ಶಿವಮೊಗ್ಗ ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಡಿಸೆಂಬರ್ 12ರ ಶನಿವಾರದವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ.
ಶಿವಮೊಗ್ಗ (ಡಿ.09): ಬಜರಂಗದಳ ಕಾರ್ಯಕರ್ತರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದ ಬಳಿಕ ನಗರದಲ್ಲಿ ಜಾರಿಗೊಳಿಸಲಾಗಿದ್ದ 144ನೇ ವಿಧಿಯನ್ವಯ ನಿಷೇಧಾಜ್ಞೆಯನ್ನು ಡಿಸೆಂಬರ್ 12ರ ಶನಿವಾರದವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆಯೇ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ.
ನಗರದಲ್ಲಿ ಜಾರಿಗೊಳಿಸಿದ್ದ ನಿಷೇದಾಜ್ಞೆ ಮಂಗಳವಾರವೂ ಮುಂದುವರೆದಿದ್ದು, ನಗರದಾದ್ಯಂತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಸ್ಥಗಿತಗೊಳಿಸಿದ್ದರು. ಕೆಲವು ಅಂಗಡಿಗಳು ಅರ್ಧ ತೆರೆದ ಸ್ಥಿತಿಯಲ್ಲಿ ವ್ಯಾಪಾರ ನಡೆಸಿದರೆ, ಅಲ್ಲಲ್ಲಿ ಪೊಲೀಸರು ಅವುಗಳನ್ನು ಮುಚ್ಚಿಸುತ್ತಾ ಬಂದರು.
ಹಿಂದೂ ಕಾರ್ಯಕರ್ತ ಮೇಲೆ ಹಲ್ಲೆ : 62 ಮಂದಿ ವಶಕ್ಕೆ ...
ಆದರೆ, ನಗರದೊಳಗೆ ಸಂಚಾರಕ್ಕೆ ಯಾವುದೇ ಅಡೆತಡೆ ಇರದಿದ್ದರೂ, ಭದ್ರಾವತಿ ಭಾಗದಿಂದ ಬರುವವರಿಗೆ ನೇರ ಸಂಚಾರಕ್ಕೆ ಅವಕಾಶ ಮಾಡಿಕೊಡದೆ ಬೈಪಾಸ್ ಮೂಲಕ ಕಳುಹಿಸಲಾಗುತ್ತಿತ್ತು. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿದ್ದು, ಒಂದು ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಉಳಿದಂತೆ ನಗರದಾದ್ಯಂತ ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.