
ಬೆಂಗಳೂರು: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್ ರಸ್ತೆ) ಯೋಜನೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ, ಸಚಿವ ಸಂಪುಟ ಉಪಸಮಿತಿಯ ಅಂತಿಮ ವರದಿ ಬಂದ ನಂತರ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಎಸ್.ಟಿ. ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಡಾ. ಜಿ. ಪರಮೇಶ್ವರ್ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಈಗಾಗಲೇ ವಿಷಯವನ್ನು ಅಧ್ಯಯನ ಮಾಡುತ್ತಿದ್ದು, ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ನೈಸ್ ರಸ್ತೆ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಇಲ್ಲಿ ಪೆರಿಫೆರಲ್ ರಸ್ತೆಯಲ್ಲಿ 37 ಹಾಗೂ ಎಕ್ಸ್‌ಪ್ರೆಸ್ ವೇಯಲ್ಲಿ 5 ಕೆಳ ಮತ್ತು ಮೇಲ್ಸೇತುವೆಗಳಿವೆ. ಇವುಗಳಲ್ಲಿ ಹಲವಾರು ಸೇತುವೆಗಳು ಕಿರಿದಾಗಿದ್ದು, ವಾಹನ ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿವೆ. ಈ ಸೇತುವೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಎರಡು ಬಾರಿ ಸಭೆ ನಡೆಸಲಾಗಿದ್ದು, ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನೈಸ್ ಸಂಸ್ಥೆಗೆ ಎರಡು ಬಾರಿ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದ್ದಾರೆ. ಸಮಿತಿ ಅಧ್ಯಯನ ನಡೆಸಿ ಅಂತಿಮ ವರದಿ ಸಲ್ಲಿಸಿದ ಬಳಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ.
ಈ ವೇಳೆ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ನೈಸ್ ಯೋಜನೆಗಾಗಿ ಸುಮಾರು 35 ವರ್ಷಗಳ ಹಿಂದೆ ಭೂಸ್ವಾಧೀನ ಮಾಡಲಾಗಿದ್ದರೂ, ಅನೇಕ ರೈತರಿಗೆ ಇನ್ನೂ ಸಮರ್ಪಕ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು. ಅದೇ ವೇಳೆ, ಈ ರಸ್ತೆಯಲ್ಲಿ ದಿನಕ್ಕೆ ಸುಮಾರು ₹10 ಕೋಟಿ ಟೋಲ್ ಸಂಗ್ರಹವಾಗುತ್ತಿರುವುದಾಗಿ ತಿಳಿಸಿ, ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ 8 ಮೇಲ್ಸೇತುವೆಗಳು ಕಿರಿದಾಗಿದ್ದು, ಇದರಿಂದ ವಾಹನ ದಟ್ಟಣೆ ಹಾಗೂ ಅಪಘಾತಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು. ಹಲವು ಬಾರಿ ವಿಸ್ತರಣೆಗಾಗಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಟೀಕಿಸಿದರು. ಹಿಂದೆ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಸದನ ಸಮಿತಿ ರಚನೆಯಾದರೂ ಯಾವುದೇ ಫಲಿತಾಂಶ ಸಿಗಲಿಲ್ಲ ಎಂದು ತಿಳಿಸಿದರು.
ನೈಸ್ ಕಂಪನಿ ಸರ್ಕಾರದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಮಾಡಿರುವ ಸೋಮಶೇಖರ್, ಇದೀಗ 1,700 ಎಕರೆ ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿಗೆ ಮುಂದಾಗಿರುವುದರಿಂದ ರೈತರಿಗೆ ಇನ್ನಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಕಂಪನಿಯ 30 ವರ್ಷದ ಗುತ್ತಿಗೆ ಅವಧಿ ಈಗಾಗಲೇ ಮುಗಿದಿದ್ದು, ಒಂದು ಎಕರೆ ಭೂಮಿಯ ಬೆಲೆ ₹7–8 ಕೋಟಿ ತಲುಪಿರುವ ಹಿನ್ನೆಲೆ, ಗುತ್ತಿಗೆ ನವೀಕರಿಸದೆ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಸಂಬಂಧಿತ ಶಾಸಕರಿಗೂ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಉಪಸಮಿತಿಯ ಅಂತಿಮ ವರದಿ ಹೊರಬಂದ ಬಳಿಕ, ನೈಸ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆಯಿದೆ. ಸರ್ಕಾರ ತೆಗೆದುಕೊಳ್ಳುವ ಮುಂದಿನ ಕ್ರಮಗಳತ್ತ ಕಾದು ನೋಡಬೇಕಿದೆ