MTHL ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ಅನ್ನು ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. 17,843 ಕೋಟಿ ವೆಚ್ಚದ ಈ ಲಿಂಕ್, ದೇಶದ ಅತೀ ಉದ್ದದ ಸೀ ಬ್ರಿಜ್ ಎನಿಸಿದೆ.
ಮುಂಬೈ (ಜ.4): ದೇಶದ ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಯೋಜನೆ ಎನಿಸಿಕೊಂಡಿದ್ದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್‌ಎಲ್) ಜನವರಿ 12 ರಂದು ಉದ್ಘಾಟನೆಗೊಳ್ಳಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇದನ್ನು ಖಚಿತಪಡಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಪ್ರಕಾರ, ದೇಶದ ಅತಿ ಉದ್ದದ ಸಮುದ್ರ ಸೇತುವೆ ಎಂದು ಹೇಳಲಾಗುವ ಎಂಟಿಎಚ್‌ಎಲ್ ಯೋಜನೆಯು ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ ಪ್ರಯಾಣದ ಸಮಯವನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಲಿದೆ. "ಪ್ರಧಾನಿ ನರೇಂದ್ರ ಮೋದಿ ಅವರು MTHL ಅನ್ನು ಜನವರಿ 12 ರಂದು ಉದ್ಘಾಟಿಸಲಿದ್ದಾರೆ. ಈ ಸೇತುವೆಯು ಆರ್ಥಿಕ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ ಬೆಳವಣಿಗೆಯನ್ನು ತರುತ್ತದೆ" ಎಂದು ಶಿಂಧೆ ತಿಳಿಸಿದ್ದಾರೆ. 21.8 ಕಿಲೋಮೀಟರ್ ಉದ್ದದ ಈ ಸಮುದ್ರ ಸೇತುವೆಯನ್ನು ಅಂದಾಜು 17, 843 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ಗೆ ಈಗಾಗಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಉದ್ಘಾಟನೆ ಬಳಿಕ ಇದು 'ಅಟಲ್ ಸೇತು' ಎಂದು ಕರೆಸಿಕೊಳ್ಳಲಿದೆ. 2023ರ ಡಿಸೆಂಬರ್ 25 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯನ್ನು ಇದು ಉದ್ಘಾಟನೆ ಆಗಬೇಕಿತ್ತಾದರೂ, ಸೇತುವೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದ ಕಾರಣ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. 2018ರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇಲ್ಲಿಯವರೆಗೂ ಎರಡು ಡೆಡ್‌ಲೈನ್‌ಗಳನ್ನು ಈ ಕಾಮಗಾರಿ ಮಿಸ್ ಮಾಡಿಕೊಂಡಿದೆ. 2022ರಲ್ಲಿ ಇದರ ನಿರ್ಮಾಣ ಮುಗಿಯಬೇಕಿತ್ತಾದರೂ, ಕೋವಿಡ್ ಕಾರಣದಿಂದಾಗಿ ಇದು ಮುಂದೂಡಿಕೆಯಾಗಿತ್ತು.
ಎಷ್ಟಿರಲಿದೆ ಟೋಲ್ ರೇಟ್: ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ್ ಇಂದು ಈ ಸೇತುವೆಯ ಟೋಲ್ ದರ ನಿರ್ಧಾರ ಮಾಡಲಿದೆ. ಕಾರ್‌ಗಳಿಗೆ ಈ ಸೇತುವೆಯ ಮೇಲೆ ಏಕಮುಖ ಸಂಚಾರಕ್ಕೆ 350 ರೂಪಾಯಿ ನಿಗದಿಯಾಗುವ ಸಾಧ್ಯತೆ ಇದೆ. ಅಭಿವೃದ್ಧಿ ಸಾಲದ ನೆರವು ನೀಡುತ್ತಿರುವ ಜಪಾನ್ ಇಂಟರ್‌ನ್ಯಾಶನಲ್ ಕೋಆಪರೇಷನ್ ಏಜೆನ್ಸಿ ಮಾಡಿದ ಅಂದಾಜಿನ ಆಧಾರದ ಮೇಲೆ ದರವನ್ನು 500 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಪ್ರತಿ ಕಾರಿಗೆ 350 ರೂಪಾಯಿಗೆ ಇದನ್ನು ಪರಿಷ್ಕರಣೆ ಮಾಡಿದೆ. ಈ ಶಿಫಾರಸಿಗೆ ಕ್ಯಾಬಿನೆಟ್ ಗುರುವಾರ ಅಂತಿಮ ಮುದ್ರೆ ಒತ್ತುವ ಸಾಧ್ಯತೆ ಇದೆ. 2024 ರಿಂದ 2053ರವರೆಗೆ ಅಂದರೆ 30 ವರ್ಷಗಳ ಕಾಲ ಟೋಲ್ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದೆ. ಪ್ರತಿವರ್ಷ ಅಂದಾಜು 70 ಸಾವಿರ ವಾಹನಗಳು ಇದರಲ್ಲಿ ಓಡಾಡುವ ಸಾಧ್ಯತೆ ಇದ್ದು, 100 ಕಿಲೋಮೀಟರ್ ವೇಗದಲ್ಲಿ ಈ ಮಾರ್ಗದಲ್ಲಿ ಸಾಗಬಹುದಾಗಿದೆ. ಅದಲ್ಲದೆ, ಮಾರ್ಗದ ಪೂರ್ತಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹಾಗೇನಾದರೂ ವಾಹಗಳು ಬ್ರೇಕ್‌ಡೌನ್ ಆದಲ್ಲಿ, ಕಂಟ್ರೋಲ್ ರೂಮ್‌ಗೆ ಅಲರ್ಟ್ ಮಾಡಲಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು
- ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಆರು ಪಥದ 21.8-ಕಿಮೀ ಉದ್ದದ ಸೇತುವೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಸಮುದ್ರದ ಮೇಲೆ 16.5 ಕಿಲೋಮೀಟರ್ ದೂರು ಹೊಂದಿದ್ದರೆ, ಉಳಿದ 5.5 ಕಿಲೋಮೀಟರ್ ಮಾರ್ಗ ಭೂಮಿಯ ಮೇಲಿದೆ.
- ಅಟಲ್ ಸೇತು ಎಂದು ಕರೆಸಿಕೊಳ್ಳುವ ಈ ಸೇತುವೆಯು ನವಿ ಮುಂಬೈ ತುದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4B ಯಲ್ಲಿ ಸೆವ್ರಿ, ಶಿವಾಜಿ ನಗರ, ಜಸ್ಸಿ ಮತ್ತು ಚಿರ್ಲೆಯಲ್ಲಿ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ. ಇದು ರಾಜ್ಯದ ಎರಡು ದೊಡ್ಡ ನಗರಗಳಾದ ಮುಂಬೈ ಹಾಗೂ ಪುಣೆಗೆ ಸಂಪರ್ಕಿಸುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಲಿಂಕ್ ಆಗಿಯೂ ಸಂಪರ್ಕ ಕಲ್ಪಿಸುತ್ತದೆ.
- ಸೇತುವೆಯ ನಿರ್ಮಾಣವು 2018 ರಲ್ಲಿ ಪ್ರಾರಂಭವಾಯಿತು. ಇದು 4.5 ವರ್ಷಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೋವಿಡ್ -19 ಕಾರಣದಿಂದಾಗಿ ಯೋಜನೆಯು ಎಂಟು ತಿಂಗಳು ವಿಳಂಬವಾಯಿತು. ಈ ಹಿಂದೆ ಡಿಸೆಂಬರ್ 25ರಂದು ಸೇತುವೆ ಉದ್ಘಾಟನೆಯಾಗಬೇಕಿತ್ತು. ಆ ಡೆಡ್‌ಲೈನ್ ಕೂಡ ಮಿಸ್ ಆಗಿತ್ತು. ಕಳೆದ ಹದಿನೈದು ದಿನಗಳಿಂದ ನಡೆದ ಭಾರ ಹೊರುವ ಸಾಮರ್ಥ್ಯ ಪರೀಕ್ಷೆಗಳಲ್ಲಿ ಸೇತುವೆ ಪಾಸ್ ಆಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಲು ಸಿದ್ಧವಾಗಿದೆ.
ಸಮುದ್ರದಲ್ಲಿ ವಿಶ್ವದಲ್ಲೇ ಅತ್ಯಂತ ಉದ್ದದ ಸೇತುವೆ ನಿರ್ಮಾಣ!
- MMRDA ಪ್ರಕಾರ, ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಾಗಿ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಅಧಿಕೃತ ಅಭಿವೃದ್ಧಿ ಸಹಾಯ (ODA) ಸಾಲವನ್ನು ಒದಗಿಸಿದೆ.
ವರ್ಸೋವಾ - ಬಾಂದ್ರಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ: ಮಹಾರಾಷ್ಟ್ರ ಕ್ಯಾಬಿನೆಟ್ ನಿರ್ಧಾರ