ಶಿವಮೊಗ್ಗ : 100 ಮೊಬೈ​ಲ್‌ ಟವರ್‌ ಸ್ಥಾಪನೆ

By Kannadaprabha News  |  First Published Oct 1, 2019, 2:49 PM IST

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 100 ಮೊಬೈಲ್‌ ಟವರ್‌ ಸ್ಥಾಪಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.


ಶಿವಮೊಗ್ಗ (ಸೆ.01):  ಮುಂದಿನ ಮಾರ್ಚ್ ಅಥವಾ ಏಪ್ರಿಲ್‌ ತಿಂಗಳೊಳಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 100 ಮೊಬೈಲ್‌ ಟವರ್‌ ಸ್ಥಾಪಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ನಗರದ ಡಿಎಆರ್‌ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ 290 ಕೋಟಿ ರು. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ಜಿಯೋ ಮೊಬೈಲ್‌ ಟವರ್‌ಗಳ ಸ್ಥಾಪನೆಯಿಂದ ನೆಟವರ್ಕ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

Tap to resize

Latest Videos

ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಒಂದು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 15 ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು. ವಿಮಾನ ನಿಲ್ದಾಣ ಸ್ಥಾಪನೆಯಿಂದ ಬಂಡವಾಳ ಹೂಡಿಕೆದಾರರು ಬರಲಿದ್ದಾರೆ. ಇಲ್ಲಿನ ಯುವಜನತೆಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈಲ್ವೆ ಯೋಜನೆಗಳಿಗೆ ಸಂಬಂಧಪಟ್ಟಂತೆ, ಮುಂದಿನ 3 ತಿಂಗಳಲ್ಲಿ ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗದ ಭೂ ಸ್ವಾಧೀನ ಕಾರ್ಯ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ಮುಂಬೈ, ಗೋವಾಕ್ಕೆ ಸಂಪರ್ಕ ಸಿಗಲಿದೆ. ಕೋಟೆಗಂಗೂರು ಗ್ರಾಮದಲ್ಲಿ ಸುಮಾರು 60 ಕೋಟಿ ರು. ವೆಚ್ಚದಲ್ಲಿ ಸ್ಯಾಟಲೈಟ್‌ ರೈಲ್ವೇ ನಿಲ್ದಾಣ ನಿರ್ಮಾಣವಾಗಲಿದೆ. ತುಮಕೂರು-ಶಿವಮೊಗ್ಗ ನಡುವೆ ಚತುಷ್ಪಥ ಹೆದ್ದಾರಿ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲಿದೆ ಎಂದರು.

ಭದ್ರಾವತಿಯಲ್ಲಿನ ವಿಎಸ್‌ಐಎಲ್‌ ಹಾಗೂ ಎಂಪಿಎಂ ಕಾರ್ಖಾನೆ ಪುನಶ್ಚೇತಕ್ಕೆ ಒತ್ತು ನೀಡಲಾಗುವುದು. ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ನೀಲನಕ್ಷೆ ಸಿದ್ಧಗೊಂಡಿದೆ. ಕೆಲವೇ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವ ಕೆ.ಎಸ್‌. ಈಶ್ವರಪ್ಪ, ಶಾಸಕರಾದ ಕೆ.ಬಿ. ಅಶೋಕನಾಯ್ಕ್, ಅರಗ ಜ್ಞಾನೇಂದ್ರ ವಿಧಾನ ಪರಿಷತ್‌ ಸದಸ್ಯರುಗಳಾದ ಆಯನೂರು ಮಂಜುನಾಥ್‌, ಎಸ್‌. ರುದ್ರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

click me!