ಪಾರಂಪರಿಕ ಔಷಧ, ಆಯುರ್ವೇದ ಹೆಸರಿನ ದುರ್ಬಳಕೆ ತಡೆಗೆ ಹಾಗೂ ನಿಜವಾದ ಉತ್ಪಾದಕರು, ತಯಾರಿಕರಿಗೆ ಲಾಭ ಸಿಗುವಂತಾಗಲು ನಿಯಂತ್ರಣ ಕಾಯಿದೆ ತರುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು (ಜ.09): ಪಾರಂಪರಿಕ ಔಷಧ, ಆಯುರ್ವೇದ ಹೆಸರಿನ ದುರ್ಬಳಕೆ ತಡೆಗೆ ಹಾಗೂ ನಿಜವಾದ ಉತ್ಪಾದಕರು, ತಯಾರಿಕರಿಗೆ ಲಾಭ ಸಿಗುವಂತಾಗಲು ನಿಯಂತ್ರಣ ಕಾಯಿದೆ ತರುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ ಏರ್ಪಡಿಸಿದ್ದ ‘ಪ್ರಾಕೃತಿಕ ಔಷಧಾಲಯ ಅನ್ವೇಷಣೆ ಮತ್ತು ಸುಗಂಧಿಯ ಸಸ್ಯಗಳ ಸಾಮರ್ಥ್ಯ ಮತ್ತು ಅವುಗಳ ಸಂರಕ್ಷಣೆ’ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಆಧುನಿಕ ಔಷಧದ ಜೊತೆಗೆ ಪಾರಂಪರಿಕ ಔಷಧಕ್ಕೂ ಮಹತ್ವ ನೀಡುವ ಅಗತ್ಯವಿದೆ. ಆದರೆ, ಆಯುರ್ವೇದ ಹೆಸರಿನ ದುರ್ಬಳಕೆ ನಿಲ್ಲಬೇಕು. ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ಆರೋಗ್ಯ ಇಲಾಖೆ ಅಡಿ ಬರುತ್ತದೆ. ನಮ್ಮ ಪಾರಂಪರಿಕ ಔಷಧ ಎಂದು ಕಣ್ಮುಚ್ಚಿ ಕೂರಲು ಆಗುವುದಿಲ್ಲ. ಇದಕ್ಕೆ ಅಗತ್ಯ ನಿಯಮಾವಳಿ ರಚಿಸಲು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕೆ ಪ್ರಾಧಿಕಾರದ ಜತೆ ಸಮಾಲೋಚಿಸಲಾಗುವುದು ಎಂದು ತಿಳಿಸಿದರು. ಪಾರಂಪರಿಕ ಔಷಧಗಳಿಗೆ ವೈಜ್ಞಾನಿಕ ಮಾನದಂಡ, ನಿರ್ದಿಷ್ಟ ಗುಣಮಟ್ಟ ನಿಗದಿಸುವ ಕೆಲಸ ಆಗಬೇಕು. ಔಷಧದಲ್ಲಿ ಯಾವ ಅಂಶಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದು ತಿಳಿಯುವಂತಾಗಬೇಕು. ಔಷಧಿಯ, ಸುಗಂಧೀಯ ಸಸ್ಯ ಬೆಳೆಯುವವರಿಗೆ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಬಾಗಲಕೋಟೆ ತೋಟಗಾರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಮಾರುಕಟ್ಟೆಯಲ್ಲಿ ಆಯುರ್ವೇದಕ್ಕೆ ಸಾಕಷ್ಟು ಬೇಡಿಕೆ ಇದ್ದರೂ ಪೂರೈಕೆ ಆಗುತ್ತಿಲ್ಲ. ಹೀಗಾಗಿ ರೈತರಿಗೆ ಪಾರಂಪರಿಕ ಔಷಧ ಸಸ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಜೊತೆಗೆ ಅಗತ್ಯ ಮಾರುಕಟ್ಟೆ ಒದಗಿಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ವೆಂಕಟೇಸನ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು, ಗುಜರಾತ್ ಔಷಧಿ ಮತ್ತು ಸುಗಂಧಿಯ ಸಸ್ಯಗಳ ಸಂಶೋಧನ ನಿರ್ದೇಶನಾಲಯ ನಿರ್ದೇಶಕ ಡಾ. ಮನೀಶ್ ದಾಸ್ ಸೇರಿ ಇತರರು ಇದ್ದರು.
ಗೃಹ ಆರೋಗ್ಯ ಯೋಜನೆ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್
ಸಂಶೋಧನೆ, ಸ್ಟಾರ್ಟ್ ಅಪ್‌ಗೆ ಸಹಕಾರ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ವಿಶ್ವ ಮಟ್ಟದಲ್ಲಿ ಗಿಡಮೂಲಿಕೆ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಪಾರಂಪರಿಕ, ಸಿದ್ಧೌಷಧ ಬಳಕೆ ಹೆಚ್ಚಿಸುವ ಜೊತೆಗೆ ಈ ಕ್ಷೇತ್ರದಲ್ಲಿ ನವೋದ್ಯಮ ಬೆಳೆಸುವ ಹಾಗೂ ಗುಣಮಟ್ಟದ ಉತ್ಪನ್ನ ಮಾರುಕಟ್ಟೆಗೆ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ತಿಳಿಸಿದರು. ಹೇರಳ ಔಷಧೀಯ ಸಸ್ಯ ಹೊಂದಿರುವ ಪಶ್ಚಿಮಘಟ್ಟವಿರುವ ಕರ್ನಾಟಕ ರಾಜ್ಯ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಸಂಶೋಧನೆ ಮೂಲಕ ಗುಣಮಟ್ಟದ ಔಷಧಿಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆಗೆ ಸರ್ಕಾರ ಬದ್ಧವಾಗಿದೆ ಎಂದರು.