ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿದರು| ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದ ಹಿನ್ನೀರಿನಿಂದ ಬಾಧಿತವಾಗಲಿರುವ ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಬರುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು|
ವಿಜಯಪುರ(ಅ.5): ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶನಿವಾರ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದ ಹಿನ್ನೀರಿನಿಂದ ಬಾಧಿತವಾಗಲಿರುವ ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಬರುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಲಮಟ್ಟಿ ಅಣೆಕಟ್ಟು 524.256 ಮೀಟರ್‌ಗೆ ಎತ್ತರಿಸಿದಾಗ ಬಾಧಿತ 20 ಗ್ರಾಮಗಳು ಸ್ಥಳಾಂತರವಾಗಬೇಕು. 1.40 ಲಕ್ಷ ಹೆಕ್ಟೇರ್ ಭೂಮಿಗೆ ಪರಿಹಾರ ನೀಡಬೇಕಾಗುತ್ತದೆ. ಈ ಎಲ್ಲ ಉದ್ದೇಶಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು. ಬರುವ ಮೂರ್ನಾಲ್ಕು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ನ್ಯಾ.ಬ್ರಿಜೇಶ ಕುಮಾರ ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮಗೆ ಹಂಚಿಕೆಯಾಗಿರುವ 123 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬಾಧಿತ ಗ್ರಾಮಗಳ ಪುನರ್ವಸತಿಗಾಗಿ 20 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು. ಇದಕ್ಕೆ ಕೇಂದ್ರದಿಂದ ಅಗತ್ಯ ನೆರವು ಪಡೆಯಲಾಗುವುದು ಎಂದರು.
ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ವಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ನಾವು ಒಟ್ಟಾಗಿ ಸಮಗ್ರ ಚರ್ಚೆ ನಡೆಸಬೇಕಿದೆ. ಅಣೆಕಟ್ಟೆ ಎತ್ತರ ಹೆಚ್ಚಳ ಸಮಸ್ಯೆ ಪರಿಹರಿಸಲು ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿಕೊಳ್ಳುವುದಾಗಿಯೂ ತಿಳಿಸಿದರು.
ಹೆಚ್ಚಿನ ಪರಿಹಾರಕ್ಕೆ ಮೊರೆ:
ನೆರೆ ಪರಿಹಾರದ ಭಾಗವಾಗಿ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ 1200 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ಪರಿಹಾರ ಕೇಳಲಾಗುವುದು. ಆದರೆ ಈ ವಿಷಯವನ್ನಿಟ್ಟುಕೊಂಡು ಪ್ರತಿಪಕ್ಷಗಳು ಇಲ್ಲಸಲ್ಲದ ಟೀಕೆ, ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಮಾಡುವ ಕಾರ್ಯದಲ್ಲಿ ತೊಡಗಿವೆ ಎಂದು ದೂರಿದರು.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಪ್ರವಾಹದಿಂದಾಗಿ ಶೇ.90 ರಷ್ಟು ಬೆಳೆ ಹಾನಿಯಾಗಿದೆ. ನಾವು ಕಳುಹಿಸಿದ ವರದಿಯಲ್ಲಿ ವ್ಯತ್ಯಾಸವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದನ್ನು ಸರಿಪಡಿಸಿ ಹೆಚ್ಚಿನ ಪರಿಹಾರ ತರಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರವಾಹ ಪರಿಸ್ಥಿತಿ ಪರಿಹಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಚರ್ಚೆ ಮಾಡಿದ್ದೇನೆ. ಸಂತ್ರಸ್ತರಿಗಾಗಿ ಮೂರು ಹಂತದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 2500 ಕೋಟಿ ಅಗತ್ಯದ ಹಣ ಬಿಡುಗಡೆ ಮಾಡಿದೆ ಎಂದ ಅವರು, ನೆರೆ ಹಾವಳಿಗೆ ಸಂಬಂಧಿಸಿದಂತೆ 34 ಸಾವಿರ ಕೋಟಿಯಷ್ಟುಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಹಾನಿ ಪ್ರಮಾಣ ಇನ್ನೂ ನಿಖರವಾಗಿ ದೊರೆಯಬೇಕಿದೆ. ರಾಜ್ಯದಲ್ಲಿ ಹೆಚ್ಚು ಹಾನಿಯಾಗಿದೆ. ಹೀಗಾಗಿ ಹೆಚ್ಚಿನ ಅನುದಾನ ಕೇಳಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನಮಗೆ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ. ಇದರಲ್ಲಿ ಎಳ್ಳಷ್ಟೂಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಯತ್ನಾಳಗೆ ಬುದ್ಧಿ ಹೇಳಿರುವೆ:
ನೆರೆ ಸಂತ್ರಸ್ತರ ಪರ ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ನೋಟಿಸ್ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಈಗಾಗಲೇ ಯತ್ನಾಳ ಅವರೊಂದಿಗೆ ಈ ವಿಷಯವಾಗಿ ಮಾತನಾಡಿದ್ದೇನೆ. ಇನ್ನು ಮುಂದಾದರೂ ಪಕ್ಷಕ್ಕೆ ಇರಸು ಮುರುಸು ಆಗುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಬುದ್ಧಿವಾದ ಹೇಳಿದ್ದೇನೆ. ಪಕ್ಷದ ನೋಟಿಸ್‌ಗೆ ಯತ್ನಾಳ ಸಮರ್ಥ ಉತ್ತರ ನೀಡಲಿದ್ದಾರೆ ಎಂದರು.
ವಿಜಯಪುರ ಜಿಲ್ಲಾ ವಿಭಜನೆ ಪ್ರಸ್ತಾಪವಿಲ್ಲ:
ವಿಜಯಪುರ ಜಿಲ್ಲೆಯನ್ನು ವಿಭಜಿಸುವ ಯಾವುದೇ ರೀತಿಯ ಪ್ರಸ್ತಾವ ಸರ್ಕಾರದ ಮುಂದಿಲ್ಲ. ವಿಜಯಪುರವನ್ನು ವಿಭಜಿಸಿ ಎರಡು ಜಿಲ್ಲೆಯಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಯಾವುದೇ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದರು.