41 ಟನ್ ಚೆಂಡು ಹೂ ನಗರದಿಂದ ದುಬೈಗೆ!

By Web DeskFirst Published Nov 26, 2019, 9:42 AM IST
Highlights

41,444 ಕೆ.ಜಿ. ಚೆಂಡು ಹೂ ನಗರದಿಂದ ದುಬೈಗೆ!| 2019ರ ಜುಲೈನಿಂದ ಸೆಪ್ಟೆಂಬರ್‌ವರೆಗೆ ವಿವಿಧೆಡೆ 5,620 ಟನ್‌ ತಾಜಾ ಕೊತ್ತಂಬರಿ ಸೊಪ್ಪು ರಫ್ತು 

ಬೆಂಗಳೂರು[ನ.26]: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನ.22 ರಂದು ಶುಕ್ರವಾರ ಬರೋಬ್ಬರಿ 41,444 ಕೆ.ಜಿ. ಚೆಂಡು ಹೂವು ದುಬೈಗೆ ರಫ್ತು ಮಾಡಲಾಗಿದೆ. ಈ ಹೂವು ದುಬೈ ಉತ್ಸವವೊಂದರಲ್ಲಿ ಗಿನ್ನಿಸ್‌ ದಾಖಲೆಯ ಹೂವಿನ ಕಾರ್ಪೆಟ್‌ ತಯಾರಿಗೆ ಬಳಕೆಯಾಗಲಿವೆ.

2019ರ ಜುಲೈನಿಂದ ಸೆಪ್ಟೆಂಬರ್‌ವರೆಗೆ ವಿವಿಧೆಡೆ 5,620 ಟನ್‌ ತಾಜಾ ಕೊತ್ತಂಬರಿ ಸೊಪ್ಪು ರಫ್ತು ಮಾಡುವ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಾಖಲೆ ಬರೆದಿತ್ತು. ಇತ್ತೀಚೆಗೆ ಹೂವಿನ ರಫ್ತಿನಲ್ಲೂ ದಾಖಲೆ ನಿರ್ಮಿಸುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ದುಬೈಗೆ 41,444 ಕೆ.ಜಿ. ಹೂವು ರಫ್ತಾಗಿವೆ. ಈ ಹೂವು ದುಬೈನಲ್ಲಿ ನಡೆಯುತ್ತಿರುವ ‘ಫ್ಲವರ್ಸ್‌ ಆಫ್‌ ಟಾಲರೆನ್ಸ್‌’ (ಸಹನೆಯ ಹೂವುಗಳು) ದುಬೈ ಉತ್ಸವದಲ್ಲಿ ವಿಶ್ವದ ಅತಿ ದೊಡ್ಡ ಹೂವಿನ ಕಾರ್ಪೆಟ್‌ ತಯಾರಿಸಲು ಬಳಕೆಯಾಗಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಸುತ್ತಮುತ್ತಲಿನ ಚಿಕ್ಕಬಳ್ಳಾಪುರ, ದೇವನಹಳ್ಳಿ ಭಾಗದಿಂದ ಸಂಗ್ರಹಿಸಿದ ಚೆಂಡು ಹೂಗಳನ್ನು ಡಿಎಚ್‌ಎಲ್‌ ಗ್ಲೋಬಲ್‌ನ ಬೋಯಿಂಗ್‌ 777 ಫ್ರೀಟರ್‌ ವಿಮಾನದಲ್ಲಿ ದುಬೈಗೆ ರಫ್ತು ಮಾಡಲಾಯಿತು. ಇದಕ್ಕೂ ಮೊದಲು ಹೆಚ್ಚು ಕಾಲ ತಾಜಾತನದಿಂದ ಇರಲು ನೆರವಾಗುವಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂವಿನ ರಫ್ತು ಪ್ರಮಾಣ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ತಾಪಮಾನ ನಿಯಂತ್ರಣ ಹಾಗೂ ತಂಪು ಕೊಠಡಿಗಳ ಶೇಖರಣೆ ವ್ಯವಸ್ಥೆ ಇದೆ. ದೇಶದಲ್ಲೇ ಮೊದಲ ಬಾರಿಗೆ ಕೋಲ್ಡ್‌ ಚೈನ್‌ ಸೌಲಭ್ಯವನ್ನು ವಿಮಾನನಿಲ್ದಾಣದಲ್ಲಿ ಒದಗಿಸಲಾಗಿದೆ ಎಂದು ವಿಮಾನನಿಲ್ದಾಣದ ಪ್ರಕಟಣೆ ತಿಳಿಸಿದೆ.

click me!