ಸರ್ಕಾರಿ ಹುದ್ದೆ ನೇಮಕದಲ್ಲಿ ಭಾರೀ ಬದಲಾವಣೆ : ಏನದು..?

By Kannadaprabha News  |  First Published Mar 15, 2021, 11:32 AM IST

ರಾಜ್ಯದಲ್ಲಿ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಭಾರೀ ಬದಲಾವಣೆಯನ್ನು ಮಾಡಲಾಗುತ್ತಿದೆ.  ಮಾ.5ರ ನಂತರದ ನೇಮಕಾತಿ ಅಧಿಸೂಚನೆಗಳಿಗೆ ಈ ಹೊಸ ನಿಯಮಗಳು ಜಾರಿಯಾಗಲಿವೆ


 ವರದಿ :  ರಮೇಶ್‌ ಬನ್ನಿಕುಪ್ಪೆ

 ಬೆಂಗಳೂರು (ಮಾ.15):  ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂಬರುವ ದಿನಗಳಲ್ಲಿನ ನಡೆಸುವ ಎಲ್ಲ ಹಂತದ ನೇಮಕಾತಿ ಪರೀಕ್ಷೆಗಳಲ್ಲಿ ಋುಣಾತ್ಮಕ (ನೆಗೆಟಿವ್‌) ಅಂಕ, ಇಂಗ್ಲಿಷ್‌ ಭಾಷೆ ಹಾಗೂ ಕಂಪ್ಯೂಟರ್‌ ಜ್ಞಾನ ಸೇರಿಸಲು ನಿರ್ಧರಿಸಿದೆ. ವಿಶೇಷವಾಗಿ ವೈದ್ಯಕೀಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಎಂಜಿನಿಯರ್‌ಗಳ ಹುದ್ದೆಗಳಿಗೆ ನಡೆಸುತ್ತಿದ್ದ ಸಂದರ್ಶನವನ್ನು ಕೈಬಿಡಲಾಗಿದೆ.

Tap to resize

Latest Videos

undefined

ಈ ಸಂಬಂಧ ‘ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ)(ಸಾಮಾನ್ಯ) ನಿಯಮಗಳು 2020’ನ್ನು ಜಾರಿ ಮಾಡಿರುವ ರಾಜ್ಯ ಸರ್ಕಾರ ಮುಂದಿನ ನೇಮಕಾತಿಗಳಿಗೆ ಅನ್ವಯವಾಗುವಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ನಿಯಮಗಳ ಪ್ರಕಾರ ಕೆಪಿಎಸ್‌ಸಿ ನಡೆಸುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಈವರೆಗೂ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ನೇಮಕಾತಿಗೆ ಮಾತ್ರ ಋುಣಾತ್ಮಕ ಅಂಕ ನೀಡುವ ಪದ್ಧತಿ ಜಾರಿಯಲ್ಲಿತ್ತು. ಇದೀಗ ಗ್ರೂಪ್‌ ‘ಎ’ ಯಿಂದ ಗ್ರೂಪ್‌ ‘ಡಿ’ ದರ್ಜೆಯ (ಚಾಲಕರ ನೇಮಕಾತಿ ಹೊರತುಪಡಿಸಿ) ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ನಾಲ್ಕನೇ ಒಂದರಷ್ಟುಋುಣಾತ್ಮಕ ಅಂಕ ನೀಡುವ ಪದ್ಧತಿ ಜಾರಿಗೆ ತಂದಿದೆ.

ಅಲ್ಲದೆ, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಜ್ಞಾನ ಎಂಬ ಎರಡು ಪತ್ರಿಕೆಗಳಿದ್ದು, ಎರಡೂ ಪತ್ರಿಕೆಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಜೊತೆಗೆ, ಎರಡು ಪತ್ರಿಕೆಗಳಲ್ಲಿ ನಿಗದಿ ಪಡಿಸಿದ (ಕಟ್‌ಆಫ್‌ ಮಾರ್ಕ್ಸ್‌) ಒಟ್ಟು ಅಂಕಗಳನ್ನು ಗಳಿಸಿದಲ್ಲಿ ಆಯ್ಕೆಗೆ ಆರ್ಹತೆ ಪಡೆಯುತ್ತಿದ್ದರು.

SDA ಪರೀಕ್ಷೆ ಮತ್ತೆ ಮುಂದೂಡಿದ ಕೆಪಿಎಸ್‌ಸಿ .

ಇದೀಗ ಎಲ್ಲ ನೇಮಕಾತಿಗಳಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಜ್ಞಾನವನ್ನು ಸೇರಿಸಲಾಗಿದೆ. ಈ ಮೂರು ವಿಷಯಗಳಲ್ಲಿ ಶೇ.35 ಅಂಕಗಳು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಎರಡು ವಿಷಯಗಳಲ್ಲಿ ಶೇ.100ರಷ್ಟುಅಂಕ ಪಡೆದು ಒಂದು ವಿಷಯದಲ್ಲಿ ಶೇ.35ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದಲ್ಲಿ ಅನರ್ಹರಾಗಲಿದ್ದಾರೆ.

ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಪತ್ರಿಕೆ 1ರಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಸಾಮಾನ್ಯ ವಿಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರಲಿವೆ. ಆದರೆ, ಪತ್ರಿಕೆ 2ರಲ್ಲಿ ಯಾವ ಇಲಾಖೆಗೆ ನೇಮಕ ಮಾಡಲಾಗುತ್ತಿದೆ ಎಂಬದರ ಆಧಾರದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ.

ಅಲ್ಲದೆ, ಗ್ರೂಪ್‌ ‘ಸಿ’ ಹುದ್ದೆಗಳು, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳಿಗೆ ನೇಮಕ ಮಾಡುವಲ್ಲಿ ಸಾಮಾನ್ಯ ಜ್ಞಾನದ ಜೊತೆಗೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಜ್ಞಾನ ಕಡ್ಡಾಯವಾಗಲಿದೆ.

ಕೆಪಿಎಸ್ಸಿ ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ ನಿಜ? .

ಸಂದರ್ಶನ ಇಲ್ಲ:  ವೈದ್ಯಕೀಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಎಂಜಿನಿಯರ್‌ಗಳ ಹುದ್ದೆಗಳಿಗೆ ಈ ಮೊದಲು ಸಂದರ್ಶನ ನಡೆಸಲಾಗುತ್ತಿತ್ತು, ಆದರೆ ಇನ್ನು ಮುಂದೆ ಸಂದರ್ಶನ ಇರುವುದಿಲ್ಲ. ಗ್ರೂಪ್‌ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಸಂದರ್ಶನ ನಡೆಸುವಂತಿಲ್ಲ. ಆದರೆ, ಗ್ರೂಪ್‌ ‘ಎ‘ ಮತ್ತು ‘ಬಿ‘ ವೃಂದದ ಹುದ್ದೆಗಳಗೆ ನಿಯಮಾನುಸಾರ ಸಂದರ್ಶನ ನಡೆಸಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

ಮಾರ್ಚ್ 5ರಿಂದ ಜಾರಿ:  ಹೊಸ ವ್ಯವಸ್ಥೆಯನ್ನು ಜಾರಿ ಮಾಡುವ ಸಂಬಂಧ 2021ರ ಜನವರಿ 4ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮಾ.5ರ ನಂತರದ ನೇಮಕಾತಿ ಅಧಿಸೂಚನೆಗಳಿಗೆ ಈ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ರಾಜ್ಯಪತ್ರದಲ್ಲಿ ಉಲ್ಲೇಖಿಸಿದೆ.

click me!