
ಬೆಂಗಳೂರು (ಫೆ.06): ಉದ್ಯಾನ ನಗರಿಯ ಆಗಸದಲ್ಲಿ ಆರ್ಭಟಿಸಲು ದೇಶ-ವಿದೇಶಗಳ ಯುದ್ಧ ವಿಮಾನಗಳು ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ಗೆ ಬಂದಿಳಿದಿವೆ. ಫೆ.10ರಿಂದ 14ರ ವರೆಗೆ ‘ಏರೋ ಇಂಡಿಯಾ-2025’ರಲ್ಲಿ ಮೈನವಿರೇಳಿಸುವ ಆಕರ್ಷಕ ಪ್ರದರ್ಶನ ನೀಡಲು ಸಜ್ಜಾಗಿದ್ದು, ಈಗಾಗಲೇ ತಾಲೀಮು ಆರಂಭವಾಗಿದೆ. ರಷ್ಯಾದ ರಹಸ್ಯ ಕಾರ್ಯಾಚರಣೆಯ 5ನೇ ತಲೆಮಾರಿನ ಯುದ್ಧ ವಿಮಾನ ‘ಎಸ್‌ಯು-57’ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಮತ್ತೊಂದೆಡೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ತೇಜಸ್ ವೈಮಾನಿಕ ಪ್ರದರ್ಶನದ ಆಕರ್ಷಣೆಯಾಗಿರಲಿದೆ.
ಪ್ರತಿಷ್ಠಿತ ಏರೋಬ್ಯಾಟಿಕ್ ತಂಡ ಸೂರ್ಯ ಕಿರಣ್ ಆಕಾಶದಲ್ಲಿ ಭಾರತ ಧ್ವಜದ ತ್ರಿವರ್ಣದ ಚಿತ್ತಾರವನ್ನು ಬಿಡಿಸಲಿದೆ. ಭಾರತೀಯ ವಾಯುಸೇನೆಯ ರಫೇಲ್, ಎಸ್‌ಯು-30, ಎಚ್‌ಎಎಲ್ ಧ್ರುವ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್) ಸೇರಿದಂತೆ ವಿವಿಧ ಮಾದರಿಯ ಮಿಲಿಟರಿ ವಿಮಾನ, ಹೆಲಿಕಾಪ್ಟರ್ ಮತ್ತು ಸರಕು ವಿಮಾನಗಳು ಭಾಗವಹಿಸಲಿವೆ.
ಫೆಬ್ರವರಿ 13, 14 ರಂದು ಬೆಂಗಳೂರಿನ ಈ ಭಾಗದ ಕಾಲೇಜುಗಳಿಗೆ ರಜೆ ಘೋಷಣೆ
ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಇಂಗ್ಲೆಂಡ್, ಜರ್ಮನಿ, ಸ್ವೀಡನ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು, ಮಿಲಿಟರಿ ಸಂಬಂಧಿಸಿದ ಉತ್ಪನ್ನಗಳು ಪ್ರದರ್ಶನಕ್ಕೆ ಇರಲಿವೆ. ದೇಶಿಯವಾಗಿ ಅಭಿವೃದ್ಧಿಪಡಿಸಿರುವ ವಿವಿಧ ಕಂಪನಿಗಳ 275ಕ್ಕೂ ಹೆಚ್ಚು ಮಿಲಿಟರಿ ಮತ್ತು ಬಾಹ್ಯಾಕಾಶ ಸಂಬಂಧಿಸಿದ ಉತ್ಪನ್ನಗಳು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ದೇಶ-ವಿದೇಶಗಳ 900ಕ್ಕೂ ಹೆಚ್ಚು ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿವೆ. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸೆಮಿನಾರ್‌ಗಳು, ಹೂಡಿಕೆ ಮತ್ತು ಜಂಟಿ ಸಹಭಾಗಿತ್ವಕ್ಕೆ ಸಂಬಂಧಿಸಿದ ಒಪ್ಪಂದಗಳು ಆಗಲಿವೆ.ಏರೋ ಇಂಡಿಯಾದ ಪ್ರಮುಖಾಂಶಗಳು.
-ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿ.
-900ಕ್ಕೂ ಹೆಚ್ಚು ಕಂಪನಿಗಳು, ಪ್ರದರ್ಶಕರಿಂದ ಮಿಲಿಟರಿ ಉತ್ಪನ್ನಗಳ ಪ್ರದರ್ಶನ.
-ಮಿಲಿಟರಿ ಉತ್ಪನ್ನಗಳ ಉತ್ಪಾದನೆ, ಖರೀದಿ, ತಂತ್ರಜ್ಞಾನ ವಿನಿಮಯ ಕುರಿತು ಒಪ್ಪಂದಗಳು.
-ಮಿಲಿಟರಿ ಉತ್ಪನ್ನಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳು.
ಏರ್ ಶೋದಲ್ಲಿ ಫೈಟರ್ ಜೆಟ್ ಕ್ರ್ಯಾಶ್: ಇಬ್ಬರು ಪೈಲಟ್‌ಗಳು ಸಾವು: ಕೊನೆ ಕ್ಷಣದ ವೀಡಿಯೋ
ಪ್ರದರ್ಶನ ನೀಡುವ ವಿಮಾನಗಳು: ರಷ್ಯಾದ ಎಸ್‌ಯು-57, ರಫೇಲ್, ಎಸ್‌ಯು-30, ಎಚ್‌ಎಎಲ್ ತೇಜಸ್, ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಹಾಕ್, ಎಚ್‌ಎಎಲ್ ಧ್ರುವ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್), ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಎಚ್), ಅಪಾಚೆ ಹೆಲಿಕಾಪ್ಟರ್, ಸರಕು ಸಾಗಣೆ ಸಿ-17 ಗ್ಲೋಬ್ ಮಾಸ್ಟರ್ ಸೇರಿದಂತೆ ಹಲವು ಯುದ್ಧ ಮತ್ತು ಸರಕು ಮತ್ತು ತರಬೇತಿ ವಿಮಾನಗಳು ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿವೆ.