ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ 10 ಸಾವಿರ ಖಾಕಿ ಭದ್ರತೆ

By Kannadaprabha NewsFirst Published Dec 30, 2022, 7:00 AM IST
Highlights

ಒಟ್ಟು 1.70 ಲಕ್ಷ ಸಿಸಿ ಕ್ಯಾಮೆರಾ ಕಣ್ಗಾವಲು, 20 ಡ್ರೋನ್‌ಗಳಿಂದ ವೀಕ್ಷಣೆ, ವಾಚ್‌ ಟವರ್‌ ನಿರ್ಮಿಸಿ ಬೈನಾಕ್ಯೂಲರ್‌ ಮೂಲಕ ನಿಗಾ, ರಾತ್ರಿ 1ರವರೆಗೆ ಮಾತ್ರ ಸಂಭ್ರಮಕ್ಕೆ ಅವಕಾಶ, ಮಹಿಳೆಯರ ರಕ್ಷಣೆಗೆ ಆದ್ಯತೆ: ರೆಡ್ಡಿ

ಬೆಂಗಳೂರು(ಡಿ.30):  ಹೊಸ ವರ್ಷ ಸ್ವಾಗತಿಸುವ ಸಂಭ್ರಮದ ಹೊತ್ತಿನಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯಲ್ಲಿ 10 ಸಾವಿರ ಪೊಲೀಸರು ಹಾಗೂ 1.70 ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನ ಬಿಗಿ ಭದ್ರತಾ ಕೋಟೆ ನಿರ್ಮಾಣವಾಗಲಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು, ಎರಡು ವರ್ಷಗಳ ನಂತರ ಜನತೆ ಹೊಸ ವರ್ಷಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಿದ್ದು, ಈ ವೇಳೆ ಮಹಿಳೆ ಮತ್ತು ಮಕ್ಕಳ ಸುರಕ್ಷೆತೆಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದರು.

ಈಗಾಗಲೇ ಪಂಚತಾರಾ ಹೋಟೆಲ್‌ಗಳು, ಬಾರ್‌ ಯ್ಯಾಂಡ್‌ ರೆಸ್ಟೋರೆಂಟ್‌ಗಳು ಹಾಗೂ ಕ್ಲಬ್‌ಗಳು ಸೇರಿದಂತೆ ಹೊಸ ವರ್ಷಾಚರಣೆಗೆ ಕಾರ್ಯಕ್ರಮಗಳನ್ನು ಆಯೋಜಿಸಿರುವ ವ್ಯವಸ್ಥಾಪಕರಿಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಸರ್ಕಾರದ ನಿಗದಿತ ಅವಧಿ ರಾತ್ರಿ 1ರವರೆಗೆ ಮಾತ್ರ ಆಚರಣೆಗೆ ಅವಕಾಶವಿರುತ್ತದೆ ಎಂದು ಹೇಳಿದರು.

ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ

ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವ ಪ್ರಮುಖ ಸ್ಥಳಗಳಾದ ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾ ನಗರ ಹಾಗೂ ವೈಟ್‌ಫೀಲ್ಡ್‌ಗಳಲ್ಲಿ ಜನ ಸಮೂಹದ ನಿಯಂತ್ರಣಕ್ಕೆ ಸೂಕ್ತ ಬಂದೋಸ್‌್ತ ಹಾಗೂ ತಪಾಸಣಾ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹೆಚ್ಚು ಜನ ಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗೆ ವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ಬೈನಾಕ್ಯೂಲರ್‌ ಉಪಕರಣ ಮೂಲಕ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಖಾಸಗಿ ಹಾಗೂ ಸರ್ಕಾರಿ ಸೇರಿ ಒಟ್ಟು ನಗರದಲ್ಲಿ 1.70 ಲಕ್ಷ ಸಿಸಿಟಿವಿ ಕ್ಯಾಮರಾಗಳ ಡಿವಿಆರ್‌ಗಳು ಸೇವೆಗೆ ಲಭ್ಯವಿರುತ್ತವೆ. ಹೊಸ ವರ್ಷದ ಭದ್ರತೆ ಸಲುವಾಗಿ ನಗರ ವ್ಯಾಪ್ತಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಇಂದಿರಾ ನಗರ ಸೇರಿದಂತೆ ಕೆಲವು ಕಡೆ ಶನಿವಾರ ರಾತ್ರಿ 20 ಡ್ರೋನ್‌ ಕ್ಯಾಮರಾಗಳಿಂದ ಸಹ ನಿಗಾವಹಿಸಲಾಗುತ್ತದೆ. ನಗರದ ಪ್ರಮುಖ ಸ್ಥಗಳಲ್ಲಿ ಶ್ವಾನದಳ ಹಾಗೂ ಬಾಂಬ್‌ ನಿಷ್ಕಿ್ರಯ ದಳಗಳಿಂದ ತಪಾಸಣೆ ನಡೆಸಲಾಗುತ್ತದೆ ಎಂದು ವಿವರಿಸಿದರು. 

ಎಂ.ಜಿ.ರಸ್ತೆಗೆ 3 ಸಾವಿರ ಖಾಕಿ

ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್‌ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 4 ಡಿಸಿಪಿ, 10 ಎಸಿಪಿ, 30 ಪಿಐಗಳು ಸೇರಿದಂತೆ 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜಿತರಾಗಿದ್ದಾರೆ. ಹಾಗೆ ಕೋರಮಂಗಲ,ಇಂದಿರಾ ನಗರ ಹಾಗೂ ವೈಟ್‌ಫೀಲ್ಡ್‌ ಪ್ರದೇಶಗಳಲ್ಲಿ 4 ಡಿಸಿಪಿ, 10 ಎಸಿಪಿ, 25 ಪಿಐ ಸೇರಿದಂತೆ 2500 ಪೊಲೀಸರನ್ನು ಬಂದೋಸ್‌್ತನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತರು ವಿವರಿಸಿದರು.

ಮಹಿಳಾ ಸುರಕ್ಷತಾ ಕೇಂದ್ರಗಳ ಸ್ಥಾಪನೆ

ಮಹಿಳೆಯರ ಸುರಕ್ಷತೆಗಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗುತ್ತದೆ. ಸಂಕಷ್ಟದ ಪರಿಸ್ಥಿಗೆ ಸಿಲುಕಿದರೆ ಮಹಿಳೆಯರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಎಂದು ಪ್ರತಾಪ್‌ರೆಡ್ಡಿ ವಿನಂತಿಸಿದರು.

ಎಂ.ಜಿ.ರಸ್ತೆಯಲ್ಲಿ ಸಂಚಾರ ಬದಲಾವಣೆ

ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 1ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಬ್ರಿಗೇಡ್‌ ರಸ್ತೆಯಲ್ಲಿ ಜನರಿಗೆ ಏಕ ಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಎರಡು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೇಕ್ಟರ್‌ ಉಪಕರಣವನ್ನು ಅಳವಡಿಸಲಾಗಿದೆ. ಬ್ರಿಗೇಡ್‌ ರಸ್ತೆಯಿಂದ ನಿರ್ಗಮಿಸುವವರು ಅಪೇರಾ ಜಂಕ್ಷನ್‌ನಲ್ಲಿ ಹೊರಬಹುದು ಎಂದು ಪ್ರತಾಪ್‌ ರೆಡ್ಡಿ ಹೇಳಿದರು.

ಬಂದೋಬಸ್ತ್‌ ಅಧಿಕಾರಿ ವಿವರ

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಪಿಎಸ್‌ಐ, 800 ಎಎಸ್‌ಐ, 1800 ಎಚ್‌ಸಿ ಹಾಗೂ 5200 ಕಾನ್‌ಸ್ಟೇಬಲ್‌ಗಳು ಸೇರಿ ಒಟ್ಟು 8624 ಭದ್ರತೆಗೆ ನಿಯೋಜಿತರಾಗಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಅಂದಿನ ಬಂದೋಸ್ತ್‌ಗೆ ನಗರದ ಪೊಲೀಸರ ಜೊತೆ ಹೊರ ಜಿಲ್ಲೆಗಳು ಹಾಗೂ ತರಬೇತಿಯಲ್ಲಿರುವ 20 ಎಸಿಪಿ, 50 ಪಿಐ, 50 ಪಿಎಸ್‌ಐ ಮತ್ತು 1300 ಪೊಲೀಸರ ಸಹ ನಿಯುಕ್ತಗೊಂಡಿದ್ದಾರೆ. ಇವರಲ್ಲದೆ 52 ಕೆಎಸ್‌ಆರ್‌ಪಿ ಹಾಗೂ 25 ಸಿಎಆರ್‌ ತುಕಡಿಗಳನ್ನು ಭದ್ರತೆಗೆ ಬಳಸಲಾಗಿದೆ ಎಂದು ಪ್ರತಾಪ್‌ ರೆಡ್ಡಿ ವಿವರಿಸಿದರು.

3.4 ಕ್ವಿಂಟಲ್‌ ಡ್ರಗ್ಸ್‌ ಜಪ್ತಿ

ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಪೂರೈಕೆ ಹಾಗೂ ರೇವ್‌ ಪಾರ್ಟಿಗಳನ್ನು ನಿಯಂತ್ರಿಸಲು ನಗರದ ಎಲ್ಲ ವಿಭಾಗಗಳ ಡಿಸಿಪಿಯವರು ಹಾಗೂ ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು. ಡಿಸೆಂಬರ್‌ ತಿಂಗಳಿನಲ್ಲೇ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ 6 ವಿದೇಶಿ ಪೆಡ್ಲರ್‌ಗಳು ಸೇರಿದಂತೆ 637 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 344.73 ಕೇಜಿ ಡ್ರಗ್ಸ್‌ ಜಪ್ತಿಯಾಗಿದೆ. ಈ ಸಂಬಂಧ 547 ಪ್ರಕರಣಗಳು ದಾಖಲಾಗಿವೆ.

ಮೇಲ್ಸೇತುವೆಯಲ್ಲಿ ಸಂಚಾರ ಬಂದ್‌

ನಾಗರಿಕರ ಹಿತ ದೃಷ್ಟಿಯಿಂದ ನಗರದ ಎಲ್ಲ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ 9ರಿಂದ ಭಾನುವಾರ ಬೆಳಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 10ರಿಂದಲೇ ಡ್ರಿಂಕ್‌ ಯ್ಯಾಂಡ್‌ ಡ್ರೈವ್‌ ತಪಾಸಣೆ ನಡೆಯಲಿದೆ. ವ್ಹೀಲಿಂಗ್‌ ಹಾಗೂ ಅತಿವೇಗದ ಚಾಲನೆ ಮಾಡುವವರ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಆಯುಕ್ತರು ವಿನಂತಿಸಿದರು.

ಹೊಸ ವರ್ಷಚಾರಣೆ ಪ್ರಯುಕ್ತ ನಮ್ಮ ಮೆಟ್ರೋ ಅವಧಿ ವಿಸ್ತರಣೆ, ಮುಂಜಾವು 2 ಗಂಟೆಯವರೆಗೆ ಸೇವೆ ಲಭ್ಯ

ಕಾನೂನುಬಾಹಿರ ಚಟುವಟಿಕೆಗಳು, ಡ್ರಗ್ಸ್‌ ಪೂರೈಕೆ ಹಾಗೂ ಶಂಕಾಸ್ಪದ ವ್ಯಕ್ತಿ ಮತ್ತು ವಸ್ತುಗಳು ಕಂಡು ಬಂದರೆ ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ತಿಳಿಸಬೇಕು. ಕಿಡಿಗೇಡಿ ಕೃತ್ಯದಲ್ಲಿ ತೊಡಗುವವರ ಮೇಲೆ ನಿಗಾವಹಿಸಲಾಗುತ್ತದೆ. ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಹೇಳಿದ್ದಾರೆ. 

ಹೊಸ ವರ್ಷಾಚರಣೆಯನ್ನು ಅಪಘಾತ ಮುಕ್ತವಾಗಿ ಮಾಡಲು ಜನರು ಸಹಕರಿಸಬೇಕಿದೆ. ಹೀಗಾಗಿ ಡಿ.31ರ ಶನಿವಾರ ರಾತ್ರಿ ನಗರ ವ್ಯಾಪ್ತಿ ಪಾನಮತ್ತ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಯಲಿದೆ. ಅಲ್ಲದೆ ವ್ಹೀಲಿಂಗ್‌ ಹಾಗೂ ಅತಿವೇಗದ ಚಾಲನೆ ಮೇಲೆ ಸಹ ನಿಗಾವಹಿಸಲಾಗಿದೆ ಅಂತ ವಿಶೇಷ ಆಯುಕ್ತ, ಸಂಚಾರ ಡಾ. ಎಂ.ಎ.ಸಲೀಂ ತಿಳಿಸಿದ್ದಾರೆ. 

click me!