Vachanananda Swamiji child abuse case: ವಚನ ಶ್ರೀ ವಿರುದ್ಧ 3 ಮಕ್ಕಳಿಂದ ಮಕ್ಕಳ ಕಲ್ಯಾಣ ಸಮಿತಿಗೆ ದೂರು

Kannadaprabha News   | Kannada Prabha
Published : Apr 18, 2026, 04:49 AM IST
Vachanananda Swamiji child abuse case

ಸಾರಾಂಶ

ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ವಿರುದ್ಧ ಮೂವರು ಮಕ್ಕಳು ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಕೌನ್ಸೆಲಿಂಗ್ ಹಾಗೂ ಮಠದ ಸ್ಥಳ ಪರಿಶೀಲನೆ ನಡೆಸಿ, ಸ್ವಾಮೀಜಿಯ ಹೇಳಿಕೆ ದಾಖಲಿಸಿಕೊಂಡಿದೆ.

ದೂರುದಾರ ಮಕ್ಕಳ ಕೌನ್ಸೆಲಿಂಗ್, ಸ್ಥಳ ಪರಿಶೀಲನೆ

ದಾವಣಗೆರೆ (ಏ.18): ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳು ದೂರು ದಾಖಲಿಸಿ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ದೂರು ನೀಡಿದ 3 ಮಕ್ಕಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದ್ದಾರೆ. ಇನ್ನೂ ಮೂರು ಬಾರಿ ಮಕ್ಕಳ ಕೌನ್ಸೆಲಿಂಗ್ ನಡೆಸುವ ಸಾಧ್ಯತೆ ಇದ್ದು, ಈ ವೇಳೆ ಮಕ್ಕಳು ದೃಢವಾಗಿ ಹೇಳಿಕೆ ನೀಡಿದರೆ ವಚನಾನಂದ ಶ್ರೀಗೆ ಸಂಕಷ್ಟ ಹೆಚ್ಚಾಗಲಿದೆ ಎನ್ನಲಾಗಿದೆ. ಮಠದಲ್ಲಿದ್ದ ಮಕ್ಕಳ ಮೇಲೆ ಸ್ವಾಮೀಜಿ ಹಲ್ಲೆಗೈದು, ದೌರ್ಜನ್ಯ ನಡೆಸುತ್ತಾರೆಂದು ಮಕ್ಕಳು ಹಾಗೂ ಪೋಷಕರು ಆರೋಪಿಸಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಲ್ಲದೇ, ಕೆಲ ದೃಶ್ಯಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಯುವ ಘಟಕ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದರು.

ಮಕ್ಕಳ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ನೇತೃತ್ವದ ತಂಡ ಹರಿಹರ ತಾಲೂಕಿನ ಹನಗವಾಡಿ ಸಮೀಪದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

, ದೂರುದಾರ ಮೂವರೂ ಮಕ್ಕಳು ಮಠದಲ್ಲಿ ಮಲಗುವ ಜಾಗ, ಓದುತ್ತಿದ್ದ ಸ್ಥಳ, ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ನಂತರ ಸಮಿತಿಯ ಸದಸ್ಯರು, ವಚನಾನಂದ ಸ್ವಾಮೀಜಿಯನ್ನು ದೂರಿನಲ್ಲಿರುವ ಆರೋಪದ ಕುರಿತು ಸುಮಾರು ಹೊತ್ತು ವಿಚಾರಣೆ ಮಾಡಿದ್ದಾರೆ.

ವರದಿ ಬಳಿಕ ಪೊಲೀಸ್ ವಿಚಾರಣೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿದೆ ಮೂವರು ಮಕ್ಕಳು ಲಿಖಿತ ದೂರು ನೀಡಿದ್ದರು. ಮಕ್ಕಳ ಕೌನ್ಸೆಲಿಂಗ್ ನಡೆಯುತ್ತಿದ್ದು, ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿದ್ದೇವೆ. ಕೌನ್ಸೆಲಿಂಗ್ ವರದಿ ಬಂದ ನಂತರ ಪೊಲೀಸರಿಗೆ ಅದನ್ನು ನೀಡುತ್ತೇವೆ. ನಂತರ ಪೊಲೀಸರು ವಿಚಾರಣೆ ಕೈಗೊಳ್ಳುತ್ತಾರೆ ಎಂದರು.

ಹರಿಹರದ ಪಂಚಮಸಾಲಿ ಪೀಠದ ಬಾಲಕರ ಹಾಸ್ಟೆಲ್‌ನಲ್ಲಿ ರಿಜಿಸ್ಟರ್ ಇಲ್ಲದಿರುವುದು ಗೊತ್ತಾಗಿದ್ದು, ಈ ಬಗ್ಗೆ ವಚನಾನಂದ ಸ್ವಾಮೀಜಿಗೆ ಕೇಳಿದರೆ, ಅದನ್ನೆಲ್ಲಾ ಧರ್ಮದರ್ಶಿಗಳು ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ ಎಂದು ವಿವರಿಸಿದರು.

ಸೂಕ್ತ ಸಮಯದಲ್ಲಿ ಉತ್ತರಿಸುವೆ: ಶ್ರೀಗಳು

ಮೂವರು ಮಕ್ಕಳು ನೀಡಿದ ದೂರಿನ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಇದು ಕಾನೂನು ವ್ಯಾಪ್ತಿಗೆ ಬರಲಿದ್ದು, ಸೂಕ್ಷ್ಮ ವಿಷಯವಾಗಿದೆ. ಈ ಬಗ್ಗೆ ನಾವು ಹೇಳಿಕೆ ಕೊಡುವುದಕ್ಕೆ ಆಗುವುದಿಲ್ಲ. ಈ ಕುರಿತು ಸೂಕ್ತ ಸಮಯ, ಸಂದರ್ಭದಲ್ಲಿ ಉತ್ತರ ನೀಡುತ್ತೇವೆ. ನಾವು ದೇವರಲ್ಲ, ದೇವರ ದಾರಿಯಲ್ಲಿ ನಡೆಯುವ ಸಾಧಕರು ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಮಠ ಖಾಲಿ ಮಾಡಲು ಗಡುವು ನೀಡಿದ ಕುರಿತು ಪ್ರತಿಕ್ರಿಯಿಸಿ, ಬಾರದು ಬಪ್ಪದು, ಬಪ್ಪದು ತಪ್ಪದು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಉಚ್ಚಾಟಿತ ಜಯಮೃತ್ಯುಂಜಯ ಸ್ವಾಮೀಜಿಯನ್ನು ಹರಿಹರ ಪೀಠಕ್ಕೆ ತರುವ ಬಗ್ಗೆ ಪ್ರತಿಕ್ರಿಯಿಸಿ, ನಾವೆಲ್ಲಾ ಒಂದೇ ಸ್ವಾಮೀಜಿಗಳು. ನಮ್ಮಲ್ಲಿ ಭೇದಭಾವವಿಲ್ಲ. ನಮ್ಮದು 8 ವರ್ಷ, ಅವರದ್ದು 18 ವರ್ಷ ಸೇವೆ. ಅವರಿಗೆ ಅವರದ್ದೇ ಆದ ವ್ಯಕ್ತಿತ್ವವಿದೆ ಎಂದು ಹೇಳಿದರು.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ರಾಜ್ಯದಲ್ಲಿ ಕೋಮುಗಲಭೆ ನಡೆದೇ ಇಲ್ಲ, ಕರ್ನಾಟಕ ಪೊಲೀಸ್ ದೇಶದಲ್ಲೇ ನಂ.1 : ಪರಂ
ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಭಯ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ