ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ

By Kannadaprabha NewsFirst Published Jan 23, 2020, 2:29 PM IST
Highlights

ಕಲಬುರಗಿಯಲ್ಲಿ 1987 ರಲ್ಲಿ ಅದ್ಧೂರಿಯಾಗಿ ನಡೆದಿತ್ತು| 58 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಜಕಾರಣಿಗಳು, ಅಧಿಕಾರಿಗಳಿಗಿಂತ ಹೆಚ್ಚಾಗಿ ಜನಸಾಮಾನ್ಯರೇ ಪಾಲ್ಗೊಂಡು ‘ನುಡಿ’ತೇರನ್ನೆಳೆದು ಸಂಭ್ರಮಿಸಿದ್ದರು| ಡಾ. ಸಿದ್ಧಯ್ಯ ಪುರಾಣಿಕರ ಸರ್ವಾಧ್ಯಕ್ಷತೆಗೆ ಜನ ಕುಣಿದು ಕುಪ್ಪಳಿಸಿದ್ದರು|

ಶೇಷಮೂರ್ತಿ ಅವಧಾನಿ 

ಕಲಬುರಗಿ(ಜ.23): ಕಲಬುರಗಿಯಲ್ಲಿ ನಡೆಯಲಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು 15 ದಿನ ಬಾಕಿ. ಕನ್ನಡ ಡಿಂಡಿಮ ಪ್ರತಿಧ್ವನಿಸಲಿರುವ ಕವಿರಾಜ ಮಾರ್ಗದ ಈ ನೆಲದಲ್ಲಿ ಅದ್ಯಾಕೋ ಏನೋ ನಿರೀಕ್ಷೆ ಯಂತೆ ಸಂಭ್ರಮ, ಸಡಗರ ಇನ್ನೂ ಕಾಣುತ್ತಿಲ್ಲ. ಕನ್ನಡ ಹಬ್ಬದ ವಾತಾವರಣ ಇನ್ನೂ ಕಳೆಗಟ್ಟಿಲ್ಲ, ನಗರ, ಪಟ್ಟಣ, ಹೋಬಳಿ, ಹಳ್ಳಿಗಾಡಲ್ಲಿಯೂ ನುಡಿ ಜಾತ್ರೆ ಸೌಂಡ್ ಮಾಡುತ್ತಿಲ್ಲ. 

32 ವರ್ಷಗಳ ಹಿಂದೆ, 1987 ರಲ್ಲಿ ಕಲಬುರಗಿಯಲ್ಲಿ ನಡೆದಿದ್ದ 58ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನ ಹತ್ತಿರದಿಂದ ಕಂಡವರಿಗಂತೂ 85ನೇ ಈ ಸಾಹಿತ್ಯ ಸಮ್ಮೇಳನದ ಈ ತಯಾರಿ ವೈಖರಿ ಬಲು ಸಪ್ಪೆಯಾಗಿ ಕಾಣುತ್ತಿದೆ. ‘ನಮ್ಮನ್ನು ಕರೆದಿಲ್ಲ, ನಿಮ್ಮನ್ನು ಕರೆದಿಲ್ಲವೆಂದು ಸಾಹಿತಿಗಳು, ಸಂಘಟನೆಗಳವರ ಸಿಟ್ಟು, ಸೆಡವಿನ ನಡುವೆಯೇ ಸ್ವಾಗತ ಸಮಿತಿ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿದ್ದು, ಇವೆಲ್ಲ ಬೆಳವಣಿಗೆ ಹಿನ್ನೆಲೆ ‘ಕನ್ನಡಪ್ರಭ’ ಕಲಬುರಗಿ 58ನೇ ಕನ್ನಡ ಹಬ್ಬ ಕಂಡವರೊಂದಿಗೆ ಮಾತಿಗಿಳಿದಾಗ 58ರ ನುಡಿ ಹಬ್ಬದಂತಿಲ್ಲ 85ನೇ ಸಾಹಿತ್ಯ ಸಮ್ಮೇಳನ, ಇಷ್ಟೊತ್ತಿಗಾಗಲೇ ಕಲಬುರಗಿ ನಗರವಿಡೀ ಕನ್ನಡಮಯವಾಗಿತ್ತು, ಈಗ ನೋಡಿದರೆ ಎಲ್ಲಿಯೂ ವಾತಾವರಣ ಹಾಗೆ ಕಾಣುತ್ತಿಲ್ಲ ಎಂದು ಬೇಸರಿಸಿದರು. 

58ನೇ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳಿಗಿಂತ ಸಾಮಾನ್ಯ ಜನ, ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು, ದೊಡ್ಡ ವರ್ತಕರು, ಉದ್ದಿಮೆದಾರರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿತ್ತು. ಆದರೆ 85ನೇ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳದ್ದೇ ದರ್ಬಾರ್ ಎಂಬಂತಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. 

58ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಅವಿಭಜಿತ ಕಲಬುರಗಿ ಜಿಲ್ಲೆಯ ಶಹಾಪುರ ಶಾಸಕ ಬಾಪುಗೌಡ ದರ್ಶನಾಪುರ ಅಧ್ಯಕ್ಷರಾಗಿದ್ದರು. ಬಿಡಿಒ ದೇವೀಂದ್ರಪ್ಪ ಪಾಟೀಲ್, ಉದ್ದಿಮೆದಾರ ಗಳಗಳಪ್ಪ ಪಾಟೀಲ್, ಎಸ್.ಎಸ್. ಪಾಟೀಲ್ ಮೊದಲ್ಗೊಂಡು ಅನೇಕರು ಸಮ್ಮೇಳನದ ಆಹಾರ, ವಸತಿ, ಮೆರವಣಿಗೆಯಂತಹ ಹತ್ತು ಹಲವು ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿಭಾಯಿಸಿದ್ದರು. ದಾಸೋಹ ಪೀಠದ ಬಲ, ಬೆಂಬಲ: ಶರಣಬಸವೇಶ್ವರ ಸಂಸ್ಥಾನದ ಹಿರಿಯರಾಗಿದ್ದಂತಹ ದೊಡ್ಡಪ್ಪ ಅಪ್ಪ ಅವರು ಸಮ್ಮೇಳನದ ಸಂಪೂರ್ಣ ಹೊಣೆ ಹೊತ್ತುಕೊಂಡು ತಮ್ಮ ಸಂಸ್ಥೆಯ ಕಾಲೇಜು ಮೈದಾನವನ್ನೇ ಸಮ್ಮೇಳನಕ್ಕೆ ನೀಡಿ ಕನ್ನಡ ಪ್ರೀತಿ ಮೆರೆದಿದ್ದರು. ಇಂದು ಸ್ಥಳೀಯವಾಗಿರುವ ಇಂತಹ ಯಾವುದೇ ಸಂಸ್ಥೆಗಳು, ದೊಡ್ಡ ಕುಳಗಳ ಒಳಗೊಳ್ಳುವಿಕೆ ಅಗೋಚರ ಎಂದು ಗೋಗಿ ಮಾಸ್ಟರ್ ಅಂದಿನ, ಇಂದಿನ ಸಮ್ಮೇಳನದ ವ್ಯತ್ಯಾಸ ಗುರುತಿಸಿ ಹಳಹಳಿಸುತ್ತಾರೆ.

‘ದಿ. ಬಾಪೂಗೌಡ ದರ್ಶನಾಪುರರ ಪ್ರಭಾವದಿಂದಾಗಿ ನುಡಿ ಜಾತ್ರೆಗೆ ಸಾಕಷ್ಟು ಸಂಪನ್ಮೂಲ ಸಂಗ್ರಹವಾಗಿತ್ತು. ಹಾಗೆ ಸಂಗ್ರಹವಾದ ಹಣದಲ್ಲೇ ಉಳಿದ 80ರಿಂದ 90 ಸಾವಿರ ರು. ವೆಚ್ಚ ಮಾಡಿ ಪಟೇಲ್ ವೃತ್ತದಲ್ಲಿರುವ ಈಗಿರುವ ‘ಕನ್ನಡ ಭವನಕ್ಕೆ ಅಂದೇ ನಿವೇಶನ ಖರೀದಿಸಲಾಗಿತ್ತು’ ಎಂದು ಹಿಂದಿನ ಸಮ್ಮೇಳನದ ಆರ್ಥಿಕ ಶಿಸ್ತಿನಿಂದ ಹಿಡಿದು ಅಲ್ಲಿ ಕಂಡಿದ್ದ ಅಚ್ಚುಕಟ್ಟುತನ ಹಿರಿಯರಾದ, ಕನ್ನಡಾಭಿಮಾನಿ ಶಿವಶರಣಪ್ಪ ಮಾಸ್ಟರ್ ಗೋಗಿ ವಿವರಿಸುತ್ತಾರೆ. 

ಎಲ್ಲರ ಒಳಗೊಳ್ಳುವಿಕೆ ಈಗ ಅಷ್ಟಕ್ಕಷ್ಟೆ: 

85 ನೇ ಸಾಹಿತ್ಯ ಸಮ್ಮೇಳನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷರು. ಬಾಗಲಕೋಟೆ ಜಿಲ್ಲೆ ಉಸ್ತುವಾರಿಯೂ ಇವರ ಹೆಗಲಿಗಿದೆ. ಕಲಬುರಗಿ ಸಮ್ಮೇಳನದ ಸಿದ್ಧತೆಗೆ ಹೆಚ್ಚಿನ ಸಮಯ, ಸಲಹೆ ಇವರಿಂದ ಸಿಗಲೇ ಇಲ್ಲ. ಇನ್ನು ಜಿಲ್ಲಾಧಿಕಾರಿ ಸಮ್ಮೇಳನದ ಸಂಚಾಲಕರು ಹಾಗೂ ಕೋಶಾಧಿಕಾರಿ, ರಚನೆಯಾದಂತಹ 16 ಸಮಿತಿಗಳಲ್ಲಿ ಸ್ಮರಣ ಸಂಚಿಕೆ ಹಾಗೂ ಪ್ರಚಾರ ಸಮಿತಿ ಹೊರತು ಪಡಿಸಿ ಉಳಿದ 13 ಸಮಿತಿಗಳಿಗೆ ಶಾಸಕರು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳೇ ಗೌರವ, ಕಾರ್ಯಾಧ್ಯಕ್ಷರು. ಹೀಗಾಗಿ ಸಮ್ಮೇಳನ ಒಂಥರಾ ಸರ್ಕಾರಿ ಇಲಾಖಾ ಕಾರ್ಯಕ್ರಮದಂತೆ ಇಲ್ಲಿನ ಜನರಿಗೆ ಭಾಸವಾಗುತ್ತಿದೆಯೇ ಹೊರತು ಎಲ್ಲರ ಒಳಗೊಳ್ಳುವಿಕೆ ಅಷ್ಟಕ್ಕಷ್ಟೆ ಎಂಬಂತಾಗಿದೆ.

ಸಮ್ಮೇಳನ ಅಂದ್ರ ಜನರೊಳಗಿರುವ ಪ್ರಬುದ್ಧರನ್ನು ಗುರುತಿಸಿ ಅಂತಹವರಿಗೆ ವಿವಿಧ ಸಮಿತಿಗಳ ಜವಾಬ್ದಾರಿ ವಹಿಸಬೇಕಿತ್ರಿ, 1987 ರಾಗ ದಿ. ಬಾಪುಗೌಡರು ಮಾಡಿದ್ದು ಇದನ್ನೇ. ಆದರೆ ಇಂದು ನೋಡಿದ್ರ ಮಿನಿಸ್ಟರ್, ಶಾಸಕರು, ಅಧಿಕಾರಿಗಳೇ ಸಮಿತಿಯೊಳಗಿದ್ದಾರ. ಅಂದು ಸಮ್ಮೇಳನ ಇನ್ನ ತಿಂಗಳ ಇರೋದಕ್ಕೆ ಮುಂಚೆನೇ ಸಂಭ್ರಮ ಮನೆ ಮಾಡಿತ್ತು. ಈಗ ನೋಡಿದ್ರ ಸಮ್ಮೇಳನಕ್ಕ 2 ವಾರ ಉಳಿದಿಲ್ಲ, ಸಡಗರ ಕಾಣುತ್ತಿಲ್ಲ, ಬಣಗುಡ್ಲಿಕತ್ತದ ಕಲಬುರಗಿ. ಹೀಂಗ ಆಗಬಾರ್ದು, ಕನ್ನಡಮ್ಮನ ಸಮ್ಮೇಳನ ಅಂದ್ರ ಹಬ್ಬದ ವಾತಾವರಣ ಇರಬೇಕ್ರಿ ಎಂದು ಕನ್ನಡಾಭಿಮಾನಿ ಶಿವಶರಣಪ್ಪ ಗೋಗಿ ಮಾಸ್ಟರ್ ಹೇಳಿದ್ದಾರೆ. 
 

click me!