ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕಾಗಿ 2020-21ನೇ ಆಯವ್ಯಯದಲ್ಲಿ ಪ್ರತ್ಯೇಕವಾಗಿ 20 ಸಾವಿರ ಕೋಟಿ ರು. ಅನುದಾನ| ಈ ಸಲದ ಬಜೆಟ್‌ನಲ್ಲಿ ಹಣ ನೀಡಲು ಸಿಎಂಗೆ ಮನವಿ ಮಾಡುವೆ: ಕಾರಜೋಳ|
ಬೆಂಗಳೂರು(ಜ.30): ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕಾಗಿ 2020-21ನೇ ಆಯವ್ಯಯದಲ್ಲಿ ಪ್ರತ್ಯೇಕವಾಗಿ 20 ಸಾವಿರ ಕೋಟಿ ರು. ಅನುದಾನವನ್ನು ಆದ್ಯತೆ ಮೇರೆಗೆ ಮೀಸಲಿಡುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಶ್ವಾಸನೆ ನೀಡಿದ್ದಾರೆ.
ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಶಾಸಕರೊಂದಿಗೆ ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ಮೀಸಲಿಟ್ಟರೆ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ. ಹಂಚಿಕೆಯಾದ ನೀರಿನ ಪ್ರಮಾಣ 130 ಟಿಎಂಸಿ ನೀರನ್ನು ಬಳಸಲು ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಗಾಗಿ ಎಫ್‌ಆರ್‌ಎಲ್ 519.60 ಮೀ.ನಿಂದ ಎಫ್‌ಆರ್‌ಎಲ್ 524.256 ಮೀ. ಎತ್ತಿಸಿದರೆ 9 ಯೋಜನೆಗಳ ಅಡಿಯಲ್ಲಿ 7 ಜಿಲ್ಲೆಗಳನ್ನೊಳಪಟ್ಟು 5.30 ಲಕ್ಷ ಹೆಕ್ಟೇರ್ ಕ್ಷೇತ್ರಕೆಕ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯ ಚಾಲ್ತಿಯಲ್ಲಿದೆ. ಪರಿಷ್ಕೃತ ಯೋಜನಾ ವರದಿಯಂತೆ 51,148 ಕೊಟಿ ರು.ಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬಿಟಿಡಿಎಗೆ 30,143 ಕೋಟಿ ರು. ಸೇರ್ಪಡೆಗೊಂಡಿದೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಳುಗಡೆಯಾಗಲಿರುವ 20 ಗ್ರಾಮಗಳು ಮತ್ತು ಬಾಗಲಕೋಟೆ ಪಟ್ಟಣದ 10 ವಾರ್ಡ್‌ಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕಿದೆ. ಕಾಲುವೆಗಳ ನಿರ್ಮಾಣ, ಪುನರ್ವಸತಿ ಮತ್ತು ಮುಳುಗಡೆಯಾಗಲಿರುವ ಜಮೀನು ಸೇರಿದಂತೆ ಒಟ್ಟು 1,33,867 ಜಮೀನು ಅವಶ್ಯಕವಾಗಿದೆ. ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು 100 ಅಧಿಕಾರಿ/ಸಿಬಬ್ದಿ ವರ್ಗದವರು ಅವಶ್ಯಕತೆ ಇದೆ. ಅಧಿಕಾರಿಗಳ ಜತೆ ಹೆಚ್ಚುವರಿಯಾಗಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಮತ್ತು ಪುನರ್ವಸತಿ ಅಧಿಕಾರಿಗಳನ್ನು ನಿಯೋಜಿಸಬೇಕಿದೆ ಎಂದರು
ಭೂ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತುರ್ತು ವಿಲೇವಾರಿಗಾಗಿ ಲೋಕ ಅದಾಲತ್‌ನಲ್ಲಿ ವಿಲೇವಾರಿ ಮಾಡುವಂತೆ ಕ್ರಮ ಕೈಗೊಳ್ಳಬೇಕಿದೆ. ಯೋಜನೆ ಅನುಷ್ಠಾನ ಈಗಾಗಲೇ ವಿಳಂಬವಾಗಿದೆ. ಇದೇ ರೀತಿ ಮುಂದುವರೆದರೆ ಇನ್ನೂ ಹೆಚ್ಚು ಆರ್ಥಿಕ ಹೊರೆಯಾಗಲಿದೆ. ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಹಾಗೂ ಆರ್ಥಿಕ ಹೊರೆಯನ್ನು ಇದನ್ನು ತಪ್ಪಿಸಲು ಸೂಕ್ತ ಅನುದಾನ ಮತ್ತು ಅಧಿಕಾರಿ ವರ್ಗದವರನ್ನು ಆದ್ಯತೆಯ ಮೇರೆಗೆ ನಿಯೋಜಸಬೇಕೆಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿ ಮಠ, ಮುರುಗೇಶ್ ನಿರಾಣಿ, ಸಿದ್ದು ಸವದಿ, ಎ.ಎಸ್.ಪಾಟೀಲ್ ನಡಹಳ್ಳಿ, ಎಚ್.ಆರ್.ನಿರಾಣಿ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.