ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!

By Kannadaprabha NewsFirst Published Jan 30, 2020, 7:32 AM IST
Highlights

ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!| ಹಿಮಾಲಯದ ವಾತಾವರಣಕ್ಕೆ ತಕ್ಕಂತೆ ವಾಹನ ಮರುವಿನ್ಯಾಸ| ಸದ್ಯಕ್ಕೆ ಸಿದ್ಧಗೊಳ್ಳಲಿದೆ ಎರಡು ಆ್ಯಂಬುಲೆನ್ಸ್‌

ಮಯೂರ ಹೆಗಡೆ

ಹುಬ್ಬಳ್ಳಿ[ಜ.30]: ಹಿಮಾಲಯದ ಗಡಿಯಲ್ಲಿ ಕರ್ತವ್ಯದಲ್ಲಿರುವ ಯೋಧರ ತುರ್ತು ಪರಿಸ್ಥಿತಿಯ ಚಿಕಿತ್ಸೆಗಾಗಿ ವಿಶೇಷ ಸೌಲಭ್ಯವುಳ್ಳ ಎರಡು ಆ್ಯಂಬುಲೆನ್ಸ್‌ಗಳು ಹುಬ್ಬಳ್ಳಿಯಲ್ಲಿ ಸಿದ್ಧವಾಗುತ್ತಿದ್ದು, ಫೆಬ್ರವರಿ ಅಂತ್ಯ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಎರಡು ವಾಹನಗಳು ಸೇನೆಗೆ ಹಸ್ತಾಂತರಗೊಳ್ಳಲಿವೆ.

ಇಲ್ಲಿನ ನವನಗರ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಆರ್ಯಭಟ ಟೆಕ್‌ ಪಾರ್ಕ್ನಲ್ಲಿರುವ ಏಬಲ್‌ ಡಿಸೈನ್‌ ಎಂಜಿನಿಯರಿಂಗ್‌ ಸರ್ವಿಸ್‌ ಪ್ರೈ.ಲಿ. ಹಾಗೂ ಸ್ಟೈರಾ ಟೆಕ್ನೋವೇಶನ್ಸ್‌ ಕಂಪನಿಗಳು ಆ್ಯಂಬುಲೆನ್ಸ್‌ ಸಿದ್ಧಪಡಿಸುತ್ತಿದೆ. ಆ್ಯಂಬುಲೆನ್ಸ್‌ಗಾಗಿ ಕಂಪನಿ ಆಯ್ಕೆ ಮಾಡಿಕೊಂಡಿರುವುದು ಟಾಟಾ ಸುಮೋ ಮತ್ತು ಎಸ್‌ಎಂಎಲ್‌ ಇಸುಝು ವಾಹನವನ್ನು.

ಡಿಆರ್‌ಡಿಒ ಅಡಿಯ ಡಿಇಬಿಇಎಲ್‌ (ಡಿಫೆನ್ಸ್‌ ಬಯೋ ಎಂಜಿನಿಯರಿಂಗ್‌ ಅಂಡ್‌ ಎಲೆಕ್ಟ್ರೋ ಮೆಡಿಕಲ್‌ ಲ್ಯಾಬೊರೇಟರಿ) ಕಳೆದ ಡಿಸೆಂಬರ್‌ನಲ್ಲಿ ಈ ಕಂಪನಿಗಳಿಗೆ ಆ್ಯಂಬುಲೆನ್ಸ್‌ ರೂಪಿಸಲು ಟೆಂಡರ್‌ ಮೂಲಕ ಕಾರ್ಯಾದೇಶ ನೀಡಿದೆ.

ಹಿಂದೆ ಈ ಕಂಪನಿ ಹಮ್‌ಸಫರ್‌ ರೈಲಿನ ವಿನ್ಯಾಸ ಸೇರಿ ಹಲವು ಪ್ರತಿಷ್ಠಿತ ವಾಹನಗಳ ಒಳವಿನ್ಯಾಸ ರೂಪಿಸಿತ್ತು. ಅಲ್ಲದೆ, ವಿಶ್ವದ ಮೊದಲ ವಿಎಡಬ್ಲೂಟಿ (ವರ್ಟಿಕಲ್‌ ಎಕ್ಸಿಸ್‌ ವಿಂಡ್‌ ಟರ್ಬೈನ್‌) ರೂಪಿಸಿ ಅಮೆರಿಕಾಗೆ ರಫ್ತು ಮಾಡಿದ ಹೆಗ್ಗಳಿಕೆ ಸ್ಟೈರಾ ಟೆಕ್ನೋವೇಶನ್ಸ್‌ ಕಂಪನಿಯದು. ಈ ಹಿನ್ನೆಲೆಯಲ್ಲಿ ಕಂಪನಿಗೆ ಯೋಧರಿಗಾಗಿ ಆ್ಯಂಬುಲೆನ್ಸ್‌ ರೂಪಿಸುವ ಅವಕಾಶವನ್ನು ಡಿಆರ್‌ಡಿಒ ನೀಡಿದೆ.

ಯಾವ್ಯಾವ ಸೌಲಭ್ಯ?:

ಗಾಯಗೊಂಡ ಸೈನಿಕರಿರುವ ಕಂಪಾರ್ಟ್‌ಮೆಂಟ್‌ನಲ್ಲಿ ಹಾಟ್‌ ಅಂಡ್‌ ಕೋಲ್ಡ್‌ ಏರ್‌ ಕಂಡಿಷನ್‌ ವ್ಯವಸ್ಥೆ ಇರಲಿದೆ. ಉತ್ತಮ ಗುಣಮಟ್ಟದ .35 ಲಕ್ಷ ಮೊತ್ತದ ವೈದ್ಯಕೀಯ ಉಪಕರಣವನ್ನು ಇವು ಹೊಂದಿರಲಿದೆ. ಆಧುನಿಕ ಪ್ರಥಮ ಚಿಕಿತ್ಸೆ, ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ವ್ಯವಸ್ಥೆ, ಆಟೋ ಲೋಡಿಂಗ್‌ ಸ್ಟೆ್ರಚ್ಚರ್‌ ಇರಲಿದೆ. ಜತೆಗೆ ಚಿಕಿತ್ಸೆಗೆ ವೈದ್ಯರು, ಸಹಾಯಕರಿಗೆ ಅಗತ್ಯ ಸೌಲಭ್ಯ ಇರಲಿದೆ.

ಟೆಲಿ ಮೆಡಿಸಿನ್‌:

ಮೊಬೈಲ್‌ ಆ್ಯಂಬುಲೆನ್ಸ್‌ ಆಗಿಯೂ ಇದು ಕಾರ್ಯ ನಿರ್ವಹಿಸುವ ಕಾರಣ ಟೆಲಿ ಮೆಡಿಸಿನ್‌ ವ್ಯವಸ್ಥೆ ಇರಲಿದೆ. ಪ್ರತಿಷ್ಠಿತ ಆಸ್ಪತ್ರೆ ವೈದ್ಯರನ್ನು ಆ್ಯಂಬುಲೆನ್ಸ್‌ ಮೂಲಕವೇ ಸಂಪರ್ಕಿಸಿ ಗಾಯಾಳು ಚಿಕಿತ್ಸೆಗೆ ವೈದ್ಯರಿಂದ ಸಲಹೆ, ಮಾರ್ಗದರ್ಶನ ಪಡೆಯುವಂತೆ ಆಡಿಯೋ ವಿಡಿಯೋ ಸ್ಕ್ರೀನಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ ಇಂಟರ್‌ನೆಟ್‌ ಸೌಲಭ್ಯ ಒಳಗೊಳ್ಳಲಿದೆ.

ಹಿಮಾಲಯ ಪ್ರದೇಶಕ್ಕೆ ಅನುಗುಣವಾಗಿ ತಯಾರಿಕೆ

ಈ ಬಗ್ಗೆ ಕನ್ನಡಪ್ರಭ ಜೊತೆ ಮಾತನಾಡಿದ ಏಬಲ್‌ ಡಿಸೈನ್‌ ಎಂಜಿನಿಯರಿಂಗ್‌ ಮುಖ್ಯಸ್ಥ ಜಗದೀಶ ಹಿರೇಮಠ, ಹಿಮಾಲಯ ಪ್ರದೇಶಕ್ಕೆ ಅನುಗುಣವಾಗುವಂತೆ ಟಾಟಾ ಸುಮೋ ಮತ್ತು ಎಸ್‌ಎಂಎಲ್‌ ಇಸುಝು (ಮಿನಿಬಸ್‌) ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವನ್ನು ಆ್ಯಂಬುಲೆನ್ಸ್‌ ಆಗಿಸಲು ವಿನ್ಯಾಸ ಹಾಗೂ ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಹಿಮಾಲಯದ ಹವಾಮಾನಕ್ಕೆ ತಕ್ಕಂತೆ, ಅಲ್ಲಿ ಸಂಭವಿಸುವ ಭೂಕುಸಿತ, ವಿಪರೀತ ಮಳೆ, ಹಿಮ ಬೀಳುವಿಕೆಗೆ ಒಗ್ಗುವಂತೆ ಸಾಕಷ್ಟುಬದಲಾವಣೆ ಮಾಡಲಿದ್ದೇವೆ. ಇಸುಝುವಿನಲ್ಲಿ ಏಕಕಾಲಕ್ಕೆ ಮೂವರು ಸೈನಿಕರು ಹಾಗೂ ಟಾಟಾ ಸುಮೋದಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲು ಅವಕಾಶವಾಗುವಂತೆ ರೂಪಿಸಲಾಗುತ್ತಿದೆ.

ವಿಶೇಷ ಅಳವಡಿಕೆ

1) ಹೈಡ್ರಾಲಿಕ್‌ ಸಿಸ್ಟಮ್‌ ಬೆಡ್‌

2) ಏರ್‌ ಸಸ್ಪೆನ್ಷನ್‌ ಸಿಸ್ಟಮ್‌

3) ಶೈತ್ಯಾಗಾರ

4) ನೀರಿನ ಟ್ಯಾಂಕ್‌

5) ಟೈರ್‌ ಪ್ರೆಶ್ಶರ್‌ ವ್ಯವಸ್ಥಾಪನೆ

ಡಿಸೆಂಬರ್‌ನಲ್ಲಿ ಡಿಆರ್‌ಡಿಒ ಆ್ಯಂಬುಲೆನ್ಸ್‌ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದೆ. ಮಾಚ್‌ರ್‍ ಅಂತ್ಯದೊಳಗೆ ಸೇನೆಗೆ ಹಸ್ತಾಂತರ ಮಾಡಬೇಕಿದ್ದು, ನಾವು ಫೆಬ್ರವರಿಯ ಅಂತ್ಯದಲ್ಲಿಯೆ ಆ್ಯಂಬುಲೆನ್ಸ್‌ ನೀಡಲು ಪ್ರಯತ್ನ ನಡೆಸಿದ್ದೇವೆ.

-ಜಗದೀಶ ಹಿರೇಮಠ, ಏಬಲ್‌ ಡಿಸೈನ್‌ ಎಂಜಿನಿಯರಿಂಗ್‌ ವ್ಯವಸ್ಥಾಪಕ ನಿರ್ದೇಶಕ

click me!