
ಬೆಂಗಳೂರು(ಏ.05): ಚುನಾವಣಾ ಅಕ್ರಮದ ಮೇಲೆ ನಿಗಾವಹಿಸಿರುವ ಚುನಾವಣಾ ಆಯೋಗ, ಬೆಂಗಳೂರಿನಲ್ಲಿ 3.36 ಕೋಟಿ ರು. ನಗದು ಮತ್ತು 1.47 ಕೋಟಿ ರು. ಮೌಲ್ಯದ 8.6 ಕೆಜಿ ಚಿನ್ನವನ್ನು ಜಪ್ತಿ ಮಾಡಿದೆ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 3.36 ಕೋಟಿ ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 6.27 ಕೋಟಿ ರು. ಮೌಲ್ಯದ 47,030 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ ಎಂದು ಆಯೋಗ ಪತ್ರಿಕಾ ಪ್ರಕಟಣೆ ತಿಳಿಸಿದೆ. ಆಯೋಗವು ಈವರೆಗೆ ಒಟ್ಟು 66.99 ಕೋಟಿ ರು. ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಂತಾಗಿದೆ.
ವಿಚಕ್ಷಣ ದಳ, ಫ್ಲೈಯಿಂಗ್ ಸ್ಕಾಡ್, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಈವರೆಗೆ ಒಟ್ಟು 17.36 ಕೋಟಿ ರು. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 22.35 ಕೋಟಿ ರು. ಮೌಲ್ಯದ 3.27 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. 8.50 ಕೋಟಿ ರು. ಮೌಲ್ಯದ 22.691 ಕೆಜಿ ಚಿನ್ನ, 65.19 ಲಕ್ಷ ರು. ಮೌಲ್ಯದ 93.563 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. 11.69 ಕೋಟಿ ರು. ಮೌಲ್ಯದ ಉಚಿತ ಕೊಡುಗೆ/ಉಡುಗೊರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
2841 ಕಂಪನಿಗಳ ಮೇಲೆ ಐಟಿ ದಾಳಿ: 4 ವರ್ಷದಲ್ಲಿ 4800 ಕೋಟಿ ರೂ ಜಪ್ತಿ
37,462 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಏಳು ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಸಿಆರ್‌ಪಿಎಫ್ ಕಾಯ್ದೆಯಡಿ 1,715 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 2,486 ಮಂದಿಯಿಂದ ಮುಚ್ಚಳಿಕೆ ಪತ್ರ ಪಡೆದುಕೊಳ್ಳಲಾಗಿದೆ. 3960 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ.