಲೆ ಎಫ್‌ಐಆರ್ ದಾಖಲಾಗಿದೆ.
ವೈಯಾಲಿಕಾವಲ್ ಹತ್ತಿರದ ತೆಲುಗು ವಿಜ್ಞಾನ ಮಂದಿರದಲ್ಲಿ ಭಾನುವಾರ ರಾಜ್ಯ ಯುವ ಕಾಂಗ್ರೆಸ್ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೆಕಾರು ಅಪಘಾತದ ವಿವಾದದಲ್ಲಿ ಸಿಲುಕಿ ನಲಪಾಡ್ ಬಂಧಿತನಾಗಿ ಬಳಿಕ ಜಾಮೀನು ಪಡೆದಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೆ ಅವರು ವಿವಾದಕ್ಕೆ ಸಿಕ್ಕಿದ್ದಾರೆ.
ಮೊಹಮ್ಮದ್ ನಲಪಾಡ್ ಮತ್ತೊಂದು ಕಿತಾಪತಿ: ಮತ್ತೆ ಬೇಕಾ ಜೈಲಿಗೆ ಹೋಗೋ ಗತಿ..!..
ವೈಯಾಲಿಕಾವಲ್ ಸಮೀಪದ ತೆಲುಗು ವಿಜ್ಞಾನ ಮಂದಿರಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿಯು ಭಾನುವಾರ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ನಲಪಾಡ್ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ರಾತ್ರಿ 8ರ ಸುಮಾರಿಗೆ ವಿಜೇತರಿಗೆ ಬಹುಮಾನ ವಿತರಿಸುವಾಗ ವೇದಿಕೆ¿ಲ್ಲಿ ಗಣ್ಯರ ಆಹ್ವಾನಿಸುವ ವಿಷಯದಲ್ಲಿ ನಲಪಾಡ್ ಹಾಗೂ ಸಚಿನ್‌ಗೌಡ ಮಧ್ಯೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಬಹುಮಾನ ವಿತರಣಾ ಕಾರ್ಯಕ್ರಮದ ವೇದಿಕೆಗೆ ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ಬಿ.ನಾರಾಯಣ್ ರಾವ್ ಪುತ್ರ ಗೌತಮ್ ಅವರನ್ನು ಆಹ್ವಾನಿಸದಿರುವುದಕ್ಕೆ ಆಕ್ಷೇಪಿಸಿದ ಸಚಿನ್, ಈ ಬಗ್ಗೆ ಕಾರ್ಯಕ್ರಮ ಸಂಘಟಕ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದರು. ಆ ವೇಳೆ ಶಿವಕುಮಾರ್ ಜತೆಯಲ್ಲಿದ್ದ ನಲಪಾಡ್, ಸಚಿನ್ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಚಿನ್ ಮೇಲೆ ನಲಪಾಡ್ ಹಾಗೂ ಆತನ ಅಂಗರಕ್ಷ ಸೇರಿದಂತೆ ಇತರರು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಗಲಾಟೆ ಮಧ್ಯೆ ಪ್ರವೇಶಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ, ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.
ದೂರು ಪ್ರತಿದೂರು:
ಸೋಮವಾರ ಮಧ್ಯಾಹ್ನ ನಲಪಾಡ್, ವೈಯಾಲಿಕಾವಲ್ ಠಾಣೆಗೆ ತೆರಳಿ, ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ಸಾರ್ವಜನಿಕವಾಗಿ ಗೌರವ ಕಳೆಯಲು ಗೋವಿಂದರಾಜ ನಗರ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಗೌಡ ಯತ್ನಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾನೆ. ಈ ದೂರು ಆಧರಿಸಿದ ಪೊಲೀಸರು, ಎಫ್‌ಐಆರ್ ದಾಖಲಿಸದೆ ಗಂಭೀರ ಸ್ವರೂಪವಲ್ಲದ ಪ್ರಕರಣ ಎಂದು ಪರಿಗಣಿಸಿದ್ದಾರೆ. ಇದಾದ ನಂತರ ಸಂಜೆ ಠಾಣೆಗೆ ತೆರಳಿದ ಸಚಿನ್‌ಗೌಡ, ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಅದರನ್ವಯ ನಲಪಾಡ್ ಹಾಗೂ ಆತನ ಅಂಗರಕ್ಷರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಚಿನ್ ನೀಡಿರುವ ದೂರಿನಲ್ಲಿ ಜೀವ ಬೆದರಿಕೆ, ಹಲ್ಲೆ ಹಾಗೂ ಅವಾಚ್ಯ ಶಬ್ಧಗಳ ನಿಂದನೆ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಅದರನ್ವಯ ನಲಪಾಡ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ನಲಪಾಡ್ ನೀಡಿದ ದೂರಿನಲ್ಲಿ ಬೆದರಿಕೆ ಮತ್ತು ಹೆಸರಿಗೆ ಕಳಂಕ ತರುವ ಯತ್ನ ಎಂದಿದ್ದಾರೆ. ಈ ಎರಡು ದೂರುಗಳ ಬಗ್ಗೆ ತನಿಖೆ ನಡೆದಿದೆ.
-ಚೇತನ್ ಸಿಂಗ್ ರಾಥೋಡ್, ಡಿಸಿಪಿ, ಕೇಂದ್ರ ವಿಭಾಗ
ರಾಜ್ಯ ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಗೌತಮ್ ಎಂಬಾತನನ್ನು ಆಹ್ವಾನಿಸದ ಕಾರಣಕ್ಕೆ ಸಚಿನ್ ಗಲಾಟೆ ಮಾಡುತ್ತಿದ್ದ. ನಾನು ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಆತನನ್ನು ಪ್ರಶ್ನಿಸಿದೆ. ಇದಕ್ಕೆ ನನ್ನ ಮೇಲೆ ತಿರುಗಿ ಬಿದ್ದ. ಮಾಧ್ಯಮಗಳಲ್ಲಿ ಮರ್ಯಾದೆ ಕಳೆಯುತ್ತೇನೆ ಎಂದು ಬೆದರಿಸಿದ ಸಚಿನ್, ಈಗ ಸುಳ್ಳು ಆರೋಪ ಮಾಡುತ್ತಿದ್ದಾನೆ.
-ಮೊಹಮ್ಮದ್ ನಲಪಾಡ್, ಶಾಸಕ ಎನ್.ಎ.ಹ್ಯಾರಿಸ್ ಪುತ್ರ
ಬಸವಕಲ್ಯಾಣದ ಶಾಸಕರ ಪುತ್ರನನ್ನು ವೇದಿಕೆ ಕರೆಯುವಂತೆ ಹೇಳಿದ್ದಕ್ಕೆ ನನ್ನ ಮೇಲೆ ನಲಪಾಡ್ ಹಾಗೂ ಇತರರು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ದೂರು ಕೊಡುತ್ತೇನೆ. ನಿನ್ನೆ ಹಲ್ಲೆ ಮಾಡಿ ರಾಜಿಗೆ ಕರೆದ ನಲಪಾಡ್, ಇಂದು ನನ್ನ ವಿರುದ್ಧವೇ ದೂರು ಕೊಟ್ಟಿದ್ದಾನೆ.
-ಸಚಿನ್ ಗೌಡ, ಗೋವಿಂದರಾಜ ನಗರ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ