ದಸರಾ ಆಯೋಜನೆಗೆ ಮೈಸೂರಿನ ಪ್ರತೀ ತಾಲೂಕಿಗೆ 5 ಲಕ್ಷ : ಸಚಿವ ಸೋಮಣ್ಣ

By Kannadaprabha NewsFirst Published Aug 30, 2019, 12:37 PM IST
Highlights

ಮೈಸೂರಿನಲ್ಲಿ ದಸರಾ ಸಂಭ್ರಮ ಆರಂಭಗೊಂಡಿದೆ. ಇದೀಗ ಜಿಲ್ಲೆಯಲ್ಲಿ ದಸರಾ ಆಯೋಜನೆಗೆ ಪ್ರತಿ ತಾಲೂಕಿಗೆ ತಲಾ 5 ಲಕ್ಷ ರು. ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.  

ಮೈಸೂರು [ಆ.30] :  ತಾಲೂಕು ಮಟ್ಟದಲ್ಲಿ ಗ್ರಾಮೀಣ ದಸರಾ ಆಯೋಜನೆಗೆ ಪ್ರತಿ ತಾಲೂಕಿಗೆ ತಲಾ 5 ಲಕ್ಷ ರು. ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಪಂ ಸದಸ್ಯರು, ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವವನ್ನು ಪಕ್ಷಾತೀತವಾಗಿ ಆಯೋಜಿಸಬೇಕು ಎಂಬ ಉದ್ದೇಶದಿಂದ ಎಲ್ಲರ ಅಭಿಪ್ರಾಯ ಕೇಳುತ್ತಿದ್ದೇನೆ. ಸಾಧ್ಯವಾದಷ್ಟುಮಟ್ಟಿಗೆ ತಮ್ಮ ಸಲಹೆ ಕಾರ್ಯಗತಗೊಳಿಸಲಾಗುವುದು. ತಾವೆಲ್ಲರೂ ಈ ನಾಡಹಬ್ಬದಲ್ಲಿ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಇದಲ್ಲದೆ ಪ್ರತಿ ಜಿಪಂ ಕ್ಷೇತ್ರಕ್ಕೆ 1 ಲಕ್ಷ ರು. ಬಿಡುಗಡೆಗೊಳಿಸಲಾಗುವುದು. ಇದನ್ನು ಬಳಸಿಕೊಂಡು ಪ್ರತಿಯೊಬ್ಬರೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕ್ರೀಡಾಕೂಟಗಳು ಈಗಗಾಲೇ ಗ್ರಾಮೀಣ ಮಟ್ಟದಿಂದಲೇ ನಡೆದು ನಂತರ ರಾಜ್ಯಮಟ್ಟಕ್ಕೆ ಬರುವಂತಾಗಬೇಕು. ಎಲ್ಲ ಕಾರ್ಯಕ್ರಮಗಳನ್ನೂ ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಸದಸ್ಯರ ಸೂಚನೆಯಂತೆ ಕಾಮಗಾರಿಯಲ್ಲಿ ಗುಣಮಟ್ಟಕಾಯ್ದುಕೊಳ್ಳಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಪಂ ಸದಸ್ಯರಾದ ಎಂ.ಪಿ. ನಾಗರಾಜ್‌, ವೆಂಕಟಸ್ವಾಮಿ, ಮಾದೇಗೌಡ, ಮಂಗಳಾ ಸೋಮಶೇಖರ್‌, ಚಂದ್ರಿಕಾ ಸುರೇಶ್‌, ಬೀರಿಹುಂಡಿ ಬಸವಣ್ಣ, ಅಚ್ಚುತಾನಂದ, ಶ್ರೀಕೃಷ್ಣ ಅವರು ಸಲಹೆ ನೀಡಿದರು.

ಸಭೆಯಲ್ಲಿ ಸಂಸದ ಪ್ರತಾಪಸಿಂಹ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಶಾಸಕ ಎಲ್‌. ನಾಗೇಂದ್ರ, ಅನಿಲ್‌ ಚಿಕ್ಕಮಾದು, ಡಾ.ಎಸ್‌. ಯತೀಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಪಂ ಸಿಇಒ ಕೆ. ಜ್ಯೋತಿ, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಎಸ್ಪಿ ರಿಷ್ಯಂತ್‌, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಎಂಡಿಎ ಆಯುಕ್ತ ಕಾಂತರಾಜು, ವಿಪ ಮಾಜಿ ಸದಸ್ಯಗೋ. ಮಧುಸೂದನ್‌ ಇದ್ದರು.

ದಸರಾ ಮಹೋತ್ಸವದ ಆಹ್ವಾನ ಪತ್ರಿಕೆಯು ತರಾತುರಿಯಲ್ಲಿ ಮುದ್ರಣವಾಗಬಾರದು. ಒಂದೆರಡು ದಿನ ಮುಂಚಿತವಾಗಿಯೇ ಮುದ್ರಣವಾಗಬೇಕು. ಜೊತೆಗೆ ಗೋಲ್ಡ್‌ ಕಾರ್ಡ್‌ನಲ್ಲಿ ಎಲ್ಲ ಕಾರ್ಯಕ್ರಮ ವೀಕ್ಷಿಸಬಹುದಾದ ಅವಕಾಶವಿತ್ತು. ಅದನ್ನು ಈಗಲೂ ಮಾಡಬೇಕು.

- ಡಾ.ಎಸ್‌. ಯತೀಂದ್ರ, ಶಾಸಕರು

ಎಚ್‌.ಡಿ. ಕೋಟೆ ತಾಲೂಕಿನಲ್ಲಿ ಸುಮಾರು 25 ಸಾವಿರ ಬುಡಕಟ್ಟು ಜನರು ಇದ್ದಾರೆ. ಅವರು ದಸರಾದಿಂದ ದೂರ ಉಳಿಯುತ್ತಿದ್ದಾರೆ. ಅವರನ್ನು ಕರೆತಂದು ದಸಾರ ತೋರಿಸುವಂತಾಗಬೇಕು. ಈ ನಿಟ್ಟಿನಲ್ಲಿ ತಾವು ಅಗತ್ಯ ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ.

- ಅನಿಲ್‌ ಚಿಕ್ಕಮಾದು, ಶಾಸಕರು

click me!