ರಾಮನಗರದಲ್ಲಿ ನಡೆದಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ರಾಮನಗರ (ಅ.17): ಮಾಗಡಿ ತಾಲೂಕು ಬೆಟ್ಟಹಳ್ಳಿಯಲ್ಲಿ ಅನ್ಯಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದ 19 ವರ್ಷದ ಹೇಮಲತಾ ಎಂಬ ಯುವತಿಯ ಕೊಲೆ ತೀವ್ರ ಕುತೂಹಲ ಕೆರಳಿಸಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಾಮೂಹಿಕ ಅತ್ಯಾಚಾರ ಕೊಲೆ ಎಂದೆಲ್ಲಾ ವದಂತಿಗಳನ್ನು ಹಬ್ಬಿಸಲಾಗಿತ್ತು. ಆದರೆ, ಕುಟುಂಬಸ್ಥರೇ ಯುವತಿಯ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆತ್ತ ಮಗಳನ್ನೇ ಕೊಲೆ ಮಾಡಿದ ಆರೋಪದ ಮೇಲೆ ತಂದೆ ಕೃಷ್ಣಪ್ಪ (48), ದೊಡ್ಡಪ್ಪನ ಮಗ ಚೇತನ್ (21) ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆಗೆ ಯುವತಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದೆ ಕಾರಣ ಎನ್ನಲಾಗಿದೆ.
undefined
ಆದರೆ, ಯುವತಿಯನ್ನು ತಂದೆಯೇ ಕೊಲೆ ಮಾಡಿ, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದನು. ಅಲ್ಲದೆ, ಕೊಲೆಯಾಗಿರುವ ಜಾಗದ ಬಗ್ಗೆಯೂ ಸುಳಿವು ನೀಡುವ ಮೂಲಕ ಯುವತಿಯ ಪ್ರಿಯತಮನ ಮೇಲೆ ಕೊಲೆ ಆರೋಪ ಹೊರಿಸಲು ಸಂಚು ರೂಪಿಸಿದ್ದನು.
ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ ...
ಏನಿದು ಪ್ರಕರಣ: ಕಳೆದ ಅ. 9ರಂದು ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಪುತ್ರಿ ಹೇಮಲತಾ ಕಾಣೆಯಾಗಿರುವ ಬಗ್ಗೆ ತಂದೆ ಕೃಷ್ಣಪ್ಪ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಅದರಲ್ಲಿ ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಪುನೀತ್ ಎಂಬುವನ ಮೇಲೆ ಅನುಮಾನವಿದೆ ಎಂದು ಉಲ್ಲೇಖಿಸಿದ್ದನು. ಅದರಂತೆ ಪೊಲೀಸರು ಪುನೀತ್‌ನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳ ಪಡಿಸಿ ಕಳುಹಿಸಿದ್ದರು. ಮರುದಿನವೇ ಮತ್ತೊಮ್ಮೆ ಪೊಲೀಸ್ ಠಾಣೆಗೆ ಆಗಮಿಸಿದ ಕೃಷ್ಣಪ್ಪ, ಗ್ರಾಮದ ಹೊಲದಲ್ಲಿ ರಕ್ತಸಿಕ್ತ ಕಲೆಯಿರುವ ಮಗಳ ಚಪ್ಪಲಿ ಕಂಡಿರುವ ಬಗ್ಗೆ ನಿಂಗಮ್ಮ ಎಂಬುವರು ನೀಡಿದ ಮಾಹಿತಿಯನ್ನು ತಿಳಿಸಿದ್ದಾನೆ.
ಸಂಬಂಧಿಕರ ಜಮೀನಿನಲ್ಲಿ ಅಡಿಕೆ ಸಸಿ ನೆಡಲು ತೆಗಿದಿದ್ದ ಗುಂಡಿಯನ ಮಣ್ಣು ಮುಚ್ಚಿರುವಂತೆ ಕಂಡು ಬಂದಿದ್ದು, ಅಲ್ಲಿ ಮಗಳನ್ನು ಯಾರೋ ಮಣ್ಣು ಮಾಡಿರುವ ಅನುಮಾನವಿದೆ ಎಂದು ಕೃಷ್ಣಪ್ಪ ತಾನು ಪಾರಾಗಲು ಪೊಲೀಸರನ್ನು ನಂಬಿಸಲು ಮತ್ತೊಂದು ದೂರು ನೀಡಿದ್ದನು.
ಉಪವಿಭಾಗಾಧಿಕಾರಿಗಳ ಸಮಕ್ಷಮದಲ್ಲಿ ಗುಂಡಿಯಿಂದ ಶವವನ್ನು ಹೊರಕ್ಕೆ ತೆಗೆದಾಗ ಅದು ಹೇಮಲತಾ ಗುರುತು ಪತ್ತೆಯಾಯಿತು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ತನಿಖೆ ಪ್ರಗತಿಯಲ್ಲಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಥ್ರಸ್ ಹೋಲುವ ಘಟನೆ ಬೆಟ್ಟಹಳ್ಳಿಯೂ ನಡೆದಿದೆ ಎಂದೆಲ್ಲ ವದಂತಿಗಳನ್ನು ಹರಿದಾಡುತ್ತಿತ್ತು. ಅಲ್ಲದೆ, ಸ್ವತಃ ಯುವತಿ ಪೋಷಕರೇ ತಮಗೆ ನ್ಯಾಯ ಸಿಗುತ್ತಿಲ್ಲವೆಂದು ಮಾಧ್ಯಮದವರ ಮೊರೆ ಹೋಗಿದ್ದರು. ಕೆಲವಡೆ ಪ್ರತಿಭಟನೆಗಳು ನಡೆದಿದ್ದವು. ಇದೆಲ್ಲವೂ ಪ್ರಕರಣದ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನವಾಗಿ ನಡೆದಿತ್ತು.
ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ ...
ಮಗಳು ಕಾಣೆಯಾಗಿರುವ ಬಗ್ಗೆ ತಂದೆ ಕೃಷ್ಣಪ್ಪ ತಡವಾಗಿ ದೂರು ಕೊಟ್ಟಿದ್ದನು. ಅಲ್ಲದೆ ಶವ ಸಂಸ್ಕಾರದ ವೇಳೆ ಕೃಷ್ಣಪ್ಪ ಮತ್ತು ಕುಟುಂಬ ಕಣ್ಣೀರು ಇಡಲೇ ಇಲ್ಲ. ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಪೊಲೀಸರು, ಕುಟುಂಬದ ಪಾತ್ರದ ಬಗ್ಗೆಯೇ ತನಿಖೆ ಆರಂಭಿಸಿದರು.
ಈ ಕೊಲೆ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಶಂಕೆಯಿದೆ. ಈವರೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ತನಿಖಾ ಕ್ರಮಗಳನ್ನು ಅನುಸರಿಸಿ ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಮತ್ತಷ್ಟುಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಊರಿಗೆ ಊರಿಗೆ ಗೊತ್ತಿತ್ತು:
ಕೊಲೆಯನ್ನು ಕುಟುಂಬಸ್ಥರೇ ಮಾಡಿದ್ದಾರೆ ಎಂಬುದು ಬೆಟ್ಟಹಳ್ಳಿಯ ಪ್ರತಿಯೊಬ್ಬರು ತಿಳಿದಿತ್ತು. ಆದರೆ, ಯಾರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇಡೀ ಪ್ರಕರಣದ ದಿಕ್ಕನ್ನೇ ತಪ್ಪಿಸುವ ಪ್ರಯತ್ನ ಕೊಲೆಯ ಹಿಂದೆ ನಡೆದಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.
ನೆಟ್ಟಿಗರ ಮೇಲೂ ಕೇಸ್:
ಯುವತಿ ಹೇಮಲತಾ ಕೊಲೆಯನ್ನು ಸಾಮೂಹಿಕ ಅತ್ಯಚಾರ ಕೊಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೇ, ಪ್ರಚೋದನಾಕಾರಿ ಸಂದೇಶಗಳನ್ನು ವೈರಲ್ ಮಾಡಿ ಕರ್ನಾಟಕ ಪೊಲೀಸ್ ಇಲಾಖೆಯನ್ನು ಅಣಕಿಸುವ ಕೆಲಸ ಮಾಡಿದ್ದ ನೆಟ್ಟಿಗರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಬೆಟ್ಟಹಳ್ಳಿಯಲ್ಲಿ ಯುವತಿಯ ಕೊಲೆಯನ್ನು ಯಾವ ರೀತಿ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು ಎಷ್ಟುಮಂದಿ ಭಾಗಿಯಾಗಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರೆದಿದೆ.
-ಸೀಮಂತ್ ಕುಮಾರ್ ಸಿಂಗ್, ಐಜಿ, ಕೇಂದ್ರ ವಲಯ.
ಯುವತಿಯ ಕೊಲೆ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಮೂಹಿಕ ಅತ್ಯಾಚಾರ, ಹಾಥ್ರಸ್‌ನಂತೆ ಕಗ್ಗೊಲೆ ಎಂದೆಲ್ಲ ರೋಚಕವಾಗಿ ಬರೆದು ಸಾರ್ವಜನಿಕರನ್ನು ಪ್ರಚೋದಿಸಲು ಯತ್ನಿಸಿದ ಆರೋಪದ ಮೇಲೆ ಕೆಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು.
-ಎಸ್. ಗಿರೀಶ್, ಎಸ್‌ಪಿ