
ಬೆಂಗಳೂರು(ಮಾ.22): ಹೆಬ್ಬಾಳ ಮೇಲ್ಸೇತುವೆ(Hebbal Flyover) ಸಮೀಪ ಬಿಬಿಎಂಪಿ(BBMP) ಕಸದ ಲಾರಿಯಿಂದ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ವಾರ್ಷಿಕ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ(Student) ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಹೆಬ್ಬಾಳದ ಕುಂತಿ ಗ್ರಾಮ ‘ಸಿ’ ಬ್ಲಾಕ್ ನಿವಾಸಿ ಅಕ್ಷಯಾ(14) ಮೃತ(death) ದುರ್ದೈವಿ. ಗಂಭೀರವಾಗಿ ಗಾಯಗೊಂಡಿರುವ ಬೈಕ್ ಚಾಲಕ ವಿಕಾಸ್(42) ಹಾಗೂ ಪಾದಚಾರಿ ಸೌಮ್ಯ(28) ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕಸದ ಲಾರಿ ಚಾಲಕ, ಚಿಕ್ಕಬಳ್ಳಾಪುರ ಮೂಲದ ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ(Arrest).
Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್ ಸಜೀವ ದಹನ
ಜೀವಕ್ಕೆ ಮಾರಕವಾದ ಅಂಡರ್‌ಪಾಸ್:
ಬಿಎಂಟಿಸಿ ಹೆಣ್ಣೂ ಡಿಪೋದ ಚಾಲಕ ನರಸಿಂಹಮೂರ್ತಿ, ತಮ್ಮ ಪತ್ನಿ ಗೀತಾ ಹಾಗೂ ಮಕ್ಕಳ ಜತೆ ಹೆಬ್ಬಾಳದಲ್ಲಿ ನೆಲೆಸಿದ್ದಾರೆ. ಈ ದಂಪತಿಯ ಮೂವರ ಮಕ್ಕಳ ಪೈಕಿ ಪುತ್ರಿ ಅಕ್ಷಯಾ, ಸದಾಶಿವನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಪ್ರತಿದಿನ ಶಾಲೆಗೆ ಬಸ್ಸಿನಲ್ಲೇ ಆಕೆ ಹೋಗಿ ಬರುತ್ತಿದ್ದಳು. ಸೋಮವಾರ ಮಧ್ಯಾಹ್ನ ಪರೀಕ್ಷೆ ಮುಗಿಸಿಕೊಂಡು ತನ್ನ ಮೂವರು ಸಹಪಾಠಿಗಳ ಜತೆ ಆಕೆ ಮನೆಗೆ ತೆರಳುತ್ತಿದ್ದಳು. ಆಗ ಹೆಬ್ಬಾಳ ಪೊಲೀಸ್ ಠಾಣೆ ಮುಂದಿನ ಅಂಡರ್ ಪಾಸ್ ಸಮೀಪ ರಸ್ತೆ ದಾಟುವಾಗ ಆ ಬಾಲಕಿ ಪಾಲಿಗೆ ಬಿಬಿಎಂಪಿ ಕಸದ ಲಾರಿಯು ಯಮದೂತನಾಗಿ ಪರಿಣಮಿಸಿದೆ.
ಭಾನುವಾರ ಮಳೆ ಸುರಿದ ಪರಿಣಾಮ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದು, ಸಾರ್ವಜನಿಕರು ರಸ್ತೆ ದಾಟಿಯೇ ಸಾಗುತ್ತಿದ್ದಾರೆ. ಅದೇ ರೀತಿ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಶಾಲೆ(School) ಮುಗಿಸಿ ಮನೆಗೆ ಹೊರಟ್ಟಿದ್ದ ಅಕ್ಷಯಾ ಹಾಗೂ ಆಕೆ ಸ್ನೇಹಿತೆಯರು, ಅಂಡರ್‌ಪಾಸ್ ಸಮೀಪ ರಸ್ತೆ ದಾಟುತ್ತಿದ್ದರು. ಆ ಸಮಯಕ್ಕೆ ಮೇಖ್ರಿ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಿಬಿಎಂಪಿ ಕಸದ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ ಮಂಜುನಾಥ್, ರಸ್ತೆ ದಾಟುತ್ತಿದ್ದ ಮಕ್ಕಳನ್ನು ಕಂಡು ವಿಚಲಿತನಾಗಿದ್ದಾನೆ. ಆ ಮಕ್ಕಳ ರಕ್ಷಿಸುವ ಭರದಲ್ಲಿ ಎಡಕ್ಕೆ ಲಾರಿಯನ್ನು ತಿರುಗಿಸಿದ್ದಾನೆ. ಈ ಹಂತದಲ್ಲಿ ಲಾರಿಗೆ ವಿದ್ಯಾರ್ಥಿನಿ ಬೆನ್ನಿಗೆ ಹಾಕಿಕೊಂಡಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿಕೊಂಡು ಒಂದು ಸುತ್ತು ತಿರುಗಿ ಅಕ್ಷಯಾ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಆಕೆ ಮೇಲೆ ಲಾರಿಯ ಮುಂದಿನ ಚಕ್ರ ಹರಿದಿದೆ. ವಿದ್ಯಾರ್ಥಿನಿಗೆ ಗುದ್ದಿದ ಬಳಿಕ ಮತ್ತೊಬ್ಬ ಪಾದಚಾರಿ(ಸೌಮ್ಯಾ) ಹಾಗೂ ಬೈಕ್ ಮತ್ತು ಕಾರಿಗೆ ಲಾರಿ ಡಿಕ್ಕಿಯಾಗಿ ನಿಂತಿದೆ. ಇದರಿಂದ ಬೈಕ್ ಚಾಲಕ ವಿಕಾಸ್ ಅವರಿಗೆ ಸಹ ಪೆಟ್ಟಾಗಿದೆ. ಕೂಡಲೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ(Hospital) ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಉತ್ತರ ವಿಭಾಗ (ಸಂಚಾರ) ಡಿಸಿಪಿ ಸವಿತಾ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಮೃತ ವಿದ್ಯಾರ್ಥಿನಿ ತಾಯಿ ಗೀತಾ ದೂರು ಆಧರಿಸಿ ಕಸದ ಲಾರಿ ಚಾಲಕನನ್ನು ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ
ತಮ್ಮ ಮಗಳು ಅಪಘಾತಕ್ಕೀಡಾದ(Accident) ಸುದ್ದಿ ತಿಳಿದು ಅಕ್ಷಯಾ ಪೋಷಕರು ಆಘಾತಕ್ಕೊಳಗಾಗಿದ್ದರು. ಆಸ್ಪತ್ರೆಯ ಬಳಿ ಆಕೆಯ ತಂದೆ ನರಸಿಂಹಮೂರ್ತಿ ಹಾಗೂ ತಾಯಿ ಗೀತಾ ಸೇರಿದಂತೆ ಕುಟುಂಬ ಸದಸ್ಯರ ಆಕ್ರಂದನ ಮನ ಕಲಕುವಂತೆ ಇತೆ.
Vijayanagara: ಕೂಡ್ಲಿಗಿ ಬಳಿ ಭೀಕರ ಅಪಘಾತ: ರಾಮೇಶ್ವರಕ್ಕೆ ತೆರಳುತ್ತಿದ್ದ ಐವರು ಭಕ್ತರ ದುರ್ಮರಣ
ಭಾನುವಾರ ಸುರಿದು ಮಳೆಯಿಂದ ಅಂಡರ್ ಪಾಸ್‌ನಲ್ಲಿ ನೀರು ನಿಂತಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಪೊಲೀಸರು ಗಮನಕ್ಕೆ ತಂದಿದ್ದರು. ಆದರೆ ಬೆಳಗ್ಗೆ ನೀರು ಹೊರ ತೆಗೆಯುವ ಪ್ರಯತ್ನ ಮಾಡಿಲ್ಲ. ಘಟನೆ ಬಳಿಕ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಬಂದಿದ್ದಾರೆ. ಘಟನೆಗೆ ಚಾಲಕನ ಅಜಾಗೂರಕ ಹಾಗೂ ಅತಿವೇಗ ಚಾಲನೆಯೇ ಕಾರಣ ಅಂತ ಉತ್ತರ ವಿಭಾಗ (ಸಂಚಾರ) ಡಿಸಿಪಿ ಸವಿತಾ ತಿಳಿಸಿದ್ದಾರೆ.
ನನ್ನ ಮಗಳು ಪೈಲಟ್ ಆಗುವ ಕನಸು ಕಂಡಿದ್ದಳು. ತುಂಬಾ ಚೆನ್ನಾಗಿ ಓದುತ್ತಿದ್ದಳು. ನಮಗೆ ತಿಳುವಳಿಕೆ ಹೇಳುತ್ತಿದ್ದಳು. ಅವರು ನನಗೆ ಅದೃಷ್ಟವಂತೆ. ಪ್ರತಿನಿತ್ಯ ಕೆಲಸಕ್ಕೆ ಹೋಗುವಾಗ ಆಕೆಯ ಮುಖ ನೋಡಿ ಹೋಗುತ್ತಿದ್ದೆ. ಮಗಳ ಅಗಲಿಕೆ ಆಘಾತ ತಂದಿದೆ ಅಂತ ಮೃತಳ ತಂದೆ ನರಸಿಂಹಮೂರ್ತಿ ಹೇಳಿದ್ದಾರೆ.