ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?

By Prashant Natu  |  First Published May 12, 2024, 11:12 AM IST

'ಪ್ರಜ್ವಲ್ ರೇವಣ್ಣ ಸಿ.ಡಿ. ಇದೆ, ಟಿಕೆಟ್ ಕೊಡುವುದು ಬೇಡ, ಅನಾಹುತ ಆದೀತು' ಎಂದು ಕುಮಾರಸ್ವಾಮಿ ಮೂಲಕ ಅಮಿತ್ ಶಾ ಮೊದಲೇ ದೇವೇಗೌಡರಿಗೆ ತಿಳಿಸಿ ಹೇಳಿದ್ದರು. ಆದರೆ ಕೇಳದ ದೇವೇಗೌಡರು ಹಾಸನಕ್ಕೆ ಹೋಗಿ ಮೊಮ್ಮಗನೇ ಅಭ್ಯರ್ಥಿ ಎಂದು ಘೋಷಿಸಿದ್ದೇ ಈಗಿನ ಎಲ್ಲಾ ಅವಘಡಗಳಿಗೆ ಮೂಲ ಕಾರಣ. ವಿಶ್ಲೇಷಿಸಲಾಗುತ್ತಿದೆ. ದೇವೇಗೌಡರ ಸಾಮರ್ಥ್ಯವೇ ಅವರ ಚಾರಿತ್ರ್ಯ ಮತ್ತು ಹಟ.


ಪ್ರಶಾಂತ್ ನಾತು, ಏಷ್ಯಾನೆಟ್ ಸುವರ್ಣ ನ್ಯೂಸ್

ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ ಆದಾಗ ಇನ್ನೇನು ಬಿಜೆಪಿ 350 ತಲುಪುವುದನ್ನು ಯಾರೂ ತಡೆಯುವುದು ಸಾಧ್ಯವಿಲ್ಲ ಅನ್ನುವ ವಾತಾವರಣ ನಿರ್ಮಾಣ ಆಗಿತ್ತು. ಅದಕ್ಕೆ ಪೂರಕವಾಗಿ ಕೆಲವು ಚಾನಲ್‌ನ ಸರ್ವೆಗಳು ಕೂಡ ಮೋದಿ 400ರ ಆಸುಪಾಸು ಹೋಗಬಹುದು ಎಂದು ಹೇಳತೊಡಗಿದವು. ಆದರೆ ಫೆಬ್ರವರಿಯಲ್ಲಿ ಯಾವಾಗ ಬಿಜೆಪಿ ಟಿಕೆಟ್ ಹಂಚಿಕೆಗಾಗಿ ಸಭೆ ಶುರು ಮಾಡಿತೋ ಆಗ ಮೋದಿ ಜನಪ್ರಿಯತೆಯೇನೋ ಬಿಜೆಪಿ ಮತದಾರರಲ್ಲಿ ಇದ್ದೇ ಇದೆ, ಆದರೆ ಪಾರ್ಟಿಯ ಸ್ಥಳೀಯ ನಾಯಕರು ಮತ್ತು ಸಂಸದರ ವಿರುದ್ಧ ಒಂದು ಮಟ್ಟದ ಬೇಸರ, ಆಕ್ರೋಶ, ಆಡಳಿತ ವಿರೋಧಿ ಭಾವನೆ ಕಾರ್ಯಕರ್ತರಲ್ಲಿ ಜಾಸ್ತಿ ಇದೆ ಮತ್ತು ಅದು ಬಿಜೆಪಿಯ ಕಟ್ಟಾ ಮತದಾರರಿಗೂ ಶಿಫ್ಟ್ ಆಗುತ್ತಿದೆ ಎಂಬುದು ಬಿಜೆಪಿ ಸರ್ವೆಗಳಲ್ಲೇ ಸ್ಪಷ್ಟ ಆಗತೊಡಗಿತ್ತು. ಹೀಗಾಗಿ 100ಕ್ಕೂ ಹೆಚ್ಚು ಸಂಸದರಿಗೆ ಪಿಂಕ್ ಸ್ಲಿಪ್ ನೀಡಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. 

Tap to resize

Latest Videos

undefined

ಆದರೆ ಹೊಸಮುಖಗಳಿಂದ ತಳಮಟ್ಟದ ಕಾರ್ಯಕರ್ತರಲ್ಲಿ ಏನೂ ಉತ್ಸಾಹವರ್ಧನೆ ಕಾಣಲಿಲ್ಲ. ಹೀಗಾಗಿಯೇ ಮೋದಿ ಸಾಹೇಬರು ಮೊದಲನೇ ಹಂತದ ಚುನಾವಣೆ ಮುಗಿದ ನಂತರ ಧರ್ಮವನ್ನು ಎಳೆದುತರುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಮತದಾರನ ಮಾನಸಿಕತೆಯೋ ಏನೋ, ಇಲ್ಲಿ ಬರೀ ಅಭಿವೃದ್ಧಿಯ ವಿಷಯ ಹೇಳಿದರೆ ಕಾರ್ಯಕರ್ತ ಮತ್ತು ಮತದಾರ ಇಬ್ಬರಿಗೂ ಜೋಶ್ ಬರುವುದಿಲ್ಲ. ಮಾಡಿರುವ ಅಭಿವೃದ್ಧಿ ಕೆಲಸಕ್ಕಿಂತ ದುಡ್ಡಿನ ಆಸೆ ಜಾಸ್ತಿ ಇರುತ್ತದೆ. ದುಡ್ಡಿಗಿಂತ ಜಾತಿಯ ಅಸ್ಮಿತೆ ತೀಕ್ಷ್ಯ, ಅದೆಲ್ಲವನ್ನೂ ಹೊಡೆದು ಹಾಕುವ ಶಕ್ತಿ ಇರುವುದು ಧರ್ಮಕ್ಕೆ. ಹೀಗಾಗಿಯೇ ನೋಡಿ ರಾಹುಲ್ ಗಾಂಧಿ ಜಾತಿ ಗಣತಿ ಅನ್ನುತ್ತಿದ್ದರೆ ಮೋದಿ ಹಿಂದೂ-ಮುಸ್ಲಿಂ ವಿಷಯ ಎಳೆದು ತರುತ್ತಿದ್ದಾರೆ.

ಲೋಕಸಭೆ ಚುನಾವಣೆ 2024: ಒಕ್ಕಲಿಗರ ಕೋಟೆಯ ಅಧಿಪತಿ ಯಾರು?, ಪ್ರಶಾಂತ್‌ ನಾತು

ವಿಷಯವೇ ಇಲ್ಲದ ಚುನಾವಣೆಯಾ?
1952ರಿಂದ ಭಾರತದಲ್ಲಿ ಲೋಕಸಭಾ ಚುನಾವಣೆಗಳು ಶುರುವಾದರೂ ಕೂಡ 1957, 1962ರ ಚುನಾವಣೆಗಳು ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟ ಪಾರ್ಟಿ ಮತ್ತು ಪಂಡಿತ್ ನೆಹರು ಗಾಂಧೀಜಿ ಶಿಷ್ಯ, ದೇಶ ಕಟ್ಟುತ್ತಾರೆ ಅನ್ನುವ ಫೀಲ್ ಗುಡ್ ಫ್ಯಾಕ್ಟರ್ ಮೇಲೆ ನಡೆದವು. ಆದರೆ ಕಾಂಗ್ರೆಸ್‌ಗೆ ಸವಾಲು ಎದುರಾಗಿದ್ದು 1967ರಲ್ಲಿ ಜನಸಂಘ, ಕಮ್ಯುನಿಸ್ಟರು, ಸ್ವರಾಜ್ ಪಾರ್ಟಿ ಮತ್ತು ಸಮಾಜವಾದಿಗಳಿಂದ. ಆಗ ಕಾಂಗ್ರೆಸ್ 9 ರಾಜ್ಯಗಳನ್ನು ಮೊದಲ ಬಾರಿಗೆ ಕಳೆದುಕೊಂಡಿತು. 1972ರಲ್ಲಿ ಬಾಂಗ್ಲಾ ಯುದ್ಧ, 1977ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ, 1980ರ ಜನತಾ ಪಾರ್ಟಿ ವಿಘಟನೆ, 1984ರ ಇಂದಿರಾ ಗಾಂಧಿ ಹತ್ಯೆ, 1989ರ ಬೋಫೋರ್ಸ್ ಹಗರಣ, 1991ರ ರಾಜೀವ್ ಗಾಂಧಿ ಹತ್ಯೆ, 1996ರ ನರಸಿಂಹ ರಾಯರ ಸರ್ಕಾರದ ಹಗರಣಗಳ ಮೇಲೆ ಚುನಾವಣೆ ನಡೆಯಿತು. 1998ರಲ್ಲಿ ವಾಜಪೇಯಿಗೆ ಒಂದು ಅವಕಾಶ, 1999ರ ಕಾರ್ಗಿಲ್ ಯುದ್ಧ, 2004ರಲ್ಲಿ 'ಬಿಜೆಪಿಯ ಭಾರತ ಪ್ರಕಾಶಸುತ್ತಿದೆ' ವಿರುದ್ಧ, 2009ರಲ್ಲಿ ಪರಮಾಣು ಕರಾರು, 2014ರಲ್ಲಿ ಯುಪಿಎ ಹಗರಣಗಳು, 2019ರಲ್ಲಿ ಪುಲ್ವಾಮಾ ಮೇಲೆ ಚುನಾವಣೆ ನಡೆದಿದ್ದವು. 

ಆದರೆ 2024ರಲ್ಲಿ ಅಂತಹ ಎಲ್ಲಾ ರಾಜ್ಯಗಳಲ್ಲಿ ಸಮಾನ ಪರಿಣಾಮ ಬೀರುವ ಏಕ ವಿಷಯ ಕಾಣುತ್ತಿಲ್ಲ. ಬಿಜೆಪಿ ಅಂದುಕೊಂಡಂತೆ ರಾಮ ಮಂದಿರ ಉದ್ಘಾಟನೆ ಒಂದರ ಮೇಲೆಯೇ ಚುನಾವಣೆ ಕಾಣುತ್ತಿಲ್ಲ. ಕಾಂಗ್ರೆಸ್ ಅಂದುಕೊಂಡಂತೆ ಮೋದಿ ವಿರುದ್ದ ಎಲ್ಲರೂ ಅನ್ನುವ ಗಾಳಿಯೂ ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಏನಾಗಬಹುದು ಎಂದು ಒಂದು ವಿಚಿತ್ರ ತಳಮಳ ಕಾಣುತ್ತಿದ್ದರೆ, ವಿಪಕ್ಷಗಳಲ್ಲಿ ಏನೋ ಅವ್ಯಕ್ತ ಅಗೋಚರ ಸಣ್ಣ ಮಿಂಚಿನ ನಿರೀಕ್ಷೆ ಕಾಣುತ್ತಿದೆ. ಮರಳುಗಾಡಿನಲ್ಲಿ ಕಂಡ ನೀರು ಮರೀಚಿಕೆಯೂ ಇರಬಹುದು, ಪ್ರವಾಹ ಎಂದು ಕಾಣುವ ನೀರಿನಲ್ಲಿ ಕಸ ಕಡ್ಡಿಗಳು ಜಾಸ್ತಿ ಇರಬಹುದು. ಜೂನ್ 4ರವರೆಗೆ ಚರ್ಚೆ, ಚರ್ಚೆ, ಇನ್ನಷ್ಟು ಚರ್ಚೆ ಅಷ್ಟೇ.

ಯಾವ ರಾಜ್ಯ ದಲ್ಲಿ ಪರಿಸ್ಥಿತಿ ಹೇಗಿದೆ?
2014 ಮತ್ತು 2019ರಲ್ಲಿ ಬಿಜೆಪಿ ಬಹುತೇಕ ಉತ್ತರದ ರಾಜ್ಯಗಳಲ್ಲಿ ಉಚ್ಛಾಯಕ್ಕೆ ತಲುಪಿದೆ. ಹೀಗಾಗಿ ಉತ್ತರದ ರಾಜ್ಯಗಳಲ್ಲಿ ಸೀಟು ಹೆಚ್ಚಳಕ್ಕೆ ಬಹಳ ಏನೂ ಅವಕಾಶ ಇಲ್ಲ. ಕಳೆದ ಬಾರಿ 62 ಪಡೆದಿದ್ದ ಯುಪಿಯಲ್ಲಿ6ರಿಂದ8 ಸೀಟು ಜಾಸ್ತಿ ಆಗುವನಿರೀಕ್ಷೆ ಇದೆ. ಇನ್ನು 5ರಿಂದ 6 ಸೀಟು ತೇಜಸ್ವಿಯಾದವ್ ಕಡೆಗೆ ವಾಲುವ ಸ್ಥಿತಿ ಬಿಹಾರದಲ್ಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸ್ಥಿತಿಗತಿ ಗಟ್ಟಿ ಇದೆ. ಆದರೆ ರಾಜಸ್ಥಾನದಲ್ಲಿ ಮಾತ್ರ ವಸುಂಧರಾರನ್ನು ಮುಖ್ಯಮಂತ್ರಿ ಮಾಡದ ಕಾರಣದಿಂದ ರಜಪೂತರ ಸಿಟ್ಟಿನಿಂದ ಬಿಜೆಪಿ 4ರಿಂದ 5 ಸೀಟು ಕಳೆದುಕೊಳ್ಳುವ ಸಾಧ್ಯತೆ ಇದೆ. ಹರ್ಯಾಣದಲ್ಲಿ ಜಾಟರ ಕ್ರೋಢೀಕರಣದ ಕಾರಣ ಬಿಜೆಪಿಗೆ 2ರಿಂದ 3 ಸೀಟು ನಷ್ಟ ಆಗಬಹುದು. ಆದರೆ ನಿನ್ನೆ ಕೇಜಿವಾಲ್ ಬಿಡುಗಡೆಯ ನಂತರ ದಿಲ್ಲಿಯ 1 ಸೀಟುಗಳಲ್ಲಿ ಗಾಳಿ ಹೇಗೆ ಬಡಿಯಬಹುದು ಎಂದು ಅಂದಾಜಿಸುವುದು ಕಷ್ಟ. ಇನ್ನು ಗುಜರಾತ್ ಮೋದಿ ಜೊತೆಗೆ ನಿಲ್ಲುವ ಲಕ್ಷಣ ಕಾಣುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಕೊಂಕಣ ಮರಾಠವಾಡಾ ಮತ್ತು ವಿದರ್ಭದಲ್ಲಿ 7ರಿಂದ 8 ಸೀಟುಗಳು ಸಮಸ್ಯೆಯಲ್ಲಿವೆ. 

ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಕಳೆದುಕೊಳ್ಳುತ್ತದೋ ಅಷ್ಟನ್ನು ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಭರಪಾಯಿ ಮಾಡಿಕೊಳ್ಳಬಹುದಾ ಎಂಬುದು ಕುತೂಹಲದ ವಿಷಯ. ಆದರೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ನಂಬರ್‌ಒನ್ ಪಾರ್ಟಿಯಾಗಿ ಹೊರಹೊಮ್ಮವ ಸಾಧ್ಯತೆಗಳಿವೆ. ಇದು ಕೊನೆಯದಾಗಿ ಬಿಜೆಪಿಯನ್ನು ಎಷ್ಟು ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ ಎಂದು ಇಷ್ಟು ಬೇಗ ಊಹಿಸುವುದು ಕಷ್ಟ. ಮೋದಿಯ ಒಂದು ಸಾಮರ್ಥ್ಯ ಎಂದರೆ ಕೊನೆ ಬಾಲ್‌ವರೆಗೂ ಕಾದಾಡಿ ಸಮಸ್ಯೆಯಲ್ಲಿರುವ ಕ್ಷೇತ್ರವನ್ನು ತನ್ನತ್ತ ತಿರುಗಿಸಿಕೊಳ್ಳುವುದು. ದೌರ್ಬಲ್ಯ ಎಂದರೆ ಬರೀ ಮೋದಿ ಬಿಟ್ಟು ಬಿಜೆಪಿ ಸ್ಥಳೀಯನಾಯಕರಿಗೆ ಆಶಕ್ತಿ ಇಲ್ಲದೇ ಇರುವುದು. ಇನ್ನು ವಿಪಕ್ಷಗಳ ಸಾಮರ್ಥ್ಯ ಎಂದರೆ ಮೋದಿಗೆ ಇರುವಂತೆ ಗೆಲ್ಲಲೇಬೇಕು ಎಂಬ ಒತ್ತಡ ಇಲ್ಲದೇ ಇರುವುದು. ದೌರ್ಬಲ್ಯ ಎಂದರೆ ಮೋದಿಯಂತೆ ವೋಟು ತರುವ ರಾಷ್ಟ್ರೀಯ ನಾಯಕತ್ವವೇ ಇಲ್ಲದಿರುವುದು. ಈಗಿನ ಸೋಷಿಯಲ್ ಮೀಡಿಯಾಯುಗದಚುನಾವಣೆಗಳು ಒಂದು ರೀತಿಯಲ್ಲಿ 20 -20 ಮ್ಯಾಚ್ ಇದ್ದಂತೆ, ಒಂದು ನಾಲ್ಕು ಸಿಕ್ಸರ್‌ಬಿದ್ದರೆ ಮ್ಯಾಚ್‌ನ ರಂಗು ರೂಪವೇ ಬದಲಾಗಿಬಿಡುತ್ತದೆ.

ಕರ್ನಾಟಕದಲ್ಲಿ ಆಗಿರುವುದು ಏನು?
2014 ಮತ್ತು 2019ಕ್ಕೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಪ್ರಚಾರದ ಉತ್ಸಾಹ ಕಡಿಮೆ ಇತ್ತು. ಆದರೆ ಮೋದಿ ಮತದಾರರಲ್ಲಿ ಮತ ಹಾಕುವ ಉತ್ಸಾಹ ಜಾಸ್ತಿಯೇ ಇತ್ತು. ಕಳೆದ ಎರಡು ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಕಾರ್ಯಕರ್ತರ ಅಬ್ಬರ ತಳಮಟ್ಟದಲ್ಲಿ ಕಾಣುತ್ತಿತ್ತು. ಹಳೆಯ ಲೋಕಸಭಾ ಚುನಾವಣೆಗಳನ್ನು ಹೋಲಿಸಿ ನೋಡಿದರೆ ಎರಡು ಪಾರ್ಟಿಗಳು ಈ ಬಾರಿ ಅತೀ ಹೆಚ್ಚು ದುಡ್ಡು ಖರ್ಚು ಮಾಡುತ್ತಿವೆ ಎಂಬುದು ಎದ್ದು ಕಾಣುತ್ತಿತ್ತು. ಪಾರ್ಟಿ ಜೊತೆ ಗುರುತಿಸಿಕೊಂಡಿರುವ ಜಾತಿಗಳ ಅಸ್ಮಿತೆ ಮೀರಿ ಮೋದಿ ಪ್ರೀತಿ ಆಗಲಿ ಮತ್ತು ಕಾಂಗ್ರೆಸ್ ಗ್ಯಾರಂಟಿ ಆಗಲಿ ತುಂಬಾ ಇತ್ತು ಎಂಬುದು ಕಣ್ಣಿಗೆ ಕಾಣಲಿಲ್ಲ. ಟಿವಿ ಮತ್ತು ಮೊಬೈಲ್‌ಗಳ ಪರದೆ ಮೇಲೆ ಚುನಾವಣೆ ಜ್ವರ ಹೆಚ್ಚು ಕಾಣುತ್ತಿತ್ತೇ ಹೊರತು ಬಿಸಿಲಿನ ಝಳದಿಂದ ದೊಡ್ಡ ನಾಯಕರು ಬಂದಾಗ ಮಾತ್ರ ಜನ ಹೊರಗೆ ಬರುತ್ತಿದ್ದರು. 

ಅನೇಕ ಜಿಲ್ಲೆಗಳಲ್ಲಿ ಮೊದಲಿನಂತೆ ಬಿಜೆಪಿ ಕೆಡರ್‌ಪಾರ್ಟಿ ಆಗಿ ಉಳಿಯದೇ ಮಾಸ್ ಪಾರ್ಟಿಯಾಗಿ ಅಪಸವ್ಯಗಳಿಂದ ಸಮಸ್ಯೆ ಎದುರಿಸಿದಂತೆ ಕಂಡುಬಂತು. ಮೋದಿ ಬಂದಾಗ ಮಾತ್ರ ಬಿಜೆಪಿ ಕಾರ್ಯಕರ್ತರ ಅಬ್ಬರ ಜಾಸ್ತಿ ಇರುತ್ತಿತ್ತು. ಕಾಂಗ್ರೆಸ್‌ಗೂ ಕೂಡ ಈ ಸಮಸ್ಯೆ ಇತ್ತಾದರೂ, ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದರಿಂದ ಕನಿಷ್ಠ ಪಕ್ಷ ಅಧಿಕಾರ ಮತ್ತು ಗ್ಯಾರಂಟಿಗಳ ಪ್ರಭಾವದಿಂದ ಬೀದಿಗಿಳಿದು ಅಬ್ಬರ ಮಾಡುವುದು ಕಣ್ಣಿಗೆ ಕಾಣುತ್ತಿತ್ತು. ರಾಜ್ಯದಲ್ಲಿಲಿಂಗಾಯಿತರು, ಒಕ್ಕಲಿಗರು, ಕುರುಬರು, ದಲಿತ ಬಲಗೈ ಎಡಗೈ ಮತದಾರರ ವೋಟಿನ ಪ್ರಾತಿನಿಧ್ಯ ಈಗಿನ ಚುನಾವಣೆಯಲ್ಲೇನೋ ಬಹಳ ಬದಲಾದಂತೆ ಕಾಣಲಿಲ್ಲ. ಆದರೆ ಅತೀ ಹಿಂದುಳಿದ ಮತದಾರರು, 'ಮೋದಿಗೆ ಮತ ದೇಶಕ್ಕೆ ಹಿತ' ಎಂದು ಒಟ್ಟಾಗಿ ಹೋಗಿದ್ದಾರೋ ಅಥವಾ ಗ್ಯಾರಂಟಿಗಳ ಮೋಹಕ್ಕೆ ಒಳಗಾಗಿ 'ಕಾಂಗ್ರೆಸ್‌ಗೆ ಮತ, ರಾಜ್ಯಕ್ಕೆ ಹಿತ' ಎಂದು ವೋಟು ಹಾಕಿದ್ದಾರೋ ಅನ್ನುವುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ.

ನೇಹಾ ಹತ್ಯೆಯನ್ನು ಮರೆಸಿದ ಪ್ರಜ್ವಲ್‌!
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠಳನ್ನು ಮುಸ್ಲಿಂ ಯುವಕ ಚುಚ್ಚಿ ಕೊಂದ ದೃಶ್ಯಗಳು ವೈರಲ್ ಆದಾಗ ಏಪ್ರಿಲ್ 26ರ ಮುಂಚೆ ಹಳೇ ಮೈಸೂರಿನ ಮತದಾರರು ಕೂಡ ಸಹಜವಾಗಿ ನೇಹಾ ಪ್ರಕರಣದ ಬಗ್ಗೆ ನಮಗೆ ತಳಮಳ ಇದೆ ಎಂದು ಮಾತನಾಡಿಕೊಳ್ಳತೊಡಗಿದರು. ಗ್ಯಾರಂಟಿ ಗ್ಯಾರಂಟಿ ಎಂಬ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ಗೆ ಟೆನ್ನನ್ ಆಗುವಷ್ಟು ನೇಹಾ ಪ್ರಕರಣ ಚರ್ಚೆ ಆಗತೊಡಗಿದ್ದು ನಿಜ. ಏಕೆಂದರೆ ಧರ್ಮ ಅಂತ ಚರ್ಚೆ ಆದರೆ ಬಿಜೆಪಿಗೆ ಲಾಭ ಜಾಸ್ತಿ, ಕಾಂಗ್ರೆಸ್‌ಗೆ ನಷ್ಟ ಜಾಸ್ತಿ. ಆದರೆ ಯಾವಾಗ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ದೃಶ್ಯಗಳು ಬಿಡುಗಡೆಗೊಂಡವೋ ಕಾಂಗ್ರೆಸ್ ರಣತಂತ್ರಗಾರರಿಗೆ ನೇಹಾ ಪ್ರಕರಣದ ತೀವ್ರತೆ ಕಡಿಮೆ ಮಾಡಬಲ್ಲ ಶಕ್ತಿ ಇದಕ್ಕೆ ಮಾತ್ರ ಇದೆ ಅನ್ನಿಸತೊಡಗಿತ್ತು. 

ಆದರೆ ಮೊದಲ ಹಂತಕ್ಕೆ ಮೊದಲು ಎಸ್‌ಐಟಿ ರಚಿಸಿದರೆ ಒಕ್ಕಲಿಗರು ತಿರುಗಿಬಿದ್ದರೆ ಅನ್ನುವ ದ್ವಂದ್ವದಲ್ಲಿದ್ದ ಕಾಂಗ್ರೆಸ್ ನಾಯಕರು ಏಪ್ರಿಲ್ 26ರ ಸಂಜೆವರೆಗೂ ಸುಮ್ಮನಿದ್ದರು. ಆದರೆ ಯಾವಾಗ ಮೊದಲ ಹಂತದ ಚುನಾವಣೆ ನಡೆದ ನಂತರ ಎಸ್‌ಐಟಿ ರಚನೆ ಆಯಿತೋ ಒಂದು ವಾರ ಪೂರ್ತಿ ಮಾಧ್ಯಮಗಳಲ್ಲಿ ಇದೇ ಸುದ್ದಿ ಇದೇ ಚರ್ಚೆ. ಉತ್ತರ ಕರ್ನಾಟಕದಲ್ಲಿ ಪ್ರಜ್ವಲ್ ಕಾರಣದಿಂದ ಜನ ವೋಟು ಮಾಡಿದಂತೆ ಕಾಣಲಿಲ್ಲ. ಆದರೆ ಅಶ್ಲೀಲ ದೃಶ್ಯಗಳ ಚರ್ಚೆ ಉತ್ತರ ಕರ್ನಾಟಕದಲ್ಲಿ ನೇಹಾ ಪ್ರಕರಣದ ತೀವ್ರತೆ ಮಾತ್ರ ಕಡಿಮೆ ಮಾಡಿದ್ದು ನಿಜ. ಎಲ್ಲಾ ರಾಜಕೀಯ ಪಾರ್ಟಿಗಳಿಗೂ ಸಂಚಲನ ಸೃಷ್ಟಿಸುವ ಪ್ರಕರಣಗಳು ವೋಟ್ ಬ್ಯಾಂಕ್ ಅನ್ನು ಕೂತಲ್ಲಿಯೇ ತಲುಪಬಲ್ಲ ಅಸ್ತ್ರಗಳು. ಈ ಕಡೆ ಚುನಾವಣೆ ಮುಗಿದ ಮೇಲೆ ಆ ಕಡೆಯ ಪ್ರಕರಣಗಳಲ್ಲೂ ಆಸಕ್ತಿ ಕಡಿಮೆ ಆಗುತ್ತದೆ ನೋಡ್ತಾ ಇರಿ.

India Gate: ಸದಾ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಯಾಕೆ?: ಪ್ರಶಾಂತ್‌ ನಾತು

ಪ್ರಜ್ವಲ್ ಬಗ್ಗೆ ಗೌಡರ ಧೃತರಾಷ್ಟ್ರ ಪ್ರೀತಿ
ದುಶ್ಯಾಸನ ದೌಪದಿಯ ಸೀರೆ ಎಳೆದಾಗಲೇ ಧೃತರಾಷ್ಟ್ರ ಮತ್ತು ಗಾಂಧಾರಿ ಮಕ್ಕಳನ್ನು ನಡೆಯಿರಿ ಆಚೆಗೆ, ಇಲ್ಲಿ ಇಂಥದ್ದಕ್ಕೆ ಜಾಗ ಇಲ್ಲ' ಎಂದು ಹೇಳಿದ್ದರೆ ಕುರುಕ್ಷೇತ್ರ ಯುದ್ಧ ಆಗುತ್ತಿರಲಿಲ್ಲ, 100 ಮಕ್ಕಳು ಸಾಯುತ್ತಿರಲಿಲ್ಲ. ಧೃತರಾಷ್ಟ್ರ ಕೆಟ್ಟ ವ್ಯಕ್ತಿಯಲ್ಲ, ಪುತ್ರ ವ್ಯಾಮೋಹಿ ಅಷ್ಟೆ. ಈಗ ದೇವೇಗೌಡರ ಜೊತೆ ನಡೆದದ್ದು ಕೂಡ ಅದೇ. ಅಮಿತ್ ಶಾ ಕರೆದು, 'ಪ್ರಜ್ವಲ್ ರೇವಣ್ಣಸಿ.ಡಿ. ಇದೆ, ಟಿಕೆಟ್ ಕೊಡುವುದು ಬೇಡ, ಅನಾಹುತ ಆದೀತು' ಎಂದು ಕುಮಾರಸ್ವಾಮಿ ಮೂಲಕ ದೇವೇಗೌಡರಿಗೆ ತಿಳಿಸಿ ಹೇಳಿದ್ದರು. ಕುಮಾರಸ್ವಾಮಿ ಕೂಡ ಬೇಕಿದ್ದರೆ ನೀವು ನಿಲ್ಲಿ ಪ್ರಜ್ವಲ್ ಬೇಡ' ಎಂದು ಹೇಳಿದರೂ ಕೇಳದ ದೇವೇಗೌಡರು ಯಾರನ್ನೂ ಕೇಳದೆ ಹಾಸನಕ್ಕೆ ಹೋಗಿ ಮೊಮ್ಮಗನೇ ಅಭ್ಯರ್ಥಿ ಎಂದು ಘೋಷಿಸಿದ್ದೇ ಈಗಿನ ಎಲ್ಲಾ ಅವಘಡಗಳಿಗೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ದೇವೇಗೌಡರ ಸಾಮರ್ಥ್ಯವೇ ಅವರ ಚಾರಿತ್ರ್ಯ ಮತ್ತು ಹಟ. ಆದರೆ ಇಂದು ಮೊಮ್ಮಗ ಎಂಬ ವ್ಯಾಮೋಹ ದೌರ್ಬಲ್ಯದ ನಿರ್ಣಯ ದೊಡ್ಡಗೌಡರ ಕುಟುಂಬವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದೆ. 91 ವರ್ಷದ ದೇವೇಗೌಡರ ನೋವು ಊಹಿಸಿಯೇ ಅಯ್ಯೋ ಅನ್ನಿಸುತ್ತದೆ.

click me!