ದಲಿತರಿಂದ ಪೂಜೆ: ಸಾಕ್ಷಿ ಹೇಳಿದಕ್ಕೆ 3 ಲಕ್ಷ ದಂಡ..!

By Kannadaprabha NewsFirst Published Dec 6, 2020, 9:36 AM IST
Highlights

ಗ್ರಾಮ ಪಂಚಾಯ್ತಿ ನೌಕರನಿಗೆ 3 ಲಕ್ಷ ರೂ. ದಂಡ| ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಗುಂಬಳ್ಳಿ ನಾಯಕ ಸಮುದಾಯದಿಂದ ಅಮಾನವೀಯ ಘಟನೆ| ದಂಡಕಟ್ಟಿ ಇಲ್ಲ, ನೀತಿ ನಿಯಮ ಪಾಲನೆ ಮಾಡಿ| 

ಯಳಂದೂರು(ಡಿ.06):ದಲಿತರು ದೇವಾಲಯ ಪೂಜೆ ಮಾಡುತ್ತಿದ್ದಾರೆ ಎಂದು ಸಾಕ್ಷಿ ಹೇಳಿದಕ್ಕೆ ಗುಂಬಳ್ಳಿ ಗ್ರಾಮ ಪಂಚಾಯ್ತಿ ನೌಕರರೊಬ್ಬರಿಗೆ 3 ಲಕ್ಷ ದಂಡ ವಿಧಿ​ಸಿರುವ ಘಟನೆ ನಡೆದಿದೆ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯ್ತಿ ಬಿಲ್‌ಕಲೆಕ್ಟರ್‌ ಕೃಷ್ಣನಾಯಕ ಎಂಬುವರಿಗೆ ಅದೇ ಗ್ರಾಮದ ನಾಯಕ ಸಮುದಾಯದ ಮುಖಂಡರು (ಕುಲಸ್ಥರು) ದಂಡ ಹಾಕಿರುವುದು ತಾಲೂಕಿನ ವ್ಯಾಪ್ತಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಯಾಕೆ ದಂಡ?:

ಕಳೆದ ಮೂರು ತಿಂಗಳ ಹಿಂದೆ ಗುಂಬಳ್ಳಿ ಗ್ರಾಮದಲ್ಲಿ ಅರುಣಮಾರಮ್ಮ ದೇವಾಲಯ ವಿಚಾರವಾಗಿ ನಾಯಕ ಸಮುದಾಯದವರಿಗೂ ಸೇರಬೇಕೆಂಬ ವಿಚಾರವಾಗಿ ದಲಿತ- ನಾಯಕ ಸಮುದಾಯಗಳ ನಡುವೆ ಗುಂಪು ಘರ್ಷಣೆ ನಡೆದು ಎರಡು ಸಮುದಾಯದ ಮುಖಂಡರ ಮೇಲೆ ಯಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಖಂಡರನ್ನು ಬಂಧಿ​ಸಿ ನ್ಯಾಯಾಲಯದ ಬಂಧನಕ್ಕೊಳಪಡಿಸಲಾಗಿತ್ತು. ನಂತರ ನ್ಯಾಯಾಲಯದಲ್ಲಿ ಜಾಮೀನು ಪಡೆದು ಎರಡು ಸಮುದಾಯ ಮುಖಂಡರನ್ನು ಬಿಡುಗಡೆಗೊಳಿಸಲಾಗಿತ್ತು.

ಶಾಂತಿ ಸಭೆಯಲ್ಲಿ ಸಾಕ್ಷಿ:

ಎರಡು ಸಮುದಾಯದ ಮುಖಂಡರನ್ನು ಯಳಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಕೊಳ್ಳೇಗಾಲ ಉಪ ವಿಭಾಗಾ​ಧಿಕಾರಿ ಡಾ. ಗಿರೀಶ್‌, ತಹಸೀಲ್ದಾರ್‌ ಸುದರ್ಶನ್‌, ತಾಪಂ ಇಒ ರಾಜು ಸೇರಿದಂತೆ ಪೊಲೀಸ್‌ ಇಲಾಖೆ ಹಿರಿಯ ಅ​ಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆಯನ್ನು ಗುಂಬಳ್ಳಿ ಗ್ರಾಮದ ಎಲ್ಲ ಸಮುದಾಯ ಮುಖಂಡರು ಭಾಗವಹಿಸಿದರಿಂದ ಎಲ್ಲ ಸಮುದಾಯಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಅದರಂತೆ, ಸ್ಥಳೀಯ ಗ್ರಾಪಂನಿಂದ ಮಾಹಿತಿ ಕೇಳಿದ ಸಂದರ್ಭದಲ್ಲಿ ಗುಂಬಳ್ಳಿ ಗ್ರಾಪಂ ಬಿಲ್‌ಕಲೆಕ್ಟರ್‌ ಕೃಷ್ಣನಾಯಕ ಕೂಡಾ ಗ್ರಾಪಂ ಪರವಾಗಿ ಅರುಣ ಮಾರಮ್ಮ ದೇವಾಲಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಪೂಜೆ ಮಾಡುತ್ತಿದ್ದಾರೆ ಎಂದು ಶಾಂತಿ ಸಭೆಯಲ್ಲಿ ಭಾಗವಹಿಸಿದ ಅ​ಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ಬಿಲ್‌ ಕಲೆಕ್ಟರ್‌ ಕೃಷ್ಣನಾಯಕನಿಗೆ ಮುಳುವಾಗಿ ಪರಿಣಮಿಸಿದೆ.

ಕಾಂಗ್ರೆಸ್ ಮುಖಂಡರೋರ್ವರ ಪುತ್ರ ಬಿಜೆಪಿ ಸೇರ್ಪಡೆ : ವಿಜಯೇಂದ್ರ ಆಪರೇಷನ್

ದಂಡಕಟ್ಟಿ ಇಲ್ಲ, ನೀತಿ ನಿಯಮ ಪಾಲನೆ ಮಾಡಿ:

ಈಗಾಗಲೇ ಗುಂಬಳ್ಳಿ ಗ್ರಾಮದ ನಾಯಕ ಸಮುದಾಯ ಕುಲಸ್ಥರು ನ.16 ರಂದು ಶಾಂತಿ ಸಭೆಯಲ್ಲಿ ಅರುಣ ಮಾರಮ್ಮ ದೇವಾಲಯದ ಪೂಜೆ ಮಾಡುತ್ತಿರುವುದು ಪರಿಶಿಷ್ಟ ಜಾತಿ ಅಂತ ಏಕೆ ಸಾಕ್ಷಿ ನುಡಿದೆ. ಈಗಾಗಲೇ ಎರಡು ಸಮುದಾಯಗಳು ನಡುವೆ ಜಗಳ ನಡೆದು ಕೋರ್ಟ್‌, ಕಚೇರಿಗೆ ಅಲೆದಾಡುತ್ತಿರುವಾಗ ನೀನು ಪರಿಶಿಷ್ಟರ ಪರವಾಗಿ ಅವರೇ ಅರುಣ ಮಾರಮ್ಮ ದೇವಾಲಯವನ್ನು ಪೂಜೆ ಮಾಡುತ್ತಿದ್ದಾರೆ ಎಂದು ಹೇಳಬಾರದಿತ್ತು. ಆದರೆ, ಅವರ ಪರವಾಗಿ ಸಾಕ್ಷಿ ಹೇಳಿದ್ದರಿಂದ ಕುಲಸ್ಥರ ಪರವಾಗಿ ನಿನಗೆ 3 ಲಕ್ಷ ದಂಡ ಹಾಕಿದ್ದು, ಒಂದುವಾರದಲ್ಲಿ ಅದರ ಅರ್ಧದಷ್ಟುದಂಡ ಕಟ್ಟಬೇಕು (1.50 ಲಕ್ಷ ರು. ದಂಡ ) ಎಂದು ತಾಕೀತು ಮಾಡಿ ಒಂದುವಾರದಲ್ಲಿ ದಂಡ ಪಾವತಿ ಮಾಡದೆ ಹೋದರೆ ಜನಾಂಗದ ನೀತಿ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರಿಂದ ಇದೀಗ ಬಿಲ್‌ ಕಲೆಕ್ಟರ್‌ ಕೃಷ್ಣನಾಯಕ ಆತಂಕಕ್ಕೊಳಗಾಗಿದ್ದಾರೆ.

ಗುಂಬಳ್ಳಿ ಗ್ರಾಮದ ನಾಯಕ ಸಮುದಾಯದವರು ನಮ್ಮ ಗ್ರಾಪಂ ಬಿಲ್‌ಕಲೆಕ್ಟರ್‌ ಕೃಷ್ಣನಾಯಕ ಅವರಿಗೆ ದಂಡ ಹಾಕಿರುವ ವಿಚಾರ ನಮಗೆ ತಿಳಿದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಗುಂಬಳ್ಳಿ ಗ್ರಾಪಂ ಪಿಡಿಒ ಮಹೇಶ್‌ ತಿಳಿಸಿದ್ದಾರೆ. 

click me!