ಒಂದೆಡೆ ಸತತ ಬರಗಾಲ, ಅಂತರ್ಜಲ ಮಟ್ಟ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯ ಕಷ್ಟಪಟ್ಟು ಬೆಳೆದ ಕೃಷಿ, ತೋಟಗಾರಿಕೆ ಬೆಳೆಗಳು, ಉಪ ಕಸುಬುದಾರಿಕೆ ಎಂದು ಸಾಕುತ್ತಿರುವ ಎಮ್ಮೆ, ಕುರಿ, ಕೋಳಿಗಳು ಕಾಡಿನಿಂದ ಬರುತ್ತಿರುವ ವನ್ಯಜೀವಿಗಳ ಬಾಯಿಗೆ ಆಹಾರವಾಗುತ್ತಿದೆ.
ಎಂ. ಅಫ್ರೋಜ್ ಖಾನ್
ರಾಮನಗರ(ಜೂ.22): ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ 14 ಮಂದಿ ಬಲಿಯಾಗಿ, 67 ಮಂದಿ ಗಾಯಗೊಂಡಿದ್ದಾರೆ. ಬೆಳೆನಾಶ ಪ್ರಕರಣಗಳು ದಾಖಲಾಗಿರುವ ಜತೆಗೆ ನೂರಾರು ಸಾಕು ಪ್ರಾಣಿಗಳು ಬಲಿಯಾಗಿವೆ. ಇದಕ್ಕಾಗಿ 11 ಕೋಟಿ 45 ಲಕ್ಷ ರುಪಾಯಿ ಪರಿಹಾರ ಧನ ವಿತರಿಸಲಾಗಿದೆ.
ಮೃತರ ಪೈಕಿ ಹೆಚ್ಚಿನವರು ಆನೆ ದಾಳಿಗೆ ಮತ್ತು ಕೆಲವರು ಇತರೆ ಪ್ರಾಣಿಗಳ ದಾಳಿಗೆ ತುತ್ತಾಗಿದ್ದಾರೆ. ಗಾಯಾಳುಗಳ ಪೈಕಿ ಆನೆ ದಾಳಿಗೆ ಒಳಗಾದವರು ಇದ್ದಾರೆ. ಸಾವನ್ನಪ್ಪಿರುವ 3277 ಸಾಕು ಪ್ರಾಣಿಗಳಲ್ಲಿ ಹೆಚ್ಚಿನವು ಚಿರತೆ ದಾಳಿಗೆ ಗುರಿಯಾಗಿವೆ.
ವಿದ್ಯುತ್ ಬಿಲ್ ದರ ಹೆಚ್ಚಳ: ಡಿಕೆಶಿ ಸ್ವ ಕ್ಷೇತ್ರದಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ
ಜಿಲ್ಲೆಯಲ್ಲಿ ಶೇ 27ರಷ್ಟು ಅರಣ್ಯ ಪ್ರದೇಶವಿದ್ದು, ಪ್ರತಿನಿತ್ಯ ವನ್ಯಜೀವಿಗಳ ಹಾವಳಿ ತಪ್ಪಿಲ್ಲ. ಜಿಲ್ಲೆಯಾದ್ಯಂತ ಹಬ್ಬಿರುವ ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶಗಳಲ್ಲಿ ಸಾಧು ಪ್ರಾಣಿಗಳ ಜತೆಗೆ ಕಾಡಾನೆ, ಚಿರತೆ, ಕರಡಿಗಳು ಕೂಡ ವಾಸಿಸುತ್ತಿವೆ.
ಒಂದೆಡೆ ಸತತ ಬರಗಾಲ, ಅಂತರ್ಜಲ ಮಟ್ಟ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯ ಕಷ್ಟಪಟ್ಟು ಬೆಳೆದ ಕೃಷಿ, ತೋಟಗಾರಿಕೆ ಬೆಳೆಗಳು, ಉಪ ಕಸುಬುದಾರಿಕೆ ಎಂದು ಸಾಕುತ್ತಿರುವ ಎಮ್ಮೆ, ಕುರಿ, ಕೋಳಿಗಳು ಕಾಡಿನಿಂದ ಬರುತ್ತಿರುವ ವನ್ಯಜೀವಿಗಳ ಬಾಯಿಗೆ ಆಹಾರವಾಗುತ್ತಿದೆ.
ಜಿಲ್ಲೆಯ ಕಾಡಂಚಿನಲ್ಲಿರುವ ಪ್ರದೇಶಗಳಲ್ಲಿ ಪ್ರಮುಖವಾಗಿ ಕಾಡಾನೆಗಳು, ಕಾಡುಹಂದಿ, ತೋಳ ಹಾಗೂ ಚಿರತೆಗಳು ಮಾನವನ ಜೀವಕ್ಕೆ, ರೈತನ ಬೆಳೆಗೆ ಸಂಚಕಾರ ತರುತ್ತಿರುವ ಕಾಡುಪ್ರಾಣಿಗಳು. ಒಂದು ವರ್ಷದಿಂದೀಚೆಗೆ ಕಾಡಾನೆಗಳು ಎಷ್ಟುಕಾಡಿವೆಯೆಂದರೆ, ಕನಕಪುರ,ಸಾತನೂರು ಮತ್ತು ಮಾಗಡಿ ಭಾಗದ ರೈತರು ನಿದ್ದೆಯಲ್ಲೂ ಆನೆಗಳನ್ನು ನೆನೆಪಿಸಿಕೊಂಡು ಬೆಚ್ಚಿ ಬೀಳುತ್ತಿದ್ದಾರೆ.
ಈಗಲೂ ಕೂಡ ಕಾಡಾನೆಗಳ ಹಿಂಡು ಪ್ರವಾಸಿಗರಂತೆ ಕಾಡಂಚಿನ ಗ್ರಾಮಗಳಲ್ಲಿ ಸುತ್ತಾಡುತ್ತಿವೆ. ಬೆಳೆಗಳು ಎಲ್ಲಿ ಕಾಡಾನೆಗಳ ಪಾಲಾಗಿ ಕೈ ತಪ್ಪುತ್ತದೆಯೋ ಎಂಬ ಆತಂಕದ ಜತೆಯಲ್ಲಿ ಜೀವದ ಭಯವೂ ರೈತರನ್ನು ಕಾಡುತ್ತಿದೆ. ಈ ಜಿಲ್ಲೆಯ ಅರಣ್ಯವನ್ನು ಬನ್ನೇರುಘಟ್ಟ, ಕಾವೇರಿ ಕಣಿವೆ ಮತ್ತು ರಾಮನಗರ ಹೀಗೆ ಮೂರು ಉಪವಿಭಾಗಗಳನ್ನಾಗಿ ವಿಗಂಡಿಸಲಾಗಿದೆ. ಈ ಕಾಡುಗಳ ಮೂಲಕ ಪ್ರವೇಶಿಸುವ ಆನೆಗಳು ನಡೆದಾಡುವ ಹಾದಿಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆ ನಷ್ಟವಾದರೆ ಸ್ವಯಂಕೃತ ಅಪರಾಧಕ್ಕೆ ಕೆಲ ಜೀವಗಳು ಬಲಿಯಾಗಿವೆ. ಕೆಲವರು ಅದೃಷ್ಟದ ಬಲದಿಂದ ಜೀವ ಉಳಿಸಿಕೊಂಡಿದ್ದಾರೆ.
ಕನಕಪುರ, ರಾಮನಗರ, ಸಾತನೂರು, ಚನ್ನಪಟ್ಟಣ ಹಾಗೂ ಮಾಗಡಿ ವಲಯದಲ್ಲಿ ಆನೆ ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದೆ. ಈ ಭಾಗಗಳಲ್ಲಿ ವನ್ಯಜೀವಿನಗಳ ಉಪಟಳ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಅರಣ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2018-19 ರಿಂದ 2023-24ರ ಜೂನ್ 20ರ ಅಂತ್ಯವರೆಗೆ ಮಾನವ ಮತ್ತು ಜಾನುವಾರುಗಳ ಹತ್ಯೆ ಆಗಿರುವ ಅಂಕಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.
ಯಾವಾಗ ಎಷ್ಟು ಪ್ರಕರಣಗಳು?
ಜಿಲ್ಲೆಯ ವಿವಿಧೆಡೆ ಕಾಡು ಪ್ರಾಣಿಗಳಿಂದ 14 ಮಂದಿ ಬಲಿಯಾಗಿದ್ದು, 67 ಮಂದಿ ಗಾಯಗೊಂಡಿದ್ದಾರೆ. ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ. ನೂರಾರು ಜಾನುವಾರುಗಳನ್ನು ತಿಂದು ಹಾಕಿವೆ. ಹೀಗೆ ವನ್ಯಜೀವಿಗಳ ಹಾವಳಿಯಂದ ಸಂತ್ರಸ್ತರಾದವರಿಗೆ 11,45,77,961 ರು. ಪರಿಹಾರ ನೀಡಲಾಗಿದೆ. 2018-19ರಿಂದ 2023-24ರ ಜೂನ್ 20ರವರೆಗೆ ಕಾಡಾನೆಗಳು 13,830 ಪ್ರಕರಣಗಳಲ್ಲಿ ಬೆಳೆಹಾನಿ ಮಾಡಿದ್ದು, ರೈತರಿಗೆ 7,00,05,749 ರು. ಪರಿಹಾರ ನೀಡಲಾಗಿದೆ. ಅತಿ ಹೆಚ್ಚು ಎಂದರೆ 2022 -23ನೇ ಸಾಲಿನಲ್ಲಿ 4925 ಬೆಳೆಹಾನಿ ಪ್ರಕರಣಗಳು ದಾಖಲಾಗಿದ್ದು, 2,64,20,780 ರು. ಪರಿಹಾರ ವಿತರಣೆ ಮಾಡಲಾಗಿದೆ.
ವನ್ಯಜೀವಿಗಳ ದಾಳಿಗೆ 14 ಮಂದಿ ತುತ್ತಾಗಿದ್ದಾರೆ. 2018-19, 2022-23ರಲ್ಲಿ ತಲಾ ಒಬ್ಬರು, 2020-21ರಲ್ಲಿ ಇಬ್ಬರು, 2019-20, 2021-22ರಲ್ಲಿ ತಲಾ ಮೂರು ಹಾಗೂ 2023-24ರ ಜೂನ್ 20ರವರೆಗೆ ನಾಲ್ಕು ಮಂದಿ ಕಾಡು ಪ್ರಾಣಿಗಳಿಗೆ ಆಹಾರವಾಗಿದ್ದಾರೆ. ಇವರ ಕುಟುಂಬಗಳಿಗೆ 1.18 ಕೋಟಿ ಪರಿಹಾರ ನೀಡಲಾಗಿದೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆಯಲ್ಲೂ ರೈತರು ಕಾಡುಪ್ರಾಣಿಗಳಿಂದ ಗಾಯಗೊಂಡಿದ್ದಾರೆ. 2020-21ನೇ ಸಾಲಿನಲ್ಲಿ 25 ಹಾಗೂ 2021-22, 2022-23ನೇ ಸಾಲಿನಲ್ಲಿ ತಲಾ 17 ಮಂದಿ ಸೇರಿ 5 ವರ್ಷಗಳಲ್ಲಿ ಒಟ್ಟು 67 ಮಂದಿ ಗಾಯಗೊಂಡಿದ್ದು, ಇದರಲ್ಲಿ ಕೆಲವರು ಅಂಗವಿಕಲರಾಗಿದ್ದಾರೆ.
ಕಾಡುಪ್ರಾಣಿಗಳು ಜನ, ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಜತೆಗೆ ಬೆಳೆ ಹಾನಿಯೂ ಹೆಚ್ಚುತ್ತಿರುವುದು ಕೃಷಿಕರನ್ನು ಕಂಗೆಡಿಸಿದೆ. ಕಾಡು ಪ್ರಾಣಿಗಳ ಉಪಟಳದಿಂದ ಸೋತು ಹೋಗಿದ್ದು, ಅರಣ್ಯ ಇಲಾಖೆ ರೈತರ ಬೆಳೆ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಗಿರುವ ನಷ್ಟಕ್ಕೆ ಪರಿಹಾರ ಕೊಟ್ಟು ಅವರ ಬದುಕಿಗೆ ಆಸರೆ ನೀಡಬೇಕಿದೆ ಅಂತ ರೈತಸಂಘದ ಮುಖಂಡ ಪುಟ್ಟಸ್ವಾಮಿ ತಿಳಿಸಿದ್ದಾರೆ.
ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ: ಡಿ.ಕೆ.ಸುರೇಶ್ ವೈರಾಗ್ಯದ ಮಾತು..!
ವನ್ಯಜೀವಿಗಳು ನೀರು ಮತ್ತು ಮೇವು ಹುಡುಕಿಕೊಂಡು ಕಾಡಿನಿಂದ ಬರುತ್ತಿದ್ದು, ಇವುಗಳನ್ನು ತಡೆಯಲು ಕಂದಕ , ಸೋಲಾರ್ ಬೇಲಿ , ರೇಲ್ವೆ ಬ್ಯಾರಿಕೇಟ್ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಅಂತ ರಾಮನಗರ ಡಿಎಫ್‌ಒ ದೇವರಾಜ್ ತಿಳಿಸಿದ್ದಾರೆ.
ಐದು ವರ್ಷಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾದ ಹಾನಿ - ಪರಿಹಾರ ವಿತರಣೆ ವಿವರ: ಪ್ರಕರಣಗಳು ಪರಿಹಾರ
ಮಾನವ ಸಾವು 14 1,18,00,000
ಮಾನವ ಗಾಯ 67 50,46,572
ಬೆಳೆಹಾನಿ 13,830 7,00,05,749
ಆಸ್ತಿ ಹಾನಿ 770 41,78,080
ಜಾನುವಾರು ಸಾವು 3277 2,35,23,560
ಒಟ್ಟು 17,956 11,45,77,961