ಕಲಬುರಗಿ: ಖಾಸಗಿ ವಿಮಾನ, ಏರ್‌ ಆ್ಯಂಬುಲೆನ್ಸ್‌ಗೆ ಅವಕಾಶ

By Kannadaprabha NewsFirst Published Aug 15, 2020, 3:26 PM IST
Highlights

ಕಲಬುರಗಿ ಏರ್ಪೋರ್ಟ್‌ ರನ್‌ ವೇ, ಇತರೆ ಸೌಲಭ್ಯ ಬಳಕೆಗೆ ಖಾಸಗಿಯವರಿಗೆ ಅವಕಾಶ| ಕಲಬುರಗಿಯಲ್ಲಿ ವಿಮಾನಯಾನ ಆರಂಭವಾದ 2019ರ ನ.22ರಿಂದ ಜು.31ರವರೆಗೆ ಒಟ್ಟು 562 ಟ್ರಿಪ್‌ ವಿಮಾನಗಳ ಹಾರಾಟ ನಡೆಸಿದ್ದು, 20,864 ಪ್ರಯಾಣಿಕರು ಪ್ರಯಾಣ|

ಕಲಬುರಗಿ(ಆ.15): ನಗರದ ವಿಮಾನ ನಿಲ್ದಾಣದ ಪರವಾನಿಗೆಯನ್ನು 2 ವರ್ಷಗಳಿಗೆ ನವೀಕರಿಸಿರುವ ಭಾರತೀಯ ವಿಮಾನಯಾನ ಪ್ರಾಧಿಕಾರ, ನಿಲ್ದಾಣದಲ್ಲಿ ಇನ್ನುಂದೆ ಖಾಸಗಿ ವಿಮಾನ, ಹೆಲಿಕಾಪ್ಟರ್‌, ಏರ್‌ ಆ್ಯಂಬುಲೆನ್ಸ್‌ ಹಾರಾಟಕ್ಕೂ ಅವಕಾಶ ನೀಡಿದೆ.

ಕೊರೋನಾ ಲಾಕ್‌ಡೌನ್‌ ಅವಧಿಯಲ್ಲೇ (ಏಪ್ರಿಲ್‌ನಲ್ಲಿ) ಕಲಬುರಗಿಯಿಂದ ಖಾಸಗಿ ಏರ್‌ ಆ್ಯಂಬುಲೆನ್ಸ್‌ ಸೇವೆ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಯಶಸ್ವಿಯಾಗಿ ಪಡೆದುಕೊಂಡ ಹಿನ್ನೆಲೆಯಲ್ಲಿ ವಿಮಾನಯಾನ ಪ್ರಾಧಿಕಾರದವರು ತಮ್ಮ ರನ್‌ವೇ, ಇತರೆ ಸವಲತ್ತನ್ನು ಖಾಸಗಿಯಾಗಿ ಯಾರಾದರೂ ಬಳಸುವವರಿದ್ದರೆ ಅವರಿಗೂ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. 

ಕಲಬುರಗಿಯ 3 ದಶಕಗಳ ವಿಮಾನ ಕನಸು ನನಸು

ಖಾಸಗಿ ವಿಮಾನಯಾನ ಸಂಸ್ಥೆಗಳು, ಏರ್‌ ಆ್ಯಂಬುಲೆನ್ಸ್‌ ಸಂಸ್ಥೆಗಳು ಇದರ ಪ್ರಯೋಜನ ಪಡೆಯಬಹುದು. ಖಾಸಗಿ ವಿಮಾನಯಾನ ಸಂಸ್ಥೆಗಳ ಸಹಯೋಗದಲ್ಲಿ ಸಾರ್ವಜನಿಕರೂ ಸಹ ಇಂತಹ ಅಗತ್ಯ ಹಾಗೂ ತುರ್ತು ಸೇವೆಗೆ ಕಲಬುರಗಿ ನಿಲ್ದಾಣ ಬಳಸಬಹುದಾಗಿದೆ. ಈಗಾಗಲೇ ಬೆಂಗಳೂರು-ಕಲಬುರಗಿ ಯಶಸ್ವಿ ವಿಮಾನ ಸೇವೆ ನೀಡುತ್ತಿರುವ ಸ್ಟಾರ್‌ ಏರ್‌ವೇಸ್‌ ಸಂಸ್ಥೆಯು ಬಾಡಿಗೆ ಹೆಲಿಕಾಪ್ಟರ್‌ ಸೇವೆಯನ್ನು ರಾಜ್ಯದ ವಿವಿಧೆಡೆ ಆರಂಭಿಸಿದೆ. ಈ ಸಂಸ್ಥೆಯವರನ್ನು ಸಂಪರ್ಕಿಸಿ ಕಲಬುರಗಿಯಿಂದಲೂ ಈ ಸೇವೆಯನ್ನು ಸಾರ್ವಜನಿಕರು ಹೊಂದಬಹುದಾಗಿದೆ ಎಂದು ಕಲಬುರಗಿ ಏರ್ಪೋರ್ಟ್‌ ನಿರ್ದೇಶಕ ಜ್ವಾನೇಶ್ವರ ರಾವ್‌ ಹೇಳಿದ್ದಾರೆ. ರಾಜ್ಯದ ವಿವಿಧೆಡೆ ಪ್ರಯಾಣಿಕರನ್ನು (6 ಪ್ರಯಾಣಿಕರು ಮಾತ್ರ) ಕರೆದೊಯ್ಯುವ ಹೆಲಿಕಾಪ್ಟರ್‌ ಸೇವೆಯನ್ನು ಜನತೆ ಬಯಸಿದಲ್ಲಿ ಸ್ಟಾರ್‌ ಸಂಸ್ಥೆ ಕಲಬುರಗಿಗೆ ವಿಸ್ತರಿಸುವ ಸಾಧ್ಯತೆ ಇದೆ.

ಅಕ್ಟೋಬರ್‌ನಿಂದ ತಿರುಪತಿ, ದೆಹಲಿ ವಿಮಾನ ಸೇವೆ

ರಾತ್ರಿ ವೇಳೆ ಪ್ರಯಾಣಿಕರ ವಿಮಾನ ಹಾಗೂ ಸರಕು ವಿಮಾನಗಳ ಓಡಾಟಕ್ಕೆ ಕ್ರಮಗಳು ಜರುಗಿಸಲಾಗುತ್ತಿದೆ. ಮುಂದಿನ ವರ್ಷದ ಜುಲೈನಲ್ಲಿ ರಾತ್ರಿ ವೇಳೆ ವಿಮಾನಗಳ ಲ್ಯಾಡಿಂಗ್‌ಗೆ ಅವಕಾಶವಾಗಲಿದೆ. ಇದಕ್ಕಾಗಿ ಡಿವಿಒಆರ್‌ ಹಾಗೂ ಡಿಎಂಇ ತಾಂತ್ರಿಕ ಉಪಕರಣಗಳ ಅಗತ್ಯವಿದ್ದು, ಅವುಗಳನ್ನು ಅದಾಗಲೇ ತರಿಸಿಕೊಳ್ಳುವ ಕೆಲಸ ಸಾಗಿದೆ. ಈಗಾಗಲೇ ಉಡಾನ್‌ ಯೋಜನೆಯಲ್ಲಿ ಅನುಮತಿ ದೊರಕಿರುವ ಕಲಬುರಗಿ-ತಿರುಪತಿ, ಕಲಬುರಗಿ-ಹಿಂಡಾನ್‌(ದೆಹಲಿ) ವಾಯು ಸೇವೆ ಕೊರೋನಾದಿಂದಾಗಿ ವಿಳಂಬವಾಗಿದೆ. ಆಕ್ಟೋಬರ್‌ ವೇಳೆಗೆ ಈ ಎರಡೂ ಸೇವೆಗಳು ಶುರುವಾಗಲಿದೆ ಎಂದು ಜ್ಞಾನ್ವೇಶ್ವರರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ವಿಮಾನಯಾನ ಆರಂಭವಾದ 2019ರ ನ.22ರಿಂದ ಜು.31ರವರೆಗೆ ಒಟ್ಟು 562 ಟ್ರಿಪ್‌ ವಿಮಾನಗಳ ಹಾರಾಟ ನಡೆಸಿದ್ದು, 20,864 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
 

click me!