ಶಿವಮೊಗ್ಗ: ಮದುವೆಯಲ್ಲಿ ಭಾಗಿಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ!

By Suvarna News  |  First Published May 22, 2020, 9:32 AM IST

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಕೊರೋನಾ ಲಗ್ಗೆಯಿಟ್ಟಿದೆ. ಮದುವೆಯೊಂದರಲ್ಲಿ ಪಾಲ್ಗೊಂಡಿದ್ದ 60 ವರ್ಷದ ವೃದ್ದೆಗೆ ಕೋವಿಡ್ 19 ಸೋಂಕು ತಗುಲಿರುವುದು ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಸೊರಬ(ಮೇ.22): ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕಾಣಿಸಿಕೊಂಡ ಕರೋನಾ ಸೋಂಕಿತ ಪ್ರಕರಣಕ್ಕೂ ತಾಲೂಕಿನ ಹಳೇಸೊರಬದಲ್ಲಿ ಪತ್ತೆಯಾದ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಜನತೆ ಜಾಗೃತರಾಗಿರಬೇಕು ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಗುರುವಾರ ತಾಲೂಕಿನಲ್ಲಿ ಮೊದಲ ಬಾರಿಗೆ ಕೋವಿಡ್‌ - 19 ಪಾಸಿಟಿವ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅ​ಧಿಕಾರಿಗಳ ತುರ್ತು ಸಭೆ ನಡೆಸಿ ಅವರು ಮಾತನಾಡಿದರು. ವೃದ್ದೆಯಲ್ಲಿ ಕಾಣಿಸಿದ ಪ್ರಕರಣವು ವಿಭಿನ್ನವಾಗಿದ್ದು, ಅ​ಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದ ಅವರು, ಪ್ರಾಥಮಿಕ ಮತ್ತು ಎರಡನೇ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವಂತೆ ಸಭೆಯಲ್ಲಿದ್ದ ಅ​ಧಿಕಾರಿಗಳಿಗೆ ಸೂಚನೆ ನೀಡಿದರು.

Tap to resize

Latest Videos

ಸೋಂಕಿತ ಮಹಿಳೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಹಿತಿ ಲಭಿಸಿದೆ. ಜೊತೆಯಲ್ಲಿ ಪಟ್ಟಣದ ಬಟ್ಟೆ ಅಂಗಡಿ, ಚಿನ್ನ-ಬೆಳ್ಳಿ ಮತ್ತು ಪಾತ್ರೆ ಅಂಗಡಿಗಳಿಗೂ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದ್ದು, ಪಟ್ಟಣದ ಎಲ್ಲಡೆ ಔಷಧ ಸಿಂಪರಣೆ ಮಾಡುವಂತೆ ಪಪಂ ಮುಖ್ಯಾ​ಕಾರಿ ಜಗದೀಶ್‌ ನಾಯ್ಕ್‌ಗೆ  ತಿಳಿಸಿದರು. ವಿವಾಹ ಮತ್ತಿತರರ ಸಭೆ-ಸಮಾರಂಭಗಳನ್ನು ನಡೆಸಲು ಸ್ಥಳೀಯ ಆಡಳಿತದ ಮಾರ್ಗಸೂಚಿ ಅನುಸರಿಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮೊದಲ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ಯೋಧರಿಗೆ ಸಮರ್ಪಕವಾಗಿ ಪರಿಕರಗಳನ್ನು ನೀಡಬೇಕು. ಸ್ಯಾನಿಟೈಸರ್‌ ಕಿಟ್‌ ವಿತರಿಸುವ ಹೊಣೆ ಸಂಪೂರ್ಣವಾಗಿ ಅ​ಕಾರಿಗಳ ಮೇಲಿದೆ ಎಂದರು. ಜನ ವಸತಿ ಪ್ರದೇಶಗಳಲ್ಲಿನ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆಯದಂತೆ ತಹಸೀಲ್ದಾರ್‌ಗೆ ಸೂಚಿಸಿದ ಅವರು, ತಾಲೂಕು ಕೇಂದ್ರದಿಂದ ಸಮೀಪದಲ್ಲಿಯೇ ಕ್ವಾರಂಟೈನ್‌ ಕೇಂದ್ರಗಳಿರುವಂತೆ ನೋಡಿಕೊಳ್ಳಬೇಕು ಎಂದರು.

ಉಪವಿಭಾಗಾ​ಧಿಕಾರಿ ಎಲ್‌. ನಾಗರಾಜ್‌ ಮಾತನಾಡಿ, ನೆರೆಯ ಜಿಲ್ಲೆ, ರಾಜ್ಯದಿಂದ ಆಗಮಿಸಿದರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದ್ದನ್ನು ಕೇಳಿದ್ದೆವು. ಆದರೆ, ಸ್ಥಳೀಯ ವೃದ್ಧ ಮಹಿಳೆಯಲ್ಲಿ ಕಾಣಿಸಿಕೊಂಡ ಕಾರಣ ಪ್ರಾಥಮಿಕ ಮತ್ತು ಎರಡನೇ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಈಗಾಗಲೇ ವೃದ್ಧೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟಗ್ರಾಮವನ್ನು ಕಂಟೈನ್ಮೆಂಟ್‌ ಜೋನ್‌ ಆಗಿ ಘೋಷಿಸಲಾಗಿದೆ. ಸೋಂಕು ಇದ್ದವರ ಮನೆಯಿಂದ 100 ಮೀಟರ್‌ ಯಾರೂ ಸಹ ಸಂಪರ್ಕಕ್ಕೆ ಹೋಗಬಾರದು. ಹಳೇ ಸೊರಬ ಗ್ರಾಮದಿಂದ ಸುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬಫರ್‌ ಜೋನ್‌ನಲ್ಲಿ ಜನತೆ ಅಂತರ ಕಾಯ್ದುಕೊಂಡು, ಆತಂಕಕ್ಕೆ ಒಳಗಾಗದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತಿ ಮುಖ್ಯ ಎಂದರು.

ತಹಸೀಲ್ದಾರ್‌ ನಫೀಸಾ ಬೇಗಂ, ತಾಪಂ ಇಒ ನಂದಿನಿ, ತಾಲೂಕು ಆರೋಗ್ಯಾಧಿ​ಕಾರಿ ಡಾ. ಅಕ್ಷತಾ ಖಾನಾಪುರ, ಪಿಎಸ್‌ಐ ಪ್ರಶಾಂತ್‌ ಕುಮಾರ್‌, ಕಂದಾಯ ಹಾಗೂ ಆರೋಗ್ಯ ಇಲಾಖೆ ಅ​ಧಿಕಾರಿಗಳು, ಪಿಡಿಒಗಳು ಇದ್ದರು.
 

click me!