ವಿಪಕ್ಷಗಳು ಗದ್ದಲ ಮಾಡಿದರೆ ಸರ್ಕಾರಕ್ಕೇ ಲಾಭ, ಆದರಿದು ರಾಹುಲ್‌ ಅಂಡ್‌ ಟೀಮ್‌ಗೆ ತಿಳಿಯುತ್ತಿಲ್ಲ!

Suvarna News   | Asianet News
Published : Aug 13, 2021, 09:22 AM ISTUpdated : Aug 13, 2021, 09:49 AM IST
ವಿಪಕ್ಷಗಳು ಗದ್ದಲ ಮಾಡಿದರೆ ಸರ್ಕಾರಕ್ಕೇ ಲಾಭ, ಆದರಿದು ರಾಹುಲ್‌ ಅಂಡ್‌ ಟೀಮ್‌ಗೆ ತಿಳಿಯುತ್ತಿಲ್ಲ!

ಸಾರಾಂಶ

ಲಸಿಕೆ ಕೊರತೆ, ತೈಲ ಬೆಲೆ ಹೆಚ್ಚಳದಂತಹ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವುದರ ಬದಲು ಪೆಗಾಸಸ್‌ ಪ್ರಕರಣ ಹಿಡಿದು ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ಜಗ್ಗಾಡುತ್ತಿವೆ. ಜನಸಾಮಾನ್ಯರಿಗೆ ಪೆಗಾಸಸ್‌ ಕದ್ದಾಲಿಕೆ ವಿಷಯ ಮಹತ್ವದ್ದಲ್ಲ, ಅದು ಅವರ ತಲೆಗೆ ಹೋಗುವುದೂ ಇಲ್ಲ. 

ನವದೆಹಲಿ (ಆ. 13): ಯಾವುದೇ ಪ್ರಬುದ್ಧ ರಾಜಕೀಯ ಪಕ್ಷಗಳಿಗೆ ಮತ್ತು ಅವರ ನಾಯಕರಿಗೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಕ್ಕೂ, ಸಂಸತ್ತಿನಲ್ಲಿ ನಡೆದುಕೊಳ್ಳುವುದಕ್ಕೂ ವ್ಯತ್ಯಾಸ ಗೊತ್ತಿರುತ್ತದೆ. ಆದರೆ ವಿರೋಧಕ್ಕಾಗಿ ಯಾವ ಹಂತಕ್ಕೆ ಹೋಗಿಯಾದರೂ ವಿರೋಧ ಎನ್ನುವುದು ಶುರು ಆದಾಗ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ರಾಜ್ಯಸಭೆಯ ಘಟನೆಗಳು ಸಾಕ್ಷಿ.

ಪೆಗಾಸಸ್‌ ಇರಲಿ, ಬೊಫೋರ್ಸ್‌ ಇರಲಿ, ರಫೇಲ್‌ ಖರೀದಿ ಇರಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ನೋಟಿಸ್‌ ಕೊಡುವುದು ಸಂಸದರ ಹಕ್ಕು. ಅದು ಸಿಗದೇ ಇದ್ದಾಗ ಪ್ರತಿಭಟಿಸಲು ಸಂವಿಧಾನ ಮತ್ತು ಸಂಸತ್ತಿನ ನಿಯಮದ ಅಡಿಯಲ್ಲಿ ಬೇಕಾದಷ್ಟುಮಾರ್ಗಗಳಿವೆ. ಆದರೆ ಅವೆಲ್ಲವನ್ನೂ ಬಿಟ್ಟು ಕುಳಿತುಕೊಳ್ಳುವ ಜಾಗದಲ್ಲಿ ಹತ್ತಿ ನಿಲ್ಲುವುದು, ಕೈಗೆ ಸಿಕ್ಕಿದ್ದನ್ನು ಒಗೆಯುವುದು, ಮಹಿಳಾ ಸಿಬ್ಬಂದಿಗಳನ್ನು ನೂಕುವುದು, ಕುಳಿತು ಒಂದು ನಿಮಿಷವೂ ಚರ್ಚೆ ಮಾಡದೇ ಇರುವುದು, ಬೀದಿಯಲ್ಲಿ ನಿಂತು ನಡೆಸುವ ಪ್ರತಿಭಟನೆಯ ಶೈಲಿಯನ್ನು ಸದನದಲ್ಲಿ ತರುವುದು ಇದರಿಂದ ಪ್ರಜಾಪ್ರಭುತ್ವ ಶಿಥಿಲವಾಗುತ್ತದೆಯೇ ಹೊರತು ಗಟ್ಟಿಯಾಗುವುದಿಲ್ಲ. ಪಂಡಿತ್‌ ನೆಹರು, ಪಟೇಲ್‌, ವಾಜಪೇಯಿ, ಪ್ರಣಬ್‌ ಮುಖರ್ಜಿಯಂತಹ ಮುತ್ಸದ್ದಿಗಳು ಕುಳಿತು ಹೋಗಿರುವಂತಹ ಸಂಸತ್ತಿನಲ್ಲಿ ಈಗ ನಡೆದಿರುವ ಘಟನೆಗಳಿಂದ ಆಡಳಿತ ಮತ್ತು ವಿಪಕ್ಷದಲ್ಲಿರುವ ಪಕ್ಷಗಳಿಗೆ ರಾಜಕೀಯ ಲಾಭ ಇದೆಯೇ ಹೊರತು ಜನರಿಗೆ ನಯಾ ಪೈಸೆ ಲಾಭವಿಲ್ಲ.

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ವಿಪಕ್ಷಗಳದು ಜಾಣ ನಡೆ ಅಲ್ಲ

ಇವತ್ತು ಜನಸಾಮಾನ್ಯರನ್ನು ಅತಿ ಹೆಚ್ಚು ಕಾಡುತ್ತಿರುವ ಪ್ರಶ್ನೆ ಕೋವಿಡ್‌ 3ನೇ ಅಲೆ ಬಂದರೆ ಹೇಗೆ ಮತ್ತು ಕಳೆದ ಒಂದೂವರೆ ವರ್ಷದಿಂದ ಅನುಭವಿಸುತ್ತಿರುವ ಆರ್ಥಿಕ ಹೊಡೆತಗಳು, ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಹೆಚ್ಚುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು. ಈ ಎಲ್ಲಾ ವಿಷಯಗಳಲ್ಲಿ ವಿಪಕ್ಷಗಳು ಸರ್ಕಾರವನ್ನು ಚರ್ಚೆಗೆ ಎಳೆದು ತಂದಿದ್ದರೆ ಚುರುಕು ಮುಟ್ಟಿಸುವ ಅವಕಾಶ ಇತ್ತು. ಕೋವಿಡ್‌ 2ನೇ ಅಲೆಯಲ್ಲಿ ಮತ್ತು ಲಸಿಕೆ ಪೂರೈಕೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದ ಸರ್ಕಾರದ ಬಗ್ಗೆ ಮಾತಾಡಿ ಜನರಿಗೆ ಮನವರಿಕೆ ಮಾಡಿಕೊಡುವ ಅವಕಾಶವೂ ಇತ್ತು.

ಅದೆಲ್ಲವನ್ನೂ ಬಿಟ್ಟು ಇದುವರೆಗೆ ಯಾವುದೇ ದೇಶದ ಸರ್ಕಾರಿ ಏಜೆನ್ಸಿ ತನಿಖೆ ನಡೆಸದೇ ಇರುವ ಫೋನ್‌ ಕದ್ದಾಲಿಕೆ ಪ್ರಕರಣ ಮಾತ್ರವನ್ನೇ ಕೈಗೆ ತೆಗೆದುಕೊಂಡು ಹಟ ಹಿಡಿದು ಸಂಸತ್ತಿನ ಕಲಾಪವನ್ನು ಬಲಿ ಕೊಟ್ಟಿರುವುದು ಜಾಣ ರಾಜಕೀಯ ನಡೆ ಏನೂ ಅಲ್ಲ. ವಿಪಕ್ಷಗಳು ಜನರ ಬಳಿ ಹೋಗಿ ‘ಅಯ್ಯೋ ಫೋನ್‌ ಕದ್ದಾಲಿಕೆ ಆಗಿದೆಯಂತೆ. ಫ್ರಾನ್ಸ್‌ನ ಖಾಸಗಿ ಸಂಸ್ಥೆಯೊಂದು ಆರೋಪ ಮಾಡಿದೆ’ ಎಂದು ಹೇಳುವುದಕ್ಕಿಂತ, ‘ನೋಡಿ ಕೋವಿಡ್‌ನಲ್ಲಿ ಸರ್ಕಾರ ಹೇಗೆ ಎಡವಿತು, ಲಸಿಕೆ ಯಾಕೆ ಸಾಕಷ್ಟುಪೂರೈಕೆ ಆಗುತ್ತಿಲ್ಲ, ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನ ತಲುಪಿದೆ’ ಎಂದು ಹೇಳುವುದು ಹೆಚ್ಚು ಮನಸ್ಸುಗಳನ್ನು ಮುಟ್ಟುತ್ತಿತ್ತು. ಆದರೆ ವಿಪಕ್ಷಗಳಿಗೆ ಚರ್ಚೆ ಮಾಡುವುದಕ್ಕಿಂತ ಗಲಾಟೆ ಮಾಡುವುದೇ ಹೆಚ್ಚು ರುಚಿಸತೊಡಗಿದರೆ ಪ್ರಜಾಪ್ರಭುತ್ವ ಉಳಿಸುವುದು ಕಷ್ಟ. ಕೆಲವೇ ಅಪ್ರಬುದ್ಧ ಮನಸ್ಸುಗಳು ಸಂಸತ್ತು ತಲುಪಿದರೂ ಸಾಕು ಪ್ರಜಾಪ್ರಭುತ್ವ ಹೋಗಿ ಸಿವಿಲ್‌ ವಾರ್‌ನ ಸ್ಥಿತಿ ನಿರ್ಮಾಣ ಆಗತೊಡಗುತ್ತದೆ.

ಪೆಗಾಸಸ್‌ನ ಕತೆ ಏನು?

ತಂತ್ರಜ್ಞಾನ ಬೆಳೆದಂತೆ ಬೇಹುಗಾರಿಕೆ ವಿಧಾನಗಳು ಕೂಡ ಬದಲಾಗುತ್ತಿವೆ. ಇಸ್ರೇಲಿನ ಮೋಸಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಅಧಿ​ಕಾರಿಗಳು ಫೋನ್‌ ಕದ್ದಾಲಿಕೆ ಮಾಡುವ ಹೊಸ ಸಾಫ್ಟ್‌ವೇರ್‌ ಕಂಡುಹಿಡಿದಿದ್ದು, ಇದರಲ್ಲಿ ನಿಮ್ಮ ಮೊಬೈಲ್‌ಗೆ ಯಾವುದೇ ಲಿಂಕ್‌ ಕಳುಹಿಸದೇ ನೇರವಾಗಿ ಸಾಫ್ಟ್‌ವೇರನ್ನು ನಿಮ್ಮ ಮೊಬೈಲ್‌ಗೆ ಇಳಿಸಿ ನಿಮ್ಮ ಕರೆಗಳು, ಸಂದೇಶಗಳು, ವಿಡಿಯೋ ಕಾಲ್‌ಗಳ ಮೇಲೆ ನಿಗಾ ಇಡಬಹುದು. ಫ್ರಾನ್ಸ್‌ನ ಒಂದು ಪತ್ರಿಕಾ ಸಂಸ್ಥೆ ಪ್ರಕಾರ, ಭಾರತದ 161 ವ್ಯಕ್ತಿಗಳ ಮೇಲೆ ಪೆಗಾಸಸ್‌ನಿಂದ ಕಣ್ಗಾವಲು ನಡೆಯುತ್ತಿತ್ತು.

ಉತ್ತರ ಪ್ರದೇಶದಲ್ಲಿ ಈಗ ದಿಢೀರನೇ ಜನಸಂಖ್ಯಾ ನೀತಿ ಜಾರಿಗೆ ಬಂದಿರುವುದೇಕೆ ಗೊತ್ತೆ?

ಇದರಲ್ಲಿ 40ಕ್ಕೂ ಹೆಚ್ಚು ಮಂದಿ ಸರ್ಕಾರದ ವಿರುದ್ಧ ಇದ್ದಾರೆ ಎನ್ನಲಾದ ಪತ್ರಕರ್ತರು, ಸರ್ಕಾರದಲ್ಲಿರುವ ಇಬ್ಬರು ಮಂತ್ರಿಗಳು, ಬಿಜೆಪಿಯವರು, ಅರ್ಬನ್‌ ನಕ್ಸಲ್‌ಗಳು ಎಂದು ಆರೋಪಿಸುವ ಸಾಮಾಜಿಕ ಕಾರ್ಯಕರ್ತರು ಇದ್ದಾರೆ. ಕಳೆದ 7 ವರ್ಷಗಳಿಂದ ಮೋದಿ ಸರ್ಕಾರದ ಕಟು ಟೀಕಾಕಾರರು ಎಂದೇ ಗುರುತಿಸಿಕೊಳ್ಳುವ ಅಮ್ನೆಸ್ಟಿಸಂಸ್ಥೆ ಮತ್ತು ದಿ ವೈರ್‌ ಸಂಸ್ಥೆಗಳು ನಡೆಸಿರುವ ಪ್ರತ್ಯೇಕ ತನಿಖೆಯ ಪ್ರಕಾರ ಅನೇಕ ಪತ್ರಕರ್ತರ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ವಿಧಿ​ವಿಜ್ಞಾನ ಪರೀಕ್ಷೆ ನಡೆಸಿದಾಗ ಪೆಗಾಸಸ್‌ನಿಂದ ಕದ್ದಾಲಿಕೆ ನಡೆದಿರಬಹುದು ಎಂದು ಕಂಡುಬಂದಿದೆಯಂತೆ.

ಸಹಜವಾಗಿ ಇದೊಂದು ಗಂಭೀರ ಆರೋಪ. ಆದರೆ, ಯಾವುದೇ ಸರ್ಕಾರ ಇದನ್ನು ಸುಖಾಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ಮತ್ತು ಭಾರತದ ಮಟ್ಟಿಗೆ ತನಿಖೆ ನಡೆಸಿರುವ ಎರಡೂ ಸಂಸ್ಥೆಗಳು ಬಿಜೆಪಿ-ವಿರೋಧಿ ಸಂಸ್ಥೆಗಳೇ ಆಗಿರುವುದರಿಂದ ಬಿಜೆಪಿ ಸರ್ಕಾರ ಇದನ್ನು ರಾಜಕೀಯವಾಗಿಯೇ ವಿರೋಧಿಸುತ್ತದೆ. ಕೊನೆಗೆ ಇದು ಎಡ-ಬಲ ಚರ್ಚೆಗೆ ತಿರುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಹೀಗೆ ಆಗುವುದರಿಂದ ಬಿಜೆಪಿಗೆ ಲಾಭ ಹೆಚ್ಚು, ವಿಪಕ್ಷಗಳಿಗೆ ನಷ್ಟಹೆಚ್ಚು. ಹೇಗೂ ಪೆಗಾಸಸ್‌ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇರುವಾಗ ವಿಪಕ್ಷಗಳು ಪೆಗಾಸಸ್‌ ಚರ್ಚೆಗೆ ಅಗ್ರಹಿಸುತ್ತಿದ್ದರೆ ಕೊರೋನಾ ವೈಫಲ್ಯ, ಲಸಿಕೆ ಕೊರತೆ, ತೈಲ ಬೆಲೆಯ ವಿಷಯಗಳು ಕೆಳಕ್ಕೆ ಬಿದ್ದುಹೋಗುತ್ತವೆ. ಈಗ ಅ​ಧಿವೇಶನ ಮುಗಿದ ಮೇಲೆ ಮೊದಲೇ ಸಮಸ್ಯೆಯಲ್ಲಿರುವ ಜನಸಾಮಾನ್ಯನಿಗೆ ಪೆಗಾಸಸ್‌ ಕದ್ದಾಲಿಕೆ ಎಂದು ಹೇಳಿದರೆ ಅರ್ಥವೂ ಆಗುವುದಿಲ್ಲ. ಒಟ್ಟಿನಲ್ಲಿ ವಿಪಕ್ಷಗಳ ರಣನೀತಿ ಜನರಿಗೆ ಮನವರಿಕೆ ಮಾಡಿಕೊಡುವ ರೀತಿ ಇಲ್ಲ.

ಎಲ್ಲರಿಗೂ ಏಕೆ ಗಲಾಟೆಯೇ ಬೇಕು?

ಯಾವುದೇ ಪ್ರಜಾಪ್ರಭುತ್ವದಲ್ಲಿ ಚರ್ಚೆ-ಸಂವಾದ ಸರಿಯಾಗಿ ನಡೆಯಬೇಕಾದರೆ ಸರ್ಕಾರವು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಿ, ಮಾತುಕತೆಗೆ ವೇದಿಕೆ ಸಿದ್ಧಪಡಿಸಬೇಕು. ಆದರೆ ಈಗಿನ ಸರ್ಕಾರ ಮತ್ತು ವಿಪಕ್ಷ ಎರಡರ ನಡುವೆ ಪರಸ್ಪರ ಇಂತಹ ವಿಶ್ವಾಸ ಇಲ್ಲ. ಯಾವುದೇ ಸಂಖ್ಯಾಬಲ ಜಾಸ್ತಿ ಇರುವ ಸರ್ಕಾರ ಮತ್ತು ಪ್ರಧಾನಿ ನಿಲುವು ಹೀಗೇ ಇರುತ್ತದೆ. ಪಂಡಿತ ನೆಹರು ಹಾಗಿರಲಿಲ್ಲ. ಆದರೆ, ಇಂದಿರಾ ಗಾಂಧಿ​ ಮತ್ತು ಮೋದಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಒಂದೇ ರೀತಿಯ ನಿಲುವು ಹೊಂದಿದ್ದಾರೆ.

ಬಿಎಸ್‌ವೈ ಗುಟುರು, ಹೈಕಮಾಂಡ್ ಸೈಲೆಂಟ್: ಬೆಲ್ಲದ್‌ಗೆ ಕೈ ತಪ್ಪಿತು ಸಚಿವ ಸ್ಥಾನ.!

ಇಂದಿರಾ ಕಾಲದಲ್ಲಿ ವಿಪಕ್ಷಗಳ ಸಾಲಿನಲ್ಲಿ ವಾಜಪೇಯಿ, ಹಿರೇನ್‌ ಮುಖರ್ಜಿಯಂಥ ಮುತ್ಸದ್ದಿಗಳಿದ್ದರು. ಆದರೆ ಈಗ ಮೋದಿ ಎದುರು ರಾಹುಲ್‌, ಮಮತಾ ಥರದವರು ಇದ್ದಾರೆ. ಹೀಗಾಗಿ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸುವ ಸಂವಾದ ಸಾಧ್ಯ ಆಗುತ್ತಿಲ್ಲ. ವಿಪಕ್ಷಗಳಿಗೂ ಗೊತ್ತಿದೆ; ಯಾವುದೇ ಸರ್ಕಾರ ಮತದಾನದ ಅವಕಾಶ ಇರುವ ನಿಯಮದಡಿ ಚರ್ಚೆಗೆ ಅವಕಾಶ ನೀಡೋದಿಲ್ಲ ಎಂದು. ಸರ್ಕಾರಕ್ಕೂ ಗೊತ್ತಿದೆ ಚರ್ಚೆ ನಡೆಸುವುದಕ್ಕಿಂತ ಗಲಾಟೆ ನಡೆದರೇ ಒಳ್ಳೆಯದು ಎಂದು. ನಾವು ಟೀವಿ ಚರ್ಚೆಗಳಲ್ಲಿ ಸಾಮಾನ್ಯವಾಗಿ ನೋಡುತ್ತೇವೆ; ಚರ್ಚೆಗೆ ವಿಷಯವೇ ಇಲ್ಲ ಎಂದರೆ ನಿಮ್ಮ ಧ್ವನಿ ಏರಿಸಿ ಕೂಗಾಡಿ ಗದ್ದಲ ಎಬ್ಬಿಸಿಬಿಡುವುದು! ಇದು ಈಗ ಸಂಸತ್ತಿಗೂ ಕಾಲಿಟ್ಟಿದೆ ಅಷ್ಟೆ.

ಸ್ಥಾಯಿ ಸಮಿತಿಯಲ್ಲೂ ರಂಪಾಟ

ಸಂಸತ್ತಿನಲ್ಲಿ ಎಷ್ಟೇ ಕೂಗಾಟ ಮಾಡಿದರೂ ಸಂಸತ್ತಿನ ಸ್ಥಾಯಿ ಸಮಿತಿಗಳಲ್ಲಿ ರಚನಾತ್ಮಕ ಕೆಲಸ ನಡೆಯುತ್ತದೆ. ರತನ್‌ ಟಾಟಾ, ಅನಿಲ್‌ ಅಂಬಾನಿ ತರಹದ ಶ್ರೀಮಂತ ಉದ್ಯಮಿಗಳು, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ರಂಥವರನ್ನು ಕೊಠಡಿಯ ಬಾಗಿಲಿಗೆ ಬರುವಂತೆ ಮಾಡುವ ಅಧಿಕಾರವನ್ನು ಹಿಂದೆ ಸ್ಥಾಯಿ ಸಮಿತಿಗಳು ಪ್ರಯೋಗಿಸಿವೆ. ಆದರೆ ಕಳೆದ ವಾರ ಶಶಿ ತರೂರ್‌ ಅಧ್ಯಕ್ಷರಾಗಿರುವ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಸಭೆಯಲ್ಲಿ ತೃಣಮೂಲ ಸಂಸದೆ ಮಹೂವಾ ಮೊಯಿತ್ರಾ ಮತ್ತು ಬಿಜೆಪಿ ಸಂಸದ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ.

ಬಿಜೆಪಿ ಸಂಸದರು ತರೂರ್‌ ಏಕಪಕ್ಷೀಯವಾಗಿ ಪೆಗಾಸಸ್‌ ಚರ್ಚೆಯನ್ನು ಎಳೆದು ತಂದಿದ್ದಾರೆ ಎಂದು ನಿಶಿಕಾಂತ ದುಬೆ ಆಕ್ಷೇಪಿಸಿದಾಗ ಇಷ್ಟೆಲ್ಲಾ ಗಲಾಟೆ ನಡೆದಿದೆ. ಆರೋಪ ಪ್ರತ್ಯಾರೋಪಗಳು, ತಂತ್ರ ಪ್ರತಿತಂತ್ರಗಳನ್ನು ರಚನಾತ್ಮಕವಾಗಿ ಪಕ್ಷದ ಚೌಕಟ್ಟು ಮೀರಿ ಕೆಲಸ ಮಾಡಬೇಕಾದ ಸ್ಥಾಯಿ ಸಮಿತಿ ಸಭೆಗೂ ಎಳೆದು ತಂದರೆ ಬಹಳ ಕಷ್ಟ. ಇತ್ತೀಚಿನ ದಿನಗಳಲ್ಲಿ ‘ವೇರ್‌ ಯು ಸ್ಟಾಂಡ್‌ ಈಸ್‌ ಡಿಸೈಡೆಡ್‌ ಬೈ ವೇರ್‌ ಯು ಸಿಟ್‌’ ಎಂಬಂತೆ ರಾಜಕೀಯ ಪಕ್ಷಗಳ ನಿಲುವು ಆಡಳಿತ ಪಕ್ಷದಲ್ಲಿ ಕುಳಿತಾಗ ಒಂದು ಇದ್ದರೆ, ವಿಪಕ್ಷದಲ್ಲಿ ಇದ್ದಾಗ ಬೇರೆ ಇರುತ್ತದೆ.

ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು

ಮನಮೋಹನ ಸಿಂಗ್‌ ಪ್ರಬುದ್ಧತೆ

2017ರಲ್ಲಿ ಸಂಸತ್ತಿನ ಹಣಕಾಸಿಗೆ ಸಂಬಂಧಪಟ್ಟಸ್ಥಾಯಿ ಸಮಿತಿ ಸಭೆಯಲ್ಲಿ ನೋಟು ರದ್ದತಿ ಕುರಿತಂತೆ ಚರ್ಚೆ ನಡೆದಿತ್ತು. ಆಗ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಊರ್ಜಿತ್‌ ಪಟೇಲ್‌ರನ್ನು ಸಭೆಗೆ ಕರೆಸಲಾಗಿತ್ತು. ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ಊರ್ಜಿತ್‌ ಪಟೇಲ್‌ರಿಗೆ ಪ್ರಶ್ನೆ ಕೇಳುತ್ತಿದ್ದರು. ಅವರ ಪಕ್ಕದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಕುಳಿತಿದ್ದರು. ಪ್ರಶ್ನೆ ಕೇಳುವ ಉತ್ಸಾಹದಲ್ಲಿ ದಿಗ್ವಿಜಯ ಸಿಂಗ್‌, ಊರ್ಜಿತ್‌ ಪಟೇಲ್‌ಗೆ ಆರ್‌ಬಿಐ ಮತ್ತು ಸರ್ಕಾರದ ಬಗ್ಗೆ ಬೇಕಾಬಿಟ್ಟಿಪ್ರಶ್ನೆ ಕೇಳತೊಡಗಿದಾಗ ದಿಗ್ವಿಜಯ ಸಿಂಗ್‌ರ ಕೈಹಿಡಿದು ಅದುಮಿದ ಡಾ.ಮನಮೋಹನ ಸಿಂಗ್‌, ‘ಮಿಸ್ಟರ್‌ ಪಟೇಲ್‌, ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದಿಲ್ಲ. ಆ ಅಧಿ​ಕಾರ ನಿಮಗೆ ಇದೆ ’ ಎಂದು ಹೇಳಿ ಊರ್ಜಿತ್‌ ಪಟೇಲ್‌ರನ್ನು ಮುಜುಗರದಿಂದ ತಪ್ಪಿಸಿದ್ದರು. ಅಷ್ಟೇ ಅಲ್ಲ ಆರ್‌ಬಿಐನ ಸ್ವಾಯತ್ತತೆ ಬಗ್ಗೆ ಯಾರೂ ಸಂದೇಹಪಡುವ ಅಗತ್ಯ ಇಲ್ಲ ಎಂದು ಒತ್ತಿ ಹೇಳಿದ್ದರು. ಇದು ರಾಜಕಾರಣಿಗಳಿಗೆ ಇರಬೇಕಾದ ಬದ್ಧತೆ ಮತ್ತು ಪ್ರಬುದ್ಧತೆ. ಕನ್ನಡದ ಸಾಹಿತಿ ಟಿ.ಪಿ ಕೈಲಾಸಂ ಒಂದು ಮಾತು ಹೇಳುತ್ತಿದ್ದರು, ‘ಇಂದ್ರನ ಅಂಬಾರಿ ಹೊತ್ತು ಸಾಗುವ ಐರಾವತ ಅಡಿ ತಪ್ಪಬಾರದು. ಆಗ ಸ್ವರ್ಗದ ವ್ಯವಸ್ಥೆ ಏರು ಪೇರಾಗುತ್ತದೆ’ ಎಂದು. ಹಾಗೆಯೇ ಸಂಸತ್ತಿನಲ್ಲಿ ಪ್ರಬುದ್ಧ ವ್ಯಕ್ತಿಗಳು ಕುಳಿತುಕೊಳ್ಳದೇ ಇದ್ದರೆ ಪ್ರಜಾಪ್ರಭುತ್ವ ಶಿಥಿಲವಾಗುತ್ತಾ ಸಾಗುತ್ತದೆ.

ಕೆಲಸವಿಲ್ಲದೆ ವೆಂಕಯ್ಯಗೆ ಬೇಸರ

ರಾಜ್ಯಸಭೆಯಲ್ಲಿ ನಡೆದ ಗಲಾಟೆಯಿಂದ ದುಃಖಿತರಾಗಿ ಸದನದಲ್ಲೇ ಕಣ್ಣೀರು ಹಾಕಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸದನದ ಹಿರಿಯರನ್ನು ಕರೆದು ತಿಳಿಸಿ ಹೇಳಿದರೂ ಏನೂ ಉಪಯೋಗ ಆಗಿಲ್ಲ. ವೆಂಕಯ್ಯ ‘ಸಭಾಪತಿಯಾಗಿ ರಾಜ್ಯಸಭೆಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಉಪ ರಾಷ್ಟ್ರಪತಿ ಆದ ಮೇಲೆ ಸರ್ಕಾರಿ ನಿವಾಸದಲ್ಲಿ ಮಾಡಲು ಏನೂ ಕೆಲಸ ಇಲ್ಲ. ಮೊದಲು ಎಷ್ಟೊಂದು ಜನ ಭೇಟಿ ಆಗಲು ಬರುತ್ತಿದ್ದರು, ಎಷ್ಟುಕೆಲಸ ಇತ್ತು. ಈಗ ಏನೂ ಕೆಲಸವೇ ಇಲ್ಲ. ಕುಳಿತು ಕುಳಿತು ಸಾಕಾಗಿದೆ’ ಎಂದು ತಮ್ಮ ಬೇಸರ ಹೇಳಿಕೊಂಡರಂತೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ