* ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ ಸಲ್ಲಿಸಿದ ಎನ್‌ಡಬ್ಲ್ಯೂಡಿಎ
* ಕಲ್ಯಾಣ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ
* ಬೇಡ್ತಿ ಕೊಳ್ಳ ಪ್ರದೇಶದವರಿಂದ ತೀವ್ರ ವಿರೋಧ
ನಾರಾಯಣ ಹೆಗಡೆ
ಹಾವೇರಿ(ಜೂ.10): ಸುಮಾರು ಎರಡು ದಶಕಗಳಿಂದಲೂ ಚರ್ಚೆಯಲ್ಲಿರುವ ವರದಾ- ಬೇಡ್ತಿ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಈಗ ಆಸಕ್ತಿ ತೋರಿದ್ದು, ಯೋಜನೆ ಬಗ್ಗೆ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯೂಡಿಎ) ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಭರವಸೆ ಮೂಡಿದೆ.
undefined
ಅದೇ ಕಾಲಕ್ಕೆ ಬೇಡ್ತಿ ಕೊಳ್ಳ ಪ್ರದೇಶದ ಜನರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೇಡ್ತಿ- ವರದಾ ನದಿ ಜೋಡಣೆಗೆ ಸರ್ಕಾರ ಮುಂದಾಗಿದೆ. ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಜಿಲ್ಲೆಯಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿ ಮೂಲಕ ಈ ಭಾಗದಲ್ಲಿ ಕುಡಿಯಲು ಮತ್ತು ನೀರಾವರಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
Haveri ಬೇಡ್ತಿ-ವರದಾ ಜೋಡಣೆಗೆ ಅನುದಾನ ನೀಡಿ
ಸುಮಾರು 20 ವರ್ಷಗಳಿಂದ ಈ ವಿಷಯ ಚರ್ಚೆಯಲ್ಲಿದ್ದರೂ ಉತ್ತರ ಕನ್ನಡ ಜಿಲ್ಲೆಯವರ ವಿರೋಧದಿಂದ ಸರ್ಕಾರವೂ ಯೋಜನೆ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ. ಆದರೆ, ಈಗ ಎನ್‌ಡಬ್ಲ್ಯೂಡಿಎ ಸಂಸ್ಥೆಯು ಡಿಪಿಆರ್ ಸಿದ್ಧಪಡಿಸಿರುವುದು ಬಯಲುಸೀಮೆ ಭಾಗದ ಜನರಲ್ಲಿ ಆಶಾವಾದ ಹುಟ್ಟುಹಾಕಿದೆ. ಬೇಡ್ತಿ ಕೊಳ್ಳ ಪ್ರದೇಶದ ಜನರು ಈಗಾಗಲೇ ಹೋರಾಟಕ್ಕೆ ಸಜ್ಜಾಗಿದ್ದಾರೆ. ಯೋಜನೆ ಜಾರಿಗಾಗಿ ಈ ಭಾಗದ ಜನರ ಒತ್ತಾಯಕ್ಕಿಂತ ಉತ್ತರ ಕನ್ನಡದ ಸೂಕ್ಷ್ಮ ಪರಿಸರ ಉಳಿವಿಗಾಗಿ ಹೆಚ್ಚಿನ ಜನಜಾಗೃತಿ ಶುರುವಾಗಿದೆ.
ಡಿಪಿಆರ್‌ನಲ್ಲೇನಿದೆ?:
ಶಿರಸಿ ತಾಲೂಕಿನ ಸಾಲ್ಕಣಿ- ವಾನಳ್ಳಿ ನಡುವೆ ಇರುವ ಶಿರ್ಲೇಬೈಲು ಹಳ್ಳಿಯಲ್ಲಿ ಪಟ್ಣದಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಸಹಸ್ರಲಿಂಗದ ಅಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು. ಶಿರಸಿ ತಾಲೂಕಿನ ಸಹಸ್ರಲಿಂಗದ ಮೇಲ್ಭಾಗದಲ್ಲಿ ಶಾಲ್ಮಲಾ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ವರದಾ ನದಿಗೆ ನೀರನ್ನು ಪಂಪ್ ಮಾಡುವುದು. ಯಲ್ಲಾಪುರ ತಾಲೂಕಿನ ಬೇಡ್ತಿ ಸೇತುವೆಯ ಕೆಳಭಾಗದಲ್ಲಿ ಸುರಮನೆ ಹಳ್ಳಿಯಲ್ಲಿ ಬೇಡ್ತಿ ನದಿಗೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ಮುಂಡಗೋಡು ತಾಲೂಕಿನ ಮಳಗಿ ಸಮೀಪದ ಧರ್ಮಾ ಆಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು. ಹೀಗೆ ನೀರನ್ನು ಪಂಪ್ ಮಾಡಲು ಸುಮಾರು 399 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ಹೇಳಲಾಗಿದೆ. ಈ ಮೂರು ಆಣೆಕಟ್ಟೆಗಳಿಂದ ಕ್ರಮವಾಗಿ 6.5 ಕಿಮೀ, 6.7 ಕಿಮೀ ಮತ್ತು 4.23 ಕಿಮೀ ಉದ್ದದ ಸುರಂಗ ನಿರ್ಮಾಣ ಮಾಡಲಾಗುತ್ತದೆ. 52.40 ಕೋಟಿ ಘನ ಮೀಟರ್ ನೀರನ್ನು ಸಂಗ್ರಹಿಸಿ ಪಂಪ್ ಮಾಡಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ತುಂಗಭದ್ರಾ ಎಡದಂಡೆ ಪ್ರದೇಶದ 1,06,220 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ ಎಂದು ಡಿಪಿಆರ್‌ನಲ್ಲಿ ತಿಳಿಸಲಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ನೀರು:
ಬೇಡ್ತಿ -ವರದಾ ನದಿ ಜೋಡಣೆ ಯೋಜನೆಯಿಂದ 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ತಾಂತ್ರಿಕ ಸಾಧ್ಯಾಸಾಧ್ಯತೆಗೆ ಅನುಗುಣವಾಗಿ ಯೋಜನೆ ರೂಪಿಸಲು ಸರ್ಕಾರ ಮುಂದಾಗುತ್ತಿದೆ. ಇದರಿಂದ ಹಾವೇರಿ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು, ಸಿಂಧನೂರು ವರೆಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯಲ್ಲಿ ಸೇರಿದೆ.
ಪಶ್ಚಿಮಘಟ್ಟದಲ್ಲಿ ಹರಿಯುವ ಬೇಡ್ತಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂಬುದು ಯೋಜನೆ ಪರವಾಗಿರುವವರ ವಾದವಾಗಿದೆ. ಬೇಡ್ತಿ ನದಿ ತಿರುವು ಯೋಜನೆ ಕುರಿತು 2003ರಲ್ಲೇ ಎನ್‌ಡಬ್ಲ್ಯೂಡಿಎ ಅಧ್ಯಯನ ನಡೆಸಲು ಮುಂದಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಕೈಬಿಟ್ಟಿತ್ತು.
ಅಲ್ಲಿ ತೀವ್ರ ವಿರೋಧ:
ಬೇಡ್ತಿ ನದಿಯ ದಿಕ್ಕು ಬದಲಿಸುವ ಯೋಜನೆ ಕುರಿತು 2003ರಲ್ಲಿ ಉತ್ತಮ ಕನ್ನಡ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವ್ಯಾಪಕ ಹೋರಾಟ ನಡೆದಿತ್ತು. ಯೋಜನೆಯಿಂದಾಗುವ ದುಷ್ಪರಿಣಾಮ, ಜೀವ ಸಂಕುಲದ ಮೇಲೆ ಪರಿಣಾಮಗಳ ಬಗ್ಗೆ ಚಳವಳಿ ರೂಪಿಸಲಾಗಿತ್ತು. ಪರಿಸರವಾದಿಗಳ ತೀವ್ರ ವಿರೋಧದ ಬಳಿಕ ಸರ್ವೇ ಕೈಬಿಟ್ಟಿದ್ದ ಎನ್‌ಡಬ್ಲ್ಯೂಡಿಎ ಸಂಸ್ಥೆಯು 2005ರಲ್ಲಿ ನದಿ ಜೋಡಣೆ ಸಾಧ್ಯತಾ ವರದಿಯನ್ನು ಬಿಡುಗಡೆ ಮಾಡಿತ್ತು.
ಕೃಷ್ಣೆ, ತುಂಗಭದ್ರಾ ಸೇರಿದರೆ ಡ್ಯಾಂಗೆ ನೀರಿನ ಖಾತರಿ!
ಬಳಿಕವೂ ಉತ್ತರ ಕನ್ನಡದ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ಯೋಜನೆ ಅನುಷ್ಠಾನದ ವಿಷಯ ಅಲ್ಲಿಗೆ ತಣ್ಣಗಾಗಿತ್ತು. ಈಗ ಮತ್ತೊಮ್ಮೆ ಯೋಜನೆ ಬಗ್ಗೆ ಚರ್ಚೆ ಶುರುವಾಗಿದೆ. ಸೂಕ್ಷ್ಮ ಪರಿಸರ, ಜೀವಸಂಕುಲವನ್ನು ಉಳಿಸುವುದರೊಂದಿಗೆ ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಯೋಜನೆ ಜಾರಿಯಾಗಬೇಕು ಎನ್ನುವುದು ಉತ್ತರ ಕರ್ನಾಟಕ ಭಾಗದ ಜನರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದೆ. ಸರ್ಕಾರ ಮುಂದಿನ ಕ್ರಮ ಕೈಗೊಂಡು ಆದಷ್ಟುಬೇಗ ಯೋಜನೆ ಜಾರಿಗೊಳಿಸಬೇಕು. ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಇಲ್ಲಿಗೆ ತರುವುದರಿಂದ ಈ ಭಾಗದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಅಂತ ಬೇಡ್ತಿ ವರದಾ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ತಿಳಿಸಿದ್ದಾರೆ.