: ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ನಗರ ಪಾಲಿಕೆಯಿಂದ ಈ ಬಾರಿಯ ಬಜೆಟ್‌ನಲ್ಲಿ .50 ಲಕ್ಷ ಮೀಸಲಿಡುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.
ಮೈಸೂರು (ಜ. 01): ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ನಗರ ಪಾಲಿಕೆಯಿಂದ ಈ ಬಾರಿಯ ಬಜೆಟ್‌ನಲ್ಲಿ .50 ಲಕ್ಷ ಮೀಸಲಿಡುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿ, ಈಗಾಗಲೇ (Covid) ರೋಗಕ್ಕೆ ಒಳಗಾದವರಿಗೆ ಕಳೆದ ಬಾರಿನಲ್ಲಿ (BUdget) .25 ಲಕ್ಷ ಮೀಸಲಿಡಲಾಗಿತ್ತು. ಈಗ ಪತ್ರಕರ್ತರ ಸಂಘದ ಮನವಿಯಂತೆ ಎಲ್ಲ ಮಾದರಿಯ ರೋಗದ ಚಿಕಿತ್ಸಗೆ ಒಟ್ಟು .50 ಲಕ್ಷ ಮೀಸಲಿಡಲಾಗುವುದು ಎಂದರು.
ನಗರ ಪಾಲಿಕೆಯಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ. ವಾಣಿಜ್ಯ ರಹದಾರಿ ಮತ್ತು ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ಆನ್‌ಲೈನ್ ಮಾಡಲಾಗಿದೆ. ಇದಕ್ಕೆ ಬೇಕಾದ ತಾಂತ್ರಿಕ ಸಹಾಯವನ್ನು ಇನ್‌ಫೋಸಿಸ್ ಮೂಲಕ ಪಡೆದುಕೊಳ್ಳಲಾಗುತ್ತಿದೆ. ಜೊತೆಗೆ ಸುಧಾಮೂರ್ತಿ ಅವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೇನೆ ಎಂದರು.
ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣದ ಜಾಗಕ್ಕೆ ಸಂಬಂಧಿಸಿದಂ ಸ್ಥೀರಕರಣ ಪತ್ರವನ್ನು ನಾಳಿನ ಸಭೆಯಲ್ಲಿ ತೀರ್ಮಾನಿಸಿ ಒಂದೆರಡು ದಿನದಲ್ಲಿ ಸಂಘಕ್ಕೆ ಹಸ್ತಾಂತರಿಸುವುದಾಗಿ ಹೇಳಿದರು.
ಉದ್ಯಮಿ ಪಿ.ವಿ.ಗಿರಿ ಮಾತನಾಡಿ, ಮೈಸೂರು ನಗರದ 22 ಮಂದಿ ಸಚಿವರಾಗಿದ್ದಾರೆ. ಆದರೆ ಮೈಸೂರು ಸರ್ಕಾರಕ್ಕೆ ಸಾಕಷ್ಟುಆದಾಯವನ್ನು ತಂದುಕೊಡುತ್ತಿದ್ದರೂ ಒಬ್ಬರೇ ಒಬ್ಬ ಸಚಿವರನ್ನು ನೀಡಿಲ್ಲ. ನಂಜನಗೂಡು ಮತ್ತು ಮೈಸೂರಿನ ಉದ್ಯಮದಿಂದ ಸಾಕಷ್ಟುಆದಾಯ ಸರ್ಕಾರಕ್ಕೆ ಬರುತ್ತಿದೆ. ನಗರದ ಹಿತದೃಷ್ಟಿಯಿಂದ ಮೈಸೂರಿಗೆ ಏಕೆ ಸಚಿವ ಸ್ಥಾನ ನೀಡಿಲ್ಲ. ಅರ್ಹತೆ ಇರುವವರು ಇಲ್ಲವೇ? ನಮಗೆ ಸ್ವಾಭಿಮಾನ ಇಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಪ್ರವಾಸೋದ್ಯಮ ತಾಣ. ಇಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸರ್ಕಾರ ಮುಂದಾಗಬೇಕು. ಆಗ್ರದ ತಾಜ್‌ಮಹಲ್ ವೀಕ್ಷಣೆಗೆ 360 ದಿನವೂ ಪ್ರವಾಸಿಗರು ಬರುತ್ತಾರೆ. ಅಂತೆಯೇ ಮೈಸೂರಿಗೆ ಎಲ್ಲಾ ದಿನವೂ ಪ್ರವಾಸಿಗರು ಬರುವಂತೆ ಮಾಡಲು ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಉದಾಹರಣೆಗೆ ನಾನು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಮೃಗಾಲಯದ ಎದುರು ಇನ್ನೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಟೀಕಿಸಿದರು.
ನಾನು ಮೈಸೂರಿಗೆ ಬಂದು ಉದ್ಯಮ ಆರಂಭಿಸಿದಾಗ ಟ್ರೇಡ್ ಲೈಸೆನ್ಸ್ ಮುಂತಾದ ಸೌಲಭ್ಯ ಪಡೆಯಲು ಸಾಕಷ್ಟುಶ್ರಮವಹಿಸಿದೆ. ಮೈಸೂರಿನಲ್ಲಿ ಇನ್‌ಫೋಸಿಸ್‌ನಂತ ಸಂಸ್ಥೆ ಇದೆ. ಸರಳತೆಯಿಂದ ಇರುವ ಮೇಯರ್ ಅವರು ಕೂಡಲೇ ಅಲ್ಲಿನ ಸಂಪರ್ಕ ಪಡೆದು ತಾಂತ್ರಿಕ ಸಹಾಯ ಪಡೆದುಕೊಂಡು ಆನ್‌ಲೈನ್ ಸೌಲಭ್ಯ ಕಲ್ಪಿಸಿ ಎಂದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಮಾತನಾಡಿ, ಮೈಸೂರಿನಲ್ಲಿ ಸಾಕಷ್ಟುಮಂದಿ ಉದ್ಯಮಿಗಳಿದ್ದರೂ ಎಲ್ಲರಿಗೂ ಹೃದಯವಂತಿಕೆ ಇರುವುದಿಲ್ಲ. ಆದರೆ ಪಿ.ವಿ. ಗಿರಿಯವರು ನಮ್ಮ ಸಂಘದ ಮೇಲೆ ಅಭಿಮಾನ ಮತ್ತು ಹೃದಯವಂತಿಕೆ ತೋರುತ್ತಿದ್ದಾರೆ. ಕಳೆದ ವರ್ಷ ಅಷ್ಟೇನು ಸವಿ ನೆನಪಿನ ವರ್ಷವಲ್ಲ. ಆದರೂ ಕೆಲವೊಂದು ಒಳ್ಳೆಯ ನೆನಪಿನೊಂದಿಗೆ, ಮುಂದಿನ ವರ್ಷವನ್ನು ಸಂಭ್ರಮಿಸೋಣ ಎಂದರು.
ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ನಿವೇಶನ, ಪತ್ರಕರ್ತರಿಗೆ ಗುಂಪು ಮನೆ ಯೋಜನೆ ಮತ್ತು ಆರೋಗ್ಯ ರಕ್ಷಣೆಗೆ ನಗರ ಪಾಲಿಕೆಯಲ್ಲಿ ಅನುದಾನ ಹೆಚ್ಚಿಸುವಂತೆ ಕೋರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಖಜಾಂಚಿ ನಾಗೇಶ್ ಪಾಣತ್ತಲೆ ಇದ್ದರು. ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ ನಿರೂಪಿಸಿದರು.