* ಕೊಪ್ಪಳ ಜಿಲ್ಲಾಡಳಿತದಿಂದ ನಡೆದ ಸರ್ವೆಯಲ್ಲಿ ಉಲ್ಲೇಖ
* ಸರ್ವೇ ಮಾಹಿತಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ
* ಸರ್ವೇಯಲ್ಲಿ ಅಘಾತಕಾರಿ ಅಂಶ ಪತ್ತೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಏ.14): ಜಿಲ್ಲೆಯಲ್ಲಿ ಇರುವ ಸುಮಾರು 700 ಕಂದಾಯ ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವೇ ಇಲ್ಲವಂತೆ. ಸುಮಾರು ಶೇ. 60ರಷ್ಟು ದೇವಸ್ಥಾನಗಳಲ್ಲಿ ಪ್ರವೇಶ ಇಲ್ಲ...! ಸ್ವತಃ ಜಿಲ್ಲಾಡಳಿತವೇ(Koppal District Administration) ಮಾಡಿದ ಸಮೀಕ್ಷೆಯಲ್ಲಿ(Survey) ಈ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಜಿಲ್ಲಾಡಳಿತ ಅಧಿಕೃತವಾಗಿ ಬಹಿರಂಗ ಮಾಡಬೇಕಿದೆ.
ಮಿಯ್ಯಾಪುರ(Miyapur) ಗ್ರಾಮದಲ್ಲಿ ಇತ್ತೀಚೆಗೆ ಮೂರು ವರ್ಷದ ದಲಿತ ಮಗು(Dalit) ದೇಗುಲ(Temple) ಪ್ರವೇಶಿಸಿದ ಘಟನೆಯ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಸ್ಪೃಶ್ಯತೆ(Untouchability) ಆಚರಣೆ ಜಿಲ್ಲೆಯಲ್ಲಿ ಇನ್ನೂ ಜೀವಂತ ಇರುವ ಕುರಿತು ಸರ್ವೆ ಮಾಡಿದೆ. ಆದರೂ ಇದುವರೆಗೂ ಈ ಸರ್ವೆಯನ್ನು ಬಹಿರಂಗ ಮಾಡಿಲ್ಲ. ಆದರೆ, ಸರ್ವೇಯಲ್ಲಿ ಅಘಾತಕಾರಿ ಅಂಶಗಳು ಪತ್ತೆಯಾಗಿವೆ ಎನ್ನಲಾಗಿದೆ.
ಅಸ್ಪೃಶ್ಯತೆ ತಡೆಗೆ ವಿನಯ ಸಾಮರಸ್ಯ ಯೋಜನೆಯ ಅಸ್ತ್ರ: ಸಚಿವ ಕೋಟ
ಪ್ರವೇಶ ಮಾಡುವುದಿಲ್ಲ:
ಕೆಲ ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನೀಡಿಲ್ಲ. ಇನ್ನು ಕೆಲ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇದ್ದರೂ ದಲಿತರೇ ದೇವಸ್ಥಾನ ಪ್ರವೇಶ ಮಾಡುವುದೇ ಇಲ್ಲ. ದೇವಸ್ಥಾನದ ಆಚೆಯೇ ನಿಂತು ದೇವರಿಗೆ ನಮಸ್ಕಾರ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಗ್ರಾಮಸ್ಥರನ್ನು ಈ ಕುರಿತು ಪ್ರಶ್ನಿಸಿದರೆ ನಾವೇನು ಅವರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಿಲ್ಲ ಎಂದಲ್ಲ, ಅವರಾಗಿಯೇ ಪ್ರವೇಶ ಮಾಡದಿದ್ದರೆ ನಾವೇನು ಮಾಡಲು ಆಗುವುದಿಲ್ಲ ಎನ್ನುತ್ತಾರೆ.
ಏನೇನು ಆಚರಣೆ ಇದೆ?:
ದೇವಸ್ಥಾನಗಳಲ್ಲಿ ಪ್ರವೇಶ ಇಲ್ಲದಿರುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇದರ ಹೊರತಾಗಿಯೂ ದೇವಸ್ಥಾನಗಳಲ್ಲಿ ನಡೆಯುವ ಪ್ರಸಾದ ವಿತರಣೆಯಲ್ಲಿ ದಲಿತರಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿರುತ್ತದೆ. ಅಲ್ಲಿಯೇ ಅವರು ಪ್ರಸಾದ ಸ್ವೀಕಾರ ಮಾಡಬೇಕು.
ಇನ್ನು ದಲಿತ ಕೇರಿಯಲ್ಲಿ ಯಾರಾದರೂ ಸಾವಿಗೀಡಾದಾಗ ಅಂತ್ಯಕ್ರಿಯೆಗೆ(Funeral) ಬೇರೆಡೆಯಿಂದ ಬರುವ ದಲಿತರು ಹೋಟೆಲ್‌ನಲ್ಲಿ ಪ್ರವೇಶ ಮಾಡುತ್ತಾರೆ. ಅವರನ್ನು ಗುರುತಿಸಲು ಆಗುವುದಿಲ್ಲ ಎಂದು ಅಂದು ಹೋಟೆಲ್ ಬಂದ್ ಮಾಡುತ್ತಾರೆ. ಕಟಿಂಗ್ ಶಾಪ್‌ನಲ್ಲಿ(Cutting Shop) ದಲಿತರಿಗೆ ಕ್ಷೌರ ಮಾಡುವುದಿಲ್ಲ. ಇಲ್ಲದ ನೆಪ ಹೇಳುತ್ತಾರೆ. ಕೆಲವೆಡೆ ದಲಿತರ ಕ್ಷೌರ ಮಾಡಬೇಕಾಗುತ್ತದೆ ಎಂದು ಕಟಿಂಗ್ ಶಾಪ್‌ನ್ನೆ ಬಂದ್ ಮಾಡಿಸಿದ್ದಾರೆ. ಹೀಗೆ ಸಾಲು ಸಾಲು ಆಚರಣೆಗಳು ಜೀವಂತಾಗಿಯೇ ಇವೆ ಎನ್ನುವುದು ಸರ್ವೆಯಲ್ಲಿ ಗೊತ್ತಾಗಿದೆಯಂತೆ.
ಕರ್ನಾಟದಲ್ಲಿ ಅಸ್ಪೃಶ್ಯತೆ..! ಜಾತ್ಯಾತೀತ ರಾಜ್ಯದ ಕರಾಳ ಮುಖ
ಕಲಾಲಬಂಡಿ ಪ್ರಕರಣ ಬೆಳಕಿಗೆ
ಕುಷ್ಟಗಿ ತಾಲೂಕಿನ ಕಲಾಲ್‌ಬಂಡಿ ಗ್ರಾಮದಲ್ಲಿ ಈ ಹಿಂದೆ ದಲಿತ ಕೇರಿಗೆ ಬೇಲಿಯನ್ನೇ ಹಾಕಲಾಗಿದ್ದು, ಈ ಕುರಿತು ‘ಕನ್ನಡಪ್ರಭ’ ದಲಿತ ಕೇರಿಗೆ ಬೇಲಿ ಎನ್ನುವ ತಲೆಬರದಡಿ ವರದಿ ಪ್ರಕಟಿಸುತ್ತಿದ್ದಂತೆ ಜಿಲ್ಲಾಡಳಿತವೇ ಅಲ್ಲಿಗೆ ಧಾವಿಸಿ, ಬೇಲಿಯನ್ನು ತೆರವು ಮಾಡಿತ್ತು.
ಸರ್ವೆ ಕುರಿತು ಈಗಲೇ ಬಹಿರಂಗ ಮಾಡಲು ಆಗುವುದಿಲ್ಲ. ಅದರಲ್ಲಿ ಏನಿದೆ ಎಂದು ಸಹ ಹೇಳಲು ಆಗುವುದಿಲ್ಲ. ಸರ್ವೆಯನ್ನಂತೂ ಮಾಡಲಾಗಿದೆ ಅಂತ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ನವೀನ್ ಸಿಂತ್ರೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಸ್ಪೃಶ್ಯತೆ ಅವ್ಯಾಹತವಾಗಿ ನಡೆಯುತ್ತಿದೆ. ಅನೇಕ ಕಡೆ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ. ಇದನ್ನು ತೊಲಗಿಸುವ ದಿಸೆಯಲ್ಲಿ ಕಟ್ಟುನಿಟ್ಟಿನ ಕ್ರಮವಾಗಬೇಕು ಅಂತ ಕೊಪ್ಪಳ ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ರಾಘು ಚಾಕ್ರಿ ಹೇಳಿದ್ದಾರೆ.