ಮತಪಟ್ಟಿಗೆ 55,650 ಯುವ ಮತದಾರರ ಸೇರ್ಪಡೆ

By Kannadaprabha News  |  First Published Nov 6, 2023, 12:35 PM IST

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನ್ವಯ 55,650 ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.


 ತುಮಕೂರು : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನ್ವಯ 55,650 ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 27ರಂದು ಸಾರ್ವಜನಿಕರ ಮಾಹಿತಿಗಾಗಿ ಎಲ್ಲ 2615 ಮತಗಟ್ಟೆ ಹಾಗೂ ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರವರೆಗೆ ಅವಕಾಶವಿರುತ್ತದೆ ಎಂದು ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು.

Tap to resize

Latest Videos

undefined

ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 11,23,062 ಪುರುಷರು, 11,32,016 ಮಹಿಳೆಯರು ಹಾಗೂ 104 ಇತರೆ ಮತದಾರರು ಸೇರಿ ಒಟ್ಟು 22,55,182 ಮತದಾರರಿದ್ದು, ಇದರಲ್ಲಿ 30,572 ವಿಕಲಚೇತನ ಮತದಾರರು ಹಾಗೂ 100 ವರ್ಷ ಮೇಲ್ಪಟ್ಟ 707 ಶತಾಯುಷಿ ಮತದಾರರು ಒಳಗೊಂಡಿದ್ದಾರೆ ಎಂದು ವಿವರಿಸಿದರು.

ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರು ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಡಿಸೆಂಬರ್ 9ರೊಳಗೆ ಸಲ್ಲಿಸಬೇಕು. ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ್ 26ರೊಳಗಾಗಿ ವಿಲೇವಾರಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ 2023ರ ಜನವರಿ 5ರಿಂದ ಅಕ್ಟೋಬರ್ 27ರವರೆಗೆ ಯಥಾ ನಕಲು ಆದ 15,511 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರಲ್ಲದೆ, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಹೊನ್ನವಳ್ಳಿ ಹೋಬಳಿ ಹೊಸಪಟ್ಟಣ ಹಾಗೂ ನೊಣವಿನಕೆರೆ ಹೋಬಳಿ ಹೊನ್ನೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2 ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ 1-11-2023ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ತಯಾರಿಸಲು ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 5212 ಶಿಕ್ಷಕರಿಂದ ನಮೂನೆ 19ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನವೆಂಬರ್5 ರಂದು ಎಲ್ಲಾ ತಾಲೂಕು ಕೇಂದ್ರ, ಹೋಬಳಿ ಕೇಂದ್ರಗಳಲ್ಲಿ ವಿಶೇಷ ಆಂದೋಲನ ಹಮ್ಮಿಕೊಂಡು ಅರ್ಹ ಶಿಕ್ಷಕರಿಂದ ನಮೂನೆ-19ರಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದು. ಶಿಕ್ಷಕ ಮತದಾರರು ಈ ಆಂದೋಲನದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವೇಳಾಪಟ್ಟಿ, ಜಿಲ್ಲೆಯಲ್ಲಿರುವ ಮತದಾರರ ಮಾಹಿತಿ, ಮತಗಟ್ಟೆಗಳ ಸಂಖ್ಯೆ, ಮತ್ತಿತರ ಮಾಹಿತಿಯನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಸಿಪಿಐಎಂ, ಅಮ್ ಆದ್ಮಿ ಪಕ್ಷದ ಮುಖಂಡರು ಸೇರಿದಂತೆ ಮತ್ತಿತರರು ಹಾಜರಿದ್ದರು.

click me!