ಮೇಲ್ನೋಟಕ್ಕೆ ಅರ್ಜಿ ಇತ್ಯರ್ಥ ಮಾಡುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ಗೊತ್ತಾಗಿದೆ. ಎನ್‌ಒಸಿ ಪತ್ರ ಕೋರಿರುವ ಅರ್ಜಿಗಳನ್ನು ನಿರ್ದಿಷ್ಟ ಅವಧಿಯಲ್ಲಿ ಇತ್ಯರ್ಥ ಮಾಡಬೇಕು, ಇಷ್ಟೊಂದು ತಿಂಗಳ ಕಾಲ ವಿಲೇವಾರಿ ಮಾಡದಿರುವುದು ಕಾನೂನು ಬಾಹಿರವಾಗಿದೆ. ಈ ವಿಷಯದಲ್ಲಿ ಯಾರನ್ನು ರಕ್ಷಣೆ ಮಾಡದೇ ಕ್ರಮ ಕೈಗೊಳ್ಳಲಾಗುವುದು: ಕಂದಾಯ ಸಚಿವ ಆರ್.ಅಶೋಕ್
ವಿಧಾನ ಪರಿಷತ್(ಫೆ.17): ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸಿರುವ ಅರ್ಜಿಯನ್ನು 26 ತಿಂಗಳಾದರೂ ಇತ್ಯರ್ಥ ಮಾಡದ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬಿಜೆಪಿಯ ತುಳಸಿ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮೇಲ್ನೋಟಕ್ಕೆ ಅರ್ಜಿ ಇತ್ಯರ್ಥ ಮಾಡುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ಗೊತ್ತಾಗಿದೆ. ಎನ್‌ಒಸಿ ಪತ್ರ ಕೋರಿರುವ ಅರ್ಜಿಗಳನ್ನು ನಿರ್ದಿಷ್ಟ ಅವಧಿಯಲ್ಲಿ ಇತ್ಯರ್ಥ ಮಾಡಬೇಕು, ಇಷ್ಟೊಂದು ತಿಂಗಳ ಕಾಲ ವಿಲೇವಾರಿ ಮಾಡದಿರುವುದು ಕಾನೂನು ಬಾಹಿರವಾಗಿದೆ. ಈ ವಿಷಯದಲ್ಲಿ ಯಾರನ್ನು ರಕ್ಷಣೆ ಮಾಡದೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಹಾಲಿ ಇರುವ ನಿಯಮಗಳನ್ನು ಇನ್ನಷ್ಟು ಸರಳೀಕರಣ ಮಾಡಲಾಗುವುದು ಎಂದರು.
ಮಂಡ್ಯ ಉಸ್ತುವಾರಿಯಿಂದ ಅಶೋಕ್ ಬಿಡುಗಡೆ, ಸಚಿವರ ಮನವಿ ಮೇರೆಗೆ ತೀರ್ಮಾನ: ಸಿಎಂ ಬೊಮ್ಮಾಯಿ
ಇದಕ್ಕೂ ಮುನ್ನ ಮಾತನಾಡಿದ ಮುನಿರಾಜುಗೌಡ ಅವರು, ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿಯ ಚಿಕ್ಕನಾಗವಲ್ಲಿ ಗ್ರಾಮದ ಸರ್ವೆ ನಂ 43ರಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರಕ್ಕಾಗಿ ಪಿ.ಮೂರ್ತಿ ಎಂಬುವರು ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ತಹಸೀಲ್ದಾರರು ಪರಿಶೀಲಿಸಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಕಳೆದ 2021 ಡಿಸೆಂಬರ್ 15ರಂದು ಪತ್ರ ಬರೆದಿದ್ದರು. ಆದರೆ 26 ತಿಂಗಳಾದರೂ ಉಪವಿಭಾಗಾಧಿಕಾರಿಗಳು ಹಿಂಬರಹ ಸಹ ಬರೆಯದೇ ಹಾಗೆ ಇಟ್ಟುಕೊಂಡಿದ್ದಾರೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಸಚಿವರು, ಉಪವಿಭಾಗಾಧಿಕಾರಿಗಳು ತಹಸೀಲ್ದಾರ್ ಅವರ ವರದಿ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಟಾಸ್ಕ್‌ಫೋರ್ಸ್ ಸಮಿತಿಗೆ ವರದಿ ಸಲ್ಲಿಸದೇ ತಮ್ಮ ಹಂತದಲ್ಲಿಯೇ ನಿರ್ಧಾರ ಕೈಗೊಂಡು ಅನಗತ್ಯವಾಗಿ ಪತ್ರ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.