ವಿಶೇಷ ವರದಿ- ಶಶಿಕಲಾ ನಾಗಪ್ಪ ತಳವಾರ
ಹುಬ್ಬಳ್ಳಿ (ನ.19) : ಇಂದಿನ ದುಬಾರಿ ದುನಿಯಾದಲ್ಲೂ ಇಲ್ಲಿನ ಹೋಟೆಲ್ ಒಂದರಲ್ಲಿ ಕೇವಲ .10 ಕ್ಕೆ ನೀವು ಹೊಟ್ಟೆತುಂಬ ಉಪಾಹಾರ ಸೇವಿಸಬಹುದು. ರುಚಿ ರುಚಿಯಾದ ಮೂರು ಇಡ್ಲಿ, ಒಂದು ವಡಾ ತಿಂದು ತೃಪ್ತಿ ಪಡಬಹುದು!
ಹೌದು, ಇಲ್ಲಿಯ ಕಾರವಾರ ರಸ್ತೆಯ ಇಎಸ್‌ಐ ಆಸ್ಪತ್ರೆ ಸಮೀಪ ಇರುವ ಚಿಕ್ಕ ಕ್ಯಾಂಟೀನ್ (ತಳ್ಳುವ ಗಾಡಿ)ನಲ್ಲೇ ನೀವು ಇಂದಿರಾ ಕ್ಯಾಂಟೀನ್‌ಗಿಂತಲೂ ಕಡಿಮೆ ದರದಲ್ಲಿ ಮುಂಜಾನೆಯ ನಾಷ್ಟಾಮಾಡಬಹುದಾಗಿದೆ. ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ದಿನಗೂಲಿ ನೌಕರರಿಗೆ ಈ ಹೋಟೆಲ್ ಸಂಜೀವಿನಿಯಾಗಿದೆ. ಈ ರಸ್ತೆಯಲ್ಲಿ ಸಂಚರಿಸುವಾಗ ಈ ಹೋಟೆಲ್‌ನಲ್ಲಿ ಇಡ್ಲಿ- ವಡಾದ ಘಮ ನಿಮ್ಮನ್ನೂ ಸೆಳೆಯುತ್ತದೆ.
ಗ್ಯಾಸ್ ಬೆಲೆ ಏರಿಕೆ: ಮತ್ತೆ ಹೋಟೆಲ್ ತಿನಿಸು ದುಬಾರಿ?
ಹಾಪ್ ಚಾ (ಅರ್ಧ ಚಹಾ) ಸಹ ಸಿಗದ ದರಕ್ಕೆ ಹೊಟ್ಟೆತುಂಬ ಉಪಾಹಾರ ನೀಡುತ್ತಿರುವವರು ನಾಗರಾಜ ಬದ್ದಿ ಎಂಬ ಯುವಕ. ಕಳೆದ 12 ವರ್ಷಗಳಿಂದ ಅವರು ಈ ಸೇವೆ ನಡೆಸಿಕೊಂಡು ಬಂದಿದ್ದಾರೆ. ವಿಶೇಷವೆಂದರೆ ಅಂದು ನೀಡುತ್ತಿರುವ ದರಕ್ಕೇ ಈಗಲೂ ಇಡ್ಲಿ- ವಡಾ ನೀಡುತ್ತಿದ್ದಾರೆ.
ಕೇವಲ 3 ಗಂಟೆಯ ಸವೀರ್‍ಸ್
ಇವರ ಹೋಟೆಲ್ ದಿನವಿಡೀ ತೆರೆದಿರುವುದಿಲ್ಲ. ಮುಂಜಾನೆ 7.30 ಕ್ಕೆ ಆರಂಭವಾದರೆ 10.30 ಕ್ಕೆಲ್ಲ ಬಂದ್. ಕೇವಲ 3 ಗಂಟೆಯ ಸವೀರ್‍ಸ್. ಅಷ್ಟರಲ್ಲಿಯೇ ನೂರಾರು ಜನರು ಸರದಿಯಲ್ಲಿ ನಿಂತು ಉಪಾಹಾರ ಸೇವಿಸಿ ತೃಪ್ತಿಪಡುತ್ತಾರೆ.
ನಿಮಗೆ ಇಡ್ಲಿ ಬೇಡ, ಎಂದರೆ .10ಕ್ಕೆ ಮೂರು ವಡಾ ನೀಡುತ್ತಾರೆ. ಜೊತೆಗೆ ರುಚಿ ರುಚಿಯಾದ ಸಾಂಬಾರ್, ಚಟ್ನಿ ಇರುತ್ತದೆ. ಎಷ್ಟೋ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಹಣ ಇಲ್ಲದೇ ತಿಂಡಿ ನೀಡಿ ನಾಗರಾಜ ಔದಾರ್ಯತೆ ಮೆರೆದಿದ್ದಾರೆ. ಇಎಸ್‌ಐ ಆಸ್ಪತ್ರೆಗೆ ಬರುವ ಬಡ ರೋಗಿಗಳು, ಅವರ ಸಂಬಂಧಿಗಳಿಗೆ ಇವರ ಹೋಟೆಲ್ಲೇ ಆಸರೆ. ದಿನವಿಡೀ ತೆರೆದಿಡುವಂತೆಯೂ ಬೇಡಿಕೆ ಇದ್ದರೂ ನಿಭಾಯಿಸಲು ಸಾಧ್ಯವಾಗದೇ ಅವರು ಕೇವಲ 3 ಗಂಟೆಯ ಸೇವೆಗೆ ಮಿತಿ ಹಾಕಿಕೊಂಡಿದ್ದಾರೆ.
ಕೇವಲ 7ನೇ ತರಗತಿ ಮುಗಿಸಿರುವ ನಾಗರಾಜ್‌ಗೆ ಹೋಟೆಲ್ ತೆರೆದು ಲಾಭ ಗಳಿಸಬೇಕು, ಶ್ರೀಮಂತನಾಗಬೇಕೆಂಬ ಹಂಬಲವಿಲ್ಲ. ತಾನು ಚಿಕ್ಕವನಿದ್ದಾಗ ಬಡತನದಲ್ಲಿ ಎದುರಿಸಿದ ಸಮಸ್ಯೆ, ತುತ್ತು ಅನ್ನಕ್ಕಾಗಿ ಮಾಡಿದ ಪರದಾಟ ಇನ್ನಿತರ ಬಡವರಿಗೆ ಬರಬಾರದು ಎಂದು ಚಿಂತಿಸಿ ಈ ಉದ್ಯೋಗ ಆರಂಭಿಸಿದ್ದಾರೆ. ಇವರು ಚಿಕ್ಕವರಿದ್ದಾಗಲೇ ಹಸಿವು- ಬಡತನದ ಸಂಕಟ ಅನುಭವಿಸಿದ್ದಾರೆ. ಇದರಿಂದ ಪಾರಾಗಲು ತಂಗಿಯ ಗಂಡನ ಜೊತೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಯೇ ವಿಧ ವಿಧದ ತಿಂಡಿ ತಯಾರಿಸುವುದನ್ನು ಕಲಿತ ನಾಗರಾಜ್ ಬಳಿಕ ತಾನೇ ಸ್ವಂತ ಹೋಟೆಲ್ ಆರಂಭಿಸಿ ಹಸಿದವರಿಗೆ ಕಡಿಮೆ ದರಕ್ಕೆ ಉಪಾಹಾರ ಪೂರೈಸುವ ಬಗ್ಗೆ ಯೋಚಿಸಿದ್ದಾರೆ. ಆ ಬಳಿಕ ತಿರುಗಿ ನೋಡಲಿಲ್ಲ. ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು, ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದೆ. ಬೆಲೆ ಏರಿಕೆಯ ಈ ಯುಗದಲ್ಲೂ ತಿಂಡಿಯ ಬೆಲೆ ಹೆಚ್ಚಿಸದೇ ಗುಣಮಟ್ಟದ ಶುಚಿ- ರುಚಿಯಾದ ಇಡ್ಲಿ- ವಡಾ ಪೂರೈಸುತ್ತಿದ್ದಾರೆ.
55 ಕೋಟಿ ರೂ ಲಾಟರಿ ಗೆದ್ದ ದುಬೈನಲ್ಲಿರುವ ಭಾರತೀಯ ಹೋಟೆಲ್ ಉದ್ಯೋಗಿ!
12 ವರ್ಷದಿಂದಲೂ ಬೆಲೆ ಏರಿಸಿಲ್ಲ. ಈಗಲೂ ಏರಿಸುವ ಉದ್ದೇಶವಿಲ್ಲ. ಸಿದ್ಧಾರೂಢರ ಆಶೀರ್ವಾದದಿಂದ ಇದರಲ್ಲೇ ಸಂತ್ರಪ್ತಿ ಪಡುತ್ತಿದ್ದೇನೆ. ಲಾಭಕ್ಕಿಂತ ಗ್ರಾಹಕರ ಸಂತ್ರಪ್ತಿಯೇ ನನಗೆ ತೃಪ್ತಿ
ನಾಗರಾಜ ಬದ್ದಿ, ಕ್ಯಾಂಟೀನ್ ಮಾಲಿಕ
ಪ್ರತಿದಿನ ನಾನು ಇವರ ಹತ್ತಿರ ಬರುತ್ತೇನೆ, ಇವರು ಮಾಡುವ ಇಡ್ಲಿ ನನಗೆ ತುಂಬಾ ಇಷ್ಟವಾಗಿದೆ ಮತ್ತು ಇಡ್ಲಿಯ ಜತೆಗೆ ತಮ್ಮ ಪ್ರೀತಿಯನ್ನು ನಮಗೆ ನೀಡುತ್ತಾರೆ.
ಆಲ್ತಾಫ್ ಪೆಚಾರಿ ಆಟೋ ಚಾಲಕ
ದುಡ್ಡು ಇಲ್ಲದೇ ಬರುವ ಎಷ್ಟೋ ನಿರಾಶ್ರಿತರಿಗೆ ನಮ್ಮ ಕಣ್ಣು ಮುಂದೆಯೇ ಉಚಿತವಾಗಿ ಇಡ್ಲಿ ವಡಾವನ್ನು ನೀಡಿದ್ದಾರೆ. ನಾನು ಪ್ರತಿದಿನ ಇವರ ಹತ್ತಿರ ಬಂದು ಬೆಳೆಗಿನ ಟಿಫಿನ್ ಮಾಡುತ್ತೇನೆ.
ಶ್ರೀಕಾಂತ ಆಟೋಚಾಲಕ