ಕುವೈಟ್‌ನಲ್ಲಿ ರೆಸಿಡೆನ್ಸಿ ವೀಸಾ ಇಲ್ಲದ ಸುಮಾರು ಆರು ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ತಾಯ್ನಾಡಿಗೆ ಮರಳಲು ಅಮ್ನೆಸ್ಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಮಂಗಳೂರು(ಏ.29): ಕುವೈಟ್‌ನಲ್ಲಿ ರೆಸಿಡೆನ್ಸಿ ವೀಸಾ ಇಲ್ಲದ ಸುಮಾರು ಆರು ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ತಾಯ್ನಾಡಿಗೆ ಮರಳಲು ಅಮ್ನೆಸ್ಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆಲ್ಲ ಮೇ 5ರೊಳಗೆ ಸ್ವದೇಶಕ್ಕೆ ವಾಪಸ್ ತೆರಳುವಂತೆ ಕುವೈಟ್ ಸರ್ಕಾರ ಗಡುವು ನೀಡಿದೆ. ಆದರೆ ಲಾಕ್‌ಡೌನ್ ಸಮಸ್ಯೆ ಇವರನ್ನು ತಾಯ್ನಾಡಿಗೆ ತೆರಳಲು ಅಡ್ಡಿಯಾಗಿದೆ.
ಕಳೆದ ಕೆಲವು ವರ್ಷಗಳಿಂದ ಕುವೈಟ್‌ನಲ್ಲಿ ಮನೆಗೆಲಸ ಸೇರಿದಂತೆ ಸಣ್ಣಪುಟ್ಟಉದ್ಯೋಗದಲ್ಲಿರುವ ಭಾರತೀಯರಿದ್ದಾರೆ. ಅವರಲ್ಲಿ ಭಾರತೀಯರು ಸೇರಿದಂತೆ ಅನೇಕ ಮಂದಿ ನಾನಾ ಕಾರಣಕ್ಕೆ ರೆಸಿಡೆನ್ಸಿ ವೀಸಾವನ್ನು ಕಳೆದುಕೊಂಡಿದ್ದಾರೆ. ಅಂದರೆ, ಒಂದು ನಿರ್ದಿಷ್ಟಕಡೆ ಉದ್ಯೋಗಕ್ಕೆ ಏಜೆಂಟರ ಮೂಲಕ ಕುವೈಟ್‌ಗೆ ಬಂದಿರುವ ಈ ಮಂದಿ ಬಳಿಕ ಏಜೆಂಟರಿಂದ ಉದ್ಯೋಗ ವಂಚನೆಗೆ ಒಳಗಾಗುತ್ತಾರೆ. ಅಲ್ಲದೆ ಏಜೆಂಟರು ಕೂಡ ಸಂಪರ್ಕಕ್ಕೆ ಸಿಗದೆ, ಸಮರ್ಪಕ ಉದ್ಯೋಗವೂ ಸಿಗದೆ ಭಾಗಶಃ ಅತಂತ್ರ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಅಂತವರ ನೆರವಿಗೆ ಧಾವಿಸಿರುವ ಕುವೈಟ್ ಸರ್ಕಾರ, ಬೇಷರತ್ ಆಗಿ ಅವರೆಲ್ಲರನ್ನು ತಾಯ್ನಾಡಿಗೆ ಕಳುಹಿಸುವ ನಿರ್ಧಾರ ಕೈಗೊಂಡಿದೆ.
ಕೊರೋನಾ ನಿಗ್ರಹಕ್ಕೆ ಪೂರ್ತಿ ಗ್ರಾಮವೇ ಉಪವಾಸ..!
ಏ.16ರಿಂದ 20ರ ವರೆಗಿನ ಅವಧಿಯಲ್ಲಿ ರೆಸಿಡೆನ್ಸಿ ವೀಸಾ ಸಮಸ್ಯೆ ಎದುರಿಸುವವರಿಗೆ ತಾಯ್ನಾಡಿಗೆ ತೆರಳಲು ನೋಂದಣಿ ಮಾಡಿಕೊಳ್ಳಲು ಕುವೈಟ್ ಸರ್ಕಾರ ಅವಕಾಶ ನೀಡಿತ್ತು. ಭಾರತೀಯ ರಾಯಭಾರ ಕಚೇರಿಗೆ ಕುವೈಟ್ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಅಂತಹ ಸುಮಾರು 65 ಸಾವಿರ ಮಂದಿ ರೆಸಿಡೆನ್ಸಿ ವೀಸಾ ಕಳಕೊಂಡವರು ಇದ್ದಾರೆ ಎಂದು ಹೇಳಲಾಗಿದೆ. ಆದರೆ ಐದು ದಿನಗಳ ಅವಧಿಯಲ್ಲಿ ತಾಯ್ನಾಡಿಗೆ ಮರಳಲು ನೋಂದಣಿ ಮಾಡಿದವರ ಸಂಖ್ಯೆ ಕೇವಲ ಆರು ಸಾವಿರ ಮಾತ್ರ ಎಂದು ಕುಟೈಟ್ ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ ಇದ್ದಾರೆ ಭಾರತೀಯರು: ಕುವೈಟ್‌ನ ಮೆಹಬುಲಾ ಮತ್ತು ಜಿಲೇಬಲ್ ಅಲ್ ಸುವೈಕ್ ಎಂಬ ಪ್ರದೇಶದಲ್ಲಿ ಶೇ.90ರಷ್ಟುಭಾರತೀಯರೇ ಇದ್ದಾರೆ. ಆದರೆ ಅಲ್ಲಿ ಕೊರೋನಾದಿಂದ ಸಂಪೂರ್ಣ ಸೀಲ್‌ಡೌನ್ ಆಗಿರುವುದರಿಂದ ಅಲ್ಲಿನವರು ನೋಂದಣಿಗೆ ಬಂದಿಲ್ಲ. ಆದ್ದರಿಂದ ಮತ್ತೆ ನೋಂದಣಿಗೆ ಅವಕಾಶ ಕಲ್ಪಿಸುವುದೇ ಎಂಬುದು ಖಚಿತವಾಗಿಲ್ಲ.