ಕಲಬುರಗಿಗೆ ಸೇವೆ ನೀಡಲು ಏರ್‌ಲೈನ್ಸ್ ಪೈಪೋಟಿ: ಟಿಕೆಟ್‌ ದರದಲ್ಲಿ ಭಾರೀ ಕಡಿತ

By Suvarna NewsFirst Published Dec 21, 2019, 12:20 PM IST
Highlights

ಸೇವೆ ನೀಡಲು ಏರ್‌ಲೈನ್ಸ್ ಪೈಪೋಟಿ| ಸ್ಟಾರ್ ಯಶಸ್ಸಿನ ಬೆನ್ನಲ್ಲೇ ಅಲಯನ್ಸ್ ಸವಾರಿ ಶುರು| ನ. 27 ರಿಂದ ಅಲಯನ್ಸ್ ಏರ್‌ಲೈನ್ಸ್ ಹೊಸ ವಿಮಾನ ಸೇವೆ | ಹುಬ್ಬಳ್ಳಿ, ಬೆಳಗಾವಿಯ ವಿಮಾನ ನಿಲ್ದಾಣಗಳಲ್ಲಿಯೂ ಈ ರೀತಿ ಪೈಪೋಟಿಯ ವಾಯುಸೇವೆ ಕಂಡಿರಲಿಲ್ಲ| ಕಲಬುರಗಿಯಲ್ಲಿ ಕಾಣುತ್ತಿರೋ ಪೈಪೋಟಿ ಎಲ್ಲರನ್ನೂ ಬೆರಗಾಗಿಸಿದೆ| 

ಶೇಷಮೂರ್ತಿ ಅವಧಾನಿ

ಕಲಬುರಗಿ(ಡಿ.21): ಕಲಬುರಗಿ ವಿಮಾನ ನಿಲ್ದಾಣ ಆರಂಭವಾಗಿ ನೆಟ್ಟಗೆ ಇನ್ನು ತಿಂಗಳಾಗಿಲ್ಲ, ಅದಾಗಲೇ ಬಿಸಿಲೂರಿಗೆ ಹೊಸ ಬಗೆಯ, ಸ್ಪರ್ಧಾತ್ಮಕ ದರದಲ್ಲಿ ವಿಮಾನ ಸೇವೆ ನೀಡಲು ಏರ್‌ಲೈನ್ಸ್ ಸಂಸ್ಥೆಗಳ ಮಧ್ಯೆ ಪೈಪೋಟಿ ಶುರುವಾದಂತಿದೆ. 

ಕಳೆದ ನ.22 ರಿಂದ ಸ್ಟಾರ್ ಏರ್‌ಲೈನ್ಸ್ ವಾರದಲ್ಲಿ 3 ದಿನ ಕಲಬುರಗಿ, ಬೆಂಗಳೂರು ಮಧ್ಯೆ ಆರಂಭಿಸಿರುವ ವಿಮಾನ ಸೇವೆಗೆ ಭಾರಿ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆ ಇದೀಗ ಇಂಡಿಯನ್ ಏರ್‌ಲೈನ್ಸ್‌ನ ಅಂಗಸಂಸ್ಥೆ ಅಲಯನ್ಸ್ ಏರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರು, ಬೆಂಗಳೂರು, ಕಲಬುರಗಿ ವಾಯುಯಾನ ಸೇವೆ ಘೋಷಿಸುವ ಮೂಲಕ ಗಮನ ಸೆಳೆದಿದೆ. 

ರಾಜ್ಯದ ಉತ್ತರದಲ್ಲಿರುವ ಹುಬ್ಬಳ್ಳಿ, ಬೆಳಗಾವಿಯ ವಿಮಾನ ನಿಲ್ದಾಣಗಳಲ್ಲಿಯೂ ಈ ರೀತಿ ಪೈಪೋಟಿಯ ವಾಯುಸೇವೆ ಕಂಡಿರಲಿಲ್ಲ, ಆದರೆ ಕಲಬುರಗಿಯಲ್ಲಿ ಕಾಣುತ್ತಿರೋ ಪೈಪೋಟಿ ಎಲ್ಲರನ್ನೂ ಬೆರಗಾಗಿಸಿದೆ. ಸ್ಟಾರ್ ಏರ್‌ಲೈನ್ಸ್ ತನ್ನ ವಾಯುಸೇವೆ ಆರಂಭಿಸಿ ಡಿ.22ಕ್ಕೆ ಬರೋಬ್ಬರಿ 1 ತಿಂಗಳು ತುಂಬಲಿದೆ. ಈ ಹೊತ್ತಿಗಾಗಲೇ ಅಲಯನ್ಸ್ ಸಂಸ್ಥೆ ತನ್ನ ಹೊಸ ಸೇವೆ ಘೋಷಿಸಿ ಗಮನ ಸೆಳೆದಿದೆ. ಸ್ಟಾರ್‌ಗೆ ವ್ಯಕ್ತವಾಗಿರುವ ಬೇಡಿಕೆಯೇ ವಾಯುಯಾನ ಸೇವೆಯಲ್ಲಿನ ಪೈಪೋಟಿಗೆ ಕಾರಣ ಎಂಬುದು ಗುಟ್ಟೇನಲ್ಲ. 

ನ.27ರಿಂದ ಅಲಯನ್ಸ್ ಏರ್‌ಲೈನ್ಸ್ ವಿಮಾನ ನಿತ್ಯ ಹಾರಾಟ: 

ಏರ್ ಇಂಡಿಯಾ ಅಂಗ ಸಂಸ್ಥೆ ಅಲಯನ್ಸ್ ಏರ್‌ಲೈನ್ಸ್ ನ.27 ರಿಂದ ಕಲಬುರಗಿ, ಬೆಂಗಳೂರು, ಮೈಸೂರು ದಿನನಿತ್ಯ ವಿಮಾನ ಸೇವೆ ಘೋಷಣೆ ಮಾಡಿದೆ. ಸದರಿ ವಾಯುಯಾನವನ್ನು ಉಡಾನ್ ಆರಂಭಿಸುತ್ತಿದೆ. 70 ಆಸನಗಳ ಸದರಿ ವಿಮಾನ ಸುಸಜ್ಜಿತವಾಗಿದೆ. ಪ್ರತಿಶತ 50 ರಷ್ಟು ಸೀಟುಗಳು ಉಡಾನ್ ಯೋಜನೆಯಡಿ ಬುಕ್ಕಿಗ್‌ಗೆ ಲಭ್ಯವಿರಲಿವೆ. 

ಅಲೈನ್ಸ್ ಏರ್‌ಲೈನ್ಸ್‌ನ ವಿಮಾನ ನಿತ್ಯ ಬೆಳಗ್ಗೆ 11.50 ಗಂಟೆಗೆ ಕಲಬುರಗಿಯಿಂದ ಹೊರಟು 12.30 ಕ್ಕೆ ಬೆಂಗಳೂರು ತಲುಪಲಿದೆ. ಇದೇ ಸಂಸ್ಥೆಯ ವಿಮಾನ ಮ. 14 ಗಂಟೆಗೆ ಬೆಂಗಳೂರಿನಿಂದ ಹೊರಟು 14.50  ಗಂಟೆಗೆ ಅರಮನೆ ನಗರಿ ಮೈಸೂರು ತಲುಪಲಿದೆ. ಉಡಾನ್‌ಯೋಜನೆ ಅನ್ವಯ 50% ಆಸನಗಳು ರಿಯಾಯಿತಿ ದರದಲ್ಲಿ ಲಭ್ಯವಾಗಿದ್ದು ಕಲಬುರಗಿಯಿಂದ ಬೆಂಗಳೂರಿಗೆ ರಿಯಾಯ್ತಿ ಯಾಣದರ ರು. 2645 ಆಗಿದೆ. ಅಲಯನ್ಸ್ ಸಂಸ್ಥೆ ವಿಮಾನ ಮೈಸೂರು ನಗರವನ್ನು ಬೆಳಗ್ಗೆ 8.30 ಗಂಟೆಗೆ ಬಿಟ್ಟು 9.10 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ. ಬೆಂಗಳೂರಿನಿಂದ 9.50 ಗಂಟೆಗೆ ಬಿಡುವ ವಿಮಾನವನ್ನು 11.25 ಗಂಟೆಗೆ ಕಲಬುರಗಿ ತಲುಪುತ್ತದೆ. 

ಇನ್ನೂ ಪೈಪೋಟಿ ಹೆಚ್ಚುವ ನಿರೀಕ್ಷೆ: 

ಸ್ಟಾರ್ ವಾಯುಸೇವೆಯಿಂದಲೇ ತನ್ನ ಭಾಗ್ಯದ ಬಾಗಿಲು ತೆರೆದಂತಿದ್ದ ಕಲಬುರಗಿ ವಿಮಾನ ನಿಲ್ದಾಣದಲ್ಲೀಗ ಅಲಯನ್ಸ್ ತನ್ನ ವಿಮಾನ ಸೇವೆ ನಿತ್ಯ ನೀಡಲು ಹೊರಟಿದೆ. ಸ್ಟಾರ್‌ಗಿಂತ ಅಲಯನ್ಸ್ ವಿಮಾನ ಸೇವೆ ಸಮಯವೂ ಜನತೆಯ ನಿರೀಕ್ಷೆಗೆ ತಕ್ಕಂತಿದೆ. ಹೀಗಾಗಿ ಬರುವ ದಿನಗಳಲ್ಲಿ ಇಂಡಿಗೋ, ಜೆಟ್ ಸಂಸ್ಥೆಯವರೂ ಕಲಬುರಗಿಯತ್ತ ಹೆಜ್ಜೆ ಹಾಕಿ ತಿರುಪತಿ, ಮುಂಬೈ, ಹೈದ್ರಾಬಾದ್, ನವ ದೆಹಲಿ ವಾಯು ಸೇವೆಗಳಿಗೆ ಚಾಲನೆ ನೀಡುವ ದಿನಗಳೂ ದೂರವೇನಿಲ್ಲ ಎಂಬುದು ಅನೇಕರ ಅಭಿಮತ. ಏಕೆಂದರೆ ಕಲಬುರಗಿಯಷ್ಟೇ ಅಲ್ಲ, ಅಕ್ಕಪಕ್ಕದ ವಿಜಯಪುರ, ರಾಯಚೂರು, ಯಾದಗಿರಿ, ಬೀದರ್, ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಅಕ್ಕಲಕೋಟೆ, ಲಾತೂರು ಜಿಲ್ಲೆಯ ಜನ ಕಲಬುರಗಿಗೆ ಬಂದು ವಿಮಾನ ಸೇವೆ ಹೊಂದಲು ತುಂಬ ಅನುಕೂಲವಿದೆ. ಹೀಗಾಗಿ ವಾಯುಸೇವೆಗೆ ಇಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದು ಬರುವ ದಿನಗಳಲ್ಲಿ ಇನ್ನೂ ದ್ವಿಗುಣವಾಗುವ ಸಂಭವಗಳೇ ಅಧಿಕ. 

ಹೆಚ್ಚಿನ ಜನ ಬೆಂಬಲ ನಿರೀಕ್ಷೆಯಲ್ಲಿ ಏರ್‌ಲೈನ್ಸ್ ಸಂಸ್ಥೆಗಳು: 

ಸದ್ಯ ಸ್ಟಾರ್ ಸಂಸ್ಥೆಯ 50 ಆಸನಗಳ ಸಾಮರ್ಥ್ಯದ ವಿಮಾನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಅಲಯನ್ಸ್, ಇಂಡಿಗೋ ವಾಯುಸೇವೆಯಲ್ಲಿಯೂ ಇಂತಹದ್ದೇ ಬೆಂಬಲ ಏರ್‌ಲೈನ್ಸ್‌ನವರು ಜನರಿಂದ ನಿರೀಕ್ಷೆ ಮಾಡುತ್ತಿದ್ದಾರೆ. 

ಟಿಕೆಟ್ ದರದಲ್ಲೂ ಪೈಪೋಟಿ: 

2850 ರು. ಬೇಸ್ ರೇಟ್‌ನಿಂದ ಆರಂಭವಾಗುವ ಸ್ಟಾರ್ ಸಂಸ್ಥೆಯ ವಿಮಾನಯಾನ ಟಿಕೆಟ್ 8 ರಿಂದ 10 ಸಾವಿರದ ವರೆಗೂ ಮಾರಾಟವಾಗುತ್ತಿವೆ. ಇದೀಗ ಅಲಯನ್ಸ್ ಸಂಸ್ಥೆ 2645 ರು ಟಿಕೆಟ್ ದರ ನಿಗದಿಪಡಿಸಿದ್ದು ಇದು ಸ್ಟಾರ್ ಬೇಸ್‌ರೇಟ್‌ಗಿಂತ 225 ರು ಕಮ್ಮಿ ಇದೆ. ಇದರಿಂದಾಗಿ ಟಿಕೆಟ್ ದರದಲ್ಲಿಯೂ ಪೈಪೋಟಿ ಶುರುವಾಗಿದ್ದು, ಬರುವ ದಿನಗಳಲ್ಲಿ ಟಿಕೆಟ್ ದರ ಬೇಸ್ ರೇಟ್ ಇನ್ನೂ ತಗ್ಗಿದಲ್ಲಿ ವಾಯುಸೇವೆಗೆ ಬೇಡಿಕೆ ಹೆಚ್ಚಲಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳ ಎಲ್ಲ ವಾಣಿಜ್ಯೋದ್ಯಮ ಜನತೆ, ನಾಗರಿಕರು ತಮ್ಮ ಕೆಲಸಗಳಿಗಾಗಿ ಹಾಗೂ ಪ್ರಯಾಣ ಸಮಯ ಉಳಿಸಲು, ಇತರೆ ವೆಚ್ಚ ಕಡಿತಗೊಳಿಸಲು, ಕಲಬುರಗಿ ನಿಲ್ದಾಣದಿಂದ ವಿಮಾನಯಾನ ಸೌಕರ್ಯವನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಹೆಚ್ಚು ವಿಮಾನಯಾನ ಕೈಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಇದರಿಂದಾಗಿ ಅನ್ಯ ಮಾರ್ಗಗಳ ಮೇಲೆ ಹೊಸ ವಿಮಾನ ಪ್ರಾರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಉತ್ತೇಜನ ದೊರೆಯುತ್ತದೆ.

ಇಂಡಿಗೋ ಏರ್ ಲೈನ್ಸ್ ಇವರು ಕಲಬುರಗಿಯಿಂದ ಹೈದ್ರಾಬಾದ್ ಹಾಗೂ ಚೆನೈ ನಗರಗಳಿಗೆ ವಿಮಾನಯಾನವನ್ನು ಇಷ್ಟರಲ್ಲಿಯೇ ಪ್ರಾರಂಭಿಸುತ್ತಿದ್ದಾರೆಂಬುದು ಹರುಷದ ಸಂಗತಿ ಎಂದು ಕಲಬುರಗಿ ಎಚ್ಕೆಸಿಸಿಐ ಅಧ್ಯಕ್ಷರು/ ಕಾರ್ಯದರ್ಶಿ ಅಮರನಾಥ ಪಾಟೀಲ/ ಶಶಿಕಾಂತ ಪಾಟೀಲ ಅವರು ಹೇಳಿದ್ದಾರೆ. 

* ಕಲಬುರಗಿ ‘ಏರ್ಪೋರ್ಟ್’ನಿಂದ ವಿಮಾನ ಸೇವೆ ಆರಂಭಿಸಲು ‘ಏರ್ ಲೈನ್ಸ್ ಸಂಸ್ಥೆ’ಗಳ ನಡುವೆ ಪೈಪೋಟಿ! 

* ನ.22 ರಿಂದ ವಾಯುಯಾನ ಸೇವೆ ಆರಂಭಿಸಿರುವ ಸ್ಟಾರ್ ಏರ್‌ಲೈನ್ಸ್ ಕಲಬುರಗಿ- ಬೆಂಗಳೂರು ಫ್ಲೈಟ್ ಫುಲ್ ರಶ್ 

* ತೊಗರಿ ಕಣಜ ಕಲಬುರಗಿ, ಉದ್ಯಾನ ನಗರಿ ಬೆಂಗಳೂರು, ಅರಮನೆ ನಗರಿ ಮೈಸೂರು ವಾಯುಯಾನ ಸೇವೆ ಘೋಷಣೆ ಥಿ ಇಂಡಿಗೋ, ಜೆಟ್ ಏರ್‌ಲೈನ್ಸ್‌ಸನಿಂದಲೂ ಶೀಘ್ರ ಕಲಬುರಗಿ ಏರ್ಪೋರ್ಟ್‌ನಿಂದ ದೆಹಲಿ, ಮುಂಬೈ ವಾಯುಯಾನ ಸಂಭವ.

click me!