ಲೋಕಸಭೆ ಚುನಾವಣೆ 2024: ಒಕ್ಕಲಿಗರ ಕೋಟೆಯ ಅಧಿಪತಿ ಯಾರು?, ಪ್ರಶಾಂತ್ ನಾತು
ಈ ಬಾರಿ ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರ ಆಗಬೇಕಾದ ಒಂದು ವಿಷಯ ಅಂದರೆ ಒಕ್ಕಲಿಗರ ನಾಯಕ ಯಾರು? ಅಧಿಪತ್ಯ ದೇವೇಗೌಡರ ಕುಟುಂಬದಲ್ಲೇ ಉಳಿಯುತ್ತಾ? ಅಥವಾ ಕನಕಪುರದ ಬಂಡೆ ತನ್ನ ಉರುಳುವ ಸಾಮರ್ಥ್ಯವನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುತ್ತಾ? 2023ರಲ್ಲಿ ಕೂಡ ಕುಮಾರಸ್ವಾಮಿ ವರ್ಸಸ್ ಡಿ.ಕೆ. ಶಿವಕುಮಾರ್ ಕಾದಾಟ ನಡೆದಿತ್ತು.
ಪ್ರಶಾಂತ್ ನಾತು
ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಏ.14): ಒಮ್ಮೆ ಅವರ ಜೊತೆ, ಇನ್ನೊಮ್ಮೆ ಇವರ ಜೊತೆ ಹೋದರೂ ಪರವಾಗಿಲ್ಲ, ಹಳೇ ಮೈಸೂರಿನ 8 ಜಿಲ್ಲೆಗಳಲ್ಲಿ ಒಕ್ಕಲಿಗರ ವೋಟುಗಳ ಪೈಕಿ ಶೇ.65ರಿಂದ ಶೇ.70 ವೋಟುಗಳು ತನ್ನ ಜೊತೆಗಿದ್ದರೆ ಸಾಕು, ಪ್ರಸ್ತುತತೆ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಗೌಡರ ಕುಟುಂಬ ಇದೆ.
ಹಿಂದಿನ ಕಾಲದಲ್ಲಿ ರಾಜ್ಯ ಯಾರದು, ಸಿಂಹಾಸನ ಯಾರದು ಎನ್ನುವ ಪ್ರಶ್ನೆಗೆ ಯುದ್ಧಗಳು ಉತ್ತರ ಕೊಡುತ್ತಿದ್ದವು. ಅಲ್ಲಿ ಪ್ರಜೆಗಳ ನಿರ್ಣಯ ಏನೂ ಇರುತ್ತಿರಲಿಲ್ಲ. ಆದರೆ ಆಧುನಿಕ ಕಾಲದಲ್ಲಿ ನಾವು ಕಂಡುಕೊಂಡಿರುವ ಪ್ರಜಾಪ್ರಭುತ್ವದ ಮಹತ್ವ ನೋಡಿ. ಅಧಿಪತ್ಯ ಯಾರದು ಎನ್ನುವ ಪ್ರಶ್ನೆಗೆ ಉತ್ತರ ಬಾಹುಬಲದಲ್ಲಿ, ಹಣಬಲದಲ್ಲಿ ಇಲ್ಲ. ಬದಲಿಗೆ ಪ್ರಜೆಗಳು ನಿರ್ಧಾರ ಮಾಡುತ್ತಾರೆ. ಈ ಬಾರಿ ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರ ಆಗಬೇಕಾದ ಒಂದು ವಿಷಯ ಅಂದರೆ ಒಕ್ಕಲಿಗರ ನಾಯಕ ಯಾರು? ಅಧಿಪತ್ಯ ದೇವೇಗೌಡರ ಕುಟುಂಬದಲ್ಲೇ ಉಳಿಯುತ್ತಾ? ಅಥವಾ ಕನಕಪುರದ ಬಂಡೆ ತನ್ನ ಉರುಳುವ ಸಾಮರ್ಥ್ಯವನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುತ್ತಾ? 2023ರಲ್ಲಿ ಕೂಡ ಕುಮಾರಸ್ವಾಮಿ ವರ್ಸಸ್ ಡಿ.ಕೆ. ಶಿವಕುಮಾರ್ ಕಾದಾಟ ನಡೆದಿತ್ತು. ಆದರೆ ಆಗ ಇಬ್ಬರೂ ವಿಪಕ್ಷದಲ್ಲಿದ್ದರು. ಈಗ ಕುಮಾರಸ್ವಾಮಿ ಬಂಡೆಯ ತಾಕತ್ತು ನಿಯಂತ್ರಿಸುವ ಏಕಮಾತ್ರ ಕಾರಣಕ್ಕಾಗಿ ಮೋದಿ ಜೊತೆ ಕೈಜೋಡಿಸಿದ್ದಾರೆ. ಇನ್ನೊಂದು ಕಡೆ ವಿಧಾನಸಭೆಯಂತೆ ಲೋಕಸಭೆಯಲ್ಲಿ ಕೂಡ ಒಕ್ಕಲಿಗರು ‘ಕೈ’ ಹಿಡಿದರೆ ಈಗಿರುವ ಉಪ ಮುಖ್ಯಮಂತ್ರಿ ಹುದ್ದೆಯಿಂದ ಮುಖ್ಯಮಂತ್ರಿ ಗದ್ದುಗೆಗೆ ಏರುವುದು ಪಕ್ಕಾ ಆಗಬಹುದು ಎಂಬ ಉಮೇದಿಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ. ಈ ಬಾರಿ ಕಣ್ಣಿಗೆ ಕಾಣುತ್ತಿರುವ ಆರ್ಭಟಗಳು, ವೀರಾವೇಶ ತಂತ್ರ-ಕುತಂತ್ರ ಎಲ್ಲವೂ ಈ ‘ಅಧಿಪತ್ಯ’ಕ್ಕಾಗಿಯೇ.
India Gate: ಸದಾ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಯಾಕೆ?: ಪ್ರಶಾಂತ್ ನಾತು
ಗೌಡರ ಕುಟುಂಬಕ್ಕೆ ಮಾಡು ಇಲ್ಲವೇ ಮಡಿ
ಕರ್ನಾಟಕದ ರಾಜಕಾರಣದಲ್ಲಿ ನಿಜಲಿಂಗಪ್ಪ, ದೇವರಾಜ್ ಅರಸ್, ವೀರೇಂದ್ರ ಪಾಟೀಲ್, ಹೆಗಡೆ, ಪಟೇಲರಂಥ ಜನಾನುರಾಗಿ ರಾಜಕಾರಣಿಗಳಿಗೂ ಒಂದು ಪ್ರಾದೇಶಿಕ ಪಾರ್ಟಿ ಕಟ್ಟಿ 25 ವರ್ಷ ಆಸ್ತಿತ್ವ ಉಳಿಸಿಕೊಳ್ಳುವುದು ಸಾಧ್ಯ ಆಗಿಲ್ಲ. ಬಂಗಾರಪ್ಪ, ಯಡಿಯೂರಪ್ಪ ತಮ್ಮದೇ ಪಾರ್ಟಿ ಕಟ್ಟಿ ಒಂದು ಚುನಾವಣೆಯಲ್ಲಿ ಶೇ.10 ಮತ ಪಡೆದು ತೋರಿಸಿದರೂ ಕೂಡ ಅದನ್ನು ಉಳಿಸಿಕೊಳ್ಳುವುದು ಸಾಧ್ಯ ಆಗಿಲ್ಲ. ಇದು ಸಾಧ್ಯ ಆದದ್ದು ದೇವೇಗೌಡರಿಗೆ ಮಾತ್ರ. ಶೇ.13ರಿಂದ ಶೇ.20 ಮತಗಳನ್ನು ದಶಕಗಳವರೆಗೆ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಇಷ್ಟೆಲ್ಲಾ ಆದರೂ ಕೂಡ 1996ರಿಂದ ಈಗಿನವರೆಗೆ ದೇವೇಗೌಡರ ಕುಟುಂಬ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು 52 ತಿಂಗಳು ಮಾತ್ರ. 1996ರಿಂದ 1998 ದೇವೇಗೌಡ, 2006ರಲ್ಲಿ 20 ತಿಂಗಳು ಕುಮಾರಸ್ವಾಮಿ ಮತ್ತು 2018ರಲ್ಲಿ ಒಂದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ 15 ವರ್ಷ ಕಾಂಗ್ರೆಸ್ ಜೊತೆ ಅಧಿಕಾರದಲ್ಲಿ ಇದ್ದಂತೆ ಜೆಡಿಎಸ್ ಕೂಡ ಅಧಿಕಾರದಲ್ಲಿ ಇರಬಹುದಿತ್ತು. ಆದರೆ ದೇವೇಗೌಡರ ರಾಜಕೀಯ ಚಂಚಲತೆ ಇದನ್ನು ಮಾಡಲು ಬಿಡಲಿಲ್ಲ. ಇದು ಗೌಡರ ದೊಡ್ಡ ದೌರ್ಬಲ್ಯ ಎಂಬುದು ಕೆಲ ವಿಶ್ಲೇಷಕರ ಅಭಿಪ್ರಾಯ ಹೌದು. ಆದರೆ ಇದೇ ದೇವೇಗೌಡರ ಸಾಮರ್ಥ್ಯವೂ ಹೌದು. ಬಿಜೆಪಿ ಅಥವಾ ಕಾಂಗ್ರೆಸ್ ಜೊತೆಗೆ ಸುದೀರ್ಘ ಸಮಯ ಇದ್ದರೆ ಅವೇ ಪಾರ್ಟಿಗಳು ತಮ್ಮನ್ನು ಆಪೋಶನ ತೆಗೆದುಕೊಳ್ಳುತ್ತವೆ. ಹೀಗಾಗಿ ಒಮ್ಮೆ ಅವರ ಜೊತೆ, ಇನ್ನೊಮ್ಮೆ ಇವರ ಜೊತೆ ಹೋದರೂ ಪರವಾಗಿಲ್ಲ, ಹಳೇ ಮೈಸೂರಿನ 8 ಜಿಲ್ಲೆಗಳಲ್ಲಿ ಒಕ್ಕಲಿಗರ ವೋಟುಗಳ ಪೈಕಿ ಶೇ.65ರಿಂದ ಶೇ.70 ವೋಟುಗಳು ತನ್ನ ಜೊತೆಗಿದ್ದರೆ ಸಾಕು, ಪ್ರಸ್ತುತತೆ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಗೌಡರ ಕುಟುಂಬ ಇದೆ.
ಡಿ.ಕೆ.ಶಿವಕುಮಾರ್ ಚಾಲೆಂಜ್ ಏನು?
ಕೆಂಗಲ್ ಹನುಮಂತಯ್ಯ ಅವರ ನಂತರ ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು ದೇವೇಗೌಡರಿಗೆ. ಅಂದರೆ 1956ರ ನಂತರ ಅವಕಾಶ ಸಿಕ್ಕಿದ್ದು 1994ರಲ್ಲಿ, ಬರೋಬ್ಬರಿ 38 ವರ್ಷಗಳ ನಂತರ. ಅದೃಷ್ಟ ನೋಡಿ, ನೋಡ್ತಾ ನೋಡ್ತಾ ಎರಡೇ ವರ್ಷದಲ್ಲಿ ದೇವೇಗೌಡರು ದೇಶದ ಪ್ರಧಾನಿಯೂ ಆಗಿಬಿಟ್ಟರು. ಆಗ ಒಕ್ಕಲಿಗರಲ್ಲಿ ದೇವೇಗೌಡ ಅಂದರೆ ದಂತಕಥೆ ಅನ್ನುವ ಭಾವನೆ ಬಂದಿದ್ದೇ ಪ್ರಾದೇಶಿಕ ಪಾರ್ಟಿ ಇಷ್ಟು ವರ್ಷ ಕಚ್ಚಿಕೊಳ್ಳಲು ಮುಖ್ಯ ಕಾರಣ. 1999ರಲ್ಲಿ ಶುರುವಾದ ಜೆಡಿಎಸ್‌ಗೆ ಆ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಕಾಂಗ್ರೆಸ್‌ನ ಸಾರಥಿ ಆಗಿದ್ದರಿಂದ ಹೆಚ್ಚು ಯಶಸ್ಸು ಸಿಗಲಿಲ್ಲ. ಆದರೆ ದೇವೇಗೌಡ ಮತ್ತು ಸಿದ್ದರಾಮಯ್ಯ ಜೋಡಿ 2004ರಲ್ಲಿ ಎಸ್.ಎಂ.ಕೃಷ್ಣರ ಕೋಟೆ ಕೆಡವಿಹಾಕಿದ ಮೇಲೆ 20 ವರ್ಷ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ದೇವೇಗೌಡರ ಒಕ್ಕಲಿಗ ಕೋಟೆಗೆ ಲಗ್ಗೆ ಹಾಕುವ ಧೈರ್ಯ ಯಾರೂ ತೋರಿರಲಿಲ್ಲ. ಆದರೆ ಕೃಷ್ಣ ನಂತರ ಆ ನಾಯಕತ್ವ ಸಾಮರ್ಥ್ಯ ಕಾಣುತ್ತಿರುವುದು ಡಿ.ಕೆ.ಶಿವಕುಮಾರ್‌ರಲ್ಲಿ ಮಾತ್ರ. ಶಿವಕುಮಾರ್ ರಾಷ್ಟ್ರೀಯ ಪಾರ್ಟಿ ಆದ ಕಾಂಗ್ರೆಸ್‌ನಲ್ಲಿರುವುದರಿಂದ ಸಹಜವಾಗಿ ಮುಸ್ಲಿಮರು, ದಲಿತ ಬಲಗೈ ಮತ್ತು ಕುರುಬರ ಮತಗಳು ಮತ್ತು ಶೇ.25ರಿಂದ ಶೇ.30 ದೇವೇಗೌಡರ ವಿರೋಧಿ ಒಕ್ಕಲಿಗರ ವೋಟುಗಳು ಬಂದೇ ಬರುತ್ತವೆ. ಜೊತೆಗೆ ದೇವೇಗೌಡರ ಜೊತೆ ಈ ಬಾರಿ ಹೋಗಲೋ ಬೇಡವೋ ಎಂಬ ಯೋಚನೆಯಲ್ಲಿರುವ ಶೇ.20ರಿಂದ ಶೇ.25 ಒಕ್ಕಲಿಗರ ವೋಟುಗಳನ್ನು ಡಿ.ಕೆ.ಶಿವಕುಮಾರ್ ತಮ್ಮ ಹೆಸರಿನ ಬಲದಿಂದ ಪಡೆದರೂ ಸಾಕು, ಕಾಂಗ್ರೆಸ್‌ಗೆ ವೋಟುಗಳನ್ನು ಸೀಟುಗಳನ್ನಾಗಿ ಪರಿವರ್ತಿಸುವ ಶಕ್ತಿ ಬರುತ್ತದೆ. ಆದರೆ ಜೆಡಿಎಸ್‌ಗೆ ಈ ವೋಟುಗಳನ್ನು ಕಳೆದುಕೊಂಡರೆ ಮುಸ್ಲಿಮರು ಮತ್ತು ಕುರುಬರ ವೋಟುಗಳನ್ನು ಪಡೆದುಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ದೇವೇಗೌಡರು ಲಿಂಗಾಯತರು ಹಾಗೂ ಉಳಿದ ಹಿಂದುಳಿದ ವರ್ಗಗಳ ವೋಟ್ ಬ್ಯಾಂಕ್ ಇರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದು ಕ್ಲಿಕ್ ಆದರೆ ನಿಸ್ಸಂದೇಹವಾಗಿ ಡಿ.ಕೆ.ಶಿವಕುಮಾರ್‌ರ ಶರವೇಗಕ್ಕೆ ತಡೆ ಬೀಳುತ್ತದೆ. ಆದರೆ ಇದು ವಿಫಲ ಆದರೆ ಶಿವಕುಮಾರ್ ವೇಗಕ್ಕೆ ಇನ್ನಷ್ಟು ಆಮ್ಲಜನಕ ಸಿಗುತ್ತದೆ. ಒಬ್ಬ ವ್ಯಕ್ತಿ ಮಾಸ್ ಲೀಡರ್ ಆಗಿ ಹೊರಹೊಮ್ಮವುದು ಅಷ್ಟು ಸುಲಭ ಇರುವುದಿಲ್ಲ.
ವೋಟರ್ ಅದಲಿ-ಬದಲಿ ಆಗ್ತಾರಾ?
ದುರ್ಬಲ ಸ್ಥಿತಿಯಲ್ಲಿ ಒಂದು ಪಾರ್ಟಿ ಇನ್ನೊಂದು ಪಾರ್ಟಿ ಜೊತೆ ಸೇರಿದಾಗ ಬಲಶಾಲಿ ಮೀನು ದುರ್ಬಲ ಮೀನನ್ನು ನುಂಗಿ ಹಾಕುತ್ತದೆ ಅನ್ನುವುದು ಸಹಜ ಪ್ರಕ್ರಿಯೆ.1989ರಲ್ಲಿ ಬಿಎಸ್ಪಿಯ ಕಾನ್ಷಿರಾಮ್ ಜೊತೆಗೆ ಮೈತ್ರಿ ಮಾಡಿಕೊಂಡ ತಪ್ಪಿಗೆ ಕಾಂಗ್ರೆಸ್ 35 ವರ್ಷದಿಂದ ಯುಪಿಯಲ್ಲಿ ತಲೆ ಎತ್ತಲು ಸಾಧ್ಯ ಆಗುತ್ತಿಲ್ಲ. ಕರ್ನಾಟಕದಲ್ಲೇ 1999ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹೆಗಡೆ ಮತ್ತು ಪಟೇಲರ ಲಿಂಗಾಯತ ಮತ ಮತ್ತು ನಾಯಕರನ್ನು ಬಿಜೆಪಿ ಆಪೋಶನ ತೆಗೆದುಕೊಂಡಿತು. ಈಗ 2024ಕ್ಕೆ ಬರೋಣ. ಬರೀ ಗಣಿತದ ದೃಷ್ಟಿಯಿಂದ ನೋಡಿದರೆ ಹಳೇ ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜೊತೆ ಬಂದಾಗ 11 ಸೀಟುಗಳಲ್ಲಿ 2ರಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು. ಆದರೆ ರಾಜಕಾರಣದಲ್ಲಿ ಹಾಗೆ ಆಗುವುದಿಲ್ಲ. ಬಿಜೆಪಿಯ ಕಟ್ಟಾ ಮತಗಳು ಮೋದಿ ಕಾರಣದಿಂದ ಜೆಡಿಎಸ್‌ಗೆ ವರ್ಗಾವಣೆ ಆದರೂ ಆಗಬಹುದು, ಆದರೆ ದೇವೇಗೌಡರ ವಿರೋಧದ ಕಾರಣದಿಂದ ಬಿಜೆಪಿಯತ್ತ ವಾಲಿದ್ದ ಮತಗಳು ಮನೆಯಲ್ಲಿ ಕುಳಿತುಕೊಳ್ಳುತ್ತವೆಯೇ ಅಥವಾ ಕಾಂಗ್ರೆಸ್ ಕಡೆ ವಾಲುತ್ತವೆಯೇ ಎನ್ನುವುದು ಪ್ರಶ್ನೆ. ಜೊತೆಗೆ ಬಿಜೆಪಿ ಅಭ್ಯರ್ಥಿ ಇರುವ ಕ್ಷೇತ್ರಗಳಲ್ಲಿ ಕಟ್ಟಾ ಜೆಡಿಎಸ್ ಒಕ್ಕಲಿಗ ಗ್ರಾಮೀಣ ಮತದಾರ ಮೈತ್ರಿಗಾಗಿ ಬಿಜೆಪಿಯತ್ತ ಒಲವು ತೋರುತ್ತಿದ್ದಾನೆ. ಆದರೆ ಜೆಡಿಎಸ್ ಜೊತೆಗೆ ನಾನಾ ಸ್ಥಳೀಯ ಕಾರಣಗಳಿಂದ ಇರುವ ಅತೀ ಹಿಂದುಳಿದ ದಲಿತ ಮತದಾರ ಬಿಜೆಪಿಯತ್ತ ವಾಲುವ ಬಗ್ಗೆ ಉತ್ಸಾಹ ತೋರುತ್ತಿಲ್ಲ. ಅರ್ಥಾತ್ ಬಿಜೆಪಿ ಅಭ್ಯರ್ಥಿ ಇರುವ ಕ್ಷೇತ್ರಗಳಲ್ಲಿ ಎಷ್ಟು ಜೆಡಿಎಸ್ ಮತದಾರರು ಮತ್ತು ಜೆಡಿಎಸ್ ಅಭ್ಯರ್ಥಿ ಇರುವ ಕ್ಷೇತ್ರಗಳಲ್ಲಿ ಎಷ್ಟು ಬಿಜೆಪಿ ಮತದಾರರು ಕಾಂಗ್ರೆಸ್‌ನತ್ತ ಹೋಗಬಹುದು ಅನ್ನುವುದು ಬಹಳ ಮುಖ್ಯ ವಿಷಯ. ಅದೇ ಪ್ರಮಾಣದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ನತ್ತ ಹೋಗಿದ್ದ ಶೇ.5 ಮತದಾರರು ಲೋಕಸಭೆಯಲ್ಲಿ ಮೋದಿಯತ್ತ ವಾಲುತ್ತಾರೆ ಅನ್ನುವುದು ಕೂಡ ಫಲಿತಾಂಶ ಮತ್ತು ಗೆಲುವಿನ ಅಂತರವನ್ನು ನಿರ್ಧರಿಸಬಹುದು.
ಇವತ್ತಿನ ಸ್ಥಿತಿಯಲ್ಲಿ ನೋಡಿದಾಗ ಬಿಜೆಪಿ-ಜೆಡಿಎಸ್ ಪಕ್ಕಾ ಗೆಲ್ಲಬಹುದು ಎನ್ನುವ ವಾತಾವರಣದ 13 ಸೀಟುಗಳು ಇವೆ. ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿ ಇರುವ 5 ಸೀಟುಗಳು ಇವೆ. ಉಳಿದ 10 ಸೀಟುಗಳಲ್ಲಿ ಕೊನೆ ಕ್ಷಣದ ಹಣಾಹಣಿ, ಮೋದಿ ಹವಾ, ಜಾತಿ ಸಮೀಕರಣಗಳು, ದುಡ್ಡಿನ ಪ್ರಭಾವಗಳಿಂದ ಯಾರು ಎಷ್ಟು ಗೆಲ್ಲುತ್ತಾರೆ ಎಂಬುದು ನಿರ್ಧಾರವಾಗುತ್ತದೆ.
ಇಂಡಿಯಾ ಕೂಟವನ್ನು ಕಟ್ಟಿದ್ಯಾಕೆ..! ಒಡೆದಿದ್ಯಾಕೆ..!
ಪಕ್ಷಗಳ ಆಂತರಿಕ ಸರ್ವೇಗಳು
ಎಲ್ಲಾ ಪಾರ್ಟಿಗಳು ಮಾಡಿರುವ ಆಂತರಿಕ ಸರ್ವೇಗಳನ್ನು ತಾಳೆ ಹಾಕಿ ನೋಡಿದಾಗ ಕೆಲವೊಂದು ಅಂಶಗಳು ಸ್ಪಷ್ಟವಾಗುತ್ತಾ ಹೋಗುತ್ತಿವೆ. ಆರ್ಥಿಕವಾಗಿ ತಳಮಟ್ಟದ ಮಹಿಳೆಯರಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಕ್ರೇಜ್ ಇದೆ. ಮಧ್ಯಮ ವರ್ಗದ ಸ್ತ್ರೀಯರಲ್ಲಿ ಮೋದಿ ಕ್ರೇಜ್ ತುಸು ಜಾಸ್ತಿಯೇ ಇದೆ. ಕುರುಬ ಮಹಿಳೆಯರಲ್ಲಿ ಲೋಕಸಭೆಯಲ್ಲೂ ಸಿದ್ದರಾಮಯ್ಯ ಕ್ರೇಜ್ ಜಾಸ್ತಿ ಇದ್ದರೆ, ಕುರುಬ ಪುರುಷರಲ್ಲಿ ಸಿದ್ದು ನಂಬರ್ 1 ಇದ್ದರೂ ಕೂಡ, ಮೋದಿಯೂ ಹಿಂದುಳಿದವರೇ ತಾನೇ? ವಿಧಾನಸಭೆಯಲ್ಲಿ ಸಿದ್ದುಗೆ ಅವಕಾಶ ಕೊಟ್ಟಿದ್ದೇವೆ, ಈಗ ಮೋದಿಗೆ ಕೊಡೋಣ ಎಂಬ ಅಭಿಪ್ರಾಯ ಸ್ವಲ್ಪ ಇರುವಂತೆ ಕಾಣುತ್ತಿದೆ. ಇದೇ ಅಭಿಪ್ರಾಯ ದಲಿತ ಮಹಿಳೆಯರಲ್ಲೂ ಇದ್ದು, ಸ್ಪೃಶ್ಯ ಮತ್ತು ಅಸ್ಪೃಶ್ಯ ಮಹಿಳೆಯರ ಮತ್ತು ಪುರುಷರ ರಾಜಕೀಯ ಯೋಚನಾ ಲಹರಿಯಲ್ಲೂ ಅಂತರಗಳಿವೆ. 2023ಕ್ಕೆ ಹೋಲಿಸಿದರೆ ಲಿಂಗಾಯತರು ಹೆಚ್ಚು ಮರಳಿ ಬಿಜೆಪಿಯತ್ತ ವಾಲುತ್ತಿದ್ದಾರೆ. ಆದರೆ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಸ್ವಲ್ಪ ಮಟ್ಟಿಗಿನ ಗೊಂದಲಗಳು ಕಾಣುತ್ತಿವೆ. ಕರಾವಳಿ ಬಿಟ್ಟು ಬೇರೆ ಕಡೆ ಕುರುಬೇತರ ಹಿಂದುಳಿದ ವರ್ಗಗಳಲ್ಲಿ ಮೋದಿ ಜನಪ್ರಿಯತೆ ಹಾಗೇ ಉಳಿದುಕೊಂಡಿದೆ. ಆದರೆ ಕರಾವಳಿ ಕ್ಷೇತ್ರಗಳಲ್ಲಿ ಹಿಂದುತ್ವದ ಪ್ರಭಾವದ ಮಧ್ಯೆಯೂ ಹಿಂದುಳಿದ ವರ್ಗಗಳಲ್ಲಿ ಸಣ್ಣ ಕಿರಿಕಿರಿ ಕಾಣುತ್ತಿದೆ. ಅದೇ ಕಾರಣದಿಂದ ಮೋದಿ ಕಾರ್ಯಕ್ರಮ ಮಂಗಳೂರಿಗೆ ಫಿಕ್ಸ್ ಮಾಡಲಾಗಿದೆ. ಆಶ್ಚರ್ಯ ಎಂಬಂತೆ ಪ್ರತಿ ಬಾರಿ ಲೋಕಸಭೆ ಚುನಾವಣೆ ಎಂದರೆ ಹೇಗೂ ಬಿಜೆಪಿ ಗೆಲ್ಲುತ್ತದೆ ಬಿಡು ಎಂಬ ನಿರುತ್ಸಾಹದಲ್ಲಿ ಇರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಈ ಬಾರಿ ಮಂತ್ರಿಗಳ ಮಕ್ಕಳು ನಿಂತಿರುವ ಕಾರಣ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಆರ್‌ಎಸ್‌ಎಸ್‌ನಿಂದ ಬಂದಿರುವ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿಲ್ಲ. ಒಂದೋ ಗೆದ್ದೇಬಿಟ್ಟೆವು ಎಂಬ ಅತೀ ಆತ್ಮವಿಶ್ವಾಸ ಅಥವಾ ಅಯ್ಯೋ ಮೋದಿ ಓಕೆ, ಈ ಅಭ್ಯರ್ಥಿ ಯಾಕೆ ಅನ್ನುವ ಬೇಸರ ತಳಮಟ್ಟದಲ್ಲಿ ಎದ್ದು ಕಾಣುತ್ತಿದೆ. ಇದೆಲ್ಲಕ್ಕಿಂತ ಮುಖ್ಯ ವಿಷಯ ಅಂದರೆ, ಚುನಾವಣೆಗಳ ವ್ಯಾಖ್ಯೆಗಳು ಬದಲಾಗುತ್ತಿವೆ. ದುಡ್ಡು ಕೊಟ್ಟರೆ ಮಾತ್ರ ಬೀದಿಯಲ್ಲಿ ಓಡಾಡುತ್ತೇವೆ ಎಂಬ ರೋಗ ನಿಧಾನವಾಗಿ all party syndrom ಆಗಿಬಿಟ್ಟಿದೆ.
ಅಣ್ಣಾಮಲೈ ಕಥೆ ಏನು?
ತಮಿಳುನಾಡಿನಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಮೋದಿ ಮತ್ತು ಅಣ್ಣಾಮಲೈ ಬಗ್ಗೆ ಇರುವ ಸ್ಪಂದನೆಯಿಂದ ಬಿಜೆಪಿ ಶೇ.16ರಿಂದ ಶೇ.18 ವೋಟು ತೆಗೆದುಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಆದರೆ ಡಿಎಂಕೆ ತನ್ನ ವೋಟು ಉಳಿಸಿಕೊಳ್ಳಲಿದ್ದು, ಎಐಎಡಿಎಂಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇ.35 ವೋಟುಗಳಲ್ಲಿ ಶೇ.12ರಿಂದ ಶೇ.14 ವೋಟು ಕಳೆದುಕೊಳ್ಳಲಿದೆ. ಅವು ಬಿಜೆಪಿಗೆ ವರ್ಗಾವಣೆ ಆಗುತ್ತಿವೆ. 1999ರಲ್ಲಿ ಕೊಯಮತ್ತೂರಿನಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಅಣ್ಣಾಮಲೈ ಸ್ಪರ್ಧೆಯಿಂದಾಗಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನದವರೆಗೆ ದಾಪುಗಾಲು ಹಾಕುತ್ತಿದೆ. ಆದರೆ ಗೆಲ್ಲಬೇಕಾದರೆ ಗ್ರಾಮೀಣ ಭಾಗದಲ್ಲಿ ಡಿಎಂಕೆಯನ್ನು ಹಿಂದಿಕ್ಕಬೇಕು. ಅಣ್ಣಾಮಲೈ ಮತ್ತು ಡಿಎಂಕೆ ಅಭ್ಯರ್ಥಿ ಇಬ್ಬರೂ ಕೂಡ ಗೌಂಡರ್ ಸಮುದಾಯಕ್ಕೆ ಸೇರಿದ್ದು, ಅಣ್ಣಾಮಲೈ ಗೆಲ್ಲಬೇಕಾದರೆ ಆ ಸಮುದಾಯದ ಶೇ.60ಕ್ಕೂ ಹೆಚ್ಚು ವೋಟು ತೆಗೆದುಕೊಳ್ಳಬೇಕು. ಇನ್ನು 2014ರಲ್ಲಿ ಕನ್ಯಾಕುಮಾರಿಯಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಎಐಎಡಿಎಂಕೆಯ, ಮೀನುಗಾರರ ಮತ್ತು ಕ್ರಿಶ್ಚಿಯನ್ನರ ವೋಟು ಒಡೆದರೆ ಮಾತ್ರ ಗೆಲ್ಲಬಹುದು. ಒಟ್ಟಾರೆ ತಮಿಳುನಾಡಿನಲ್ಲಿ ಬಿಜೆಪಿಗೆ ಹವಾ ಇದೆ, ವೋಟು ಬರುತ್ತವೆ, ಆದರೆ ಸೀಟಾಗಿ ಪರಿವರ್ತನೆ ಅಷ್ಟು ಸುಲಭ ಇಲ್ಲ.