ದಳಪತಿಗಳಿಂದ ಅಭ್ಯರ್ಥಿ ಬದಲಾವಣೆಗೆ ಅಂತಿಮ ಕಸರತ್ತು

By Kannadaprabha NewsFirst Published Apr 9, 2023, 8:59 AM IST
Highlights

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುವ ಮಾತು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್‌ ಸೇರಿದಂತೆ ಉಳಿದ ಟಿಕೆಟ್‌ ಆಕಾಂಕ್ಷಿಗಳೆಲ್ಲರನ್ನೂ ಕರೆಸಿಕೊಂಡು ಮುಕ್ತವಾಗಿ ಮಾತುಕತೆ ನಡೆಸಿರುವ ದಳಪತಿಗಳು ಕ್ಷೇತ್ರದ ಸರ್ವೆ ವರದಿ ಆಧರಿಸಿ ಅಭ್ಯರ್ಥಿಯನ್ನು ತೀರ್ಮಾನಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

 ಮಂಡ್ಯ ಮಂಜುನಾಥ 

 ಮಂಡ್ಯ :  ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುವ ಮಾತು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್‌ ಸೇರಿದಂತೆ ಉಳಿದ ಟಿಕೆಟ್‌ ಆಕಾಂಕ್ಷಿಗಳೆಲ್ಲರನ್ನೂ ಕರೆಸಿಕೊಂಡು ಮುಕ್ತವಾಗಿ ಮಾತುಕತೆ ನಡೆಸಿರುವ ದಳಪತಿಗಳು ಕ್ಷೇತ್ರದ ಸರ್ವೆ ವರದಿ ಆಧರಿಸಿ ಅಭ್ಯರ್ಥಿಯನ್ನು ತೀರ್ಮಾನಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Latest Videos

ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಹತ್ತಿರವಾಗುತ್ತಿದ್ದಂತೆ ಜೆಡಿಎಸ್‌ ವರಿಷ್ಠರು ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್‌, ಉಳಿದ ಟಿಕೆಟ್‌ ಆಕಾಂಕ್ಷಿಗಳಾದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌. ರಾಮಚಂದ್ರ, ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್‌.ಎನ್‌.ಯೋಗೇಶ್‌, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಜೆಡಿಎಸ್‌ ವಕ್ತಾರ ಮುದ್ದನಘಟ್ಟಮಹಾಲಿಂಗೇಗೌಡ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದಿಂದ ನಡೆಸಿರುವ ವಿಧಾನಸಭಾ ಕ್ಷೇತ್ರದ ಸರ್ವೆ ವರದಿಯೊಂದು ಬರುವುದು ಬಾಕಿ ಇದೆ. ಶನಿವಾರ ಅಥವಾ ಭಾನುವಾರ ಅದು ನಮ್ಮ ಕೈಸೇರಲಿದೆ. ಅದನ್ನು ಆಧರಿಸಿ ಅಭ್ಯರ್ಥಿಯನ್ನು ಘೋಷಿಸುತ್ತೇವೆ. ಅದನ್ನು ಎಲ್ಲರೂ ಒಪ್ಪಿಕೊಂಡು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಎಲ್ಲರಿಗೂ ಸೂಚಿಸಿದ್ದಾರೆ ಎನ್ನಲಾಗಿದೆ.

ನಿಮ್ಮನ್ನು ಕಡೆಗಣಿಸುವುದಿಲ್ಲ:

ಈ ಸಮಯದಲ್ಲಿ ಅಭ್ಯರ್ಥಿ ಎಂ.ಶ್ರೀನಿವಾಸ್‌ ಮೊದಲ ಪಟ್ಟಿಯಲ್ಲೇ ನನ್ನ ಹೆಸರನ್ನು ಘೋಷಿಸಿ ಈಗ ಬದಲಾಯಿಸುತ್ತೇನೆ ಎಂದರೆ ನಾನು ಇಷ್ಟುದಿನ ನಡೆಸಿದ ಚುನಾವಣಾ ಕಾರ್ಯಚಟುವಟಿಕೆಗಳು ವ್ಯರ್ಥವಾಗುವುದಿಲ್ಲವೇ ಎಂದಾಗ, ನೀವು ಹಿರಿಯರು. ಮೂರು ಬಾರಿ ಶಾಸಕರಾಗಿದ್ದಿರಿ. ಒಟ್ಟು ಆರು ಬಾರಿ ಚುನಾವಣೆ ಎದುರಿಸಿದ್ದೀರಿ. ಈಗ ನಿಮ್ಮ ಆರೋಗ್ಯ ಸರಿಯಾಗಿಲ್ಲ. ಈಗಲೂ ನೀವೇ ಅಭ್ಯರ್ಥಿಯಾಗಲು ಹೊರಟಿದ್ದೀರಿ. ಈ ಸಮಯದಲ್ಲಾದರೂ ಬೇರೆಯವರಿಗೆ ಅವಕಾಶ ಕೊಡಬೇಕೋ, ಬೇಡವೋ ನೀವೇ ಒಮ್ಮೆ ಯೋಚಿಸಿ. ಸರ್ವೆ ವರದಿಯಲ್ಲಿ ನಿಮ್ಮ ಹೆಸರು ಬಂದರೆ ನೀವೇ ಸ್ಪರ್ಧಿಸಿ, ಒಂದು ವೇಳೆ ವ್ಯತಿರಿಕ್ತವಾಗಿ ಬಂದರೆ ಬದಲಾವಣೆ ಅನಿವಾರ್ಯವಾಗುತ್ತದೆ. ಆಗಲೂ ನಾವು ನಿಮ್ಮನ್ನು ಕಡೆಗಣಿಸುವುದಿಲ್ಲ. ನೀವು ಯಾರನ್ನು ಅಭ್ಯರ್ಥಿಯಾಗಿ ಸೂಚಿಸುವರೋ ಅವರನ್ನೇ ಕಣಕ್ಕಿಳಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಅಭ್ಯರ್ಥಿ ವಿಷಯವಾಗಿ ಯಾವುದೇ ಗೊಂದಲ ಮತ್ತು ಭಿನ್ನಮತಕ್ಕೆ ಅವಕಾಶ ಕೊಡಬೇಡಿ. ಪಕ್ಷದ ಹಿತದೃಷ್ಟಿಯಿಂದ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ವರಿಷ್ಠರ ಸೂಚನೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿರುವ ಶಾಸಕ ಎಂ.ಶ್ರೀನಿವಾಸ್‌ ಅವರು ಅಭ್ಯರ್ಥಿಯನ್ನಾಗಿ ಯಾರನ್ನು ಕಣಕ್ಕೆ ಇಳಿಸಲಿದ್ದಾರೆ ಎನ್ನುವುದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ.

ಹೆಸರಿಲ್ಲದವರನ್ನು ಸೂಚಿಸಿದರೆ ಪರಿಗಣಿಸಲಾಗದು

ಚುನಾವಣೆ ಘೋಷಣೆಗೂ ಮುನ್ನ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿ ಶಾಸಕರಾಗಿದ್ದ ಎಂ.ಶ್ರೀನಿವಾಸ್‌ ಸೇರಿದಂತೆ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌. ರಾಮಚಂದ್ರ, ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌, ಜಿಪಂ ಮಾಜಿ ಸದಸ್ಯ ಎಚ್‌.ಎನ್‌.ಯೋಗೇಶ್‌, ನಗರÜಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಪೈಪೋಟಿ ನಡೆಸಿದ್ದರು. ಸರ್ವೆ ವರದಿಯಲ್ಲಿ ಯಾರ ಹೆಸರಿರುವುದಿಲ್ಲವೋ ಅವರನ್ನು ಎಂ.ಶ್ರೀನಿವಾಸ್‌ ಸೂಚಿಸಿದರೂ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ.

ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಎದುರಾಗಿ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಿದ್ದರು. ಇವರ ಪರವಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಬ್ಯಾಟಿಂಗ್‌ ನಡೆಸಿದ್ದು ಗುಟ್ಟಾಗೇನೂ ಉಳಿದಿಲ್ಲ. ಇವರೊಂದಿಗೆ ಪಿಇಟಿ ಅಧ್ಯಕ್ಷ ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್‌.ವಿಜಯಾನಂದ ಕೂಡ ಟಿಕೆಟ್‌ ನಿರೀಕ್ಷೆಯಲ್ಲಿದ್ದರು.

ರಾಮಚಂದ್ರ, ವಿಜಯಾನಂದಗೆ ಚಿಗುರಿದ ಕನಸು!

ಜೆಡಿಎಸ್‌ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಟಿಕೆಟ್‌ ಘೋಷಿಸಿದ್ದರಿಂದ ವಿಜಯಾನಂದ ಅವರು ಕಣದಿಂದ ದೂರವೇ ಉಳಿದಿದ್ದರು. ಆದರೆ, ಬಿ.ಆರ್‌.ರಾಮಚಂದ್ರ ಮಾತ್ರ ಟಿಕೆಟ್‌ ಸಿಗುವ ಆತ್ಮವಿಶ್ವಾಸದಿಂದ ಚುನಾವಣಾ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದರು. ಪಂಚರತ್ನ ರಥಯಾತ್ರೆ ಸೇರಿದಂತೆ ಕ್ಷೇತ್ರದಾದ್ಯಂತ ಸಂಚರಿಸುವ ಮೂಲಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣಕಾಸಿನ ನೆರವು, ಶಾಲಾ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ, ಕ್ಷೇತ್ರದ ಜನರಿಗೆ ಧರ್ಮಸ್ಥಳ ಯಾತ್ರೆ ನಡೆಸುತ್ತಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಗುರುತಿಸಿಕೊಳ್ಳುವ ಮೂಲಕ ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಇದೀಗ ಸರ್ವೆ ವರದಿ ಆಧರಿಸಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ದಳಪತಿಗಳು ತಿಳಿಸಿರುವುದರಿಂದ ಬಿ.ಆರ್‌.ರಾಮಚಂದ್ರ, ಕೆ.ಎಸ್‌.ವಿಜಯ್‌ ಆನಂದ್‌ರವರಿಗೆ ಟಿಕೆಟ್‌ ಸಿಗುವ ಕನಸು ಮತ್ತೆ ಚಿಗುರೊಡೆಯುವಂತೆ ಮಾಡಿದೆ.

ಗುಟ್ಟು ಬಿಟ್ಟುಕೊಡುತ್ತಿಲ್ಲ

ಶಾಸಕ ಎಂ.ಶ್ರೀನಿವಾಸ್‌ ಅವರ ವಿರೋಧ ಕಟ್ಟಿಕೊಂಡು ಕ್ಷೇತ್ರದೊಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತಿದ್ದ ದಳಪತಿಗಳು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದರೊಂದಿಗೆ ಅಭ್ಯರ್ಥಿ ಯಾರಾಗಬೇಕು ಎಂಬ ಆಯ್ಕೆಯನ್ನು ಅವರಿಗೆ ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಸಜ್ಜುಗೊಳಿಸುವ ಪ್ರಯತ್ನದಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿ ಯಾರಾಗಬೇಕು ಎನ್ನುವುದು ಮಾತುಕತೆ ಸಮಯದಲ್ಲೇ ಅಂತಿಮವಾಗಿದೆ ಎಂದು ಹೇಳಲಾಗುತ್ತಿದ್ದರೂ ದಳಪತಿಗಳು ಸೇರಿದಂತೆ ಜೆಡಿಎಸ್‌ ನಾಯಕರು ಯಾರೂ ಆ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ನಾಳೆ ಅಥವಾ ನಾಡಿದ್ದು ಜೆಡಿಎಸ್‌ ಎರಡನೇ ಪಟ್ಟಿಬಿಡುಗಡೆಯಾಗಲಿದ್ದು ಅದರಲ್ಲಿ ಮಂಡ್ಯ ಕ್ಷೇತ್ರದಿಂದ ಯಾರ ಹೆಸರು ಇರುತ್ತದೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.

ಜೆಡಿಎಸ್‌ ವರಿಷ್ಠರು ಮಂಡ್ಯ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿತರೆಲ್ಲರನ್ನು ಕರೆದು ಸಭೆ ನಡೆಸಿದ್ದಾರೆ. ಕ್ಷೇತ್ರದ ಸರ್ವೆ ವರದಿ ಬರುವುದು ಬಾಕಿ ಇದ್ದು, ಆ ವರದಿಯನ್ನು ಆಧರಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಎಂ.ಶ್ರೀನಿವಾಸ್‌ಗೆ ವ್ಯತಿರಿಕ್ತವಾಗಿ ಬಂದರೆ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್‌ ನೀಡಲಾಗುವುದು. ಅವರು ಸೂಚಿಸುವ ಹೆಸರು ವರದಿಯಲ್ಲಿರುವುದು ಕಡ್ಡಾಯ. ಒಂದೆರಡು ದಿನದಲ್ಲಿ ಅಭ್ಯರ್ಥಿ ಯಾರೆನ್ನುವುದು ಗೊತ್ತಾಗಲಿದೆ.

- ಡಿ.ರಮೇಶ್‌, ಅಧ್ಯಕ್ಷರು, ಜೆಡಿಎಸ್‌.

click me!