ಇದು ಮಿಲಿಟರಿಯೇತರ, ಮುಂಜಾಗ್ರತಾ ದಾಳಿ: ಏಕೆ? ಇದಕ್ಕೂ ಇದೆ ಕಾರಣ

By Web DeskFirst Published Feb 27, 2019, 9:04 AM IST
Highlights

ಇದು ಮಿಲಿಟರಿಯೇತರ, ಮುಂಜಾಗ್ರತಾ ದಾಳಿ: ಏಕೆ?| ಸೇನಾ ನೆಲೆಗಳ ಮೇಲೆ ದಾಳಿ ಮಾಡಿದರೆ ಯುದ್ಧ ಎಂದು ಪರಿಗಣನೆ| ಆದರೆ ಭಾರತ ನಡೆಸಿದ್ದು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ| ಉಗ್ರರು ಮತ್ತೊಮ್ಮೆ ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಮುಂಜಾಗ್ರತೆಯಿಂದ ಅಟ್ಯಾಕ್‌

ನವದೆಹಲಿ[ಫೆ.27]: ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಮಂಗಳವಾರ ಮುಂಜಾನೆ ಯುದ್ಧ ವಿಮಾನಗಳನ್ನು ಬಳಸಿ ನಡೆಸಲಾದ ಬಾಂಬ್‌ ದಾಳಿಯನ್ನು ಕೇಂದ್ರ ಸರ್ಕಾರ ‘ಮಿಲಿಟರಿಯೇತರ’ ಹಾಗೂ ‘ಮುಂಜಾಗ್ರತಾ ಕ್ರಮದ’ ದಾಳಿ ಎಂದು ಬಲವಾಗಿ ಪ್ರತಿಪಾದಿಸುತ್ತಿದೆ. ಇದರ ಹಿಂದೆ ರಾಜತಾಂತ್ರಿಕ ಮಾರ್ಗದ ಮೂಲಕ ಅಂತಾರಾಷ್ಟ್ರೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರ ಅಡಗಿದೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ನಡೆದ ವಾಯುದಾಳಿ ಸಂದರ್ಭ ಉಗ್ರರ ಶಿಬಿರಗಳ ಮೇಲೆ ಬಾಂಬ್‌ ಹಾಕಲಾಗಿದೆ. ಅದು ಬಿಟ್ಟು ಜನವಸತಿ ಅಥವಾ ಸೇನೆಗೆ ಸಂಬಂಧಿಸಿದ ಪ್ರದೇಶಗಳಿಗೆ ಕಿಂಚಿತ್ತೂ ಹಾನಿ ಉಂಟು ಮಾಡಿಲ್ಲ. ಒಂದು ವೇಳೆ, ಸೇನಾ ಸಂಸ್ಥೆಗಳು, ಕಚೇರಿಗಳ ಮೇಲೆ ದಾಳಿಯಾದರೆ ಅದನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಸರ್ಕಾರ ಇದನ್ನು ಮಿಲಿಟರಿಯೇತರ ದಾಳಿ ಎಂದು ಹೇಳುತ್ತಿದೆ.

ಮತ್ತೊಂದೆಡೆ, ಜೈಷ್‌ ಎ ಮೊಹಮ್ಮದ್‌ ಉಗ್ರರು ಪುಲ್ವಾಮಾದಲ್ಲಿ 40 ಯೋಧರನ್ನು ಕೊಂದಿದ್ದರು. ಮತ್ತಷ್ಟುದಾಳಿಗೆ ಸಜ್ಜಾಗುತ್ತಿದ್ದರು. ಆದ ಕಾರಣ ‘ಮುಂಜಾಗ್ರತಾ ಕ್ರಮ’ದಿಂದ ದಾಳಿ ಮಾಡಿರುವುದಾಗಿ ಭಾರತ ಬಿಂಬಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸಲು ಯಾವುದೇ ಅವಕಾಶವೂ ಸಿಕ್ಕಂತಾಗುವುದಿಲ್ಲ. ಪಾಕಿಸ್ತಾನ ಏನಾದರೂ ಸೇನಾ ನೆಲೆ ಅಥವಾ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದರೆ ಅದು ಯುದ್ಧದ ರೂಪ ಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

click me!