ಅರ್ಧ ಶತಮಾನದ ರಸ್ತೆ ಬಂದ್‌! ಮಾಸ್ಟರ್ ಪ್ಲಾನ್‌ನಲ್ಲಿದ್ದ 40 ಅಡಿ ಪಬ್ಲಿಕ್ ರೋಡ್ ಗಾಯಬ್

Published : Oct 10, 2026, 09:31 AM IST
Belagavi

ಸಾರಾಂಶ

ಬೆಳಗಾವಿಯ ಹನುಮಾನ ನಗರದಲ್ಲಿ 50 ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯನ್ನು ಖಾಸಗಿ ಸಂಸ್ಥೆಯೊಂದು ದಿಢೀರ್ ಬಂದ್ ಮಾಡಿದೆ. ಉಕ್ಕಿನ ತಡೆಗೋಡೆ ನಿರ್ಮಿಸಿರುವ ಕ್ರಮವನ್ನು ವಿರೋಧಿಸಿ ನಿವಾಸಿಗಳು ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬೆಳಗಾವಿ: ಇಲ್ಲಿನ ಹನುಮಾನ ನಗರದಲ್ಲಿ ಕಳೆದ ಸುಮಾರು 50 ವರ್ಷಗಳಿಂದ ಸಾರ್ವಜನಿಕರು ಸಂಚರಿಸುತ್ತಿದ್ದ 40 ಅಡಿ ಅಗಲದ ರಸ್ತೆಗೆ ಉಕ್ಕಿನ ತಡೆಗೋಡೆ ನಿರ್ಮಿಸಿ ಸಂಚಾರ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಸರ್ಕಾರಿ ನೌಕರರ ಸಹಕಾರಿ ಗೃಹ ನಿರ್ಮಾಣ ಸಂಘದ ಪದಾಧಿಕಾರಿಗಳು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಹನುಮಾನ ನಗರ ಸರ್ಕಲ್‌ನ ಉತ್ತರ ಭಾಗದಲ್ಲಿ, ಹನುಮಾನ ಟವರ್ ಕಟ್ಟಡದ ಪಶ್ಚಿಮಕ್ಕೆ ಇರುವ ರಸ್ತೆಯನ್ನು ನವಾಸಾ ಎಸ್ಟೇಟ್ಸ್ ಎಲ್‌ಎಲ್‌ಪಿ ಸಂಸ್ಥೆ ಬಂದ್ ಮಾಡಿದೆ. ಅ.7ರಂದು ಬೆಳಗಿನ ಜಾವ ಸುಮಾರು 6 ಗಂಟೆಗೆ ಉಕ್ಕಿನ ಫಲಕಗಳಿಂದ ತಡೆಗೋಡೆ ನಿರ್ಮಿಸಿ, ಸಾರ್ವಜನಿಕರ ಸಂಚಾರ ನಿರ್ಬಂಧಿಸುವ ಫಲಕ ಅಳವಡಿಸಲಾಗಿದೆ ಎಂದು ಆರೋಪಿಸಿದರು.

ಅನುಮೋದಿತ ನಕ್ಷೆಯಲ್ಲಿ ರಸ್ತೆಯ ಉಲ್ಲೇಖ

ಈ ರಸ್ತೆ 1975-76ರಿಂದ ಸಾರ್ವಜನಿಕರ ಬಳಕೆಯಲ್ಲಿದೆ. ಕರ್ನಾಟಕ ಸರ್ಕಾರದ ವಿನ್ಯಾಸ ನಕ್ಷೆ ಸಂಖ್ಯೆ (ಲೇಔಟ್)/ಪಿಎ/ಬಿಜಿಎಮ್/4345/72-73, ದಿನಾಂಕ 10-02-1972ರ ಪ್ರಕಾರ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿಸಿರುವ ಮಾಸ್ಟರ್ ಪ್ಲಾನ್‌ನಲ್ಲಿಯೂ ಈ ರಸ್ತೆ ಗುರುತಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅನುಮೋದಿತ ನಕ್ಷೆಯಲ್ಲಿ ರಸ್ತೆ ಇದ್ದು, ದಶಕಗಳಿಂದ ಸಾರ್ವಜನಿಕರು ಬಳಸುತ್ತಿದ್ದ ಮಾರ್ಗಕ್ಕೆ ಏಕಾಏಕಿ ತಡೆಗೋಡೆ ನಿರ್ಮಿಸಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಜಾಗದ ಮಾಲೀಕತ್ವ, ದಾಖಲೆಗಳು ಹಾಗೂ ತಡೆಗೋಡೆ ನಿರ್ಮಾಣದ ಕಾನೂನುಬದ್ಧತೆಯ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಪಾಲಿಕೆಯ ಮುಂದಿನ ಕ್ರಮವೇನು?

ಸಾರ್ವಜನಿಕರು ಬಳಸುತ್ತಿದ್ದ ರಸ್ತೆ ಬಂದ್ ಆಗಿರುವುದರಿಂದ ಬಡಾವಣೆ ನಿವಾಸಿಗಳಿಗೆ ಸಂಚಾರದಲ್ಲಿ ತೊಂದರೆಯಾಗಿದೆ. ಸಾರ್ವಜನಿಕ ಮಾರ್ಗದ ವಿಚಾರದಲ್ಲೇ ಇಂತಹ ಪರಿಸ್ಥಿತಿ ಎದುರಾದರೆ, ಪಾಲಿಕೆಯ ವ್ಯಾಪ್ತಿಯ ಖಾಲಿ ನಿವೇಶನಗಳು ಮತ್ತು ಸಾರ್ವಜನಿಕ ಆಸ್ತಿಗಳ ರಕ್ಷಣೆಯ ಹೊಣೆ ಯಾರದು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮನವಿ ಪತ್ರ ಸ್ವೀಕರಿಸಿದ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಸಿದ್ದಾರ್ಥ ನಾಗನೂರ, ಶ್ರೀಧರ ಮುತಗೇಕರ, ದಿವ್ಯಾನಂದ ಕಟಗಲಕರ, ರಾಜು ಚಂದ್ರಶೇಖರಪ್ಪ, ಪರಶುರಾಮ ತಳವಾರ, ಅಭಿನಂದನ ಮೊಕಾಶಿ ಮೊದಲಾದವರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕೈಗಾರಿಕಾ ಹಬ್ ತುಮಕೂರು ಚಿತ್ರಣ ಶೀಘ್ರವೇ ಬದಲು, ರೈಲು ಮಾರ್ಗ ನಾಲ್ಕು ಪಥಗಳಾಗಿ ಅಭಿವೃದ್ಧಿ! ಮತ್ತಷ್ಟು ಕಾರಣವಿದು
ತಟ್ಟೆ ಹಳ್ಳದ ನೀರು ಮನೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣ; ಶಾಶ್ವತ ಪರಿಹಾರದ ಭರವಸೆ