ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅತಿ ಹೆಚ್ಚು 204 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ, ರಾಜ್ಯದಲ್ಲಿಯೇ ಅತೀ ಹೆಚ್ಚು 768 ಆಗಿದೆ.
ಉಡುಪಿ(ಜೂ.06): ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅತಿ ಹೆಚ್ಚು 204 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ, ರಾಜ್ಯದಲ್ಲಿಯೇ ಅತೀ ಹೆಚ್ಚು 768 ಆಗಿದೆ.
ಈ 204 ಸೋಂಕಿತರಲ್ಲಿ ಮುಂಬೈಯಿಂದ ಬಂದವರು 203 ಆಗಿದ್ದರೆ, ಒಬ್ಬರು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವರಲ್ಲಿ 157 ಮಂದಿ ಪುರುಷರು, 40 ಮದಿ ಮಹಿಳೆಯರು ಹಾಗೂ 7 ಮಂದಿ ಮಕ್ಕಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಚಂಡಮಾರುತ; ಒಂದೇ ದಿನ 515 ಕೇಸ್!
ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಸುಮಾರು 8,500ಕ್ಕೂ ಅಧಿಕ ಮಂದಿ ಬಂದಿದ್ದರು. ಅವರೆಲ್ಲರ ಕೊವೀಡ್ ಪರೀಕ್ಷೆಯ ವರದಿ ಬಂದಿದೆ. ಜಿಲ್ಲೆಯ ಒಟ್ಟು 768 ಸೋಂಕಿತರಲ್ಲಿ ಮುಂಬೈಯಿಂದ ಬಂದ ಸೋಂಕಿತರ ಸಂಖ್ಯೆಯೇ 636. ಉಳಿದಂತೆ 10 ಮಂದಿ ಸೋಂಕಿತ ಪೊಲೀಸರು ಸ್ಥಳಿಯರಾಗಿದ್ದರೆ, ಉಳಿದವರು ಬೇರೆ ರಾಜ್ಯ-ದೇಶಗಳಿಂದ ಬಂದವರಾಗಿದ್ದಾರೆ.
ಮುಂಬೈ ಸೋಂಕು ಮುಗಿಯಿತೇ?
ಸದ್ಯಕ್ಕೆ ಜಿಲ್ಲೆಯಲ್ಲಿ ಮುಂಬೈಯಿಂದ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು, ಇನ್ನು ಕೆಲವು ದಿನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಆದರೆ ಇನ್ನೂ ಜಿಲ್ಲೆಯ ಸಾವಿರಾರು ಮಂದಿ ಮುಂಬೈಯಿಂದ ಊರಿಗೆ ಬರಲು ಸಿದ್ಧರಾಗಿದ್ದಾರೆ. ಅವರು ಊರಿಗೆ ಬಂದರೆ ಮತ್ತೆ ಜಿಲ್ಲೆಗೆ ಮುಂಬೈ ಸೋಂಕು ತಪ್ಪಿದ್ದಲ್ಲ.
ಉಡುಪಿ ಜಿಲ್ಲೆಯದ್ದೇ ಸಿಂಹಪಾಲು
ಶುಕ್ರವಾರ ರಾಜ್ಯದಲ್ಲಿ ಒಟ್ಟು 515 ಮಂದಿ ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ ಶೇ.39 ಮಂದಿ ಉಡುಪಿ ಜಿಲ್ಲೆಯವರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 4,835 ಮಂದಿ ಸೋಂಕಿತರು ಪತ್ತೆಯಾಗಿದ್ದು, ಶೇ.15 ಮಂದಿ ಜಿಲ್ಲೆಯವರಾಗಿದ್ದಾರೆ.
ಉಡುಪಿ-ಕಲಬುರ್ಗಿ ಪೈಪೋಟಿ
ಮೇ 2ರಂದು ಉಡುಪಿ ಜಿಲ್ಲೆ 410 ಸೋಂಕಿತರೊಂದಿಗೆ ಪ್ರಥಮ ಸ್ಥಾನದಲ್ಲಿತ್ತು. ಕಲಬುರಗಿ ಜಿಲ್ಲೆ 405 ಸೋಂಕಿತರೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು. ಮೇ 3ರಂದು ಕಲಬುರಗಿ 510 ಸೋಂಕಿತರೊಂದಿಗೆ ಪ್ರಥಮ ಮತ್ತು ಉಡುಪಿ 471 ಸೋಂಕಿತರೊಂದಿಗೆ ದ್ವಿತೀಯ ಸ್ಥಾನಿಯಾಯಿತು. ಮೇ 4ರಂದು ಉಡುಪಿ ಜಿಲ್ಲೆ 564 ಸೋಂಕಿತರೊಂದಿಗೆ ಪ್ರಥಮ, ಕಲಬುರಗಿ 510 ಸೋಂಕಿತರೊಂದಿಗೆ ದ್ವಿತೀಯ ಮತ್ತು ಮೇ 5ರಂದು ಉಡುಪಿ ಜಿಲ್ಲೆ 768 ಸೋಂಕಿತರೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ 552 ಸೋಂಕಿತರೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಬೈಂದೂರಿನಲ್ಲಿ ಹೆಚ್ಚು ಸೋಂಕಿತರು: ಡಿಎಚ್‌ಒ
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾದ 204 ಮಂದಿ ಸೋಂಕಿತರಲ್ಲಿ ಬೈಂದೂರು ತಾಲೂಕಿನಲ್ಲೇ ಅತೀ ಹೆಚ್ಚು 161 ರೋಗಿಗಳು ಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ. ಬೈಂದೂರಿನ 102 ಸೋಂಕಿತರನ್ನು ಈಗಾಗಾಲೇ ಕೊಲ್ಲೂರಿನ ತಾತ್ಕಾಲಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ.
50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!
ಉಳಿದಂತೆ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನಲ್ಲಿ ತಲಾ 1, ಕಾಪು ತಾಲೂಕು ಮತ್ತು ಹೆಬ್ರಿ ತಾಲೂಕಿನಲ್ಲಿ ತಲಾ 2, ಕಾರ್ಕಳ ತಾಲೂಕಿನಲ್ಲಿ 4, ಕುಂದಾಪುರ ತಾಲೂಕಿನಲ್ಲಿ 34 ಸೋಂಕಿತರು ಪತ್ತೆಯಾಗಿದ್ದಾರೆ ಎಂದವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರು ವಾಸಿಸುತ್ತಿದ್ದ ಸುಮಾರು 137 ಮನೆಗಳ ಪರಿಸರವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ 1200 ಬೆಡ್‌ಗಳ ವ್ಯವಸ್ಥೆ ಇದೆ ಎಂದರು.