ರಷ್ಯಾದ ಲಸಿಕೆ ಸುರಕ್ಷಿತವಲ್ಲ: ಸಿಸಿಎಂಬಿ| ಭಾರತದ ಪ್ರಸಿದ್ಧ ಜೀವಶಾಸ್ತ್ರ ಸಂಶೋಧನಾ ಕೇಂದ್ರ ಹೇಳಿಕೆ| ದಕ್ಷತೆ, ಸುರಕ್ಷತೆಯ ಪ್ರಯೋಗ ನಡೆಯದೆ ಬಳಸಬಾರದು’
ಹೈದರಾಬಾದ್(ಆ.13): ರಷ್ಯಾದಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್-5’ ಸುರಕ್ಷಿತವಲ್ಲ. ದಕ್ಷತೆ ಹಾಗೂ ಸುರಕ್ಷತೆಯ ಬಗ್ಗೆ ನಡೆಸಿದ ಪ್ರಯೋಗದ ಅಂಕಿ-ಅಂಶಗಳು ಇಲ್ಲದೆ ಅದನ್ನು ಬಳಸಬಾರದು ಎಂದು ಭಾರತದ ಪ್ರಸಿದ್ಧ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಬಯಾಲಜಿ (ಸಿಸಿಎಂಬಿ) ಹೇಳಿದೆ.
ರಷ್ಯಾದ ಲಸಿಕೆಯ ಕುರಿತು ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದರ ಮೊದಲ ಪ್ರತಿಕ್ರಿಯೆ ಇದಾಗಿದ್ದು, ಮಹತ್ವ ಪಡೆದಿದೆ. ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ರಷ್ಯಾದ ಲಸಿಕೆ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿ, ‘ಜನರು ಅದೃಷ್ಟವಂತರಾಗಿದ್ದರೆ ಈ ಲಸಿಕೆ ಕೆಲಸ ಮಾಡುತ್ತದೆ. ಅದರ ದಕ್ಷತೆ ಮತ್ತು ಸುರಕ್ಷತೆಯೆರಡರ ಬಗ್ಗೆಯೂ ನಮಗೆ ಗೊತ್ತಿಲ್ಲ. ಅವರು ಸರಿಯಾಗಿ ಲಸಿಕೆಯ ಪ್ರಯೋಗವನ್ನೇ ನಡೆಸಿಲ್ಲ. ಯಾವುದೇ ಲಸಿಕೆಗೆ 3ನೇ ಹಂತದ ಪ್ರಯೋಗ ಬಹಳ ಮುಖ್ಯ. ಈ ಹಂತದಲ್ಲೇ ಲಸಿಕೆಯ ದಕ್ಷತೆ ಮತ್ತು ಸುರಕ್ಷತೆ ಸಾಬೀತಾಗುತ್ತದೆ. ಏಕೆಂದರೆ 3ನೇ ಹಂತದಲ್ಲಿ ದೊಡ್ಡ ಸಂಖ್ಯೆಯ ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಿ, 2 ತಿಂಗಳು ಕಾದು, ಅವರಿಗೆ ವೈರಲ್ ಸೋಂಕು ತಗಲುತ್ತದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಪ್ರಯೋಗವನ್ನು ರಹಸ್ಯವಾಗಿ ನಡೆಸಲು ಬರುವುದಿಲ್ಲ. ಹೀಗಾಗಿ ರಷ್ಯಾದ ಲಸಿಕೆ ಸುರಕ್ಷಿತವಲ್ಲ’ ಎಂದು ಹೇಳಿದ್ದಾರೆ.
ಕೊರೋನಾಕ್ಕೆ ಬಲಿಯಾದ ಅಪ್ಪ, ಶಾಕ್ ತಾಳದೆ ಇಹಲೋಕ ತ್ಯಜಿಸಿದ ಅಂಧ ಮಗಳು!
ಯಾವುದೇ ಲಸಿಕೆ ಜನರ ಬಳಿಗೆ ಹೋಗುವುದರೊಳಗೆ ಅದನ್ನು ನಾಜೂಕಾಗಿ ಪರೀಕ್ಷಿಸಬೇಕು. ಒಂದು ದೇಶ ಅಥವಾ ಕಂಪನಿಯು ಲಸಿಕೆಗೆ ಸಂಬಂಧಿಸಿದ ದತ್ತಾಂಶಗಳನ್ನು ಬಿಡುಗಡೆ ಮಾಡದಿದ್ದರೆ ಆ ಲಸಿಕೆಯನ್ನು ನಂಬಲಾಗದು. ಲಸಿಕೆಯನ್ನು ಸರಿಯಾಗಿ 1, 2 ಮತ್ತು 3ನೇ ಹಂತದಲ್ಲಿ ಪರೀಕ್ಷಿಸದೆ ಯಾವುದೇ ದೇಶವು ಒಪ್ಪಿಕೊಳ್ಳಬಾರದು. ರಷ್ಯಾದವರು ಕೊರೋನಾ ಲಸಿಕೆಯನ್ನು ಬೇಗ ಹೊರತರುವುದಕ್ಕೆಂದೇ ಕೆಲ ತಿಂಗಳ ಹಿಂದೆ ಕಾಯ್ದೆ ಪಾಸು ಮಾಡಿದ್ದರು ಎಂದು ರಾಕೇಶ್ ತಿಳಿಸಿದ್ದಾರೆ.
2 ವಾರದಲ್ಲಿ ‘ಸ್ಪುಟ್ನಿಕ್-5’ ಉತ್ಪಾದನೆ
ಜಗತ್ತಿನ ಮೊದಲ ಕೊರೋನಾ ಲಸಿಕೆಗೆ ರಷ್ಯಾದ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ದೊಡ್ಡ ಪ್ರಮಾಣದಲ್ಲಿ ಅದರ ಉತ್ಪಾದನೆ ಆರಂಭವಾಗಿದೆ. ಸಿಸ್ಟೆಮಾ ಎಂಬ ಕಂಪನಿ ರಷ್ಯಾದಲ್ಲಿರುವ ತನ್ನ ಔಷಧ ತಯಾರಿಕಾ ಘಟಕದಲ್ಲಿ ‘ಸ್ಪುಟ್ನಿಕ್-5’ ಲಸಿಕೆಯ ಉತ್ಪಾದನೆ ಆರಂಭಿಸಿದ್ದು, ಇನ್ನೆರಡು ವಾರದೊಳಗೆ ಮೊದಲ ಬ್ಯಾಚ್‌ನ ಲಸಿಕೆ ಹೊರಬರಲಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಶ್ಕೋ ತಿಳಿಸಿದ್ದಾರೆ.
ರಷ್ಯಾ ಲಸಿಕೆಗೆ 20 ದೇಶಗಳ ಬೇಡಿಕೆ: ಯಾರಿಗೆ ಮೊದಲು ಲಸಿಕೆ?
ಈ ಲಸಿಕೆ ತೆಗೆದುಕೊಳ್ಳುವುದು ಆರೋಗ್ಯ ಕಾರ್ಯಕರ್ತರೂ ಸೇರಿದಂತೆ ಯಾರಿಗೂ ಕಡ್ಡಾಯವಲ್ಲ. ನಾವು ಕೊರೋನಾ ಸೋಂಕು ಪತ್ತೆಗೆ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದೇವೆ. ಅದರಲ್ಲಿ ಈ ಲಸಿಕೆ ತೆಗೆದುಕೊಂಡವರ ಮೇಲೆ ಉಂಟಾದ ಪರಿಣಾಮವನ್ನೂ ತಿಳಿದುಕೊಳ್ಳುವ ವ್ಯವಸ್ಥೆ ಇರುತ್ತದೆ ಎಂದು ಹೇಳಿದ್ದಾರೆ.
ಈ ತಿಂಗಳಾಂತ್ಯಕ್ಕೆ ರಷ್ಯಾದಲ್ಲಿ ಕೊರೋನಾ ಲಸಿಕೆಯನ್ನು ಸಾಮೂಹಿಕವಾಗಿ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ಒಬ್ಬ ವ್ಯಕ್ತಿಗೆ ಇದರ ಎರಡು ಡೋಸ್ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಯುಎಇ ಮತ್ತು ಫಿಲಿಪ್ಪೀನ್ಸ್‌ನಲ್ಲಿ ರಷ್ಯಾದ ಲಸಿಕೆಯ ಕ್ಲಿನಿಕಲ್ ಟ್ರಯಲ್ ಶೀಘ್ರದಲ್ಲೇ ಆರಂಭವಾಗಲಿದೆ. 20ಕ್ಕೂ ಹೆಚ್ಚು ದೇಶಗಳಿಂದ 100 ಕೋಟಿಗೂ ಹೆಚ್ಚು ಡೋಸ್‌ಗೆ ಬೇಡಿಕೆ ಬಂದಿದೆ ಎಂದು ರಷ್ಯಾ ಹೇಳಿಕೊಂಡಿದೆ.