ಕೊರೋನಾ ಮುಕ್ತವಾಗಿದ್ದ ಹಾವೇರಿ ಜಿಲ್ಲೆಯಲ್ಲಿ ಎರಡು ಕೊರೋನಾ ಕೇಸ್‌

By Kannadaprabha NewsFirst Published Jun 14, 2020, 9:11 AM IST
Highlights

ಮಹಾರಾಷ್ಟ್ರದಿಂದ ರೈಲ್ವೆ ಮೂಲಕ ಆಗಮಿಸಿದ್ದವರಿಗೆ ಸೋಂಕು| ಹಾವೇರಿ ಜಿಲ್ಲೆಯಲ್ಲಿ ಈ ವರೆಗೆ 23 ಪ್ರಕರಣಗಳು, ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ| ಎರಡು ಪ್ರಕರಣಗಳು ಸಕ್ರಿಯ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ|

ಹಾವೇರಿ(ಜೂ.14): ಶುಕ್ರವಾರವಷ್ಟೇ ಕೊರೋನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಶನಿವಾರ ಎರಡು ಹೊಸ ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. ಪಿ-6517 ಹಾಗೂ ಪಿ-6518 ಎಂಬುವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ 23 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಪ್ರಕರಣಗಳು ಸಕ್ರಿಯ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

23 ವರ್ಷದ ಪಿ-6517 ಪುರುಷ ಮಾರ್ಚ್‌ ತಿಂಗಳಲ್ಲಿ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಓಲ್ಡ್‌ ಫಿಶ್‌ ಮಾರ್ಕೆಟ್‌ನಲ್ಲಿ ವಾಸವಾಗಿದ್ದ ತಮ್ಮ ಸಂಬಂಧಿಕರನ್ನು (ಪಿ-6518) ಕರೆತರಲು ಹೋಗಿದ್ದು, ಲಾಕ್‌ಡೌನ್‌ ಕಾರಣ ಥಾಣೆಯ ಓಲ್ಡ್‌ ಫಿಶ್‌ ಮಾರ್ಕೆಟ್‌ನಲ್ಲಿ ಉಳಿದಿದ್ದನು. 34 ವರ್ಷದ ಪಿ-6518 ಮಹಿಳೆ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಓಲ್ಡ್‌ ಫಿಶ್‌ ಮಾರ್ಕೆಟ್‌ನಲ್ಲಿ ವಾಸವಾಗಿದ್ದು, ಲಾಕ್‌ಡೌನ್‌ ಸಡಿಲಿಕೆ ನಂತರ ಪಿ-6517 ಹಾಗೂ ಪಿ-6518 ಇಬ್ಬರು ರೈಲ್ವೆ ಮುಖಾಂತರ ಗದಗ ನಗರಕ್ಕೆ ಬಂದಿದ್ದರು. ಜೂ. 3ರಂದು ಬಸ್‌ ಮೂಲಕ ಹಾವೇರಿಗೆ ಆಗಮಿಸಿದ ಇವರನ್ನು ನೇರವಾಗಿ ಜ್ವರ ತಪಾಸಣಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ತಪಾಸಣೆಗೊಳಪಡಿಸಿ ನಗರದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ನಂ. 2ರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜೂ. 10ರಂದು ಇವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶನಿವಾರ ಇವರಲ್ಲಿ ಕೋವಿಡ್‌-19 ಪಾಸಿಟಿವ್‌ ಎಂದು ದೃಢಪಟ್ಟಿದೆ.

ಮಹಾಮಾರಿ ಕೊರೋನಾ ಸೋಂಕು ಮುಕ್ತ ಹಾವೇರಿ

ಸಹ ಪ್ರಯಾಣಿಕರಲ್ಲಿ ಆತಂಕ

ಸೋಂಕಿತಗಳೊಂದಿಗೆ ಜೂ. 3ರಂದು ಕೆಎ-27 ಎಫ್‌-675 ಬಸ್‌ನಲ್ಲಿ ಗದಗದಿಂದ ಅನೇಕರು ಬಂದಿದ್ದರು. ಈಗ ಅವರೆಲ್ಲರಿಗೂ ಆತಂಕ ಶುರುವಾಗಿದೆ. ಸಹ ಪ್ರಯಾಣ ಮಾಡಿದ ಪ್ರಯಾಣಿಕರೆಲ್ಲರೂ ಜಿಲ್ಲಾ ಆಸ್ಪತ್ರೆಯ ಹತ್ತಿರವಿರುವ ಕೆಇಬಿ ಕಲ್ಯಾಣ ಮಂಟಪದಲ್ಲಿರುವ ಜಿಲ್ಲಾ ಜ್ವರ ತಪಾಸಣಾ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಪಡಬೇಕು ಎಂದು ಕೋರಲಾಗಿದೆ.

ಈ ಬಸ್ಸಿನಲ್ಲಿ ಕಾರ್ಯನಿರ್ವಹಿಸಿದ ಸಾರಿಗೆ ಸಂಸ್ಥೆಯ ಸಿಬ್ಬಂದಿಯವರು ಸಹ ಜಿಲ್ಲಾ ಆಸ್ಪತ್ರೆಯ ಹತ್ತಿರವಿರುವ ಕೆಇಬಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ತಪಾಸಣೆಗೆ ಒಳಪಡಬೇಕು ಎಂದು ಸೂಚನೆ ನೀಡುವಂತೆ ವಿಭಾಗೀಯ ನಿಯಂತ್ರಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಇರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಕ್ವಾರಂಟೈನ್‌ ಸೆಂಟರ್‌ನ 100 ಮೀಟರ್‌ ಪ್ರದೇಶ ಕಂಟೈನ್‌ಮೆಂಟ್‌ ಜೋನ್‌ ಆಗಿ ಪರಿವರ್ತಿಸಲಾಗಿದೆ. ಕೆಎಸ್‌ಆರ್‌ಟಿಸಿ ಡಿಪೋ ಸುತ್ತಲಿನ 200 ಮೀಟರ್‌ ಬಫರ್‌ ಜೋನ್‌ ಆಗಿ ಪರಿಗಣಿಸಲಾಗಿದೆ. ಹಾವೇರಿ ಸಹಾಯಕ ಆಯುಕ್ತರನ್ನು ಇನ್ಸಿಡೆಂಟಲ್‌ ಕಮಾಂಡರ್‌ ಆಗಿ ನೇಮಿಸಲಾಗಿದೆ.

ಹುಬ್ಬಳ್ಳಿಯಲ್ಲಿ ದಾಖಲು

ಶಿಗ್ಗಾಂವಿ ಪಟ್ಟಣದ ಗೌಡರ ಓಣಿಯ 72 ವರ್ಷದ ಮಹಿಳೆ ಪಿ-6252 ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಉಲ್ಬಣಗೊಂಡ ಕಾರಣ ಜೂ. 8ರಂದು ರಾತ್ರಿ ಶಿಗ್ಗಾಂವಿ ಪಟ್ಟಣದ ತೋಟಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ತಮ್ಮ ಸ್ವಂತ ಕಾರು ನಂ. ಕೆಎ30, ಎಂ-1435ರಲ್ಲಿ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಜ್ವರ ಜಾಸ್ತಿಯಾದಾಗ ವೈದ್ಯರು ಮಹಿಳೆಯನ್ನು ಚಿಕಿತ್ಸೆಗೆ ಕಿಮ್ಸ್‌ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಹಿಳೆಯ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿ ಕೋವಿಡ್‌ ಪಾಸಿಟಿವ್‌ ಬಂದಿರುತ್ತದೆ. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಗೆ ಈ ಪ್ರಕರಣ ದಾಖಲಾಗಿದೆ.
 

click me!